ಸಂಸದರಿಗೆ ಮೋದಿ ಪಾಠ
ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ತಮ್ಮ ನೂತನ ಸಂಸದರಿಗೆ ಪಾಠ ಮಾಡಿದ್ದಾರೆ. ಸರ್ಕಾರ ಹೇಗೆ ಕೆಲಸಮಾಡಬೇಕು...
ನಾಯಕರ ಕಾಲಿಗೆ ಬೀಳುವ ಅಭ್ಯಾಸ ಕೊನೆಗೊಳಿಸಲು ಸೂಚನೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ತಮ್ಮ ನೂತನ ಸಂಸದರಿಗೆ ಪಾಠ ಮಾಡಿದ್ದಾರೆ. ಸರ್ಕಾರ ಹೇಗೆ ಕೆಲಸಮಾಡಬೇಕು, ಸಂಸದರು ಹೇಗೆ ವರ್ತಿಸಬೇಕು ಎಂಬುದನ್ನು ತಿಳಿಹೇಳಿದ್ದಾರೆ. ಸಂಸತ್‌ನ ಸೆಂಟ್ರಲ್ ಹಾಲ್‌ನಲ್ಲಿ ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಸಂಸದರಿಗೆ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ನೀಡಿದ್ದಾರೆ ಮೋದಿ.
ಸುಮಿತ್ರಾ ಸ್ಪೀಕರ್
ಲೋಕಸಭೆಯ ಸ್ಪೀಕರ್ ಆಗಿ ಇಂದೋರ್ ಸಂಸದೆ ಸುಮಿತ್ರಾ ಮಹಾಜನ್ ಅವಿರೋಧವಾಗಿ ನೇಮಕಗೊಂಡಿದ್ದಾರೆ. ಇವರು ಮೀರಾಕುಮಾರ್ ಬಳಿಕ ಲೋಕಸಭೆಯ ಎರಡನೇ ಮಹಿಳಾ ಸ್ಪೀಕರ್. ಪ್ರಧಾನಿ ಮೋದಿ, ಬಿಜೆಪಿ ನಾಯಕ ಆಡ್ವಾಣಿ, ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿ ಗಣ್ಯರು ಸುಮಿತ್ರಾರನ್ನು ಸ್ಪೀಕರ್ ಕುರ್ಚಿವರೆಗೆ ಕರೆತಂದರು. ಎಲ್ಲರೂ ಸ್ಪೀಕರ್‌ಗೆ ಶುಭಕೋರಿದರು.
'ಕೈ'ಗೆ ಸಿಗುತ್ತಾ ಪ್ರತಿಪಕ್ಷ ಸ್ಥಾನ?
ಕಾಂಗ್ರೆಸ್‌ಗೆ ಪ್ರತಿಪಕ್ಷ ಸ್ಥಾನ ಸಿಗುತ್ತದೋ, ಇಲ್ಲವೋ ಎಂಬುವುದು ಇನ್ನೂ ನಿರ್ಧಾರವಾಗಿಲ್ಲ. ಹಿಂದಿನ ಸಂಪ್ರದಾಯಗಳನ್ನು ಪರಿಶೀಲಿಸಿ ನಂತರ ಅಧಿಕೃತ ನಿರ್ಧಾರ ಕೈಗೊಳ್ಳುವುದಾಗಿ ಸ್ಪೀಕರ್ ಸುಮಿತ್ರಾ ಮಹಾಜನ್ ತಿಳಿಸಿದ್ದಾರೆ.
ರಾಜ್ಯಕ್ಕೆ ಕಲ್ಯಾಣ್‌ಸಿಂಗ್ ರಾಜ್ಯಪಾಲ?
ಕೇಂದ್ರದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ಶೀಘ್ರದಲ್ಲೇ 8 ರಾಜ್ಯಗಳ ರಾಜ್ಯಪಾಲರು ಬದಲಾಗಲಿದ್ದಾರೆ. ಕರ್ನಾಟಕಕ್ಕೆ ಕಲ್ಯಾಣ್‌ಸಿಂಗ್ ಹಾಗೂ ಮಹಾರಾಷ್ಟ್ರಕ್ಕೆ ಮುರಳಿ ಮನೋಹರ ಜೋಶಿ ಅವರನ್ನು ನೇಮಕ ಮಾಡುವ ಸಾಧ್ಯತೆಯಿದೆ. ಕೇಂದ್ರ ಗೃಹ ಇಲಾಖೆಯು ಪ್ರಧಾನಿ ಕಾರ್ಯಾಲಯಕ್ಕೆ 8 ರಾಜ್ಯಪಾಲರ ಪಟ್ಟಿ ಸಲ್ಲಿಸಿದೆ. ಲಾಲ್‌ಜೀ ಟಂಡನ್, ಕೆ.ಎನ್. ತ್ರಿಪಾಠಿ, ವಿ.ಕೆ. ಮಲ್ಹೋತ್ರಾ, ಕಲ್ಯಾಣ್‌ಸಿಂಗ್, ಶಾಂತಾಕುಮಾರ್, ಬಿ.ಸಿ. ಖಂಡೂರಿಯವರಿಗೆ ಹೊಸ ಹೊಣೆ ಸಿಗುವ ಸಾಧ್ಯತೆಯಿದೆ.
ರಾಷ್ಟ್ರನಿರ್ಮಾಣದಲ್ಲಿ ಕೈಜೋಡಿಸಿ
ಬಿಜೆಪಿ ಉಚ್ಚಾಟಿತ ನಾಯಕ ಜಸ್ವಂತ್ ಸಿಂಗ್‌ರನ್ನು ಬಿಜೆಪಿಗೆ ಕರೆತರಲು ಮೋದಿ ಮುಂದಾಗಿದ್ದಾರೆ. ಪತ್ರ ಬರೆದಿರುವ ಅವರು, ನೀವು ಅನುಭವಿ ನಾಯಕ. ಪಕ್ಷದ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದೀರಿ. ರಾಷ್ಟ್ರ ನಿರ್ಮಾಣದಲ್ಲಿ ನಮ್ಮ ಜತೆ ಕೈಜೋಡಿಸಿ ಎಂದು ಕೋರಿದ್ದಾರೆ. ಪ್ರಧಾನಿಯ ಪತ್ರಕ್ಕೆ ಬೆಲೆಕೊಟ್ಟು ಜಸ್ವಂತ್ ಮತ್ತೆ ಬಿಜೆಪಿ ಸೇರಲಿದ್ದಾರೆಯೇ ಎಂದು ಕಾದು ನೋಡಬೇಕು.
ಮುಂದಿನ ತಿಂಗಳು ಜಪಾನ್‌ಗೆ
ಜುಲೈನಲ್ಲಿ ಪ್ರಧಾನಿ ಮೋದಿ ಫುಲ್ ಬ್ಯುಸಿ. ಅವರ ವಿದೇಶ ಪ್ರವಾಸಗಳ ಪಟ್ಟಿ ಈಗಾಗಲೇ ಸಿದ್ಧವಾಗಿದೆ. ಮುಂದಿನ ತಿಂಗಳು ಅವರು ಜಪಾನ್, ಬ್ರೆಜಿಲ್, ಭೂತಾನ್, ಅಮೆರಿಕ ಹೀಗೆ ಹಲವು ರಾಷ್ಟ್ರಗಳಿಗೆ ಭೇಟಿ ನೀಡಲಿದ್ದಾರೆ.
ಮೋದಿ ಸತ್ವ
- ಘನತೆಯನ್ನು ನೀವೇ ಕೆಳಮಟ್ಟಕ್ಕಿಳಿಸಬೇಡಿ. ಸ್ವಸಂತುಷ್ಟತೆಗೆ ದಾರಿ ಮಾಡಿಕೊಡದಿರಿ.
- ಗೆದ್ದ ಮಾತ್ರಕ್ಕೆ ನಿಮ್ಮ ಹೊಣೆ ಮುಗಿಯಲ್ಲ. ಕೆಳಮಟ್ಟದವರೆಗೂ ಸಂಪರ್ಕ ಬೆಳೆಸಿಕೊಳ್ಳಿ. ಜನರೊಂದಿಗೆ ನಿರಂತರ ಸಂಪರ್ಕ ಹೊಂದುವ ಮೂಲಕ ಬೇರುಮಟ್ಟದವರೆಗೂ ಸರ್ಕಾರದ ಸಂದೇಶವನ್ನು ರವಾನಿಸಿ. ಪಕ್ಷದ ಕಾರ್ಯಕ್ರಮಗಳನ್ನು ತಿಳಿಸಿ.
- ನನ್ನದಾಗಲೀ ಅಥವಾ ಯಾವ ನಾಯಕರದ್ದೇ ಆಗಲಿ ಪಾದ ಮುಟ್ಟಿ ನಮಸ್ಕರಿಸುವುದು ಬೇಡ. ಮುಖಸ್ತುತಿಯ ಅಭ್ಯಾಸ ಬಿಟ್ಟುಬಿಡಿ.
- ಸದನದಲ್ಲಿ ಸುಗಮ ಕಲಾಪಕ್ಕೆ ನೆರವಾಗಿ. ಸಂಸತ್ ಅಧಿವೇಶನಕ್ಕೆ ತಪ್ಪದೇ ಹಾಜರಾಗಿ, ಸಂಸತ್‌ನ ಘನತೆಯನ್ನು ಕಾಪಾಡಿ.
- ಸಂಸತ್ನಲ್ಲಿ ಚರ್ಚೆ ನಡೆಯುವಾಗ ಎಲ್ಲರೂ ಹಾಜರಿರಿ; ಇದು ನಿಮಗೆ ಉತ್ತಮ ಕಲಿಕೆಯ ಅನುಭವವನ್ನೂ ನೀಡುತ್ತದೆ.
- ನಿಮ್ಮ ಹೋಂವರ್ಕ್ಗಳನ್ನು ಸರಿಯಾಗಿ ಮಾಡಿ. ಸಂಸತ್ ಚರ್ಚೆಯಲ್ಲಿ ಪಾಲ್ಗೊಳ್ಳುವ ಮುನ್ನ ಸರಿಯಾದ ಮಾಹಿತಿಯೊಂದಿಗೆ ಬನ್ನಿ.
- ನಿಮ್ಮ ಕ್ಷೇತ್ರದ ವಿಚಾರಗಳನ್ನು ಮಾಧ್ಯಮದೆದುರು ಬಹಿರಂಗಪಡಿಸಿ; ಯಾರೂ ಕೂಡ ಪಕ್ಷದ ವಕ್ತಾರರಾಗಿ ಮಾತನಾಡಬೇಡಿ.
- ಸಂಸದರಾಗಿ ಮಾಡುವ ಕೆಲಸವನ್ನು ಶ್ರಮಪಟ್ಟು ಮಾಡಿ.