ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಜಯಾ ನಿರ್ವಹಣೆಗೆ ನಾಯಕರ ಒಗ್ಗಟ್ಟು

ಬೆಂಗಳೂರು/ಮೈಸೂರು: ಕಾವೇರಿ ನಿರ್ವಹಣಾ ಮಂಡಳಿ ಕುರಿತಂತೆ ರಾಜಕೀಯ ಮೇಲಾಟ ತೀವ್ರ..

Rashmi Kasaragodu
Updated On : 8 Jun 2014, 3:14 am

ಬೆಂಗಳೂರು/ಮೈಸೂರು: ಕಾವೇರಿ ನಿರ್ವಹಣಾ ಮಂಡಳಿ ಕುರಿತಂತೆ ರಾಜಕೀಯ ಮೇಲಾಟ ತೀವ್ರಗೊಂಡಿದ್ದು, ಜತೆಗೇ ರಾಜ್ಯದ ಹಿತರಕ್ಷಣೆಗೆ ಒಗ್ಗಟ್ಟಿನ ಮಂತ್ರ ಕೇಳಿಬಂದಿದೆ.
ಮಂಡಳಿ ರಚನೆ ಪ್ರಸ್ತಾಪವೇ ಕೇಂದ್ರದ ಮುಂದಿಲ್ಲ ಎಂದು ರಾಜ್ಯದ ಕೇಂದ್ರ ಸಚಿವದ್ವಯರು ಸ್ಪಷ್ಟಪಡಿಸಿದ್ದಾರೆ. ಆದರೆ 'ನಮಗೆ ಖಚಿತ ಮಾಹಿತಿಯಿದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಹಾಗೂ ತಮಿಳುನಾಡು ಸರ್ಕಾರದ ಮೇಲೆ ಗೂಬೆ ಕೂರಿಸಿದ್ದಾರೆ. ಏತನ್ಮಧ್ಯೆ ಜೂ.9ರಂದು ಸರ್ವಪಕ್ಷ ಮುಖಂಡರ ಸಭೆ ನಡೆಸಿ, ಜೂ.10ಕ್ಕೆ ಪ್ರಧಾನಿ ಬಳಿ ನಿಯೋಗ ಒಯ್ಯಲು ಸಿಎಂ ನಿರ್ಧರಿಸಿದ್ದಾರೆ.
ಸುಪ್ರೀಂ  ತೀರ್ಪು ಬರುವವರೆಗೂ ಮಂಡಳಿ ರಚನೆಯಿಲ್ಲ ಎಂದು ಸ್ಪಷ್ಟಪಡಿಸಿರುವ ಕೇಂದ್ರ ಸಚಿವರಾದ ಸದಾನಂದಗೌಡ, ಅನಂತಕುಮಾರ್, ಈ ಬಗ್ಗೆ ಪ್ರಧಾನಿ ಬಳಿ ರಾಜ್ಯ ಬಿಜೆಪಿ ನಿಯೋಗ ತೆರಳಲಿದೆ ಎಂದಿದ್ದಾರೆ. ಈ ಮಧ್ಯೆ ಮಂಡ್ಯದಲ್ಲಿ ರೈತರಿಂದ ಪ್ರತಿಭಟನೆ ಭುಗಿಲೆದ್ದಿದೆ.



ಜಯಾ-ಮೋದಿ ರಾಜಕೀಯ

ರಾಜ್ಯಸಭೆಯಲ್ಲಿ ಎನ್ಡಿಎಗೆ ಬಹುಮತವಿಲ್ಲದ್ದನ್ನು ಬಳಸಿಕೊಂಡು ಕಾವೇರಿ ವಿವಾದದಲ್ಲಿ ರಾಜಕೀಯ ಲಾಭ ಮಾಡಿಕೊಳ್ಳಲು ಜಯಲಲಿತಾ ಮುಂದಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಕಾವೇರಿ ನಿರ್ವಹಣಾ ಮಂಡಳಿ ರಚಿಸಿದರೆ ರಾಜ್ಯಕ್ಕೆ ಅನ್ಯಾಯವಾಗುತ್ತದೆ. ಈಗಾಗಲೇ ಕೇಂದ್ರ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಕಾವೇರಿ ಉಸ್ತುವಾರಿ ಸಮಿತಿ ಇದೆ. ಈ ಸಮಿತಿಯಲ್ಲಿ ಸಂಬಂಧಪಟ್ಟ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿದ್ದಾರೆ. ಹೀಗಿರುವಾಗ ನಿರ್ವಹಣಾ ಮಂಡಳಿ ಅಗತ್ಯವಿಲ್ಲ ಎಂದು ಸಿಎಂ ಹೇಳಿದ್ದಾರೆ.


ಒಗ್ಗಟ್ಟಿನ ಜತೆ ಬಿಜೆಪಿ ಭಿನ್ನರಾಗ


ಕಾವೇರಿ ನಿರ್ವಹಣಾ ಮಂಡಳಿ ರಚನೆ ಕುರಿತಂತೆ ಅನವಶ್ಯಕವಾಗಿ ರಾಜಕೀಯ ಮಾಡಲಾಗುತ್ತಿದೆ. ಇದು ಕೇವಲ ಗಾಳಿಸುದ್ದಿ, ಕೇಂದ್ರ ಸರ್ಕಾರ ಯಾವುದೇ ಇಲಾಖೆಯಲ್ಲಿ ಇಂತಹ ಪ್ರಸ್ತಾವ ಬಂದಿಲ್ಲ. ಆದಾಗ್ಯೂ ರಾಜ್ಯದ ಜನತೆಯ ಹಿತ ಕಾಪಾಡಲು ಕೇಂದ್ರ ಸಚಿವರು ಹಾಗೂ ಬಿಜೆಪಿ ಸಂಸದರು ಕೆಲಸ ಮಾಡುತ್ತೇವೆ. ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ಪ್ರಧಾನಿ ಬಳಿ ನಿಯೋಗ ಕೊಂಡೊಯ್ಯಲಾಗುವುದು ಎಂದು ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ ಹಾಗೂ ಅನಂತಕುಮಾರ್ ಅಭಯ ನೀಡಿದ್ದಾರೆ.


ಕಾವೇರಿ ಪೂರ್ಣ ಪ್ರಮಾಣದ ತೀರ್ಪು ಬರುವುದಕ್ಕಿಂತ ಮುಂಚೆಯೇ ಪದೇಪದೆ ಕಿತಾಪತಿ ಮಾಡುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾಗೆ ರಾಜ್ಯ ಸೂಕ್ತ ಉತ್ತರ ನೀಡಲಿದೆ. ಸುಪ್ರೀಂ ಕೋರ್ಟ್ನಲ್ಲಿ ಪ್ರಕರಣ ಇರುವಾಗ ಮಂಡಳಿ ರಚನೆ ಸೂಕ್ತವಲ್ಲ.
- ಟಿ.ಬಿ. ಜಯಚಂದ್ರ, ಕಾನೂನು ಸಚಿವ

ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾಭಾರತಿ ಜತೆ ಶನಿವಾರ ಮಾತನಾಡಿದ್ದೇನೆ. ಇಂಥ ಯಾವುದೇ ಪ್ರಸ್ತಾಪ ಇಲ್ಲ. ರಾಜಕೀಯ ಉದ್ದೇಶಕ್ಕೆ ಇಂತಹ ಸುದ್ದಿ ಹಬ್ಬಿಸಲಾಗುತ್ತಿದೆ.
- ಅನಂತಕುಮಾರ್, ಕೇಂದ್ರ ಸಚಿವ

ಪ್ರಧಾನಿ ಮೋದಿ ಹಾಗೂ ಜಯಲಲಿತಾ ಭೇಟಿ ಬಳಿಕ ರಾಜಕೀಯ ವಿಷ ಬೀಜ ಬಿತ್ತಲು ಇಂತಹ ಗಾಳಿ ಸುದ್ದಿ ಹಬ್ಬಿಸಲಾಗಿದೆ. ರಾಜ್ಯದ ಮೇಲ್ಮನವಿ ಈಗಾಗಲೇ ಸುಪ್ರೀಂನಲ್ಲಿರುವುದರಿಂದ ಮಂಡಳಿ ರಚನೆ ಸಾಧ್ಯವಿಲ್ಲ.
- ಸದಾನಂದಗೌಡ, ಕೇಂದ್ರ ರೇಲ್ವೆ ಸಚಿವ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement