ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ನನ್ನ ಪ್ರಶಸ್ತಿ ಕರ್ನಾಟಕ ಜನರಿಗೆ ಖುಷಿ ತರಲಿ

'ಉನ್ನತ ಸ್ಥಾನದಲ್ಲಿರುವ ಮಹಾಕವಿ ಪಂಪನ ಹೆಸರಿನಲ್ಲಿ ನನಗೆ ಪ್ರಶಸ್ತಿ ಲಭಿಸಿರುವುದು ಉತ್ಸಾಹ ತಂದಿದೆ. ಈ ಪ್ರಶಸ್ತಿ...

Rashmi Kasaragodu
Updated On : 9 Jun 2014, 1:13 am

ಮಂಗಳೂರು: 'ಉನ್ನತ ಸ್ಥಾನದಲ್ಲಿರುವ ಮಹಾಕವಿ ಪಂಪನ ಹೆಸರಿನಲ್ಲಿ ನನಗೆ ಪ್ರಶಸ್ತಿ ಲಭಿಸಿರುವುದು ಉತ್ಸಾಹ ತಂದಿದೆ. ಈ ಪ್ರಶಸ್ತಿ ಸಾಹಿತ್ಯಪ್ರಿಯರಿಗೆ ಅಭಿಮಾನ ಹೆಚ್ಚಿಸುವ ಜತೆಗೆ ಅಖಿಲ ಕರ್ನಾಟಕ ಅಭಿಮಾನ ಪಡುವಂತಾಗಬೇಕು...'
ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಎಂದು ಹಲವು ದಶಕಗಳಿಂದ ಹೋರಾಟ ಮಾಡುತ್ತಾ ಬಂದಿರುವ ಈ ಹಿರಿಯ ಸಾಹಿತಿಗೆ ಈಗ ನೂರು ವರ್ಷ. ಪಂಪನ ಹೆಸರೇಳಿದರೆ ಸಾಕು ನಿರರ್ಗಳ ಮಾತು, ಕಿವಿ ಕೇಳಿಸದಿದ್ದರೂ ಅರ್ಥೈಸಿಕೊಳ್ಳುವ ಪರಿ, ಕಾಸರಗೋಡು ಕರ್ನಾಟಕಕ್ಕೆ ಸೇರಿದಲ್ಲಿ ಮಾತ್ರ ರಾಜ್ಯದ ಜನತೆ ಅಭಿಮಾನಪಡುವಂತಾಗುತ್ತದೆ ಎಂಬ ಮನದ ತುಮುಲ...
ಕಾಸರಗೋಡಿನ ಪೆರಡಾಲ 'ಕವಿತಾ ಕುಟೀರ'ದಲ್ಲಿ ಭಾನುವಾರ ಕರ್ನಾಟಕ ಸರ್ಕಾರದ ವತಿಯಿಂದ ಪ್ರತಿಷ್ಠಿತ 'ಪಂಪ ಪ್ರಶಸ್ತಿ' ಸ್ವೀಕರಿಸಿದ ನಾಡೋಜ ಡಾ.ಕಯ್ಯಾರ ಕಿಂಞಣ್ಣ ರೈ ಹೇಳಿದ ಭಾವಪೂರ್ಣ ಮಾತುಗಳಿವು.
ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ರು. 3 ಲಕ್ಷ ನಗದು, ಸ್ಮರಣಿಕೆ, ಭಿನ್ನವತ್ತಳೆ, ಶಾಲು ಹೊದಿಸಿ ಪ್ರಶಸ್ತಿ ಪ್ರದಾನ ಮಾಡಿದರು.
'ಇದು ನನ್ನ ಅತ್ಯಂತ ಸ್ಮರಣೀಯ ದಿನ. ನಾಡಿನ ಶ್ರೇಷ್ಠ ಸಾಹಿತಿ ಪಂಪನ ಕುರಿತು ಅನೇಕ ಮಂದಿ ತಿಳಿದವರಿದ್ದಾರೆ. ಅವರ ಮಧ್ಯೆ ನಾನು ಮಾತನಾಡಲು ಎಷ್ಟು ಸಮರ್ಥ? ಪಂಪನ ಬಗ್ಗೆ ವಿದ್ವಾಂಸರು ಒಳ್ಳೆಯ ಮಾತು ಹೇಳಬೇಕು. ಜನರಿಗೆ ಪಂಪನ ವಿಚಾರ ತಿಳಿಯಬೇಕು' ಎಂದು ನಾಡೋಜ ಡಾ.ಕಯ್ಯಾರ ಆಶಿಸಿದರು.
ಹಿರಿಯ ಚೇತನರ ಗುರುತಿಸಿ: ಸನ್ಮಾನ ನೆರವೇರಿಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ನಾಡಿನ ಈ ಹಿರಿಯ ಚೇತನ ಅನೇಕ ವರ್ಷ ಜೀವಿಸಲಿ. ಕನ್ನಡ ನಾಡಿಗೆ ಕಯ್ಯಾರರ ಸೇವೆ ಅನನ್ಯ. ಇಂಥ ಹಿರಿಯರಿಗೆ ಪ್ರಶಸ್ತಿ ವಿಳಂಬವಾಗಿ ನೀಡಿರುವುದಕ್ಕೆ ವಿಷಾದಿಸುತ್ತೇನೆ ಎಂದು ನುಡಿದರು.
'ಕರ್ನಾಟಕ ರತ್ನ'ಕ್ಕೆ ಪ್ರಯತ್ನ: ದ.ಕ.ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಮಾತನಾಡಿ, ಕಯ್ಯಾರರಿಗೆ 'ಕರ್ನಾಟಕ ರತ್ನ' ಪ್ರಶಸ್ತಿ ಕೊಡಿಸುವಲ್ಲಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.


ಕಯ್ಯಾರರ ಸೂಚಿಸಿರದ ಆಯ್ಕೆ ಸಮಿತಿ!
ಸಾಹಿತ್ಯಲೋಕಕ್ಕೆ ಕಯ್ಯಾರರ ಕೊಡುಗೆ ಅನನ್ಯವಾದರೂ ಈಗಿನ ಆಯ್ಕೆ ಸಮಿತಿ ಕಯ್ಯಾರರ ಹೆಸರನ್ನು ಪ್ರಶಸ್ತಿಗೆ ಸೂಚಿಸಿರಲಿಲ್ಲ ಎಂಬುದು ಬಹಿರಂಗವಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಾಡೋಜ ಡಾ.ನಾ.ಡಿಸೋಜ ಅವರೇ ಈ ವಿಚಾರವನ್ನು ಪ್ರಸ್ತಾಪಿಸಿದರು. ಕಾಸರಗೋಡು ಕರ್ನಾಟಕಕ್ಕೆ ಸೇರಲಿ ಎಂದು ಸಾಹಿತ್ಯದ ಮೂಲಕವೂ ಹೋರಾಡಿದ ಕಯ್ಯಾರರ ಹೆಸರನ್ನು ಆಯ್ಕೆ ಸಮಿತಿ ಗುರುತಿಸದೇ ಇದ್ದದ್ದು ವಿಷಾದ ಎಂದರು. ಎಂ.ಎಂ.ಕಲಬುರ್ಗಿ ಅಧ್ಯಕ್ಷತೆಯ ಆಯ್ಕೆ ಸಮಿತಿಯಲ್ಲಿ ತಾನೂ ಸದಸ್ಯ. ಪಂಪ ಪ್ರಶಸ್ತಿಗೆ ಹೆಸರು ಸೂಚಿಸಲು ಎಲ್ಲ ಜಿಲ್ಲೆಗಳಲ್ಲಿರುವ ಸಂಘ ಸಂಸ್ಥೆಗಳಿಗೆ ಪತ್ರ ಬರೆಯುತ್ತೇವೆ. ಹೀಗೆ ಬರೆದ ಪತ್ರಕ್ಕೆ ಬಂದ ಉತ್ತರದಲ್ಲಿ ಯಾರೊಬ್ಬರೂ ಕಯ್ಯಾರರ ಹೆಸರು ಪ್ರಸ್ತಾಪಿಸಲಿಲ್ಲ. ಕೊನೆಗೆ ಕಲಬುರ್ಗಿಯವರೇ ಕಯ್ಯಾರರ ಹೆಸರು ಸೂಚಿಸಿದರು ಎಂದು ವಾಸ್ತವ ಸಂಗತಿ ಮುಂದಿಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement