ಸ್ನೇಹದಲ್ಲೂ ಬೇಹು ಬೇಕಾ?
'ನಾವು ಮತ್ತು ನೀವು ಸ್ನೇಹಿತರು ಅಂತ ಎಲ್ಲ ಕಡೆ ಹೇಳಿಕೊಳ್ಳುತ್ತೀರಿ. ಆದರೆ ಸ್ನೇಹಿತರ ಮೇಲೆಯೇ ಬೇಹುಗಾರಿಕೆ ಮಾಡ್ತೀರಾ?'
ನವದೆಹಲಿ: 'ನಾವು ಮತ್ತು ನೀವು ಸ್ನೇಹಿತರು ಅಂತ ಎಲ್ಲ ಕಡೆ ಹೇಳಿಕೊಳ್ಳುತ್ತೀರಿ. ಆದರೆ ಸ್ನೇಹಿತರ ಮೇಲೆಯೇ ಬೇಹುಗಾರಿಕೆ ಮಾಡ್ತೀರಾ?'
- ಹೀಗೆ ಖಡಕ್ ಆಗಿ ಅಮೆರಿಕದ ವಿದೇಶಾಂಗ ಸಚಿವ ಜಾನ್ ಕೆರ್ರಿ ಅವರನ್ನು ಪ್ರಶ್ನಿಸಿದ್ದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್. ಭಾರತ ಪ್ರವಾಸದಲ್ಲಿರುವ ಕೆರ್ರಿ ಜತೆಗಿನ ಜಂಟಿ ಸುದ್ದಿಗೋಷ್ಠಿ ಸಂದರ್ಭದಲ್ಲಿ ಅವರು ಈ ವಿಚಾರ ಪ್ರಸ್ತಾಪಿಸಿದರು. ಬಿಜೆಪಿ ಚಟುವಟಿಕೆಗಳ ಬಗ್ಗೆ ಅಮೆರಿಕ ಬೇಹುಗಾರಿಕೆ ನಡೆಸಿದ್ದು ಸರಿಯಲ್ಲ. ಇದು ದೇಶದ ಜನರ ಆಕ್ರೋಶಕ್ಕೆ ಕಾರಣವಾಗಿ ರುವುದನ್ನು ಕೆರ್ರಿ ಗಮನಕ್ಕೆ ತಂದಿರುವುದಾಗಿ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಜತೆಗೆ ವಿಶ್ವ ವಾಣಿಜ್ಯ ಸಂಘಟನೆಯ ಆಹಾರ ಸಬ್ಸಿಡಿ ವಿಚಾರದಲ್ಲಿ ಅಮೆರಿಕ ಮತ್ತು ಇತರ ರಾಷ್ಟ್ರಗಳ ಒತ್ತಡ ಸರಿಯಲ್ಲ. ಅದನ್ನು ಒಪ್ಪಲಾಗದು ಎಂದು ಕೆರ್ರಿಗೆ ಮನವರಿಕೆಯನ್ನೂ ಮಾಡಿಕೊಟ್ಟರು. ಸುಷ್ಮಾ ಆಕ್ಷೇಪಗಳಿಗೆ ಉತ್ತರಿಸಿದ ಅಮೆರಿಕ ವಿದೇಶಾಂಗ ಸಚಿವ, ಭಾರತದ ಕಳವಳ ಅರ್ಥ ಮಾಡಿಕೊಳ್ಳುತ್ತೇವೆ. 21ನೇ ಶತಮಾನದಲ್ಲಿ ಎರಡೂ ರಾಷ್ಟ್ರಗಳು ಹೊಸ ಬಾಂಧವ್ಯ ಹೊಂದಲು ಮುಂದಾಗಿವೆ ಎಂದರು.
ಜೇಟ್ಲಿ ಜತೆಗೆ ಭೇಟಿ: ಗುರುವಾರ ಬೆಳಗ್ಗೆ ಕೆರ್ರಿ ಅವರು ರಕ್ಷಣಾ ಸಚಿವ ಮತ್ತು ಹಣಕಾಸು ಸಚಿವ ಅರುಣ್ ಜೇಟ್ಲಿ ಜತೆ ಭೇಟಿ ಮಾಡಿದ್ದರು.