ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮಹಿಳೆಯರಿಗೆ ಎಚ್ಚರ ಬೇಕು; ಅಖಿಲೇಶ್, ಮುಲಾಯಂ ಏನು ಮಾಡಲು ಸಾಧ್ಯ?

ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳ ಬಗ್ಗೆ...

Rashmi Kasaragodu
Updated On : 6 Jun 2014, 1:08 am

ನವದೆಹಲಿ: ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳ ಬಗ್ಗೆ ಬೇಜವಾಬ್ದಾರಿಯುತ ಮಾತುಗಳನ್ನಾಡಿ ಎಸ್ಪಿ ನಾಯಕರು ಆಕ್ರೋಶಕ್ಕೆ ಗುರಿಯಾಗಿದ್ದಾಯ್ತು. ಈಗ ಮಧ್ಯಪ್ರದೇಶ ಸಚಿವರ ಸರದಿ.
 'ಉತ್ತರಪ್ರದೇಶದಲ್ಲಿ ಅತ್ಯಾಚಾರ ಆದ್ರೆ ಪಾಪ ಆ ಅಖಿಲೇಶ್, ಮುಲಾಯಂ ಏನು ಮಾಡಲು ಸಾಧ್ಯ? ಮಹಿಳೆಯರು ಹೆಚ್ಚು ಎಚ್ಚರಿಕೆಯಿಂದ ಇರಬೇಕು ಅಷ್ಟೆ.' ಹೀಗೆಂದು ಹೇಳುವ ಮೂಲಕ ಮಧ್ಯಪ್ರದೇಶ ಗೃಹ ಸಚಿವ ಬಾಬುಲಾಲ್ ಗೌರ್ ಎಸ್ಪಿ ನಾಯಕರನ್ನು ಸಮರ್ಥಿಸಿಕೊಂಡಿದ್ದಷ್ಟೇ ಅಲ್ಲ, ಹೊಸ ವಿವಾದಕ್ಕೂ ನಾಂದಿ ಹಾಡಿದ್ದಾರೆ. ಗೌರ್ ಅವರ ಹೇಳಿಕೆಯಿಂದ ದೂರಸರಿಯಲು ಯತ್ನಿಸಿರುವ ಮಧ್ಯಪ್ರದೇಶ ಬಿಜೆಪಿ, ಅದು ಅವರ ವೈಯಕ್ತಿಕ ಹೇಳಿಕೆ ಎಂದಿದೆ.
ಸಾಮಾಜಿಕ ಅಪರಾಧ: ಅವಳಿ 'ಹತ್ಯಾಚಾರ' ಬಗ್ಗೆ ಪ್ರತಿಕ್ರಿಯಿಸಿದ ಗೌರ್, ಅತ್ಯಾಚಾರವೆಂಬುದು ಸಾಮಾಜಿಕ ಅಪರಾಧ. ಅತ್ಯಾಚಾರಿಗಳ ಮನಸ್ಥಿತಿ ಸರಿಯಿರುವುದಿಲ್ಲ. ಅಪರಾಧ ಎಸಗುವ ಮೊದಲು ಅವರು ತಮ್ಮ ಉದ್ದೇಶಗಳನ್ನು ಹೇಳಿಕೊಳ್ಳುವುದಿಲ್ಲ. ಹಾಗಾಗಿ ಅಖಿಲೇಶ್, ಮುಲಾಯಂ ಏನು ಮಾಡಲು ಸಾಧ್ಯ? ಮಹಿಳೆಯರೇ ಎಚ್ಚರಿಕೆಯಿಂದಿರಬೇಕು. ಜುಡೋ, ಕರಾಟೆ ಕಲಿಯಬೇಕು ಎಂದಿದ್ದಾರೆ.
ದೆಹಲಿಯಲ್ಲೇ ಇರಲಿ: ತಮ್ಮ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಬದಲು ಮಾಧ್ಯಮಗಳ ವಿರುದ್ಧ ಕೆಂಡಕಾರುತ್ತಿರುವ ಎಸ್ಪಿ ಮುಖ್ಯಸ್ಥ ಮುಲಾಯಂ ಗುರುವಾರ ಮತ್ತೆ ತಮ್ಮ ಎಲುಬಿಲ್ಲದ ನಾಲಗೆಯನ್ನು ಹರಿಯಬಿಟ್ಟಿದ್ದಾರೆ. ಉತ್ತರಪ್ರದೇಶದ ಕಾನೂನು ಸುವ್ಯವಸ್ಥೆ ಬಗ್ಗೆ ಚಿಂತಿಸುವವರು ದೆಹಲಿಯಲ್ಲೇ ಉಳಿಯಲಿ ಎಂದಿದ್ದಾರೆ ಮುಲಾಯಂ.



ಮಾಧ್ಯಮಗಳು ಉತ್ತರಪ್ರದೇಶದ ಸುದ್ದಿಗಳನ್ನಷ್ಟೇ ಪ್ರಚಾರ ಮಾಡುತ್ತವೆ ಎಂದು ಅವರು ಹೇಳುತ್ತಾರೆ. ನಿಜ ಹೇಳಬೇಕೆಂದರೆ, ಉತ್ತರಪ್ರದೇಶ ಸರ್ಕಾರ ಹಾಗೂ ಅಲ್ಲಿನ ರಾಜಕಾರಣಿಗಳಷ್ಟೇ ಅತ್ಯಾಚಾರಿಗಳನ್ನು ರಕ್ಷಿಸುತ್ತಾರೆ.
- ಉಮಾಭಾರತಿ, ಕೇಂದ್ರ ಸಚಿವೆ


ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯಗಳ ಸುದ್ದಿ ಕೇಳಿದೊಡನೆ ನಾನು ನಾಚಿಕೆಯಿಂದ ತಲೆತಗ್ಗಿಸುತ್ತೇನೆ. ಇಂತಹ ಘಟನೆಗಳು ನಿಜಕ್ಕೂ ಆಘಾತಉಂಟುಮಾಡುತ್ತಿವೆ. ಮಹಿಳೆಯರ ಆರ್ಥಿಕ, ಶೈಕ್ಷಣಿಕ ಸಬಲೀಕರಣವೇ ಇದಕ್ಕೆಲ್ಲ ಪರಿಹಾರ.
- ಅರುಂಧತಿ ಭಟ್ಟಾಚಾರ್ಯ, ಎಸ್ಬಿಐ ಸಮೂಹದ ಮುಖ್ಯಸ್ಥೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement