ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸದ್ಯ, ಎಸ್ಐ ದಲಿತರಾಗಿ ಬದುಕಿದ್ರು...

Rashmi Kasaragodu
Updated On : 5 Jun 2014, 1:16 am


ಬೆಂಗಳೂರು: ಎಡಿಜಿಪಿ ರವೀಂದ್ರನಾಥ್ ಅವರ ಪ್ರಕರಣ ಜಾತಿ ತಿರುವು ಪಡೆದುಕೊಂಡಿದ್ದರೂ, ಅವರನ್ನು ಠಾಣೆಗೆ ಕರೆದುಕೊಂಡು ಹೋದ ಸಬ್ಇನ್ಸ್ಪೆಕ್ಟರ್ ಕೂಡ ದಲಿತ ಸಮುದಾಯಕ್ಕೆ ಸೇರಿದವರು ಎಂಬುದು ಹೆಚ್ಚಿನವರಿಗೆ ಗೊತ್ತೇ ಇಲ್ಲ!
ಇದೇ ಕಾರಣಕ್ಕೆ ಎಡಿಜಿಪಿ ರವೀಂದ್ರನಾಥ್ ಅವರು ಕೂಡ ಸಬ್ಇನ್ಸ್ಪೆಕ್ಟರ್ ಅವರನ್ನು ಬಿಟ್ಟು ಡಿಸಿಪಿ ರವಿಕಾಂತೇ ಗೌಡ ಮತ್ತು ಆಯುಕ್ತ ಔರಾದ್ಕರ್ ಅವರ ವಿರುದ್ಧ ಜಾತಿ ನಿಂದನೆ ದೂರು ಕೊಟ್ಟಿದ್ದಾರೆ. ಘಟನೆ ನಡೆದ ತಕ್ಷಣ ಸ್ಥಳಕ್ಕೆ ತೆರಳಿದವರು ಒಬ್ಬರು ಪೊಲೀಸ್ ಸಬ್ಇನ್ಸ್ಪೆಕ್ಟರ್. ಅವರೇ ರವೀಂದ್ರನಾಥ್ ಅವರನ್ನು ಹೊಯ್ಸಳ ವಾಹನದಲ್ಲಿ ಕೂರಿಸಿ ಠಾಣೆಗೆ ಕರೆದುಕೊಂಡು ಹೋದವರು.
ಹಾಗೆ ನೋಡಿದರೆ ರವೀಂದ್ರನಾಥ್ ಅವರು ಮೊದಲು ದೂರು ಕೊಡಬೇಕಾದ್ದೇ ಸಬ್ಇನ್ಸಪ್ಟೆಕ್ಟರ್ ವಿರುದ್ಧ. ಆದರೆ ರವೀಂದ್ರನಾಥ್ ಎಷ್ಟು ಚಾಲಾಕಿಯೆಂದರೆ ಸಬ್ಇನ್ಸ್ಪೆಕ್ಟರ್ ಹೆಸರನ್ನೇ ಎಲ್ಲೂ ಪ್ರಸ್ತಾಪಿಸಿಲ್ಲ. ಅಕಸ್ಮಾತ್ ಸಬ್ಇನ್ಸ್ಪೆಕ್ಟರ್ ಅವರು ದಲಿತ ಸುದಾಯಕ್ಕೆ ಸೇರಿದವರಾಗಿರದೇ ಇದ್ದಲ್ಲಿ ಇಷ್ಟು ಹೊತ್ತಿಗೆ ಸಬ್ಇನ್ಸ್ಪೆಕ್ಟರ್ ಮೇಲೆ ಶಿಸ್ತುಕ್ರಮ ಜರುಗಿಸಿಯಾಗುತ್ತಿತ್ತು.
ಆದರೆ ಸಬ್ಇನ್ಸ್ಪೆಕ್ಟರ್ ನಸೀಬು ಎಷ್ಟು ಚೆನ್ನಾಗಿತ್ತೆಂದರೆ ಅವರು ಕೂಡ ದಲಿತ ಸಮುದಾಯಕ್ಕೆ ಸೇರಿದವರೇ ಆಗಿದ್ದರು. ಆದರೆ ಗಲಾಟೆ ನಡೆದ ಕುರಿತು ಮಾಹಿತಿ ಬಂದಾಗ ಸಬ್ಇನ್ಸ್ಪೆಕ್ಟರ್ ಅವರಿಗೇ ಆರೋಪಿಯಾಗಿರುವವರು ಪೊಲೀಸ್ ಅಧಿಕಾರಿಯೆಂದಾಗಲಿ ದಲಿತ ಸಮುದಾಯಕ್ಕೆ ಸೇರಿದವರೆಂದಾಗಲೀ ಗೊತ್ತಿರಲಿಲ್ಲ. ನಂತರವೇ ಅವರು ಹಿರಿಯ ಅಧಿಕಾರಿ ಮತ್ತು ದಲಿತ ಸಮುದಾಯಕ್ಕೆ ಸೇರಿದವರು ಎಂಬುದು ಗೊತ್ತಾಗಿದ್ದು.
ಇದರಲ್ಲಿ ಇನ್ನೂ ಒಂದು ಸಂಗತಿಯೆಂದರೆ ಅಂದು ಹೈಗ್ರೌಂಡ್ಸ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶ್ರೀಧರ್ ಅವರು ರಜೆಯಲ್ಲಿದ್ದರು. ಹಾಗಾಗಿ ಅದರ ಉಸ್ತುವಾರಿಯನ್ನು ಬೇರೆ ಇನ್ಸ್ಪೆಕ್ಟರ್ಗೆ ವಹಿಸಲಾಗಿತ್ತು. ಅವರು ಕೂಡ ದಲಿತ ಸಮುದಾಯಕ್ಕೆ ಸೇರಿದವರು! ತಕ್ಷಣಕ್ಕೆ ಸ್ಥಳಕ್ಕಾಗಮಿಸಿದ ಇಬ್ಬರೂ ಅಧಿಕಾರಿಗಳು ದಲಿತರೇ ಆಗಿದ್ದು ಕಾಕತಾಳೀಯವೇ ಆದರೂ ಅದೇ ಕಾರಣಕ್ಕೆ ಅವರಿಬ್ಬರೂ ದೊಡ್ಡ ಅಪಾಯದಿಂದ ಪಾರಾಗಿದ್ದು ಅಷ್ಟೇ ಸತ್ಯ. ರವೀಂದ್ರನಾಥ್ ಅವರು ನನ್ನ ಮೇಲೆ ಪಿತೂರಿ ನಡೆಯಿತು ಎಂದು ಆರೋಪಿಸುತ್ತಾರಾದರೂ ಆರಂಭದಲ್ಲಿ ಅವರನ್ನು ಠಾಣೆಗೆ ಕರೆದುಕೊಂಡು ಹೋದ ಅಧಿಕಾರಿಯಿಂದ ಆರಂಭಿಸಿ ಪ್ರಕರಣವನ್ನು ನಿಭಾಯಿಸಿದವರೆಲ್ಲ ಅದೇ ಸಮುದಾಯಕ್ಕೆ ಸೇರಿದ ಅಧಿಕಾರಿಗಳು ಎಂಬುದು ಕೂಡ ಗಮನಾರ್ಹ.
ತನಿಖಾಧಿಕಾರಿಯೂ ದಲಿತ: ಸರ್ಕಾರ ತನಿಖೆಯನ್ನು ಸಿಒಡಿಗೆ ವಹಿಸಿದೆ. ಅಲ್ಲಿ ಡಿಸಿಪಿ ಹಂತದ ಅಧಿಕಾರಿಯೊಬ್ಬರನ್ನು ತನಿಖಾಧಿಕಾರಿಯಾಗಿ ಮಾಡಲಾಗಿದೆ. ಅಚ್ಚರಿಯೆಂದರೆ ಅವರು ಕೂಡ ದಲಿತ ಸಮುದಾಯಕ್ಕೆ ಸೇರಿದವರು! ರವೀಂದ್ರನಾಥ್ ಅವರು ಇಲಾಖೆಯ ಮೇಲೆ ಪಿತೂರಿ ಆರೋಪ ಹೊರಿಸುತ್ತಿದ್ದಾರೆ. ಆದರೆ ರವೀಂದ್ರನಾಥ್ ಅವರ ಪ್ರಕರಣವನ್ನು ಆರಂಭದಿಂದ ಈವರೆಗೆ ನಿಭಾಯಿಸುತ್ತಿರುವವರು ಕೂಡ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement