ಸಾಯಲು ಹೊರಟ ಚಾಲಕನ ನೋಡಲೂ ಬಾರದ ಅಧಿಕಾರಿ
ಅಧಿಕಾರಿಗಳ ಕಿರುಕುಳದಿಂದ ಬೇಸತ್ತು ಜೂ.2ರಂದು ಗದಗ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿಗಳ ಸಮ್ಮುಖದಲ್ಲಿ...
ಗದಗ: ಅಧಿಕಾರಿಗಳ ಕಿರುಕುಳದಿಂದ ಬೇಸತ್ತು ಜೂ.2ರಂದು ಗದಗ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿಗಳ ಸಮ್ಮುಖದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಚಾಲಕ ಬಸವರಾಜ ಕರಿಸಕ್ರಣ್ಣವರ ಮೂರು ದಿನಗಳಿಂದ ಬೆಟಗೇರಿ ಸಿಎಸ್ಐ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಷ್ಟಾದರೂ ಸೌಜನ್ಯಕ್ಕೂ ಸಾರಿಗೆ ಸಂಸ್ಥೆ ಅಧಿಕಾರಿಗಳು ಕರಿಸಕ್ರಣ್ಣವರ ಯೋಗಕ್ಷೇವು ವಿಚಾರಿಸದೇ ಇರುವುದು ಸಂಸ್ಥೆಯ ಕಾರ್ಮಿಕ ವಿರೋಧಿ ನೀತಿಗೆ ಕನ್ನಡಿ ಹಿಡಿದಿದೆ. ಸಾರಿಗೆ ಸಂಸ್ಥೆ ಕಾರ್ಮಿಕರ ಜೀವ ಹಿಂಡುತ್ತಿರುವುದು ಹಲವು ಬಾರಿ ಸಾಬೀತಾಗಿದೆ. ಈ ಪ್ರಕರಣ ಅದಕ್ಕೆ ಮತ್ತಷ್ಟು ಪುಷ್ಟಿ ನೀಡುವಂತಿದೆ. ಜಿಲ್ಲೆಯಲ್ಲಿರುವ ಸಂಘಟನೆಗಳೂ ಈ ಘಟನೆ ಸಂಬಂಧ ಧ್ವನಿಯೆತ್ತದೆ ಮೌನವಾಗಿರುವುದು ಕಾರ್ಮಿಕ ವರ್ಗದಲ್ಲಿ ಬೇಸರ ಮೂಡಿಸಿದೆ. ಜೂ.2ರಂದು ತಮ್ಮ ಸಮ್ಮುಖದಲ್ಲೇ ಚಾಲಕ ವಿಷ ಸೇವಿಸಿದ್ದರೂ ವಿಭಾಗೀಯ ನಿಯಂತ್ರಣಾಧಿಕಾರಿಗಳು ಈವರೆಗೂ ಯಾರ ಕೈಗೂ ಸಿಕ್ಕಿಲ್ಲ.
ಕಚೇರಿಗೆ ಹೋಗಿ ವಿಚಾರಿಸಿದರೆ ಹುಬ್ಬಳ್ಳಿಗೆ ಮೀಟಿಂಗ್ಗೆ ಹೋಗಿದ್ದಾರೆ ಎನ್ನುವ ಉತ್ತರ ಬಂತು. ಮೊಬೈಲ್ಗೆ ಕರೆ ಮಾಡಿದರೆ ಅದು ಸ್ವಿಚ್ಡ್ ಆಫ್ ಆಗಿದೆ. ಅಧಿಕಾರಿಗಳು ತಪ್ಪು ಮಾಡಿಲ್ಲ ಎಂದಾದರೆ ಈ ರೀತಿ ತಪ್ಪಿಸಿಕೊಳ್ಳುವುದೇಕೆ ಎಂಬ ಪ್ರಶ್ನೆ ಎದುರಾಗುತ್ತದೆ.
ದೂರು ಪಡೆಯಲು ಹಿಂದೇಟು: ಆತ್ಮಹತ್ಯೆ ಯತ್ನಕ್ಕೆ ಹಿರಿಯ ಅಧಿಕಾರಿಗಳ ಕಿರುಕುಳವೇ ಕಾರಣ ಎಂದು ಚಾಲಕ ಬಸವರಾಜ್ ಡೆತ್ನೋಟ್ ಬರೆದಿಟ್ಟಿದ್ದಾರೆ. ದೂರು ದಾಖಲಿಸಿಕೊಳ್ಳಲು ಗದಗ ಶಹರ ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಹಾಗಿದ್ದರೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಪೊಲೀಸರ ಮೇಲೂ ಪ್ರಭಾವ ಬಳಸಿದ್ದಾರೆಯೇ ಎಂಬ ಅಂಶ ಈಗ ಚರ್ಚೆಯಾಗುತ್ತಿದೆ.
ಸಕ್ಕರೆ ಕಾಯಿಲೆ: ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿರುವ ಬಸವರಾಜ್ಗೆ ಸಕ್ಕರೆ ಕಾಯಿಲೆ ಇದೆ. ಕುಟುಂಬವೂ ಆರ್ಥಿಕ ಸಂಕಷ್ಟದಲ್ಲಿದೆ. ಹೀಗಾಗಿ, ತಮ್ಮನ್ನು ಮರಳಿ ಬೆಟಗೇರಿ ಡೀಪೋಗೆ ವರ್ಗಾಯಿಸಿ ಎಂದು ಈ ಚಾಲಕ ಮಾನವೀಯತೆ ದೃಷ್ಟಿಯಿಂದ ಅಧಿಕಾರಿಗಳಲ್ಲಿ ಮನವಿ ಮಾಡಿದ್ದ.
ಆದರೆ, ಅಧಿಕಾರಿಗಳು ದರ್ಪ ಪ್ರದರ್ಶಿಸಿದ್ದಾರೆ. ಆಸ್ಪತ್ರೆಯಲ್ಲಿರುವ ಬಸವರಾಜ್ ಯೋಗಕ್ಷೇವು ವಿಚಾರಿಸಲು, ನೆರವು ನೀಡಲು ಯಾವೊಬ್ಬ ಅಧಿಕಾರಿಯೂ ಮುಂದಾಗದೇ ಇರುವುದು ಈ ಸಂಶಯಕ್ಕೆ ಪುಷ್ಟಿ ನೀಡುತ್ತಿದೆ.
ವಿಷ ಸೇವಿಸಿದ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದೇನೆ. ವಿಭಾಗೀಯ ನಿಯಂತ್ರಣಾಧಿಕಾರಿಗಳು ಹುಬ್ಬಳ್ಳಿ ಕಚೇರಿಯಲ್ಲಿ ನಡೆಯುತ್ತಿರುವ ಸಭೆಗಳಲ್ಲಿ ಪಾಲ್ಗೊಂಡಿದ್ದಾರೆ. ಉಳಿದ ವಿಷಯದ ಬಗ್ಗೆ ನನಗೇನೂ ಗೊತ್ತಿಲ್ಲ.
ಟಿ ಉಮೇಶ ಕುಸುಗಲ್ಲ,
ವಾಯವ್ಯ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ
ಮೂರು ದಿನಗಳಿಂದ ಆಸ್ಪತ್ರೆಯಲ್ಲಿ ಒದ್ದಾಡುತ್ತಿದ್ದರೂ ಸೌಜನ್ಯಕ್ಕೂ ಸಾರಿಗೆ ಸಂಸ್ಥೆ ಅಧಿಕಾರಿಗಳು ಆಸ್ಪತ್ರೆಯತ್ತ ಸುಳಿದಿಲ್ಲ. ಡಿಸಿ ಸಾಹೇಬ್ರು ಕಚೇರಿಯಲ್ಲಿಲ್ಲ. ಮೊಬೈಲ್ ಬಂದ್ ಮಾಡಿದ್ದಾರೆ. ಅವರ ಕಿರುಕುಳದಿಂದಲೇ ನಮ್ಮವರಿಗೆ ಈ ಸ್ಥಿತಿ ಬಂದಿದೆ. ಪ್ರಕರಣ ಕುರಿತು ಗದಗ ಶಹರ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ಪೊಲೀಸ್ ಸಿಬ್ಬಂದಿ ಗಮನಹರಿಸುತ್ತಿಲ್ಲ.
ಟಿ ಜಯಲಕ್ಷ್ಮಿ ಕರಿಸಕ್ರಣ್ಣವರ,
ಆಸ್ಪತ್ರೆಯಲ್ಲಿರುವ ಚಾಲಕನ ಪತ್ನಿ
ಶಿವಕುಮಾರ ಕುಷ್ಟಗಿ