8 ರಾಜ್ಯಗಳಿಗೆ ಹೊಸ ರಾಜ್ಯಪಾಲರು
ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಎಂಟು ರಾಜ್ಯಗಳಿಗೆ ಹೊಸ...
ನವದೆಹಲಿ: ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಎಂಟು ರಾಜ್ಯಗಳಿಗೆ ಹೊಸ ರಾಜ್ಯಪಾಲರನ್ನು ನೇಮಿಸಲು ಕೇಂದ್ರ ನಿರ್ಧರಿಸಿದೆ. ಈ ಮೂಲಕ ಪಕ್ಷದಲ್ಲಿನ ಹಿರಿಯ ನಾಯಕರಿಗೆ ಸ್ಥಾನಮಾನ ನೀಡಲು ಬಿಜೆಪಿ ಮುಂದಾಗಿದೆ. ಮೋದಿ ಸಂಪುಟದಲ್ಲಿ ಸ್ಥಾನ ಪಡೆಯಲು ವಿಫಲರಾಗಿರುವ ಬಿಜೆಪಿಯ ಹಿರಿಯ ನಾಯಕ ಡಾ.ಮುರಳಿ ಮನೋಹರ ಜೋಶಿ ಅವರನ್ನು ಮಹಾರಾಷ್ಟ್ರದ ರಾಜ್ಯಪಾಲರನ್ನಾಗಿ ನೇಮಿಸುವ ಸಾಧ್ಯತೆಗಳಿವೆ. ಈ ವರ್ಷಾಂತ್ಯಕ್ಕೆ ಅಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.
ಜತೆಗೆ ತಿಂಗಳಾಂತ್ಯಕ್ಕೆ ಕರ್ನಾಟಕದ ರಾಜ್ಯಪಾಲ ಭಾರಧ್ವಾಜ್ ಅಧಿಕಾರದ ಅವಧಿ ಮುಕ್ತಾಯವಾಗಲಿದೆ. ಅವರ ಸ್ಥಾನಕ್ಕೆ ಉತ್ತರಪ್ರದೇಶದ ಮಾಜಿ ಸಿಎಂ ಕಲ್ಯಾಣ್ ಸಿಂಗ್ ನೇಮಕವಾಗಲಿದ್ದಾರೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವಾಲಯ 8 ರಾಜ್ಯಗಳನ್ನು ಹಾಗೂ ಮುಖಂಡರ ಹೆಸರನ್ನೂ ಪಟ್ಟಿ ಮಾಡಿದೆ. ಅದನ್ನು ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಕಳುಹಿಸಿಕೊಟ್ಟಿದೆ.
ಯಾವ ರಾಜ್ಯಗಳು?: ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ವೇಳೆ ಪ್ರತಿಯೊಂದಕ್ಕೂ ಕ್ಯಾತೆ ತೆಗೆಯುತ್ತಿದ್ದ ಡಾ.ಕಮಲಾ ಬೇನಿವಾಲ್ ಹೆಸರೂ ಇದೆ. ಅವರು ನವೆಂಬರ್ನಲ್ಲಿ ನಿವೃತ್ತರಾಗಲಿದ್ದಾರೆ. ಹೊಸ ರಾಜ್ಯ ತೆಲಂಗಾಣಕ್ಕೂ ಶೀಘ್ರ ರಾಜ್ಯಪಾಲರು ನೇಮಕಗೊಳ್ಳಲಿದ್ದಾರೆ. ಸದ್ಯ ಸೀಮಾಂಧ್ರದ ರಾಜ್ಯಪಾಲ ಇ.ಎಸ್.ಎಲ್.ನರಸಿಂಹನ್ ಹೊಸ ರಾಜ್ಯದ ಹೆಚ್ಚುವರಿ ಹೊಣೆ ಹೊತ್ತುಕೊಂಡಿದ್ದಾರೆ. ಹರ್ಯಾಣ, ಉತ್ತರಪ್ರದೇಶ, ಛತ್ತೀಸ್ಗಡಕ್ಕೂ ಹೊಸ ರಾಜ್ಯಪಾಲರು ನೇಮಕಗೊಳ್ಳಲಿದ್ದಾರೆ. ಆದರೆ ಜಮ್ಮು-ಕಾಶ್ಮೀರ ರಾಜ್ಯಪಾಲ ಎನ್.ಎನ್.ವೋರಾ ಅಧಿಕಾರಾವಧಿಯನ್ನು ಹಿಂದಿನ ಯುಪಿಎ ಸರ್ಕಾರ ವಿಸ್ತರಿಸಿ ಆದೇಶ ಹೊರಡಿಸಿತ್ತು. ಅವರ ಬದಲಾವಣೆ ಬಗ್ಗೆ ಸರ್ಕಾರ ಚಿಂತನೆ ನಡೆಸಿಲ್ಲ ಎನ್ನುವುದು ಗಮನಾರ್ಹ ಅಂಶ.
ಲೋಕಕ್ಕೆ ಮಹಿಳಾ ಅಧಿಪತಿ ಸುಮಿತ್ರಾ
ನವದೆಹಲಿ: ಬಿಜೆಪಿ ನಾಯಕಿ ಸುಮಿತ್ರಾ ಮಹಾಜನ್ 16ನೇ ಲೋಕಸಭೆ ಸ್ಪೀಕರ್. ಗುರುವಾರ ಮಹಾಜನ್ ಅವರು ಅವಿರೋಧವಾಗಿ ಸ್ಪೀಕರ್ ಸ್ಥಾನಕ್ಕೆ ನೇಮಕಗೊಂಡಿದ್ದಾರೆ. ಈ ಮೂಲಕ ಮೀರಾ ಕುಮಾರ್ ಬಳಿಕ ಈ ಪ್ರತಿಷ್ಠಿತ ಹುದ್ದೆಯನ್ನು ಅಲಂಕರಿಸಿದ 2ನೇ ಮಹಿಳೆ ಎಂಬ ಹೆಗ್ಗಳಿಕೆಗೆ ಸುಮಿತ್ರಾ ಪಾತ್ರರಾಗಿದ್ದಾರೆ. ದೀರ್ಘಕಾಲ ಸೇವೆ ಸಲ್ಲಿಸಿರುವ ಮಹಿಳಾ ಸಂಸದೆ ಸುಮಿತ್ರಾ ಮಹಾಜನ್ (71) ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಸೂಚಿಸಿದರೆ, ಬಿಜೆಪಿ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಧ್ವನಿಮತದಿಂದ ಅಂಗೀಕರಿಸಿದರು.
ಸ್ಪೀಕರ್ ಕುರ್ಚಿ ಬಳಿಕ ಕರೆತಂದರು: ಸುಮಿತ್ರಾ ಅವರು ಸ್ಪೀಕರ್ ಆಗಿ ನೇಮಕಗೊಳ್ಳುತ್ತಿದ್ದಂತೆಯೇ ಪ್ರಧಾನಿ ಮೋದಿ, ಆಡ್ವಾಣಿ, ಅನಂತ್ಗಿತೆ ಮಾತ್ರವಲ್ಲದೇ ಪ್ರತಿಪಕ್ಷ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಮುಲಾಯಂ ಹಾಗೂ ಸುದೀಪ್ ಬಂಡೋಪಾಧ್ಯಾಯ ಮತ್ತಿತರರು ಅವರನ್ನು ಸ್ಪೀಕರ್ ಕುರ್ಚಿಯವರೆಗೆ ಕರೆತಂದು ಬಿಟ್ಟರು. ಇದೇ ವೇಳೆ ಮಾತನಾಡಿದ ಸುಮಿತ್ರಾ, ನನಗೆ ವಹಿಸಿರುವ ಹೊಸ ಹುದ್ದೆ ಸವಾಲಿನದ್ದಾಗಿದ್ದು, ಎಲ್ಲರಿಗೂ ಸಮಾನ ನ್ಯಾಯ ಒದಗಿಸುವ ಪ್ರಯತ್ನ ಮಾಡುತ್ತೇನೆ ಎಂಬ ಭರವಸೆ ನೀಡಿದರು. ನೂತನ ಸ್ಪೀಕರ್ರನ್ನು ಪ್ರಧಾನಿ ಮೋದಿ, ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕ ಗಣ್ಯರು ಶ್ಲಾಘಿಸಿದರು.
ಸಂಭಾವ್ಯರು
ಬಿಜೆಪಿ ನಾಯಕರಾದ ಡಾ.ಎಂ.ಎಂ.ಜೋಶಿ, ಕೆ.ಎನ್.ತ್ರಿಪಾಠಿ, ಲಾಲ್ಜಿ ಟಂಡನ್, ವಿ.ಕೆ.ಮಲ್ಹೋತ್ರಾ, ಕಲ್ಯಾಣ್ ಸಿಂಗ್, ಭುವನಚಂದ್ರ ಖಂಡೂರಿ, ಶಾಂತಾಕುಮಾರ್ ಹೆಸರುಗಳು ರಾಜ್ಯಪಾಲರ ಹುದ್ದೆಗೆ ಕೇಳಿ ಬರುತ್ತಿದೆ.