ಕೈದಿ, ಪೊಲೀಸರ ಮಾರಾಮಾರಿ!
ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಭಾನುವಾರ, ಕೈದಿಗಳು ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ನಡೆದ ಮಾರಾಮಾರಿಯಲ್ಲಿ...
ಮಂಗಳೂರು: ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಭಾನುವಾರ, ಕೈದಿಗಳು ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ನಡೆದ ಮಾರಾಮಾರಿಯಲ್ಲಿ ಎಸಿಪಿ ಸಹಿತ ಇಬ್ಬರು ಪೊಲೀಸ್ ಅಧಿಕಾರಿಗಳು ಹಾಗೂ 30ಕ್ಕೂ ಅಧಿಕ ಸಿಬ್ಬಂದಿ ಏಟು ತಿಂದಿದ್ದಾರೆ. ಮೂವರು ಕೈದಿಗಳೂ ಗಾಯಗೊಂಡಿದ್ದಾರೆ.
ಜೈಲಿನಲ್ಲಿ ಪದೇ ಪದೆ ಅಶಾಂತಿ ಸೃಷ್ಟಿಸುತ್ತಿದ್ದ ಪಾತಕಿ ರಶೀದ್ ಮಲಬಾರಿ ಸಹಚರರಾದ ಫೈಸಲ್ ಹಾಗೂ ಫಲ್ಹತ್ನನ್ನು ಧಾರವಾಡಕ್ಕೆ ಸ್ಥಳಾಂತರಕ್ಕೆ ಬರ್ಕೆ ಠಾಣೆ ಪೊಲೀಸರು ಮುಂದಾಗಿದ್ದರು. ಇದಕ್ಕೆ ಫೈಸಲ್ ಮತ್ತು ಫಲ್ಹತ್ ವಿರೋಧಿಸಿದರು. ಆಗ ಇತರ ಕೈದಿಗಳು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು, ಕೈದಿಗಳು ಕೈಗೆ ಸಿಕ್ಕ ವಸ್ತುಗಳಲ್ಲಿ ಪೊಲೀಸರ ಮೇಲೆ ದಾಳಿ ನಡೆಸಿದರು.
ಇದರಿಂದ ಎಸಿಪಿ ತಿಲಕ್ಚಂದ್ರ ಬಲಗಣ್ಣಿಗೆ, ಉರ್ವ ಇನ್ಸ್ಪೆಕ್ಟರ್ ರಾಮಚಂದ್ರ ಮಲೆದೇವರ್ ಬೆನ್ನಿಗೆ, ಕದ್ರಿ ಇನ್ಸ್ಪೆಕ್ಟರ್ ರಾಘವ ಪಡೀಲ್ರ ಕಿರುಬೆರಳಿಗೆ ಗಾಯವಾಗಿದೆ. ಗಾಯಗೊಂಡ ಮೂವರು ಕೈದಿಗಳು ದೇರಳಕಟ್ಟೆ ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣದ ಆರೋಪಿಗಳಾಗಿದ್ದಾರೆ. ಪೊಲೀಸ್ ಕಮಿಷನರ್ ಆರ್.ಹಿತೇಂದ್ರ ತನಿಖೆಗೆ ಆದೇಶಿಸಿದ್ದಾರೆ. ಫೈಸಲ್ ಹಾಗೂ ಫಲ್ಹಕ್ ಇಬ್ಬರನ್ನೂ ನಂತರ ಧಾರವಾಡಕ್ಕೆ ವರ್ಗಾಯಿಸಲಾಗಿದೆ.