ಸುತ್ತೂರಿಗೆ ನೀರು ಕೊಟ್ಟ ಸೂರಿಬಾಬು
ಫ್ಲೋರೈಡ್ ನೀರಿನಿಂದ ಕಂಗೆಟ್ಟಿದ್ದ ಗ್ರಾಮಗಳಲ್ಲೀಗ ಶುದ್ಧಜಲದ ಬಳಕೆ. ಯಾವ...
ಬಳ್ಳಾರಿ: ಫ್ಲೋರೈಡ್ ನೀರಿನಿಂದ ಕಂಗೆಟ್ಟಿದ್ದ ಗ್ರಾಮಗಳಲ್ಲೀಗ ಶುದ್ಧಜಲದ ಬಳಕೆ. ಯಾವ ಜನಪ್ರತಿನಿಧಿಯಾಗಲೀ, ಸರ್ಕಾರವಾಗಲೀ ಒದಗಿಸಿಕೊಟ್ಟ ಸೌಲಭ್ಯವಲ್ಲ ಅದು. ಜನರ ಸಂಕಷ್ಟ ನೋಡಲಾಗದೆ ರೈತರೊಬ್ಬರು ತಾವೇ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ 'ಜಲ ಸೇವೆ' ಮಾಡುತ್ತಿದ್ದಾರೆ.
ಸಿರುಗುಪ್ಪ ತಾಲ್ಲೂಕು ಮುದ್ದಟನೂರು ಪಂಚಾಯ್ತಿ ವ್ಯಾಪ್ತಿಯ ಹಾವಿನಹಾಳ್, ಗುಂಡಿಗನೂರು, ಚನ್ನಪಟ್ಟಣ, ಮುದ್ದಟನೂರು ಗ್ರಾಮಗಳ ಜನರಿಗೆ ಕಾಲುವೇ ನೀರೇ ಗತಿಯಾಗಿತ್ತು. ಅಲ್ಲಿ ನೀರಿಂಗಿದಾಗ ಕೊಳವೆ ಬಾವಿಯ ಫ್ಲೋರೈಡ್ ನೀರು. ಸಮಸ್ಯೆಗೆ ಮುಕ್ತಿ ಕಾಣಿಸುವಂತೆ ಜನಪ್ರತಿನಿಧಿಗಳು, ಅಧಿಕಾರಿಗಳನ್ನು ಗೋಗರೆದರೂ ಸಿಕ್ಕಿದ್ದು ನಿರಾಸೆಯೇ. ಇದರಿಂದ ಬೇಸತ್ತ ಮುದ್ದಟನೂರು ಕ್ಯಾಂಪಿನ ರೈತ ಟಿ. ಸೂರಿಬಾಬು ಹಾವಿನಹಾಳ್ ಗ್ರಾಮದಲ್ಲಿರುವ ತಮ್ಮ ಹೊಲದಲ್ಲಿ ಕೊಳವೆಬಾವಿ ಕೊರೆಸಿ, ತಾಯಿ ಗಂಗಮ್ಮ ಹೆಸರಿನಲ್ಲಿ ನೀರು ಶುದ್ಧೀಕರಣ ಘಟಕ ಆರಂಭಿಸಿದರು. ನಾಲ್ಕು ಗ್ರಾಮಗಳ ಜನರಿಗೆ ಅಲ್ಲಿಂದ ನಿರಂತರ ಶುದ್ಧ ನೀರು ಪೂರೈಕೆ, ಅದೂ ಉಚಿತವಾಗಿ.
ಗ್ರಾಮಸ್ಥರಿಗೆ ಅನುಕೂಲ
ಇಲ್ಲಿವರೆಗೆ ಪ್ಲೋರೈಡ್ ನೀರನ್ನು ಬಳಸುತ್ತಿದ್ದೆವು. ಸೂರಿಬಾಬು ತಮ್ಮ ತಾಯಿ ಹೆಸರಿನಲ್ಲಿ ಶುದ್ಧ ನೀರಿನ ಘಟಕ ಆರಂಭಿಸಿದ್ದಾರೆ. ಗ್ರಾಮಸ್ಥರು ಸೈಕಲ್ ಅಥವಾ ಬೈಕ್ ಮೇಲೆ ಹೋಗಿ, ನೀರು ತುಂಬಿಸಿಕೊಂಡು ಬರುತ್ತಿದ್ದೇವೆ. ನೀರಿಗೆ ಅವರು ಹಣ ಪಡೆಯುತ್ತಿಲ್ಲ. ತಾಯಿ ನೆನಪಿಗಾಗಿ ಈ ಸೇವೆ ಮಾಡುತ್ತಿದ್ದಾರೆ.
-ಶಾನಬಾಳ ಭೀಮನಗೌಡ, ಹಾವಿನಾಳ್ ಗ್ರಾಮಸ್ಥ
ನಿರಂತರ ಜ್ಯೋತಿ ಕೊಡಿ
ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಜನಪ್ರತಿನಿಧಿಗಳ ಮೂಲಕ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ನನ್ನ ಜಮೀನಿನಲ್ಲಿ ಬೋರ್ವೆಲ್ ಕೊರೆಸಿ ತಾಯಿ ಗಂಗಮ್ಮ ಹೆಸರಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಿದ್ದು, ನಿತ್ಯ ಶುದ್ಧ ನೀರು ನೀಡುತ್ತಿದ್ದೇನೆ. ಬೋರ್ವೆಲ್ನಲ್ಲಿ ಚೆನ್ನಾಗಿ ನೀರು ಬರುತ್ತಿದೆ. ನಿರಂತರ ಜ್ಯೋತಿ ಮೂಲಕ ವಿದ್ಯುತ್ ಸಂಪರ್ಕ ಕೊಟ್ಟರೆ ಇನ್ನಷ್ಟು ಜನರಿಗೆ ನೀರು ಪೂರೈಸಬಹುದು.
-ಟಿ.ಸೂರಿಬಾಬು (ಮೊ: 94489 68555)
ಶಶಿಧರ ಮೇಟಿ