ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸ್ವಪಕ್ಷೀಯರಿಂದಲೇ ಉಗ್ರಪ್ಪ ವಿರುದ್ಧ ದೂರು

ಕಾಂಗ್ರೆಸ್‌ನ ಹಿರಿಯ ಸದಸ್ಯ ವಿ.ಎಸ್.ಉಗ್ರಪ್ಪ ವಿರುದ್ಧ ವಿಧಾನಪರಿಷತ್ತಿನ ಕಾಂಗ್ರೆಸ್ ಸದಸ್ಯರೇ...

Mainashree
Updated On : 27 Jul 2014, 11:23 am

ಬೆಂಗಳೂರು: ಕಾಂಗ್ರೆಸ್‌ನ ಹಿರಿಯ ಸದಸ್ಯ ವಿ.ಎಸ್.ಉಗ್ರಪ್ಪ ವಿರುದ್ಧ ವಿಧಾನಪರಿಷತ್ತಿನ ಕಾಂಗ್ರೆಸ್ ಸದಸ್ಯರೇ ತಿರುಗಿಬಿದ್ದಿದ್ದಾರೆ. ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ಹೊತ್ತ ದಿಗ್ವಿಜಯಸಿಂಗ್‌ಗೆ ಉಗ್ರಪ್ಪ ವಿರುದ್ಧ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪರಿಷತ್ತಿನ ನಾಮನಿರ್ದೇಶಿತ ಸದಸ್ಯರಾಗಿ ನೇಮಕವಾದ ಮೊದಲ ದಿನದಿಂದಲೇ ಉಗ್ರಪ್ಪ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ಆರಂಭಿಸಿದ್ದರು. ಇದು ಮುಂದೆ ಸರಿಯಾಗುತ್ತದೆ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ನಿರೀಕ್ಷಿಸಿದ್ದರು. ಆದರೆ ಉಗ್ರಪ್ಪ ವಾಗ್ದಾಳಿ ದಿನದಿನಕ್ಕೂ ಹೆಚ್ಚಾಗುತ್ತಿರುವುದರಿಂದ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೇ ಪರಿಸ್ಥಿತಿ ಮುಂದುವರಿದರೆ ಸದನದಲ್ಲಿ ಸಾಮರಸ್ಯ ಕಷ್ಟ ಎಂದು ಕಾಂಗ್ರೆಸ್ ಸದಸ್ಯರೇ ಈಗ ಉಗ್ರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಗ್ರಪ್ಪ ಸದನದಲ್ಲಿ ನಡೆದುಕೊಳ್ಳುವ ರೀತಿಯಿಂದ ಪಕ್ಷಕ್ಕೆ ಧಕ್ಕೆಯಾಗುತ್ತಿದೆ. ಇದನ್ನು ಸರಿಪಡಿಸಬೇಕೆಂದು ಕೆಲವು ಸದಸ್ಯರು ದಿಗ್ವಿಜಯ ಸಿಂಗ್‌ಗೆ ಸಹಿ ಮಾಡಿದ ಪತ್ರ ರವಾನಿಸಿದ್ದಾರೆ.
ಪರಿಷತ್ತಿನಲ್ಲಿ ಈಗಾಗಲೇ ಕಾಂಗ್ರೆಸ್ ಸದಸ್ಯ ಬಲ ಕಡಿಮೆಯಾಗಿದೆ. ಇದನ್ನರಿತು ಉಗ್ರಪ್ಪ ಸದನದಲ್ಲಿ ಎಲ್ಲವನ್ನೂ ಸಾಮರಸ್ಯದಿಂದ ಸರಿದೂಗಿಸುವುದಕ್ಕೆ ಪೂರಕವಾಗಿ ಇರಬೇಕು. ಆದರೆ, ಸಭಾಪತಿ ಶಂಕರಮೂರ್ತಿ ವಿರುದ್ಧವೂ ತಿರುಗಿಬೀಳುತ್ತಿದ್ದಾರೆ. ಪ್ರತಿಪಕ್ಷಗಳ ಸದಸ್ಯರೊಂದಿಗೆ ಚಕಮಕಿಗೆ ಇಳಿದು ಸದನದಲ್ಲಿ ಸಾಮರಸ್ಯ ಕದಡುತ್ತಿದ್ದಾರೆ. ಚರ್ಚೆಯಿಂದ ಪರಿಹಾರವಾಗುವ ವಿಚಾರಗಳ ಬಗ್ಗೆಯೂ ವಾಗ್ವಾದಕ್ಕೆ ಇಳಿದು ಸರ್ಕಾರ ಮತ್ತು ಪಕ್ಷಕ್ಕೆ ಮುಜುಗರವುಂಟುಮಾಡುತ್ತಿದ್ದಾರೆ ಎಂದು ಸದಸ್ಯರು ಆರೋಪಿಸಿದ್ದಾರೆ.
ಸದನದಲ್ಲಿ ಪಕ್ಷದ ಬಲ ಕಡಿಮೆ ಇರುವುದರಿಂದ ಅನೇಕ ಪ್ರಮುಖ ವಿಧೇಯಕಗಳಿಗೆ ಅನುಮೋದನೆ ಪಡೆಯಲು ಪ್ರತಿಪಕ್ಷಗಳ ಸಹಕಾರ ಬೇಕಿದೆ. ಹೀಗಾಗಿ ಕಾಂಗ್ರೆಸ್ ಪ್ರತಿಪಕ್ಷಗಳ ಜತೆ ಉತ್ತಮ ಬಾಂಧವ್ಯ ವೃದ್ಧಿಸಿಕೊಳ್ಳುತ್ತಿದೆ. ಇಂಥ ಸಂದರ್ಭದಲ್ಲಿ ಉಗ್ರಪ್ಪ ಅವರು ಸದನದಲ್ಲಿ ಮಾತಿಗಿಳಿಯುವ ರೀತಿಯಿಂದ ಪಕ್ಷದ ಪ್ರಯತ್ನಕ್ಕೆ ಧಕ್ಕೆಯಾಗುತ್ತಿದೆ. ಪಕ್ಷಕ್ಕೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಉಗ್ರಪ್ಪ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನಾಮನಿರ್ದೇಶನ ಮಾಡಿದರು. ಆದರೆ, ಮುಖ್ಯಮಂತ್ರಿಗಳ ಉದ್ದೇಶ ಈಡೇರುತ್ತಿಲ್ಲ ಎಂದು ದಿಗ್ವಿಜಯ ಸಿಂಗ್‌ಗೆ ಬರೆದಿರುವ ಪತ್ರದಲ್ಲಿ ಸದಸ್ಯರು ವಿವರಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement