ಚರಂಡಿ ನೀರಲ್ಲಿ ಬದುಕಿನ ಕೃಷಿ!
'ಚರಂಡಿ ನೀರು' ಕಂಡರೆ ಜನ ಮೂಗು ಮುಚ್ಚುತ್ತಾರೆ. ಆದರೆ, ಇಲ್ಲೊಬ್ಬ ರೈತ ಚರಂಡಿ ನೀರಿಂದಲೇ ಬದುಕು ...
ಕೊಪ್ಪಳ: 'ಚರಂಡಿ ನೀರು' ಕಂಡರೆ ಜನ ಮೂಗು ಮುಚ್ಚುತ್ತಾರೆ. ಆದರೆ, ಇಲ್ಲೊಬ್ಬ ರೈತ ಚರಂಡಿ ನೀರಿಂದಲೇ ಬದುಕು ಕಟ್ಟಿಕೊಂಡಿದ್ದಾರೆ. ಅದನ್ನೇ ಕೃಷಿಗೆ ಬಳಸಿ ವರ್ಷ ಪೂರ್ತಿ ಸಮೃದ್ಧ ಬೆಳೆ ತೆಗೆಯುತ್ತಿದ್ದಾರೆ!
ಹೌದು, ಕೊಪ್ಪಳ ತಾಲೂಕಿನ ಹಂದ್ರಾಳ ಗ್ರಾಮದ ಹುಚ್ಚಪ್ಪ ಮನ್ನಾಪುರ ಎಂಬವರು ಚರಂಡಿ ನೀರಿನಲ್ಲೇ 'ಬದುಕಿನ ಕೃಷಿ' ಮಾಡುತ್ತಿದ್ದಾರೆ.
ನಾಲ್ಕಾರು ವರ್ಷಗಳ ಹಿಂದೆ ಹುಚ್ಚಪ್ಪ ಕುರಿ ಮೇಯಿಸುತ್ತಿದ್ದರು. ಬಳಿಕ ಟ್ರ್ಯಾಕ್ಟರ್ ಚಾಲಕನಾಗಿ ಕೆಲಸ ನಿರ್ವಹಿಸಿದರು. ಎಲ್ಲೂ ತೃಪ್ತಿ ಸಿಗದಾಗ ಹೊಲದತ್ತ ಹೆಜ್ಜೆ ಹಾಕಿದರು. ಗ್ರಾಮದ ಪಕ್ಕದಲ್ಲೇ ಅವರಿಗೆ 1.05 ಎಕರೆ ಜಮೀನಿದೆ. ಗ್ರಾಮದ ಚರಂಡಿ ನೀರು ಜಮೀನು ಪಕ್ಕದಲ್ಲೇ ಹರಿದು ಹಳ್ಳ ಸೇರುತ್ತಿತ್ತು. ಅದೇ ನೀರು ಬಳಕೆ ಮಾಡಿಕೊಳ್ಳಬೇಕು ಎಂದು ಯೋಜಿಸಿ ಯೋಜನೆ ರೂಪಿಸಿದರು ಹುಚ್ಚಪ್ಪ. ಅದೀಗ ಉತ್ತಮ ಫಲ ನೀಡಿದೆ.
ಒಂದೆಡೆ ಸಂಗ್ರಹ
ಚರಂಡಿ ನೀರನ್ನು ಜಮೀನು ಪಕ್ಕದಲ್ಲೇ ಇರುವ ಗುಂಡಿಯಲ್ಲಿ ಸಂಗ್ರಹಿಸಿದ್ದಾರೆ. ನಂತರ ಅದನ್ನು ಪಂಪ್ಸೆಟ್ ಬಳಸಿ ಹೊಲಕ್ಕೆ ಹರಿಸುತ್ತಾರೆ. ಈ ಚರಂಡಿ ನೀರು ಗ್ರಾಮದ ತಿಪ್ಪೆಗುಂಡಿ (ಸಗಣಿ) ಪಕ್ಕದಲ್ಲೇ ಹರಿಯುತ್ತದೆ. ಇದೇ ನೀರನ್ನು ಜಮೀನಿಗೆ ಹರಿಸುವುದರಿಂದ ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಬಳಸುವ ಪ್ರಮೇಯವೂ ತಪ್ಪುತ್ತಿದೆ. ಫಸಲೂ ಸಮೃದ್ಧವಾಗಿ ಬರುತ್ತಿದೆ ಎಂದು ಹುಚ್ಚಪ್ಪ ಹೇಳುತ್ತಾರೆ.
ವರ್ಷಪೂರ್ತಿ ಬಳಕೆ
ಚರಂಡಿ ನೀರು ವರ್ಷಪೂರ್ತಿ ಹರಿಯುವ ಕಾರಣ ಬೇಸಿಗೆಯಲ್ಲೂ ನೀರಿನ ತೊಂದರೆ ಇಲ್ಲ. ಹಾಗಾಗಿ ಮೊದಲು ಹಾಕಿಸಿದ್ದ ಬೋರ್ವೆಲ್ ಬಂದ್ ಮಾಡಿ, ಪೂರ್ಣಪ್ರಮಾಣದಲ್ಲಿ ಚರಂಡಿ ನೀರನ್ನೇ ಕೃಷಿಗಾಗಿ ಬಳಸುತ್ತಿದ್ದಾರೆ. ಈಗಾಗಲೇ ಮೆಕ್ಕೆಜೋಳ, ಸೂರ್ಯಕಾಂತಿ ಬೆಳೆ ಪಡೆದಿದ್ದಾರೆ. ಸದ್ಯ ಹತ್ತಿ ಬಿತ್ತನೆ ಮಾಡಿದ್ದು, ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದಾರೆ ಹುಚ್ಚಪ್ಪ.
- ದತ್ತು ಕಮ್ಮಾರ