ಜನ ಸ್ವಯಂಪ್ರೇರಿತ ಬಂದ್ರು
ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳು ಹಾಗೂ ಶಿವಸೇನೆ, ಎಂಇಎಸ್ ಪುಂಡಾಟಿಕೆ ಖಂಡಿಸಿ...
ಸ್ಥಗಿತಗೊಂಡಿದ್ದ ರಾಜಧಾನಿ ಜೀವನ, ಇಡೀ ದಿನ ಹೊರಬರದ ಜನ
ಕನ್ನಡಪ್ರಭ ವಾರ್ತೆ ಬೆಂಗಳೂರು ಜು.31
ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳು ಹಾಗೂ ಶಿವಸೇನೆ, ಎಂಇಎಸ್ ಪುಂಡಾಟಿಕೆ ಖಂಡಿಸಿ ಕನ್ನಡ ಸಂಘಟನೆಗಳು ಕರೆ ನೀಡಿದ್ದ 'ಬೆಂಗಳೂರು ಬಂದ್' ಬಹುತೇಕ ಯಶಸ್ವಿಯಾಗಿದೆ.
ಸಾರ್ವಜನಿಕರಿಂದ ಸ್ವಯಂಪ್ರೇರಿತ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ರಾಜಧಾನಿಯ ಬಹುತೇಕ ಅಂಗಡಿ ಮುಂಗಟ್ಟುಗಳು ಸಂಜೆ 6ರವರೆಗೂ ಮುಚ್ಚಿದ್ದವು. ವಾಹನ ಸಂಚಾರವಿಲ್ಲದೇ ರಸ್ತೆಗಳು ಖಾಲಿಯಾಗಿದ್ದವು. ಚಿತ್ರಮಂದಿರಗಳು ಬೆಳಗಿನ ಹಾಗೂ ಮ್ಯಾಟ್ನಿ ಪ್ರದರ್ಶನ ಸ್ಥಗಿತಗೊಳಿಸಿದ್ದವು. ಮಾಲ್ಗಳು 'ಸಂಜೆ 6 ಗಂಟೆ ನಂತರ ತೆರೆಯಲಿದೆ' ಎನ್ನುವ ಬೋರ್ಡ್ ಹೊತ್ತಿದ್ದವು. ಖಾಸಗಿ ಬ್ಯಾಂಕ್ಗಳು ರಜೆಯ ಫಲಕ ತೂಗುಹಾಕಿದ್ದವು. ಕೆಲ ರಾಷ್ಚ್ರೀಯ ಬ್ಯಾಂಕ್ಗಳು ಮಾತ್ರ ಬಾಗಿಲು ಹಾಕಿ ಕಾರ್ಯ ನಿರ್ವಹಿಸಿದವು. ಕೆಲ ಹೋಟೆಲ್ ಹೊರತುಪಡಿಸಿದರೆ, ದೊಡ್ಡ ವಾಣಿಜ್ಯ ಕೇಂದ್ರಗಳಿಂದ ಹಿಡಿದು ಸಣ್ಣ ಪುಟ್ಟ ವ್ಯಾಪಾರಿಗಳಾದಿ ಪ್ರತಿಯೊಬ್ಬರೂ ಬಂದ್ಗೆ ಸ್ವಯಂ ಪ್ರೇರಿತ ಬೆಂಬಲ ಸೂಚಿಸಿ ವಹಿವಾಟು ಬಂದ್ ಮಾಡಿದ್ದರು.
ಬಸ್ ವಿರಳ: ಬಂದ್ಗೆ ಬಿಎಂಟಿಸಿ,ಕೆಎಸ್ಸಾರ್ಟಿಸಿ ಬೆಂಬಲ ಇಲದಿದ್ದರೂ ಅರ್ಧದಷ್ಟು ಬಸ್ಗಳು ರಸ್ತೆಗೆ ಇಳಿಯಲಿಲ್ಲ. ಓಡಾಡುತ್ತಿದ್ದ ಬಸ್ಗಳಲ್ಲೂ ಪ್ರಯಾಣಿಕರು ಬೆರಳೆಣಿಕೆಷ್ಟಿದ್ದರು. ಇನ್ನು ಬಹುತೇಕ ಆಟೊ ಚಾಲಕರ ಸಂಘಟನೆಗಳು ಬಂದ್ಗೆ ಬೆಂಬಲ ಸೂಚಿಸಿದ್ದರಿಂದ ಆಟೋಗಳ ಸಂಖ್ಯೆ ಗಣನೀಯವಾಗಿ ಕಡಿಮೆ ಇತ್ತು. ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲೂ ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸುತ್ತಿದ್ದ ದೃಶ್ಯ ಕಂಡುಬರಲಿಲ್ಲ. ಹೀಗಾಗಿ ಬಂದ್ ನಿರೀಕ್ಷೆಗೂ ಮೀರಿದ ಯಶ ಕಂಡಿದೆ.
ಬೃಹತ್ ಮೆರವಣಿಗೆ
ನಗರದ ನಾನಾ ಪ್ರದೇಶಗಳ ನಾನಾ ಸಂಘಟನೆಗಳ ಸಾವಿರಾರು ಸದಸ್ಯರು, ಸಾರ್ವಜನಿಕರು, ವಿದ್ಯಾರ್ಥಿಗಳು, ಮಕ್ಕಳು, ಮಹಿಳೆಯರೆನ್ನದೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. 12ಗಂಟೆಗೆ ಆರಂಭವಾದ ಮೆರವಣಿಗೆ 1.30ಕ್ಕೆ ಸ್ವಾತಂತ್ರ್ಯ ಉದ್ಯಾನದಲ್ಲಿ ಅಂತ್ಯಗೊಂಡಿತು. ಬಂದ್ ನೇತೃತ್ವ ವಹಿಸಿದ್ದ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್, ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಅಖಿಲ ಕರ್ನಾಟಕ ಡಾ.ರಾಜ್ಕುಮಾರ ಅಭಿಮಾನಿಗಳ ಸಂಘದ ಸಾ.ರಾ.ಗೋವಿಂದು, ಡಿಎಸ್ಎಸ್ ಸೇರಿ 70ಕ್ಕೂ ಅಧಿಕ ಕನ್ನಡ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಬಳಿಕ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಅತ್ಯಾಚಾರಿಗಳನ್ನು ಮುಲಾಜಿಲ್ಲದೇ ಶಿಕ್ಷಿಸಬೇಕು. ಅತ್ಯಾಚಾರಿಗಳು ಪರಮಪಾಪಿಗಳು. ಪುಟ್ಟ ಕಂದಮ್ಮಗಳ ಮೇಲೆ ಪಿಶಾಚಿಗಳು ಕೂಡಾ ಅತ್ಯಾಚಾರ ಎಸಗುವುದಿಲ್ಲ. ಇನ್ನು ಎಂಇಎಸ್ ಪುಂಡಾಟಿಕೆ ಅತಿಯಾಗಿದ್ದು ಅದನ್ನು ನಿಯಂತ್ರಿಸಲು ಕಠಿಣ ಕ್ರಮ ಕೈಗೊಳ್ಳಬೇಕು. ಎಂಇಎಸ್ ಹಾಗೂ ಶಿವಸೇನೆ ನಿಷೇಧಕ್ಕೆ ಕೇಂದ್ರ ಗೃಹ ಸಚಿವರ ಮೇಲೆ ಒತ್ತಡ ಹೇರುವಂತೆ ಮನವಿಯಲ್ಲಿ ತಿಳಿಸಲಾಗಿದೆ. ಬಂದ್ಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು.
-ವಾಟಾಳ್ ನಾಗರಾಜ್, ಕನ್ನಡ ಹೋರಾಟಗಾರ