ಚಿತ್ರನಗರಿ ನಿರ್ಮಾಣ ಶತಸಿದ್ಧ
ರಾಜ್ಯದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಚಿತ್ರನಗರಿ ನಿರ್ಮಾಣ ಮಾಡಲು ಸರ್ಕಾರ ನಿರ್ಧರಿಸಿದೆ. ಕನ್ನಡ ಚಿತ್ರರಂಗ...
ಬೆಂಗಳೂರು: ರಾಜ್ಯದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಚಿತ್ರನಗರಿ ನಿರ್ಮಾಣ ಮಾಡಲು ಸರ್ಕಾರ ನಿರ್ಧರಿಸಿದೆ. ಕನ್ನಡ ಚಿತ್ರರಂಗ ರಕ್ಷಣೆಗೆ ರಾಜ್ಯ ಸರ್ಕಾರ ಕಟಿಬದ್ಧವಾಗಿದೆ. ಬಜೆಟ್‌ನಲ್ಲಿ ಘೋಷಿಸಿರುವಂತೆ ಚಿತ್ರನಗರಿ ನಿರ್ಮಾಣ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ ಚಿತ್ರನಗರಿ ನಿರ್ಮಿಸಲು ಉದ್ದೇಶಿಸಲಾಗಿದೆ. ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಅಗತ್ಯ ನೆರವು ಸಿಗುತ್ತಿಲ್ಲ. ಆದರೆ ಚಿತ್ರರಂಗ ನಶಿಸಿಹೋಗಿದೆ ಎಂಬ ಆರೋಪ ಮಾಡುವವರಿದ್ದಾರೆ, ಇದನ್ನು ನಾನು ಒಪ್ಪುವುದಿಲ್ಲ. ಚಿತ್ರರಂಗದ ಅಭಿವೃದ್ಧಿಗೆ ಸರ್ಕಾರ ಸಹಾಯ ಮಾಡಬೇಕಿದೆ ಎಂದು ಭಾರತೀಯ ಚಲನಚಿತ್ರ ಒಕ್ಕೂಟ, ದಕ್ಷಿಣ ಭಾರತ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳೊಂದಿಗೆ ಕೃಷ್ಣಾದಲ್ಲಿ ಭಾನುವಾರ ನಡೆದ ಸಭೆಯ ಬಳಿಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಚಿತ್ರ ನಗರಿ ನಿರ್ಮಾಣದ ಬಹು ವರ್ಷಗಳ ಬೇಡಿಕೆಯ ಜತೆಗೆ ಸೇವಾ ತೆರಿಗೆ ರದ್ದು ಹಾಗೂ ಮಲ್ಟಿಪ್ಲೆಕ್ಸ್‌ನಲ್ಲಿ ಕನ್ನಡ ಚಿತ್ರ ಪ್ರದರ್ಶನ ಕುರಿತಂತೆ ತುರ್ತಾಗಿ ಸಭೆ ನಡೆಸುತ್ತೇನೆ. ಮಲ್ಟಿಪ್ಲೆಕ್ಸ್ ಮಾಲೀಕರೊಂದಿಗೆ ಸಭೆ ನಡೆಸುತ್ತೇನೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
ಕನ್ನಡ ಚಿತ್ರೋದ್ಯಮವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ 400ಕ್ಕೂ ಅಧಿಕ ಜನತಾ ಚಿತ್ರಮಂದಿರ ಪ್ರಾರಂಭಿಸಲು ಸರ್ಕಾರ ಉದ್ದೇಶಿಸಿದೆ. ಇದಲ್ಲದೇ ಚಿತ್ರರಂಗದ ಪ್ರಮುಖರು ಹಾಗೂ ಸಾರ್ವಜನಿಕರು ಕನ್ನಡ ಚಿತ್ರಮಂದಿರ ಆರಂಭಿಸಲು ಮುಂದಾದರೆ ಕಡಿಮೆ ದರದಲ್ಲಿ ಭೂಮಿ ಸೇರಿದಂತೆ ಇತರ ಸಹಾಯ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ವಾರ್ತಾ ಸಚಿವ ರೋಷನ್ ಬೇಗ್ ಹೇಳಿದರು.
ಮುಖ್ಯಮಂತ್ರಿ ಭೇಟಿಯಾದ ನಿಯೋಗದಲ್ಲಿ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಶಶಿಕುಮಾರ್, ರಾಜ್ಯ ಮಂಡಳಿ ಅಧ್ಯಕ್ಷ ಎಚ್.ಡಿ.ಗಂಗಾರಾಜ್, ಹಿರಿಯ ನಿರ್ಮಾಪಕರಾದ ಸಾ.ರಾ.ಗೋವಿಂದು, ಬಿ.ವಿಜಯ್‌ಕುಮಾರ್ ಭಾಗಿಯಾಗಿದ್ದರು.