ಪುಣೆ ಭೂಕುಸಿತ: ಅವಶೇಷಗಳ ಎಡೆಯಲ್ಲಿ ಇನ್ನೂ 120 ಮಂದಿ
ಮಹಾ ಮಳೆಯಿಂದಾಗಿ ಮಾಲಿನ್ ಗ್ರಾಮದಲ್ಲಿ ಬುಧವಾರ ಸಂಭವಿಸಿದ ಗುಡ್ಡಕುಸಿತದಲ್ಲಿ...
ಪುಣೆ: ಮಹಾ ಮಳೆಯಿಂದಾಗಿ ಮಾಲಿನ್ ಗ್ರಾಮದಲ್ಲಿ ಬುಧವಾರ ಸಂಭವಿಸಿದ ಗುಡ್ಡಕುಸಿತದಲ್ಲಿ ಭೂಸಮಾಧಿಯಾಗಿದ್ದ ಮನೆಗಳಿಂದ ಮತ್ತೆ 13 ಮೃತದೇಹಗಳನ್ನು ಹೊರತೆಗೆಯಲಾಗಿದೆ.
ಪ್ರತಿಕೂಲ ಹವಾಮಾನದ ನಡುವೆಯೂ ಅವಶೇಷಗಳಡಿ ಸಿಕ್ಕಿ ಹಾಕಿಕೊಂಡವರ ರಕ್ಷಣಾ ಕಾರ್ಯ ಎರಡನೇ ದಿನವಾದ ಗುರುವಾರವೂ ಭರದಿಂದ ಸಾಗಿದೆ. ಅವಶೇಷಗಳಡಿಯಿಂದ 8 ಮಂದಿಯನ್ನು ರಕ್ಷಿಸಲಾಗಿದೆ. ಘಟನೆಯಲ್ಲಿ 120ಕ್ಕೂ ಹೆಚ್ಚು ಮಂದಿ ಅವಶೇಷಗಳಡಿ ಸಿಕ್ಕಿಹಾಕಿಕೊಂಡಿರುವ ಶಂಕೆ ಇದೆ.
ರಾಜನಾಥ್ ಸಿಂಗ್ ಭೇಟಿ: ಗೃಹ ಸಚಿವ ರಾಜನಾಥ್ ಸಿಂಗ್ ಸ್ಥಳಕ್ಕೆ ಭೇಟಿ ನೀಡಿದ್ದು ಘಟನೆ ಕುರಿತು ಮಾಹಿತಿ ಪಡೆದರು. ಮೃತಪಟ್ಟ ಪ್ರತಿ ಕುಟುಂಬ ಸದಸ್ಯರಿಗೆ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಯಿಂದ ತಲಾ 2 ಲಕ್ಷ ಪರಿಹಾರ ಘೋಷಿಸಿದ್ದಾರೆ.
ಮತ್ತೆ ಮೇಘಸ್ಫೋಟ: ಕಳೆದ ವರ್ಷದ ಮಹಾಮಳೆಯ ದುಸ್ವಪ್ನದಿಂದ ಹೊರಬರಲು ಒದ್ದಾಡುತ್ತಿರುವ ಉತ್ತರಾಖಂಡದಲ್ಲಿ ಗುರುವಾರ ಮತ್ತೆ ಮೇಘಸ್ಫೋಟ ಸಂಭವಿಸಿದೆ. ಈ ವೇಳೆ ಟೆಹ್ರಿಯಲ್ಲಿ ಸುರಿದ ಮಹಾಮಳೆಯಿಂದಾಗಿ ಮನೆಯೊಂದು ಕುಸಿದು ಬಿದ್ದು ಮಹಿಳೆ ಸೇರಿ ಐದು ಮಂದಿ ಮಲಗಿದ್ದಲ್ಲೇ ಅಸುನೀಗಿದ್ದಾರೆ. ಇದರ ಜತೆಗೆ ಉತ್ತರಾಖಂಡದ ಇತರ ಸ್ಥಳಗಳಲ್ಲಿಯೂ ಮಳೆಯಾಗಿದ್ದು, ಅಲ್ಲಲ್ಲಿ ಭೂಕುಸಿತ ಸಂಭವಿಸಿದೆ.