ಮದುವೆ ಮುಂದೂಡಿಕೆ
ಅದ್ಧೂರಿ ಮದುವೆಗೆ ತೆರಿಗೆ ಕಾನೂನು ಜಾರಿ ಬಗ್ಗೆ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಚರ್ಚಿಸಿ, ಮುಂದಿನ ಪ್ರಕ್ರಿಯೆ...
ಬೆಂಗಳೂರು: ಅದ್ಧೂರಿ ಮದುವೆಗೆ ತೆರಿಗೆ ಕಾನೂನು ಜಾರಿ ಬಗ್ಗೆ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಚರ್ಚಿಸಿ, ಮುಂದಿನ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.
ಸರ್ಕಾರ ಕಾಯ್ದೆ ಜಾರಿಗೆ ಚಿಂತನೆ ನಡೆಸಿದ ಹಿನ್ನೆಲೆಯಲ್ಲಿ 'ಕನ್ನಡಪ್ರಭ' ಆರಂಭಿಸಿದ ಸಾರ್ವಜನಿಕ ಚರ್ಚಾ ಅಭಿಯಾನಕ್ಕೆ ಅವರು ಪ್ರತಿಕ್ರಿಯಿಸಿದ್ದಾರೆ.
ಪ್ರತಿ ಕಾನೂನು ಜನರಿಗಾಗಿ, ಉತ್ತಮ ಆಡಳಿತಕ್ಕಾಗಿ. ಇದರ ಹಿಂದಿನ ಉದ್ದೇ ಶವೂ ಅದೇ. ಕಾನೂನು ರಚನೆಯಲ್ಲಿ ಜನ ಸಹಭಾಗಿತ್ವವೂ ಅಗತ್ಯ. ಹೀಗಾಗಿ ಸಾರ್ವ ಜನಿಕ ಚರ್ಚೆಯಾಗಲಿ. ಅದರ ಆಧಾರದ ಮೇಲೆ ಸಾಧಕ-ಬಾಧಕಗಳ ಪರಿಶೀಲನೆಗೆ ಈ ವಿಚಾರ ಪ್ರಸ್ತಾಪಿಸಿದ್ದೆ ಎಂದರು.
ಕನ್ನಡಪ್ರಭದಲ್ಲಿ ಪ್ರಕಟವಾದ ಸಾರ್ವ ಜನಿಕ ಅಭಿಪ್ರಾಯಗಳನ್ನು ಗಮನಿಸಿದ್ದೇನೆ. ಈ ಕಾಯ್ದೆ ಜಾರಿ ಹಿಂದೆ ಸದುದ್ದೇಶವೇ ಇದೆ. ಆದರೂ ಸಾರ್ವಜನಿಕರ ಅಭಿಪ್ರಾಯಗಳನ್ನು ನಾನು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಂಡಿಸುತ್ತೇನೆ. ಅಂತಿ ಮವಾಗಿ ಪಕ್ಷದ ನೀತಿ ನಿರೂಪಣೆಯ ಗರಿಷ್ಠ ವೇದಿಕೆ ಶಾಸಕಾಂಗ ಪಕ್ಷ. ಇದೇ 18ಕ್ಕೆ ನಡೆಯುವ ಸಭೆಯಲ್ಲಿ ವಿಚಾರ ಪ್ರಸ್ತಾಪಿಸುತ್ತೇನೆ. ಇದರರ್ಥ ಸರ್ಕಾರ ಜನಾಭಿಪ್ರಾಯಕ್ಕೆ ಸ್ಪಂದನೆ ಎಂದರು.
ಅಷ್ಟಕ್ಕೂ ಅದ್ಧೂರಿ ವಿವಾಹ ನಿಯಂತ್ರಣಕ್ಕೆ 1976ರಲ್ಲೇ ಕಾಯ್ದೆ ಇದೆ. ಅದು ಪಾಲನೆಯಾಗುತ್ತಿಲ್ಲ. ಆಹಾರ ಪದಾರ್ಥಗಳ ಅಪವ್ಯಯ, ದುಂದು ವೆಚ್ಚದ ಬಗ್ಗೆ ಕಳೆದ ಅಧಿವೇಶನ ಸಂದರ್ಭದಲ್ಲಿ ಪ್ರತಿಪಕ್ಷಗಳ ಮುಖಂಡರೂ ಪ್ರಸ್ತಾಪಿಸಿದ್ದರು. ಈ ಕಾನೂನು ಜಾರಿ ಚಿಂತನೆ ಹಿಂದೆ ಹೆಣ್ಣು ಹೆತ್ತವರ ಕಷ್ಟವೂ ಅಡಗಿದೆ ಎಂದರು.