ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮೂರು ಉಪಚುನಾವಣೆ: ದೇವೇಗೌಡ, ಕುಮಾರಸ್ವಾಮಿ ನಡುವೆ ಮೂಡದ ಒಮ್ಮತ

ರಾಜ್ಯದ ಮೂರು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ...

Rashmi Kasaragodu
Updated On : 1 Aug 2014, 3:10 am

ಕ.ಪ್ರ.ವಾರ್ತೆ   ಬೆಂಗಳೂರು    ಜು. 31
ರಾಜ್ಯದ ಮೂರು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕೇ ಬೇಡೆವೇ ಎಂಬ ಗೊಂದಲದಿಂದ ಜೆಡಿಎಸ್ನ ಪ್ರಮುಖ ಆಧಾರ ಸ್ತಂಭಗಳಾದ ಎಚ್.ಡಿ. ದೇವೇಗೌಡ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರಲ್ಲೇ ಸಾಮರಸ್ಯ ಮೂಡಿಲ್ಲ.
ಎಚ್.ಡಿ. ದೇವೇಗೌಡ ಅವರು ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ಬೇಡ ಎಂದು ಖಡಾಖಂಡಿತವಾಗಿ ಹೇಳಿದರೂ, ಎಚ್.ಡಿ. ಕುಮಾರಸ್ವಾಮಿ ಅವರು ಕಾರ್ಯಕರ್ತರ ಒತ್ತಡ ಇದೆ. ನಾವು ನಾಯಕರೆಲ್ಲ ಸೇರಿ ಸಂಜೆ ನಿರ್ಧರಿಸುತ್ತೇವೆ ಎಂದು ಹೇಳಿದರು. ಇಬ್ಬರು ಪತ್ರಿಕಾಗೋಷ್ಠಿಯಲ್ಲೇ ಗುರುವಾರ ಈ ಭಿನ್ನರಾಗ ಹಾಡಿದರು.
ಮೂರು ಉಪ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯುವ ಬಗ್ಗೆ ಪ್ರಥಮವಾಗಿ ಮಾತನಾಡಿದ ಎಚ್.ಡಿ. ದೇವೇಗೌಡ, 'ಚುನಾವಣೆಗೆ ಸಾಧನೆ ಸಂಪತ್ತು ಎಲ್ಲ ಬೇಕು. ಆರ್ಥಿಕ ಸಂಕಷ್ಟದಲ್ಲಿರುವ ಪಕ್ಷಕ್ಕೆ ಚುನಾವಣೆ ನಡೆಸೋದು ಕಷ್ಟ. ಕಳೆದ ಚುನಾವಣೆಯಲ್ಲಿ ಕುಮಾರಸ್ವಾಮಿಯವರು ಹೇಗೆ ಹಣ ಹೊಂದಿಸಿದರು, ಎಷ್ಟು ನೊಂದರು ಎಂಬುದು ಅವರಿಗೇ ಗೊತ್ತು. ಅದಕ್ಕೆ ಎಲ್ಲಿಯೂ ಅಭ್ಯರ್ಥಿ ಹಾಕುವುದು ಬೇಡ ಎಂದು ಹೇಳಿದ್ದೇನೆ. ರಾಷ್ಟ್ರೀಯ ಪಕ್ಷಗಳ ಜತೆ ಸೆಣಸುವ ಆರ್ಥಿಕ ಶಕ್ತಿ ಇಲ್ಲ. ಅವರಲ್ಲಿ ಹಣದ ಕೊರತೆ ಇಲ್ಲ. ಎಷ್ಟು ಬೇಕಾದರೂ ಖರ್ಚು ಮಾಡುತ್ತಾರೆ. ನಾವು ಅಭ್ಯರ್ಥಿಯನ್ನು ಹಾಕಿದರೆ ಏನು ಪ್ರಯೋಜನ? ಗೆಲ್ಲೋಕಾಗುತ್ತಾ? ಗ್ರೌಂಡ್ ರಿಯಾಲಿಟಿಯನ್ನು ಅರ್ಥ ಮಾಡಿಕೊಳ್ಳಬೇಕು. ನನ್ನ ಅನುಭವದ ಮಾತು. ಅಭ್ಯರ್ಥಿಗಳನ್ನು ಹಾಕುವುದು ಬೇಡ' ಎಂದು ಸ್ಪಷ್ಟವಾಗಿ ಹೇಳಿದರು.
ಮೂರು ಉಪ ಚುನಾವಣೆ ಬಗ್ಗೆಯೇ ಮಾತು ಆರಂಭಿಸಿದ ಎಚ್.ಡಿ. ಕುಮಾರಸ್ವಾಮಿ, 'ವಾಸ್ತವಾಂಶದಲ್ಲಿ ನಮಗೆ ಶಿಕಾರಿಪುರದಲ್ಲಿ ಶಕ್ತಿ ಇದೆ. ಅಲ್ಲಿ ಅಭ್ಯರ್ಥಿಯೇ ಹೆಚ್ಚು ಉತ್ಸುಕರಾಗಿದ್ದಾರೆ. ನಮ್ಮ ಬಳಿಗಾರ್ ಕಳೆದ ಬಾರಿ ಸೋತ ನಂತರವೂ ಅಲ್ಲಿ ಪಕ್ಷವನ್ನು ಸಂಘಟಿಸುತ್ತಿದ್ದಾರೆ.
ಕಾರ್ಯಕರ್ತರಿಂದಲೂ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂಬ ಒತ್ತಾಯ ಇದೆ. ನಾವು ನಾಯಕರೆಲ್ಲ ಸೇರಿಕೊಂಡು ಇಂದು ಸಂಜೆ ಅಂತಿಮ ತೀರ್ಮಾನ ಮಾಡುತ್ತೇವೆ. ನಾವು ಬೇರೆ ಯಾವುದೇ ಪಕ್ಷಕ್ಕೆ ಬೆಂಬಲ ನೀಡೊಲ್ಲ. ಕೈ ಜೋಡಿಸುವುದಿಲ್ಲ' ಎಂದರು.
ಪಕ್ಷ ಸಂಘಟನೆ ಕುಂಠಿತವಾಗಿದ್ದು ಹೌದು. ನಿಷ್ಠಾವಂತ ಕಾರ್ಯಕರ್ತರ ಪಡೆಯನ್ನು ಸೇರಿಸಿ ಒಂದುಗೂಡಿಸುತ್ತಿದ್ದೇವೆ. ರಾಜ್ಯ ಸರ್ಕಾರದ ವೈಫಲ್ಯವನ್ನು ಸ್ಪಷ್ಟವಾಗಿ ಗಮನಿಸುತ್ತಿದ್ದೇವೆ. ಅದಕ್ಕೆ ಎಚ್ಚರಿಕೆ ಗಂಟೆ ನೀಡಿದ್ದೇವೆ.
ಸರಿಹೋಗದಿದ್ದರೆ ಹೋರಾಟ ಮಾಡುತ್ತೇವೆ. ಕಾಂಗ್ರೆಸ್-ಬಿಜೆಪಿ ಆಡಳಿತದಲ್ಲಿ ಅಧಿಕಾರ ದುರ್ಬಳಕೆ ಆಗಿದೆ. ಅದನ್ನು ಮುಂದಿಟ್ಟುಕೊಂಡು ಜನರಿಗೆ ಅದನ್ನು ತಿಳಿಸಲು ಹೋರಾಟ ಮಾಡುತ್ತೇವೆ ಎಂದರು.
ಸಂದೇಶ ರವಾನೆ: ರಾಜ್ಯಾಧ್ಯಕ್ಷ ಸ್ಥಾನ ನಾನು ತಗೋಬಾರದು ಅಂತಾ ಏನಿಲ್ಲ. ಬೇರೆಯವರಿಗೆ ಅವಕಾಶ ಸಿಗಲಿ ಎಂಬ ಉದ್ದೇಶ. ರಾಜಕೀಯ ನಿರ್ಧಾರ ಮಾಡಿದ ಮೇಲೆ ಒಂದು ಸಂದೇಶ ರವಾನೆಯಾಗಬೇಕು. ಅದಕ್ಕೇ ಇನ್ನೊಬ್ಬರಿಗೆ ಸಿಗಲಿ. ಬೆಂಗಳೂರಿನಲ್ಲಿ ನಡೆಯುವ ಸಮಾವೇಶಕ್ಕೆ ಮುನ್ನ ಪದಾಧಿಕಾರಿಗಳ ಆಯ್ಕೆ ಸಭೆ ನಡೆದು ಎಲ್ಲ ಸ್ಥಾನಕ್ಕೂ ನೇಮಕ ಮಾಡಲಾಗುತ್ತದೆ ಎಂದು ಕುಮಾರಸ್ವಾಮಿ ನುಡಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement