ಕಾಶ್ಮೀರ ರಕ್ಷಣೆ ನಮ್ಮ ಪ್ರಥಮ ಹೆಜ್ಜೆ
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಹೆಸರು ಪಾಕಿಸ್ತಾನ ಆಕ್ರಮಿತ ಜಮ್ಮು-ಕಾಶ್ಮೀರ..
ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಹೆಸರು ಪಾಕಿಸ್ತಾನ ಆಕ್ರಮಿತ ಜಮ್ಮು-ಕಾಶ್ಮೀರ ಎಂದು ಬದಲಾದರೆ ಹೇಗಾದೀತು?
- ಅಂಥ ಒಂದು ಪ್ರಯತ್ನಕ್ಕೆ ನರೇಂದ್ರ ಮೋದಿ ಸರ್ಕಾರ ಮುಂದಾಗಿದೆ. ಕೆಲ ದಿನಗಳ ಹಿಂದಷ್ಟೇ ಜಮ್ಮು-ಕಾಶ್ಮೀರಕ್ಕೆ ಸಂವಿಧಾನದತ್ತವಾಗಿ ನೀಡಲಾಗಿರುವ 370 ವಿಧಿಯನ್ನು ಹಿಂಪಡೆಯುವ ಬಗ್ಗೆ ಪ್ರಸ್ತಾಪ ಮಂಡಿಸಿದ ಮೋದಿ ಸರ್ಕಾರ ದಿಟ್ಟ ಹೆಜ್ಜೆಯನ್ನಿಟ್ಟಿತ್ತು. ಅದೇ ನಡೆಯನ್ನು ಮುಂದುವರಿಸಿರುವ ಕೇಂದ್ರ ಸರ್ಕಾರ ಈಗ ಪಾಕಿಸ್ತಾನ ಆಕ್ರಮಿಸಿಕೊಂಡಿರುವ ಕಾಶ್ಮೀರಕ್ಕೆ ಹೊಸತಾಗಿ ಹೆಸರಿಡಲು ಮುಂದಾಗಲಿದೆ.
ಇಂಥ ನಿರ್ಧಾರ ಕಣಿವೆ ರಾಜ್ಯದಲ್ಲಿ ಭಾರಿ ಸಂಚನಲಕ್ಕೆ ಕಾರಣವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಒಟ್ಟಾರೆ ರಾಜ್ಯಕ್ಕೆ ಏಕೀಕೃತ ದೃಷ್ಟಿಕೋನವನ್ನು ಒದಗಿಸುವುದೇ ಕೇಂದ್ರ ಸರ್ಕಾರದ ನಿರ್ಧಾರದ ಹಿಂದಿನ ಪ್ರಮುಖ ಉದ್ದೇಶವಾಗಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಹೆಸರು ಬದಲಾವಣೆ ಮಾಡುವುದರ ಜತೆಗೆ ದಶಕಗಳ ಹಿಂದೆ ಭಯೋತ್ಪಾದನೆಗೆ ಬೆದರಿ ಕಣಿವೆ ರಾಜ್ಯವನ್ನು ತೊರೆದ ಕಾಶ್ಮೀರಿ ಪಂಡಿತರಿಗೆ ಪುನರ್ವಸತಿ ಕಲ್ಪಿಸುವ ಯೋಜನೆಯೂ ಸೇರಿದೆ. ಸದ್ಯ ಜಮ್ಮು-ಕಾಶ್ಮೀರದಲ್ಲಿ ಸುಮಾರು 3 ಸಾವಿರ ಮಂದಿ ಪಂಡಿತರು ಇದ್ದಾರೆ.
2015ರಲ್ಲಿ ಜಮ್ಮು-ಕಾಶ್ಮೀರದಲ್ಲಿ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮೋದಿ ಸರ್ಕಾರದ ಈ ನಡೆಯೂ ಅತ್ಯಂತ ಪ್ರಮುಖವಾಗಿದೆ. ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಅಧಿಕಾರ ವಹಿಸಿಕೊಳ್ಳಲು ಬಿಜೆಪಿ ಮುಂದಾಗಿದೆ.