ಹರಾಜಾಯ್ತು ಭಾರತದ ಮಾನ, ಮುಂದುವರಿದ ಕರಾಳ ಕೃತ್ಯಗಳ ಸರಣಿ
ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನ ಹರಾಜಾಗಿದೆ. ಉತ್ತರ ಪ್ರದೇಶ, ಬಿಹಾರ ಸೇರಿ...
ಮೇಘಾಲಯದಲ್ಲಿ ಮಕ್ಕಳ ಕಣ್ಣೆದುರೇ ತಾಯಿಯ ಹತ್ಯೆ ಅತ್ಯಾಚಾರಕ್ಕೆ ಪ್ರತಿರೋಧ ಒಡ್ಡಿದ್ದಕ್ಕೆ ತಲೆಯನ್ನೇ ಚೂರಾಗಿಸಿದ ಉಗ್ರರು
ಮುಂಬೈನಲ್ಲಿ ಬಸ್ ನಿರ್ವಾಹಕಿಯ ಬೆತ್ತಲೆಗೊಳಿಸಿ ಥಳಿತ, ತಲೆತಗ್ಗಿಸಿದ ಭಾರತಾಂಬೆ
ನವದೆಹಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನ ಹರಾಜಾಗಿದೆ. ಉತ್ತರ ಪ್ರದೇಶ, ಬಿಹಾರ ಸೇರಿ ದೇಶದ ವಿವಿಧೆಡೆ ನಿತ್ಯ ಸಂಭವಿಸುತ್ತಿರುವ ಅತ್ಯಾಚಾರ ಪ್ರಕರಣಗಳ ಹಿನ್ನೆಲೆಯಲ್ಲಿ ಸ್ವತಃ ವಿಶ್ವಸಂಸ್ಥೆಯೇ ಕಳವಳ ವ್ಯಕ್ತಪಡಿಸಿದೆ. ಭಾರತಕ್ಕೆ ಪ್ರವಾಸಕ್ಕೆ ಹೋಗುವ ಮುನ್ನ 'ಒಮ್ಮೆ ಯೋಚಿಸಿ' ಎಂದು ಹೇಳುವಷ್ಟರ ಮಟ್ಟಿಗೆ ಪರಿಸ್ಥಿತಿ ಕೆಟ್ಟಿದೆ. ಅತ್ಯಾಚಾರ ಯತ್ನಕ್ಕೆ ಪ್ರತಿರೋಧ ಒಡ್ಡಿದ್ದಕ್ಕೆ ಪತಿ, ಮಕ್ಕಳ ಮುಂದೆಯೇ ಮಹಿಳೆ ಹತ್ಯೆ, ಗನ್ ಹಿಡಿದು ಬೆದರಿಸಿ 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಮಹಿಳಾ ಕಂಡಕ್ಟರ್‌ಳನ್ನು ಬೆತ್ತಲೆಗೊಳಿಸಿ ಥಳಿತ... ಹೀಗೆ ಪ್ರತಿದಿನ ವರದಿಯಾಗುತ್ತಿರುವ ಹೀನ ಕೃತ್ಯಗಳು ದೇಶದ ಮಾನ, ಮರ್ಯಾದೆಯನ್ನು ಹರಾಜಿಗಿಡುತ್ತಿವೆ.
ನಾವು ತಲೆತಗ್ಗಿಸಬೇಕಿರುವ ಆರು ಘಟನೆಗಳು
ಅಮೆರಿಕ, ವಿಶ್ವಸಂಸ್ಥೆ ಖಂಡನೆ
ಬದೌನ್ ಅತ್ಯಾಚಾರ ಪ್ರಕರಣದ ಬಗ್ಗೆ ವಿಶ್ವಸಂಸ್ಥೆಯೂ ಖೇದ ವ್ಯಕ್ತಪಡಿಸಿದೆ. ಈ ಬಗ್ಗೆ ಮಾತನಾಡಿದ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್, ಇಂತಹ ಕೃತ್ಯಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಿ ಎಂದಿದ್ದಾರೆ. ಜತೆಗೆ, 'ಹುಡುಗರು ಆಗಾಗ್ಗೆ ಇಂತಹ ತಪ್ಪು ಮಾಡುತ್ತಿರುತ್ತಾರೆ' ಎಂಬ ಹೇಳಿಕೆ ನೀಡಿರುವ ಮುಲಾಯಂಗೆ ಛೀ ಥೂ ಎಂದು ಉಗಿದಿದ್ದಾರೆ. ಅಮೆರಿಕ ಕೂಡ ಭಾರತದಲ್ಲಿ ನಡೆಯುತ್ತಿರುವ ಅತ್ಯಾ ಚಾರ ಪ್ರಕರಣಗಳ ಬಗ್ಗೆ ಅಚ್ಚರಿ ಹಾಗೂ ಆಘಾತ ವ್ಯಕ್ತಪಡಿಸಿದೆ. ಅತ್ಯಾಚಾರ, ದೌರ್ಜನ್ಯ ಸುದ್ದಿಗಳು ಕೇಳುತ್ತಿರುವಾಗ ಭಾರತೀಯರಂತೆ ನಾವೂ ಆಘಾತಕ್ಕೀಡಾಗಿದ್ದೇವೆ ಎಂದು ಅಮೆರಿಕ ವಿದೇಶಾಂಗ ಇಲಾಖೆಯ ಉಪವಕ್ತಾರರಾದ ಮೇರಿ ಹಾರ್ಫ್ ತಿಳಿಸಿದ್ದಾರೆ.
ಪ್ರವಾಸೋದ್ಯಮಕ್ಕೆ ಕಪ್ಪುಚುಕ್ಕೆ
ಅತ್ಯಾಚಾರ ಘಟನೆಗಳು ಭಾರತದ ಪ್ರವಾಸೋದ್ಯಮದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿವೆ ಎಂದು ವಿಶ್ವ ಪ್ರವಾಸೋದ್ಯಮ ಮಂಡಳಿಯ ವರದಿ ತಿಳಿಸಿದೆ. ಪ್ರವಾಸೋದ್ಯಮ ಸಚಿವಾಲಯವು ಗೃಹ ಸಚಿವಾಲಯ, ವಿದೇಶಾಂಗ ಸಚಿವಾಲಯ, ಮಾಹಿತಿ ಮತ್ತು ಪ್ರಸಾರ ಸಚಿವಾಲಯದೊಂದಿಗೆ ಚರ್ಚಿಸಿ ಇಂತಹ ನಕಾರಾತ್ಮಕ ಪ್ರಚಾರವನ್ನು ತಡೆಯಲು ಕಾರ್ಯತಂತ್ರ ರೂಪಿಸಬೇಕು. ಇಲ್ಲದಿದ್ದರೆ ವಿಶ್ವಕ್ಕೆ ಭಾರತದ ಬಗ್ಗೆ ಕೆಟ್ಟ ಅಭಿಪ್ರಾಯ ತಲುಪಬಹುದು. ಇದು ಭಾರತೀಯ ಪ್ರವಾಸೋದ್ಯಮಕ್ಕೆ ಕಪ್ಪುಚುಕ್ಕೆಯಾಗಬಹುದು ಎಂದೂ ವರದಿ ಹೇಳಿದೆ.
ಮಕ್ಕಳೆದುರೇ ತಾಯಿ ತಲೆ ಛಿದ್ರ !
ಈ ಅಮಾನುಷ ಘಟನೆ ನಡೆದಿದ್ದು ಮೇಘಾಲಯದ ಸೌತ್ ಗಾರೋ ಹಿಲ್ಸ್ ಜಿಲ್ಲೆಯಲ್ಲಿ. ಮಂಗಳವಾರ ಸಂಜೆ 6.30ರ ವೇಳೆಗೆ ಗಾರೋ ನ್ಯಾಷನಲ್ ಲಿಬರೇಷನ್ ಫ್ರಂಟ್‌ನ 4-5 ಮಂದಿ ಶಸ್ತ್ರಸಜ್ಜಿತ ಉಗ್ರರು ಮನೆಯೊಂದಕ್ಕೆ ನುಗ್ಗಿ, ಮಹಿಳೆ(35)ಯನ್ನು ಹೊರಗೆಳೆದು ತಂದಿದ್ದಾರೆ. ಮನೆಯೊಳಗಿದ್ದ ಆಕೆಯ ಪತಿ ಹಾಗೂ ಐವರು ಮಕ್ಕಳನ್ನು ಕೊಠಡಿಯೊಂದರಲ್ಲಿ ಕೂಡಿ ಹಾಕಿದ್ದಾರೆ. ನಂತರ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಇದಕ್ಕೆ ಆಕೆ ಪ್ರತಿರೋಧ ವ್ಯಕ್ತಪಡಿಸಿದ್ದು, ಆಕ್ರೋಶಗೊಂಡ ಉಗ್ರರು ತಮ್ಮ ಅಟೋಮ್ಯಾಟಿಕ್ ಅಸ್ಸಾಲ್ಟ್ ರೈಫಲ್‌ನಿಂದ ಆಕೆಯ ತಲೆಗೆ 6 ಸುತ್ತುಗಳ ಗುಂಡು ಹಾರಿಸಿದ್ದಾರೆ. ಪರಿಣಾಮ ಮಹಿಳೆಯ ತಲೆ ಛಿದ್ರಛಿದ್ರವಾಗಿದೆ.
ಗನ್ ತುದಿಯಲ್ಲಿ ಅತ್ಯಾಚಾರ
ಉತ್ತರಪ್ರದೇಶ ಅತ್ಯಾಚಾರ ಸರಣಿಗೆ ಮತ್ತೊಂದು ಸೇರ್ಪಡೆ. ಫಿರೋಜ್‌ಪುರದಲ್ಲಿ ಬುಧವಾರ 15 ವರ್ಷದ ಬಾಲಕಿ ಮೇಲೆ ಯುವಕನೊಬ್ಬ ಗನ್‌ನಿಂದ ಬೆದರಿಸಿ ಅತ್ಯಾಚಾರ ಮಾಡಿದ್ದಾನೆ. ಬಾಲಕಿ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಅದೇ ಗ್ರಾಮದ ಖಾಸಿಂ ಎಂಬಾತ ಈ ಕೃತ್ಯ ಎಸಗಿದ್ದಾನೆ.
ನಿರ್ವಾಹಕಿ ಬೆತ್ತಲೆ, ಹಲ್ಲೆ
ಮುಂಬೈನಲ್ಲಿ ಪ್ರಯಾಣಿಕನೊಬ್ಬ ಬಸ್ ನಿರ್ವಾಹಕಿಯೊಬ್ಬರನ್ನು ಬೆತ್ತಲೆಗೊಳಿಸಿ ಥಳಿಸಿದ್ದಾನೆ. ಬೆಳಗ್ಗೆ 8 ಗಂಟೆಗೆ ಘಟನೆ ನಡೆದಿದೆ. ಕಲ್ಯಾಣ್‌ನಿಂದ ಪನ್ವೇಲ್‌ಗೆ ತೆರಳುತ್ತಿದ್ದ ಬಸ್‌ಗೆ ಹತ್ತಿದ ಅಭಿಷೇಕ್ ಸಿಂಗ್ ಕ್ಷುಲ್ಲಕ ವಿಚಾರಕ್ಕೆ ಚಾಲಕನೊಂದಿಗೆ ವಾದಕ್ಕಿಳಿದ. ಈ ವೇಳೆ 34 ವರ್ಷದ ಮಹಿಳಾ ಕಂಡಕ್ಟರ್ ಮಧ್ಯಪ್ರವೇಶಿಸಿದ್ದಕ್ಕೆ ಸಿಂಗ್ ಆಕೆಯನ್ನು ಬಸ್‌ನಿಂದ ಹೊರಕ್ಕೆಳೆದು ಬಟ್ಟೆ ಹರಿದು ಥಳಿಸಿದ್ದಾನೆ. ಬಸ್ಸಿನಲ್ಲಿದ್ದ ವಿದ್ಯಾರ್ಥಿಗಳು ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಉ.ಪ್ರ. ಸರ್ಕಾರದ ನಿಲ್ಲದ ತಲೆಹರಟೆ
ಉತ್ತರಪ್ರದೇಶದ ಅತ್ಯಾಚಾರ ಘಟನೆಗಳು ಇಡೀ ವಿಶ್ವದ ಗಮನಸೆಳೆದಿದ್ದರೂ ಸರ್ಕಾರ ಮಾತ್ರ ಇನ್ನೂ ತಲೆಹರಟೆ ಮಾತುಗಳಲ್ಲೇ ಕಾಲ ಕಳೆಯುತ್ತಿದೆ. ಎಸ್ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಕೂಡ ಮಗನ ತಲೆಹರಟೆ ಮೀರಿಸುವ ಮಾತುಗಳನ್ನು ಆಡುತ್ತಿದ್ದಾರೆ. 'ನಿಮ್ಮ ಕೆಲಸ ನೀವು ಮಾಡಿ, ನಮ್ಮ ಕೆಲಸ ನಾವು ಮಾಡುತ್ತೇವೆ' ಎಂದು ಸುದ್ದಿಗಾರರಿಗೆ ತಾಕೀತು ಮಾಡಿದ್ದಾರೆ. ಮತ್ತೊಬ್ಬ ನಾಯಕ ರಾಂ ಗೋಪಾಲ್ ಯಾದವ್, ಈ ಟೀವಿಗಳಿಂದಲೇ ರೇಪ್ ಹೆಚ್ಚಾಗುತ್ತಿವೆ ಎಂಬ ಬಾಲಿಶ ಹೇಳಿಕೆ ನೀಡಿದ್ದಾರೆ. ಇನ್ನೊಬ್ಬ ಎಸ್ಪಿ ನಾಯಕ, 'ಯಾವಾಗ ಹುಡುಗ ಮತ್ತು ಹುಡುಗಿಯ ಸಂಬಂಧ ಬಹಿರಂಗವಾಗುತ್ತದೆಯೋ, ಆಗ ಅದನ್ನು 'ರೇಪ್' ಎಂದು ಬಿಂಬಿಸಲಾಗುತ್ತದೆ' ಎಂಬ ಮೂರ್ಖ ಹೇಳಿಕೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಪ್ರವಾಸೋದ್ಯಮ ಸಚಿವಾಲಯದಲ್ಲಿರುವ ನಾವೆಲ್ಲರೂ ಮಹಿಳೆಯರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಲಿದ್ದೇವೆ.
-ಶ್ರೀಪಾದ್ ನಾಯ್ಕ್, ಕೇಂದ್ರ ಪ್ರವಾಸೋದ್ಯಮ ಸಚಿವ
ಬದೌನ್ 'ಹತ್ಯಾಚಾರ'ದಂತಹ ಗಂಭೀರ ಪ್ರಕರಣಗಳ ಬಗ್ಗೆ ಉತ್ತರಪ್ರದೇಶ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಇಂತವನ್ನು ಸಂಖ್ಯೆ ಆಧಾರದಲ್ಲಿ ನೋಡುವ ಬದಲು ಒಂದೂ ಘಟಿಸದಂತೆ ನೋಡಿಕೊಳ್ಳುವುದು ಮುಖ್ಯ.
- ಕಿರಣ್ ರೆಜಿಜು, ಗೃಹ ಖಾತೆ ಸಹಾಯಕ ಸಚಿವ