ಹುಷಾರ್, ತಪ್ಪು ಮಾಹಿತಿ ಕೊಟ್ರೆ ಸಿಕ್ಕೊಳ್ತೀರಿ!
ಸುಳ್ಳು ಮಾಹಿತಿ ನೀಡಿದರೆ ಜೋಕೆ, ನೀವು ಕೊಟ್ಟ ಮಾಹಿತಿಯಿಂದಲೇ ಪಡಿತರ ಚೀಟಿ ಅಕ್ರಮ ಪತ್ತೆ ಹಚ್ಚಬಹುದಾಗಿದೆ...
ಕನ್ನಡಪ್ರಭ ವಾರ್ತೆ ಬೆಂಗಳೂರು ಜು. 31
ಸುಳ್ಳು ಮಾಹಿತಿ ನೀಡಿದರೆ ಜೋಕೆ, ನೀವು ಕೊಟ್ಟ ಮಾಹಿತಿಯಿಂದಲೇ ಪಡಿತರ ಚೀಟಿ ಅಕ್ರಮ ಪತ್ತೆ ಹಚ್ಚಬಹುದಾಗಿದೆ.
ರಾಜ್ಯದಲ್ಲಿರುವ ಎಲ್ಲ 1.03 ಕೋಟಿ ಪಡಿತರ ಚೀಟಿ ಹಾಗೂ ಅದರಲ್ಲಿನ ಸದಸ್ಯರ ಸಂಪೂರ್ಣ ವಿವರವನ್ನು ಚುನಾವಣೆ ಗುರುತಿನ ಚೀಟಿ, ಆಧಾರ್ ಗುರುತಿನ ಸಂಖ್ಯೆ, ವಾಹನ ಪರವಾನಿಗೆ ಚೀಟಿ ಹಾಗೂ ವಿದ್ಯುತ್ ಬಿಲ್ ಜತೆಗೆ ತಾಳೆ ಹಾಕಲಾಗುತ್ತದೆ. ಇದರಲ್ಲಿ ಚುನಾವಣೆ ಗುರುತಿನ ಚೀಟಿ ಹಾಗೂ ಆಧಾರ್ ಕಡ್ಡಾಯ. ಉಳಿದ ಮಾಹಿತಿಗಳನ್ನು ಸರ್ಕಾರದಲ್ಲಿ ಲಭ್ಯವಿರುವ ದಾಖಲೆ ಮೂಲಕ ಪರಿಶೀಲಿಸಲಾಗುತ್ತದೆ.
ಈಗ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಮೊದಲ 15 ದಿನಗಳಲ್ಲಿ 90 ಸಾವಿರಕ್ಕೂ ಅಧಿಕ ಅಕ್ರಮ ಚೀಟಿ ಕಂಡುಹಿಡಿದಿದೆ. ಈ ವ್ಯವಸ್ಥೆ ಮೂಲಕ ಸುಮಾರು 20 ಲಕ್ಷಕ್ಕೂ ಅಧಿಕ ಅಕ್ರಮ ಪಡಿತರ ಚೀಟಿ ಪತ್ತೆಹಚ್ಚಬಹುದಾಗಿದೆ ಎಂದು ಇಲಾಖೆ ಅಂದಾಜಿಸಿದೆ.
ಅಕ್ರಮ ಪತ್ತೆ ಹೇಗೆ?: ಹೊಸದಾಗಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವಾಗ ಕಡ್ಡಾಯವಾಗಿ ಚುನಾವಣೆ ಗುರುತಿನ ಚೀಟಿ ಹಾಗೂ ಆಧಾರ್ ಸಂಖ್ಯೆ ನೀಡಬೇಕಾಗುತ್ತದೆ. ಈಗಾಗಲೆ ಚೀಟಿ ಹೊಂದಿರುವವರು ಚುನಾವಣೆ ಗುರುತಿನ ಚೀಟಿ ನೀಡಬೇಕಾಗುತ್ತದೆ. ಇದರಿಂದ ಸುಮಾರು 1.40 ಕೋಟಿಯಷ್ಟು ಗುರುತಿನ ಚೀಟಿಯ ಸಂಖ್ಯೆ ಪಡೆಯಲಾಗಿದೆ. ಚುನಾವಣೆ ಇಲಾಖೆಯ ಡಾಟಾಗಳೊಂದಿಗೆ ಈ ಮಾಹಿತಿಯನ್ನು ತಾಳೆ ಹಾಕಲಾಗುತ್ತದೆ. ಆಗ ಸಾಫ್ಟ್ವೇರ್ನಲ್ಲಿ ಶಂಕಿತ ಚೀಟಿದಾರರ ಹೆಸರು ಪತ್ತೆಯಾಗುತ್ತದೆ.
ಇದಲ್ಲದೇ ಚುನಾವಣೆ ಇಲಾಖೆ ಮೂಲಕ ಕಳೆದ 5 ವರ್ಷದಲ್ಲಿ ಮೃತಪಟ್ಟರ ಮಾಹಿತಿ ಪಡೆದು, ಅವರ ಹೆಸರಲ್ಲಿ ಪಡಿತರ ಪಡೆಯುತ್ತಿರುವ ಬಗ್ಗೆಯೂ ಮಾಹಿತಿ ಪಡೆಯಬಹುದಾಗಿದೆ. ಇನ್ನು ಆಧಾರ್ ಗುರುತಿನ ಚೀಟಿಯ ಒಂದೇ ಬಯೋವುಟ್ರಿಕ್ ನೀಡಿ ಹತ್ತಾರು ಪಡಿತರ ಪಡೆದಿರುವುದನ್ನೂ ಪತ್ತೆ ಹಚ್ಚಬಹುದು. ಹೀಗಾಗಿ ನಕಲಿ ದಾಖಲೆಯಿಂದ ಪಡಿತರ ಚೀಟಿ ಪಡೆಯಲು ಸಾಧ್ಯವಿಲ್ಲ.
ಆದರೆ ಅನರ್ಹ ಎಂದರೆ ಶ್ರೀಮಂತರಾಗಿದ್ದೂ ಬಿಪಿಎಲ್ ಪಡಿತರ ಚೀಟಿ ಹೊಂದಿದವರ ಮಾಹಿತಿ ಇಲ್ಲಿ ದೊರೆಯುವುದಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿ ತಾಲೂಕಿನ ಆರ್ಟಿಒ ಹಾಗೂ ವಿದ್ಯುತ್ ಕಚೇರಿಯಿಂದ ಮಾಹಿತಿ ಪಡೆಯಲಾಗುತ್ತಿದೆ. 100 ಸಿಸಿಗಿಂತ ಹೆಚ್ಚಿನ ವಾಹನವಿದ್ದರೆ ಅವರು ಪಡಿತರಕ್ಕೆ ಅರ್ಹರಲ್ಲ. ಇಂಥ ಮಾಹಿತಿ ದೊರೆತ ಕೂಡಲೇ ಚೀಟಿ ರದ್ದು ಮಾಡಬಹುದು ಎನ್ನುವುದು ಇಲಾಖೆಯ ಲೆಕ್ಕಾಚಾರ.
ವಿದ್ಯುತ್ ಬಿಲ್ ಸಹ ಪರೀಕ್ಷಿಸುವುದರಿಂದ ಸರ್ಕಾರದ ಮಾನದಂಡಕ್ಕಿಂತ ಹೆಚ್ಚಿನ ವಿದ್ಯುತ್ ಬಳಸಿದ್ದರೆ ಮಾಹಿತಿ ಸಿಗುತ್ತದೆ. ಇದರಿಂದ ಮಾತ್ರ ಅನರ್ಹ ಚೀಟಿ ಪತ್ತೆಹಚ್ಚಬಹುದಾಗಿದೆ.
ಸೆಪ್ಟೆಂಬರ್ ಒಳಗೆ ಮಾಹಿತಿ ಕಡ್ಡಾಯ
ಈಗಾಗಲೇ ಪಡಿತರ ಚೀಟಿ ಹೊಂದಿರುವವರು ಸೆಪ್ಟೆಂಬರ್ ಅಂತ್ಯದೊಳಗೆ ಚುನಾವಣೆ ಗುರುತಿನ ಚೀಟಿ ಸಂಖ್ಯೆಯನ್ನು ಇಲಾಖೆಗೆ ಸಂದೇಶ ಕಳುಹಿಸಬೇಕಾಗಿದೆ. ಇಲ್ಲವಾದಲ್ಲಿ ಚೀಟಿ ರದ್ದು ಮಾಡುವ ಸಾಧ್ಯತೆಯಿದೆ. ಇದರ ಜತೆಗೆ ಇನ್ನು ಆನ್ಲೈನ್ಲ್ಲಿಯೇ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಸ್ಥಳೀಯ ಕೇಂದ್ರಗಳಲ್ಲಿ ಬಯೋವುಟ್ರಿಕ್ ವಿವರ ನೀಡಬೇಕಿಲ್ಲ. ಬದಲಾಗಿ ಆಧಾರ್ ಗುರುತಿನ ಸಂಖ್ಯೆಗೆ ನೀಡಿರುವ ಮಾಹಿತಿಯನ್ನೇ ಇಲಾಖೆ ಬಳಸಿಕೊಳ್ಳಲಿದೆ.