ಬೆದರಿದ ಚೀನಾಕ್ಕೆ ಬಲಿಷ್ಠ ಭಾರತ ಸ್ನೇಹ
ಏಷ್ಯಾದ 'ಪ್ರಬಲ ಶಕ್ತಿ'ಯೊಂದಿಗೆ ಸ್ನೇಹದ ಅನಿವಾರ್ಯಕ್ಕೆ ಸಿಲುಕಿರುವ ಚೀನಾ, ದ್ವಿಪಕ್ಷೀಯ ಸಂಬಂಧ ಬಲಪಡಿಸುವ ..
ನವದೆಹಲಿ: ಏಷ್ಯಾದ 'ಪ್ರಬಲ ಶಕ್ತಿ'ಯೊಂದಿಗೆ ಸ್ನೇಹದ ಅನಿವಾರ್ಯಕ್ಕೆ ಸಿಲುಕಿರುವ ಚೀನಾ, ದ್ವಿಪಕ್ಷೀಯ ಸಂಬಂಧ ಬಲಪಡಿಸುವ ನಿಟ್ಟಿನಲ್ಲಿ ಭಾರತದೊಂದಿಗೆ ಭಾನುವಾರ ಮಹತ್ವದ ಮಾತುಕತೆ ನಡೆಸಿತು.
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ರ ವಿಶೇಷ ರಾಯಭಾರಿಯಾಗಿ 2 ದಿನಗಳ ಭಾರತ ಭೇಟಿಗೆ ಬೆಳಗ್ಗೆಯೇ ನವದೆಹಲಿಗೆ ಬಂದಿಳಿದರು ವಿದೇಶಾಂಗ ಸಚಿವ ವಾಂಗ್ ಇ. ಭಾರತ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಜತೆ ನೆಹರು ಭವನದಲ್ಲಿ ಸುಮಾರು 3 ಗಂಟೆ ಮಾತುಕತೆ ನಡೆಸಿದರು. ವ್ಯಾಪಾರ ವೃದ್ಧಿ ಮತ್ತು ಹೂಡಿಕೆ ಪ್ರಮುಖವಾಗಿ ಪ್ರಸ್ತಾಪವಾದ ವಿಚಾರ. ಗಡಿ ತಂಟೆ, ಅತಿಕ್ರಮಣ, ಭಾರತೀಯರಿಗೆ ಚೀನಾದ 'ಲಗತ್ತು ವೀಸಾ', ಬ್ರಹ್ಮಪುತ್ರಾಕ್ಕೆ ಅಣೆಕಟ್ಟೆ ವಿಚಾರಗಳೂ ಚರ್ಚೆಗೆ ಬಂದವು. ಮೋದಿ ಜತೆ ಉತ್ತಮ ಬಾಂಧವ್ಯ ಹೊಂದುವ ತುಡಿತವನ್ನು ಜಿನ್‌ಪಿಂಗ್ 2 ವಾರಗಳಲ್ಲಿ ಹಲವು ಸಲ ವ್ಯಕ್ತಪಡಿಸಿದ್ದರು.
'ಮುಕ್ತ ವಾತಾವರಣದಲ್ಲಿ ಫಲಪ್ರದ ಮಾತುಕತೆ ನಡೆಯಿತು. ಉಭಯ ರಾಷ್ಟ್ರಗಳಿಗೂ ತಮ್ಮ ಸ್ಥಾನ ಅರಿತುಕೊಳ್ಳಲು ಸಹಾಯಕವಾಯಿತು' ಎಂದು ಸಭೆಯ ಬಳಿಕ ಮಾಧ್ಯಮಗಳಿಗೆ ವಿದೇಶಾಂಗ ವ್ಯವಹಾರಗಳ ಇಲಾಖೆ ವಕ್ತಾರರು ತಿಳಿಸಿದರು.
ಹಿಂದಿಯಲ್ಲಿ ಸುಷ್ಮಾ
ಮಾತುಕತೆ ವೇಳೆ ಸುಷ್ಮಾ ಸ್ವರಾಜ್ ಹಿಂದಿಯಲ್ಲೇ ಸಂಭಾಷಣೆ ನಡೆಸಿದರು. ಅನುವಾದಕಾರರು ಅದನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡುತ್ತಿದ್ದರು. ವಿದೇಶಿ ಗಣ್ಯರೊಂದಿಗೆ ಹಿಂದಿಯಲ್ಲೇ ಮಾತನಾಡುವುದಾಗಿ ಪ್ರಕಟಿಸಿದ್ದ ಮೋದಿ, ಪ್ರಮಾಣ ವಚನ ಸ್ವೀಕಾರದ ಮರುದಿನ ಸಾರ್ಕ್ ದೇಶಗಳ ಪ್ರಮುಖರೊಂದಿಗೆ ನಡೆದ ಮಾತುಕತೆಯಲ್ಲಿ ಅದನ್ನು ಅನುಸರಿಸಿದ್ದರು ಕೂಡ. ಸಂಪುಟ ಸದಸ್ಯರೂ ಅವರ ಹಾದಿಯಲ್ಲೇ ಸಾಗುತ್ತಿದ್ದಾರೆ.
ಚೀನಾಕ್ಕೆ ಅನಿವಾರ್ಯ
ಚೀನಾ ಸಮುದ್ರ ಗಡಿ ವಿಚಾರದಲ್ಲಿ ಜಪಾನ್, ವಿಯೆಟ್ನಾಮ್, ಫಿಲಿಪ್ಪೀನ್ಸ್ ಜತೆ ತಕರಾರು ಹೊಂದಿದೆ. ಸಾಲದೆಂಬಂತೆ ಪ್ರಬಲ ಪ್ರತಿಸ್ಪರ್ಧಿ ಅಮೆರಿಕದ ನೌಕಾಪಡೆಗಳು ಏಷ್ಯಾ ಪೆಸಿಫಿಕ್ ವಲಯದಲ್ಲಿ ಮೇಲುಗೈ ಸಾಧಿಸುತ್ತಿದೆ. ಹೀಗಾಗಿ ಭಾರತದಂತಹ ಬಲಿಷ್ಠ ರಾಷ್ಟ್ರದೊಂದಿಗೆ ಸ್ನೇಹ ಚೀನಾಕ್ಕೆ ಅನಿವಾರ್ಯವಾಗಿದೆ.
ಮತ್ತೆ ಗಡಿ ತಂಟೆ
ಇತ್ತ ಉಭಯ ದೇಶಗಳ ಮಾತುಕತೆ ಹೊತ್ತಲ್ಲೇ ಅತ್ತ ಅರುಣಾಚಲದ ಗಡಿಯಲ್ಲಿ ಚೀನಾ ಸೇನೆ ಚಲನವಲನವನ್ನು ಭಾರತೀಯ ಸೇನೆ ಪತ್ತೆ ಮಾಡಿದೆ. ಹೀಗಾಗಿ ಮೋದಿ ಜತೆಗೆ ಸೋಮವಾರ ನಿಗದಿತ ವಾಂಗ್ ಭೇಟಿ ಕುತೂಹಲ ಕೆರಳಿಸಿದೆ.
ಟಿಬೆಟಿಯನ್ನರ ಪ್ರದರ್ಶನ
ಚೀನಾ ಜತೆ ಟಿಬೆಟ್ ವಿಚಾರ ಪ್ರಸ್ತಾಪಿಸುವಂತೆ ಆಗ್ರಹಿಸಿ ಟಿಬೆಟಿಯನ್ನರು ಭಾನುವಾರ ದೆಹಲಿಯಲ್ಲಿ ಪ್ರದರ್ಶನ ನಡೆಸಿದರು. ಉತ್ತರ ದೆಹಲಿಯ ಮಂಜು ಕಿ ತಿಲಿ ಪ್ರದೇಶದಲ್ಲಿ ಪ್ರದರ್ಶನ ನಡೆಯಿತು. ಚೀನಾ ವಿರುದ್ಧ ಪ್ರದರ್ಶನಕಾರರು ಘೋಷಣೆ ಕೂಗಿದರು.