ಮೇಲಾಟ ಅಂತ್ಯ
ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ಗೆ ನಡೆಯುವ ಚುನಾವಣೆಗೆ ಕಾಂಗ್ರೆಸ್ನ ನಾಲ್ವರು ಅಭ್ಯರ್ಥಿಗಳ ಹೆಸರನ್ನು ...
ಕನ್ನಡಪ್ರಭವಾರ್ತೆ ಬೆಂಗಳೂರು ಜೂ. 5
ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ಗೆ ನಡೆಯುವ ಚುನಾವಣೆಗೆ ಕಾಂಗ್ರೆಸ್ನ ನಾಲ್ವರು ಅಭ್ಯರ್ಥಿಗಳ ಹೆಸರನ್ನು ಹೈಕಮಾಂಡ್ ಅಂತಿಮಗೊಳಿಸಿದೆ.
ದೆಹಲಿಯಲ್ಲಿ ನಡೆದ ಮ್ಯಾರಥಾನ್ ಸಭೆ ನಂತರ ನಾಲ್ವರ ಹೆಸರು ಅಂತಿಮಗೊಂಡಿದ್ದು, ನಾಮನಿರ್ದೇಶನ ಪ್ರಕ್ರಿಯೆ ವಾರ ಮುಂದೆ ಹೋಗುವ ಸಾಧ್ಯತೆ ಇದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ, ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಜತೆಗಿನ ಚರ್ಚೆ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಮಾಜಿ ಸಚಿವೆ ರಾಣಿ ಸತೀಶ್ ಹೆಸರು ಅಂತಿಮಗೊಂಡಿದೆ. ಕೆಪಿಸಿಸಿ ಕಾರ್ಯದರ್ಶಿಗಳಾದ ಐವಾನ್ ಡಿಸೋಜಾ ಅಥವಾ ನಿವೇದಿತ್ ಆಳ್ವ 4ನೇ ಅಭ್ಯರ್ಥಿಯಾಗಿರಲಿದ್ದಾರೆ.
ಈ ಪಟ್ಟಿಯನ್ನು ಗುರುವಾರ ರಾತ್ರಿ ಏಳು ಗಂಟೆಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಸಲ್ಲಿಸಲಾಗಿದೆ. ಶನಿವಾರ ಅಧಿಕೃತವಾಗಿ ಸೋನಿಯಾ ಅವರು ಪಟ್ಟಿ ಪ್ರಕಟಿಸಲಿದ್ದಾರೆ.
ರಾಜ್ಯಸಭೆ: ಇದರ ಜತೆಗೆ ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಬಗ್ಗೆಯೂ ಚರ್ಚೆ ನಡೆದಿದೆ. ಹಾಲಿ ಸದಸ್ಯರಾದ ಎಸ್.ಎಂ.ಕೃಷ್ಣ ಹಾಗೂ ಬಿ.ಕೆ.ಹರಿಪ್ರಸಾದ್ ಅವರನ್ನೇ ಮತ್ತೆ ಮುಂದುವರಿಸಲು ನಿರ್ಧರಿಸಲಾಗಿದೆ.
ಆದರೆ ಮೂರನೇ ಅಭ್ಯರ್ಥಿ ಬಗ್ಗೆ ಇನ್ನೂ ಒಮ್ಮತ ಮೂಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಯಮಿಗಳಾದ ಚನ್ನಾರೆಡ್ಡಿ ಹಾಗೂ ಕೋಣನಕುಂಟೆ ಲಕ್ಷ್ಮಣ ಅವರ ಹೆಸರು ಪ್ರಸ್ತಾಪಿಸಿದ್ದಾರೆ. ಆದರೆ ಇದಕ್ಕೆ ಹಲವು ಕಾಂಗ್ರೆಸ್ ನಾಯಕರ ವಿರೋಧವಿದೆ. ಉದ್ಯಮಿ ಕುಪ್ಪೇಂದ್ರ ರೆಡ್ಡಿ ಅವರನ್ನು ಮೂರನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಹಲವರು ಒಲವು ತೋರಿದ್ದಾರೆ. ಹೀಗಾಗಿ ಈ ವಿಚಾರವನ್ನೂ ಸೋನಿಯಾ ವಿವೇಚನೆಗೆ ಬಿಡಲಾಗಿದೆ.
ನಾಮನಿರ್ದೇಶನ: ಆದರೆ ನಾಮನಿರ್ದೇಶನ ಪ್ರಕ್ರಿಯೆಯನ್ನು ಪರಿಷತ್ ಚುನಾವಣೆ ನಂತರ ನಡೆಸಲು ತೀರ್ಮಾನಿಸಲಾಗಿದೆ. ಆದಾಗಿಯೂ ಸಂಭಾವ್ಯರ ಹೆಸರನ್ನು ಈ ಸಂದರ್ಭದಲ್ಲಿ ಪ್ರಸ್ತಾಪಿಸಲಾಗಿದೆ.
ಚಿತ್ರರಂಗದಿಂದ ಜಯಮಾಲಾ ಅಥವಾ ಭಾವನಾ, ಸಾಹಿತ್ಯ ಕ್ಷೇತ್ರದಿಂದ ಮರುಳಸಿದ್ದಪ್ಪ, ಎಚ್.ಜಿ. ಸಿದ್ದರಾಮಯ್ಯ ಅಥವಾ ಡಾ.ಎಲ್.ಹನುಮಂತಯ್ಯ, ಶಿಕ್ಷಣ ಕ್ಷೇತ್ರದಿಂದ ಹಾಲಿ ಸದಸ್ಯ ಜಬ್ಬಾರ್ಖಾನ್, ಸಮಾಜ ಸೇವಾ ಕ್ಷೇತ್ರದಿಂದ ಕೆ.ಪಿ. ನಂಜುಂಡಿ ಸೇರಿ ಹಲವರ ಹೆಸರು ಚಾಲ್ತಿಯಲ್ಲಿವೆ.
ಮತ್ತೆ ಸೋಲಿನ ಪ್ರಸ್ತಾಪ: ಮಧ್ಯಾಹ್ನದ ಹೊತ್ತಿಗೆ ಪರಿಷತ್ ಅಭ್ಯರ್ಥಿಗಳ ಹೆಸರು ಅಂತಿಮಗೊಂಡಿತ್ತು. ಆದರೆ ಮತ್ತೆ ಕೆಲವರು ಪರಮೇಶ್ವರ ಅವರ ಸೋಲಿನ ಬಗ್ಗೆ ದಿಗ್ವಿಜಯ್ ಸಿಂಗ್ ಅವರ ಬಳಿ ಪ್ರಸ್ತಾಪಿಸಿದ್ದರು. ಹೀಗಾಗಿ ದೆಹಲಿ ವಲಯದಲ್ಲಿ ಪರಮೇಶ್ವರ ಹೆಸರನ್ನು ಕೈ ಬಿಡಲಾಗಿದೆ ಎಂಬ ಸುದ್ದಿ ಓಡಾಡತೊಡಗಿತ್ತು.
ದಿಗ್ವಿಜಯ್ ಸಿಂಗ್ ಅವರೇ ಇದಕ್ಕೆ ಸಮ್ಮತಿ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಪರಮೇಶ್ವರ ಬದಲು ಸಿ.ಎಂ.ಲಿಂಗಪ್ಪ ಅವರ ಹೆಸರನ್ನು ಪರಿಗಣಿಸಲಾಗುತ್ತಿದೆ. ನಾಮನಿರ್ದೇಶನದ ಪಟ್ಟಿಯಲ್ಲಿ ವಾಟಾಳ್ ನಾಗರಾಜ್ ಅವರ ಹೆಸರೂ ಇದೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ ಇದ್ಯಾವುದೂ ಅಂತಿಮವಾಗಿಲ್ಲ.
ವಿಶ್ವನಾಥ್ ಮನವಿ: ಈ ಮಧ್ಯೆ ದೆಹಲಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಮಾಜಿ ಸಂಸದ ಎಚ್.ವಿಶ್ವನಾಥ್, ಅತಿ ಹಿಂದುಳಿದ ಸಮುದಾಯದ ಅಭ್ಯರ್ಥಿಗಳನ್ನು ವಿಧಾನ ಪರಿಷತ್ ಚುನಾವಣೆಗೆ ಪರಿಗಣಿಸುವಂತೆ ಆಗ್ರಹಿಸಿದ್ದಾರೆ. ಆದರೆ ಸಂಭಾವ್ಯರ ಪಟ್ಟಿಯಲ್ಲಿ ವಿಶ್ವನಾಥ್ ಬೇಡಿಕೆಗೆ ಮನ್ನಣೆ ಲಭಿಸಿಲ್ಲ.