16ನೇ ಲೋಕಸಭೆ: ಅದಲು ಬದಲು ಕಂಚಿ ಕದಲು...
ಸೂತಕ ಮತ್ತು ಸಂಭ್ರಮ ಎರಡನ್ನೂ ಒಟ್ಟೊಟ್ಟಿಗೆ ಅನುಭವಿಸುವ ವಿಚಿತ್ರ ಸನ್ನಿವೇಶ ಎದುರಾದರೆ? ಬಿಜೆಪಿ ..
ನವದೆಹಲಿ: ಸೂತಕ ಮತ್ತು ಸಂಭ್ರಮ ಎರಡನ್ನೂ ಒಟ್ಟೊಟ್ಟಿಗೆ ಅನುಭವಿಸುವ ವಿಚಿತ್ರ ಸನ್ನಿವೇಶ ಎದುರಾದರೆ? ಬಿಜೆಪಿ ಬುಧವಾರ ಲೋಕಸಭೆಯಲ್ಲಿ ಎದುರಿಸಿದ್ದು ಅಂಥದ್ದೇ ಪರಿಸ್ಥಿತಿ. ಹಿರಿಯ ನಾಯಕನನ್ನು ಕಳೆದುಕೊಂಡ ದುಃಖ, ಮೊದಲ ಸಲ ಸ್ವಂತ ಬಲದಿಂದ ಅಧಿಕಾರದ ಗದ್ದುಗೆ ಹಿಡಿದ ಖುಷಿ, ಹತ್ತು ವರ್ಷಗಳ ಬಳಿಕ ಮತ್ತೆ ಆಡಳಿತ ಪಕ್ಷದಲ್ಲಿ ಕೂರುವ ಅವಕಾಶ.
ಮೊದಲ ಸಲ ಲೋಕಸಭೆ ಪ್ರವೇಶಿಸಿದ ಪ್ರಧಾನಿ ನರೇಂದ್ರ ಮೋದಿ ಸಹ ಗೋಪಿನಾಥ ಮುಂಡೆ ನಿಧನದಿಂದಾಗಿ ಸಂಭ್ರಮಿಸುವ ಮನಸ್ಥಿತಿಯಲ್ಲಿ ಇರಲಿಲ್ಲ. ಕಂದುಬಣ್ಣದ ತಿಳಿ ಛಾಯೆ ಇರುವ ಶ್ವೇತವರ್ಣದ ಕುರ್ತಾ ಧರಿಸಿದ್ದ ಪ್ರಧಾನಿ ಮೊದಲಿರಾಗಿ ಸದನ ಪ್ರವೇಶಿಸಿದರು. ನಂತರ ಸದನದ ಹಿರಿಯ ಸದಸ್ಯ 86 ವರ್ಷ ಪ್ರಾಯದ ಎಲ್.ಕೆ.ಆಡ್ವಾಣಿ ಆಗಮಿಸಿದರು.
ಬಿಜೆಪಿ ಸಂಸದೀಯ ಪಕ್ಷದ ಅಧ್ಯಕ್ಷರಾಗಿರುವ ಆಡ್ವಾಣಿಗೆ ಪ್ರಧಾನಿ ಪಕ್ಕದ ಆಸನ ಒದಗಿಸಲಾಗಿದೆ. ಮುರಳಿ ಮನೋಹರ ಜೋಶಿ, ಪಾಸ್ವಾನ್,ವೆಂಕಯ್ಯ ನಾಯ್ಡು, ಸುಷ್ಮಾ ಸ್ವರಾಜ್ ಮತ್ತು ರಾಜನಾಥ ಸಿಂಗ್ ಮೊದಲ ಸಾಲಿನಲ್ಲಿ ಕುಳಿತುಕೊಳ್ಳಲಿದ್ದಾರೆ.
ಮೋದಿಯವರು ಆಡ್ವಾಣಿ ಸೇರಿದಂತೆ ಮೊದಲ ಸಾಲಿನಲ್ಲಿ ಕುಳಿತಿದ್ದವರ ಕೈ ಕುಲುಕುತ್ತ ಸಾಗಿದರು. ತಮ್ಮ ಬಳಿ ಆಗಮಿಸುತ್ತಿದ್ದಂತೆ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ತಾವೇ ಹಜಾರಕ್ಕೆ ಆಗಮಿಸಿ ನೂತನ ಪ್ರಧಾನಿಗೆ ಶುಭ ಹಾರೈಸಿದರು. ಪ್ರತಿಪಕ್ಷಗಳ ಸಾಲಿನಲ್ಲಿ ಮೊದಲ ಸಾಲಿನಲ್ಲಿಯೇ ಆಸೀನರಾಗಿದ್ದ ಎಸ್ಪಿ ವರಿಷ್ಠ ಮುಲಾಯಂಸಿಂಗ್ ಅವರಿಗೂ ಮೋದಿ ಹಸ್ತ ಲಾಘವ ನೀಡಿದರು.
ರಾಹುಲ್ಗೆ ಹಿಂದಿನ ಸಾಲು: ಹತ್ತು ವರ್ಷ ಆಡಳಿತ ಪಕ್ಷದಲ್ಲಿದ್ದವರು ಪ್ರತಿಪಕ್ಷಗಳ ಸಾಲಿನಲ್ಲಿ, ಪ್ರತಿಪಕ್ಷಗಳ ಸಾಲಿನಲ್ಲಿದ್ದವರು ಆಡಳಿತ ಪಕ್ಷದ ಸಾಲಿನಲ್ಲಿ ಕುಳಿತುಕೊಳ್ಳಬೇಕಿದೆ. ರಾಹುಲ್ ಗಾಂಧಿ ಅವರಿಗೆ ಪ್ರತಿಪಕ್ಷಗಳ ಕಡೆ 9ನೇ ಸಾಲು. ಅವರ ಅಕ್ಕಪಕ್ಕ ಅಸ್ರಾರ್-ಉಲ್-ಹಖ್ ಮತ್ತು ಶಶಿ ತರೂರ್ ಕುಳಿತುಕೊಳ್ಳಲಿದ್ದಾರೆ.
ಪ್ರತಿಪಕ್ಷಗಳಲ್ಲಿ ಮೊದಲ ಸಾಲಿನಲ್ಲಿ ಕುಳಿತುಕೊಳ್ಳುವ ಅವಕಾಶ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕರ್ನಾಟಕದ ಮೂವರಿಗೆ ದೊರೆತಿರುವುದು ವಿಶೇಷ. ಲೋಕಸಭೆಯಲ್ಲಿ ಪಕ್ಷಮುನ್ನಡೆಸಲಿರುವ ಖರ್ಗೆ, ಸೋನಿಯಾ, ಮೊಯ್ಲಿ, ಕೆ.ಎಚ್.ಮುನಿಯಪ್ಪ ಈ ನಾಲ್ವರು ಕಾಂಗ್ರೆಸ್ಸಿಗರಿಗಷ್ಟೇ ಮೊದಲ ಸಾಲಿನಲ್ಲಿ ಆಸೀನರಾಗುವ ಅವಕಾಶ. ಎಸ್ಪಿಯ ಮುಲಾಯಂ, ಟಿಎಂಸಿಯ ಸುದೀಪ್ ಬಂದೋಪಾಧ್ಯಾಯ, ಬಿಜೆಡಿಯ ಅರ್ಜುನ್ ಚರಣ್ ಸೇಥಿ ಅವರಿಗೂ ಇದೇ ಸಾಲಿನಲ್ಲಿ ಆಸನ ಕಲ್ಪಿಸಲಾಗಿದೆ.
ಸುಮಿತ್ರಾ ಮಹಾಜನ್ ಆಯ್ಕೆ ಬಹುತೇಕ ಖಚಿತ
ಮಧ್ಯಪ್ರದೇಶದ ಇಂದೋರ್ನಿಂದ ಸತತ ಎಂಟು ಸಲ ಆಯ್ಕೆಯಾಗಿರುವ ಬಿಜೆಪಿಯ ಸುಮಿತ್ರಾ ಮಹಾಜನ್ ಲೋಕಸಭಾ ಸ್ಪೀಕರ್ ಆಗಿ ಆಯ್ಕೆಯಾಗುವುದು ಬಹುತೇಕ ನಿಶ್ಚಿತ. ಸ್ಪೀಕರ್ ಚುನಾವಣೆ ಶುಕ್ರವಾರ ನಡೆಯಲಿದೆ. ಸುಮಿತ್ರಾ ಎರಡನೇ ಮಹಿಳಾ ಸ್ಪೀಕರ್ ಆಗಲಿದ್ದಾರೆ. ಹಿಂದಿನ ಲೋಕಸಭೆಯಲ್ಲಿ ಸ್ಪೀಕರ್ ಆಗಿದ್ದ ಮೀರಾಕುಮಾರ್ ಮೊದಲ ಮಹಿಳೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮೇ 9ರಂದು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ. ರಾಷ್ಟ್ರಪತಿಗಳ ಭಾಷಣಕ್ಕೆ ಬುಧವಾರ ನಡೆದ ಸಚಿವ ಸಂಪುಟ ಸಭೆ ಅಂಗೀಕಾರದ ಮುದ್ರೆಯೊತ್ತಿದೆ. ಸರ್ಕಾರದ ಕಾರ್ಯಸೂಚಿಯನ್ನು ಭಾಷಣ ಬಿಂಬಿಸಲಿದೆ.
ಮುಂಡೆಗೆ ಶ್ರದ್ಧಾಂಜಲಿ ಕಲಾಪ ಮುಂದೂಡಿಕೆ
16ನೇ ಲೋಕಸಭೆಯ ಚೊಚ್ಚಲ ಅಧಿವೇಶನದ ಮೊದಲ ದಿನ ಕೇಂದ್ರ ಸಚಿವ ಗೋಪಿನಾಥ ಮುಂಡೆ ಅಕಾಲಿಕ ನಿಧನದ ದುಃಖದ ನೆರಳು. ಹಿರಿಯ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಿ ಕಲಾಪ ಮುಂದೂಡಲಾಯಿತು.
ಬೆಳಗ್ಗೆ ರಾಷ್ಟ್ರಪತಿ ಭವನದಲ್ಲಿ ಹಂಗಾಮಿ ಸ್ಪೀಕರ್ ಕಮಲನಾಥ್ ರಾಷ್ಟ್ರಪತಿಗಳಿಂದ ಪ್ರಮಾಣ ವಚನ ಸ್ವೀಕರಿಸಿದರು. ಬಳಿಕ ಲೋಕಸಭೆಯಲ್ಲಿ ಸದನ ಸೇರಿದಾಗ ವಿಷಾದದ ಛಾಯೆ. ಕಲಾಪ ಆರಂಭವಾಗುತ್ತಿದ್ದಂತೆ ಸಂತಾಪ ಸೂಚಕ ನಿರ್ಣಯ ಮಂಡಿಸಿದ ಸ್ಪೀಕರ್, 'ಮುಂಡೆ ಜನರ ನಾಯಕರಾಗಿದ್ದರು' ಎಂದು ಬಣ್ಣಿಸಿದರು. ಸದಸ್ಯರು ಎದ್ದುನಿಂತು ಎರಡು ನಿಮಿಷ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ಸೆಕ್ರೆಟರಿ ಜನರಲ್ ಪಿ.ಶ್ರೀಧರನ್ ಅವರು ಚುನಾವಣಾ ಆಯೋಗ ಸಲ್ಲಿಸಿರುವ ಸದಸ್ಯರ ಪಟ್ಟಿ, ಹೊಸ ಲೋಕಸಭೆ ಅಸ್ತಿತ್ವಕ್ಕೆ ಬಂದಿರುವ ಅಧಿಸೂಚನೆ ಓದಿದರು. ಮುಂಡೆ ಗೌರವಾರ್ಥ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಯಿತು. ಮೋದಿ ಸೇರಿದಂತೆ ಸದಸ್ಯರು ಗುರುವಾರವೇ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹೀಗಾಗಿ 24 ಗಂಟೆ ಕಾಲ ಕಮಲನಾಥ್ ಸದನದ ಏಕೈಕ ಸದಸ್ಯರಾಗಿರುತ್ತಾರೆ!
ಸಾಮಾನ್ಯ ಪ್ರಜೆಗಳ ಭರವಸೆ ಮತ್ತು ನಿರೀಕ್ಷೆಗಳನ್ನು ಈಡೇರಿಸುವ ದಿಸೆಯಲ್ಲಿ ಪ್ರಜಾಪ್ರಭುತ್ವದ ದೇಗುಲವಾದ ಸಂಸತ್ತು ಕೆಲಸ ಮಾಡಲಿದೆ.
- ನರೇಂದ್ರ ಮೋದಿ, ಪ್ರಧಾನಿ