ರಾಜ್ಯದಲ್ಲಿ ಕಳೆಗಟ್ಟಿದ ಕೃಷಿ ಕಲರವ
ರಾಜ್ಯದಲ್ಲಿ ಮುಂಗಾರು ಇನ್ನೂ ಆರ್ಭಟಿಸುತ್ತಿಲ್ಲ. ಆದರೂ ಕೃಷಿ ಚಟುವಟಿಕೆ ಅಬ್ಬರಿಸುತ್ತಿದೆ. ರಾಜ್ಯದೆಲ್ಲೆಡೆ ಈಗಾಗಲೇ..
ಎಲ್ಲೆಡೆ ಬಿತ್ತನೆ ಬೀಜ, ರಸಗೊಬ್ಬರ ಖರೀದಿ ಭರಾಟೆ, ಕೊರತೆ ತಲೆದೋರದಂತೆ ಕೃಷಿ ಇಲಾಖೆಯ ಕ್ರಮ
ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಇನ್ನೂ ಆರ್ಭಟಿಸುತ್ತಿಲ್ಲ. ಆದರೂ ಕೃಷಿ ಚಟುವಟಿಕೆ ಅಬ್ಬರಿಸುತ್ತಿದೆ. ರಾಜ್ಯದೆಲ್ಲೆಡೆ ಈಗಾಗಲೇ ಶೇ.7ರಷ್ಟು ಬಿತ್ತನೆಯೂ ಮುಗಿದಿದೆ.
ಈ ಬಾರಿ ಮುಂಗಾರು ದುರ್ಬಲವಾಗುವ ಸಾಧ್ಯತೆಯ ಮಾತುಗಳು ಕೇಳಿಬರುತ್ತಿದ್ದರೂ ರೈತರು ಉತ್ತಮ ಮಳೆ ನಿರೀಕ್ಷೆಯಲ್ಲೇ ಕೃಷಿ ಚಟುವಟಿಕೆ ಆರಂಭಿಸಿದ್ದಾರೆ. ಪೂರ್ವ ಮುಂಗಾರು ಮಳೆ ನಿರೀಕ್ಷೆಗೂ ಮೀರಿ ಸುರಿದಿರುವುದು ರೈತರಲ್ಲಿ ಹೊಸ ಭರವಸೆ ಮೂಡಿಸಿದೆ. ಅದೇ ಹರ್ಷದಲ್ಲಿ ರೈತರು ಮುಂಗಾರು ಹಂಗಾಮಿಗೆ ಭೂಮಿ ಸಿದ್ಧತೆ ಮತ್ತು ಬಿತ್ತನೆ ಕಾರ್ಯ ಚುರುಕುಗೊಳಿಸಿದ್ದಾರೆ.
ಈ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಗುರಿ 74 ಲಕ್ಷ ಹೆಕ್ಟೇರ್ ಇದ್ದು, ಇದರಲ್ಲಿ ಈಗಾಗಲೇ 4.10 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಬಿತ್ತನೆಯಾಗಿದೆ. ಅಂದರೆ ಶೇ.7ರಷ್ಟು ಬಿತ್ತನೆ ಈಗಾಗಲೇ ಮುಗಿದಿದೆ. ಇನ್ನುಳಿದ ಬಿತ್ತನೆ ಪ್ರಕ್ರಿಯೆ ಸೆಪ್ಟೆಂಬರ್‌ವರೆಗೂ ನಡೆಯಲಿದೆ.
ಬಿತ್ತನೇಲೇ ಸಾಧನೆ
ಬೇಸಿಗೆ ಮಳೆ ಉತ್ತಮವಾಗಿದ್ದರಿಂದ ಕುಡಿಯುವ ನೀರಿನ ಸಮಸ್ಯೆ ಅಷ್ಟಾಗಿ ರಾಜ್ಯವನ್ನು ಕಾಡಿಲ್ಲ. ಜತೆಗೆ ಬೇಸಿಗೆಯಾದರೂ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದೆ. ಇದರಿಂದ ಉತ್ತೇಜಿತರಾದ ರೈತರು ಮೇ ಆರಂಭದಲ್ಲೇ ಭೂಮಿ ಸಿದ್ಧತೆ ಶುರು ಮಾಡಿದರು. ಅದರ ಬೆನ್ನಲ್ಲೇ ಬಿತ್ತನೆಯನ್ನೂ ಮಾಡಲಾರಂಭಿಸಿದರು. ಪ್ರತಿ ವರ್ಷ ಈ ಸಮಯದಲ್ಲಿ ಬಿತ್ತನೆ ಕಾರ್ಯ ಶೇ.3ರಷ್ಟನ್ನೂ ಮುಟ್ಟುತ್ತಿರಲಿಲ್ಲ. ಆದರೆ ಈ ಬಾರಿ ಬಿತ್ತನೆ ಹಿಂದೆಗಿಂತಲೂ ಹೆಚ್ಚಾಗಿದೆ.
ಇಲಾಖೆ ಸಿದ್ಧತೆ
ಈ ಬಾರಿ ಮುಂಗಾರಿಗೆ 10.71 ಲಕ್ಷ ಕ್ವಿಂಟಲ್ ಬಿತ್ತನೆ ಬೀಜ ಅಗತ್ಯವಿದ್ದು ಈಗಾಗಲೇ 55 ಸಾವಿರ ಕ್ವಿಂಟಲ್‌ಗೂ ಅಧಿಕ ಬಿತ್ತನೆ ಬೀಜವನ್ನು ಕೃಷಿ ಇಲಾಖೆ ವಿತರಿಸಿದೆ. 1.7 ಲಕ್ಷ ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ. ಈ ವರ್ಷಕ್ಕೆ 24.50 ಲಕ್ಷ ಟನ್ ರಸಗೊಬ್ಬರ ಬೇಕಿದ್ದು 7.83 ಲಕ್ಷ ಟನ್ ಗೊಬ್ಬರ ಸಿದ್ಧವಿದೆ. ಇದರಲ್ಲಿ ಈಗಾಗಲೇ 1.5 ಲಕ್ಷ ಟನ್ ಗೊಬ್ಬರ ಮಾರಾಟವಾಗಿದೆ. ಕೇಂದ್ರ ಸರ್ಕಾರ ಏಪ್ರಿಲ್ ಮತ್ತು ಮೇ ತಿಂಗಳ ಕೋಟಾದಲ್ಲಿ 4.31 ಲಕ್ಷ ಟನ್ ಗೊಬ್ಬರ ಪೂರೈಸಿದೆ. ಸೊಸೈಟಿಗಳು, ಮಾರಾಟ ಮಳಿಗೆಗಳು ಹಾಗೂ ಖಾಸಗಿ ಮಾರಾಟಗಾರರಲ್ಲಿ 3.52 ಲಕ್ಷ ಟನ್ ಗೊಬ್ಬರ ದಾಸ್ತಾನಿದೆ.
ಕಳೆದ ಬಾರಿಗಿಂತ ಹೆಚ್ಚು ಪ್ರಮಾಣದಲ್ಲಿ ಬಿತ್ತನೆ ನಡೆಯುತ್ತಿದ್ದು, ಇದು ಸದ್ಯಕ್ಕೆ ಉತ್ತಮ ನಿರೀಕ್ಷೆ ಮೂಡಿಸಿದೆ. ಇದಕ್ಕೆ ಪೂರಕವಾಗಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಸಿದ್ಧತೆ ಮಾಡಲಾಗಿದ್ದು ಯಾವುದೇ ತೊಂದರೆ ಆಗದಂತೆ ಎಚ್ಚರ ವಹಿಸಲಾಗಿದೆ.
-ಸಿದ್ದರಾಜು, ಕೃಷಿ ಇಲಾಖೆ ಜಂಟಿ ನಿರ್ದೇಶಕ
ಶಿವಕುಮಾರ್ ಬೆಳ್ಳಿತಟ್ಟೆ