ಯೋಧನ ಶಿರಚ್ಛೇದಕ್ಕೆ ಪಾಕ್ಗೆ ತಕ್ಕ ಉತ್ತರ ನೀಡಿದ್ದೇವೆ: ಬಿಕ್ರಂ
ಭಾರತೀಯ ಯೋಧರಿಬ್ಬರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಾವು ಸುಮ್ಮನೆ ಕೈಕಟ್ಟಿಕೂರಲಿಲ್ಲ...
ನವದೆಹಲಿ: ಭಾರತೀಯ ಯೋಧರಿಬ್ಬರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಾವು ಸುಮ್ಮನೆ ಕೈಕಟ್ಟಿಕೂರಲಿಲ್ಲ. ಪಾಕಿಸ್ತಾನದ ದುಸ್ಸಾಹಸಕ್ಕೆ ತಕ್ಕ ಉತ್ತರ ನೀಡಿದ್ದೇವೆ ಎಂದು ಭಾರತೀಯ ಸೇನೆಯ ನಿರ್ಗಮಿತ ಮುಖ್ಯಸ್ಥ ಜ. ಬಿಕ್ರಂ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಗುರುವಾರ ನೂತನ ಸೇನಾ ಮುಖ್ಯಸ್ಥ ಲೆ.ಜ. ದಲ್ಬೀರ್ ಸಿಂಗ್ ಸುಹಾಗ್ ಅವರಿಗೆ ಅಧಿಕಾರ ಹಸ್ತಾಂತರಿಸಿದ ಬಳಿಕ ಮಾತನಾಡಿದ ಬಿಕ್ರಂ ಸಿಂಗ್, ಪಾಕ್ ಸೇನೆಯ ಬರ್ಬರ ಕೃತ್ಯಕ್ಕೆ ನಾವು ವ್ಯೂಹಾತ್ಮಕ ರೀತಿಯಲ್ಲಿ ಪ್ರತೀಕಾರ ತೀರಿಸಿಕೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಕಳೆದ ವರ್ಷ ಜ.8ರಂದು ಪಾಕಿಸ್ತಾನಿ ಸೈನಿಕರು ಗಡಿ ನಿಯಂತ್ರಣ ರೇಖೆಯಲ್ಲಿ ಭಾರತೀಯ ಯೋಧರಿಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಲ್ಯಾನ್ಸ್ ನಾಯಕ್ ಹೇಮ್ರಾಜ್ ಅವರ ಶಿರಚ್ಛೇದಗೈಯಲಾಗಿದ್ದರೆ, ಲ್ಯಾನ್ಸ್ ನಾಯಕ್ ಸುಧಾಕರ್ರನ್ನು ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿತ್ತು. ಪಾಕ್ ಈ ಕೃತ್ಯಕ್ಕೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಆಗ 'ನಾವು ನಮ್ಮ ಆಯ್ಕೆಯ ಸ್ಥಳ ಮತ್ತು ಸಮಯದಲ್ಲಿ ತಕ್ಕ ಉತ್ತರ ನೀಡಿಲಿದ್ದೇವೆಂದು ಜ. ಬಿಕ್ರಂ ಸಿಂಗ್ ಹೇಳಿದ್ದರು.
ಯುದ್ಧ ಸಾಧ್ಯತೆ ಕಡಿಮೆ: ಪದೇ ಪದೆ ಗಡಿ ತಗಾದೆ ತೆಗೆಯುತ್ತಿರುವ ಚೀನಾದ ಜತೆಗಿನ ಯುದ್ಧ ಸಾಧ್ಯತೆಯನ್ನು ಬಿಕ್ರಂ ಸಿಂಗ್ ತಳ್ಳಿಹಾಕಿದ್ದಾರೆ. ಚೀನಾ ಮತ್ತು ಭಾರತದ ನಡುವೆ ಮೇಲ್ಮಟ್ಟದಲ್ಲಿ ಪರಸ್ಪರ ಉತ್ತಮ ತಿಳಿವಳಿಕೆ ಇದೆ ಎಂದಿದ್ದಾರೆ ಸಿಂಗ್.