ಸೇನೆಯ ಮುಂಚೂಣಿ ನೆಲೆಗೆ ಇನ್ನು ಮಹಿಳೆ
ದೇಶದ ಸೇನಾಪಡೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚಿಸಲು ಮೋದಿ ಸರ್ಕಾರ ಕ್ರಮ...
ನವದೆಹಲಿ: ದೇಶದ ಸೇನಾಪಡೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚಿಸಲು ಮೋದಿ ಸರ್ಕಾರ ಕ್ರಮ ಕೈಗೊಂಡಿದೆ. ಭೂಸೇನೆಯ ಎಂಜಿನಿಯರಿಂಗ್, ವೈಮಾನಿಕ ಮತ್ತು ಸಂಕೇತ ವಿಭಾಗಗಳಲ್ಲಿ ಮಹಿಳೆಯರ ನೇಮಕ ಮಾಡಲು ಒಪ್ಪಿಗೆ ಸೂಚಿಸಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದಾಗಿ ಕಾಯಂ ಕಮಿಷನ್ಡ್ ಅಧಿಕಾರಿಗಳಾಗಿ ಮಹಿಳಾ ಅಧಿಕಾರಿಗಳು ನೇಮಕವಾಗಲು ಕ್ರಮಕೈಗೊಂಡಂತಾಗಿದೆ. ಜತೆಗೆ ಪುರುಷರಷ್ಟೇ ಸಮಾನರಾಗಿ ಮಹಿಳೆಯರು ಕೂಡ ಈ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ.
ಇದಕ್ಕೆ ಪೂರಕವಾಗಿ 2015-16ನೇ ಸಾಲಿನಿಂದ ಸೇನೆಯ ಪ್ರಮುಖ ವಿಭಾಗಗಳಲ್ಲಿ ಮಹಿಳೆಯರನ್ನು ಸೇರ್ಪಡೆಗೊಳಿಸುವ ಬಗ್ಗೆ ಕೇಂದ್ರ, ಸುಪ್ರೀಂನಲ್ಲಿ ಶೀಘ್ರವೇ ಅಫಿಡವಿಟ್ ಸಲ್ಲಿಸಲಿದೆ. ಮಹಿಳಾ ನೇಮಕದ ಸಂದರ್ಭದಲ್ಲಿ ಪುರುಷರಿಗೆ ಇರುವ ಅರ್ಹತೆಗಳಿಗೆ ಹೋಲಿಸಿದರೆ ರಿಯಾಯಿತಿ ಪ್ರಕಟಿಸುವ ಸಾಧ್ಯತೆ ಇದೆ. ಇದುವರೆಗೆ ಮಹಿಳೆಯರಿಗೆ ಸೇನೆಯಲ್ಲಿ ಕರ್ತವ್ಯ ಸಲ್ಲಿಸಲು ಅವಕಾಶ ಇತ್ತು. ಆದರೆ ಅದು ಪ್ರಮುಖ ವಿಭಾಗಗಳಿಂದ ಹೊರತಾಗಿತ್ತು.