ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಹಣವಿಲ್ಲದೆ ವಣ ಯೋಜನೆ

ರಾಜ್ಯ ಸರ್ಕಾರದ ಬಹು ನೀರಿಕ್ಷಿತ 'ಮಗುವಿಗೊಂದು ಮರ, ಶಾಲೆಗೊಂದು ವನ' ಯೋಜನೆ ಹಣವಿಲ್ಲದೆ ಒಣಗುತ್ತಿದೆ..

Rashmi Kasaragodu
Updated On : 9 Jun 2014, 1:01 am

ಬೆಂಗಳೂರು: ರಾಜ್ಯ ಸರ್ಕಾರದ ಬಹು ನೀರಿಕ್ಷಿತ 'ಮಗುವಿಗೊಂದು ಮರ, ಶಾಲೆಗೊಂದು ವನ' ಯೋಜನೆ ಹಣವಿಲ್ಲದೆ ಒಣಗುತ್ತಿದೆ.
ಮಕ್ಕಳಿಗೆ ಬಾಲ್ಯದಿಂದಲೇ ಪರಿಸರ ಕಾಳಜಿ ಮೂಡಿಸಲು ರಾಜ್ಯ ಸರ್ಕಾರ ಮಗುವಿಗೊಂದು ಮರ, ಶಾಲೆಗೊಂದು ವನ ಎಂಬ ಯೋಜನೆ ರೂಪಿಸಲಾಗಿತ್ತು. ಸರ್ಕಾರ ಯೋಜನೆ ಆರಂಭದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಅನುದಾನ ನೀಡಿ ಪ್ರೋತ್ಸಾಹಿಸಿತ್ತು. ನಂತರದ ಇದ್ದಕ್ಕಿದ್ದಂತೆ ಯೋಜನೆ ಕೈಬಿಟ್ಟಿತ್ತು.
ಬಳಿಕ ಪರಿಸರವಾದಿಗಳಿಂದ ಒತ್ತಡ ಬಂದಿದ್ದರಿಂದ ಮತ್ತೆ ಚಾಲನೆ ನೀಡಿ ಒಂದಷ್ಟು ಬಿಡಿಗಾಸು ನೀಡಿತ್ತು. ಆದರೆ ಅತ್ಯಲ್ಪ ಹಣದಲ್ಲಿ ಏನೂ ಸಾಧಿಸಲಾಗದೆ ಇಲಾಖೆ ಪರದಾಡುತ್ತಿದೆ. ಹೀಗಾಗಿ ಮಕ್ಕಳೇ ಮುನ್ನಡೆಸುವ ಈ ಯೋಜನೆ ಕಾಸಿಲ್ಲದೆ ಕಮರಿ ಹೋಗುತ್ತಿದೆ.
2010ರಲ್ಲಿ ಅರಣ್ಯ ಇಲಾಖೆ ಅಭಿವೃದ್ಧಿ ವಿಭಾಗದಲ್ಲಿದ್ದ ಜಿ.ವಿ.ಸೂಗೂರ್ ಪರಿಸರ ಸಂರಕ್ಷಣೆಗೆ ಮಕ್ಕಳನ್ನು ಬಳಸಿಕೊಳ್ಳುವ ಉಪಾಯ ಹುಡುಕಿದರು. ಅಂದರೆ ಮಕ್ಕಳಿಗೆ ಸಸಿಗಳನ್ನು ನೀಡಿ ಅವರು ಮನೆ ಅಥವಾ ಶಾಲೆಗಳಲ್ಲಿ ನಾಟಿ ಮಾಡುವಂತೆ ಉತ್ತೇಜಿಸಲು ಚಿಂತಿಸಿದರು. ಇದನ್ನು ಮೆಚ್ಚಿಕೊಂಡು ಅಂದಿನ ಅರಣ್ಯ ಸಚಿವ ಸಿ.ಎಚ್.ವಿಜಯಶಂಕರ್, ಮಗುವಿಗೊಂದು ಮರ, ಶಾಲೆಗೊಂದು ವನ ಎಂಬ ಹೆಸರಿನಲ್ಲಿ ಯೋಜನೆಯನ್ನು ಅನುಮೋದಿಸಿದರು. ನಂತರ 2011ರಲ್ಲಿ ಈ ಯೋಜನೆಗೆ ಚಾಲನೆ ನೀಡಲಾಯಿತು. ಮೊದಲಿಗೆ ಯೋಜನೆಗೆಂದೇ ಸರ್ಕಾರ 1ಕೋಟಿ ಅನುದಾನ ನೀಡಿತ್ತು.
ಆರಂಭಿಕ ಶೂರತ್ವ ಸೀಮಿತ: ಅಂದಿನ ಸಚಿವರು ಮತ್ತು ಇಲಾಖೆ ಅಭಿವೃದ್ಧಿ ವಿಭಾಗದಲ್ಲಿದ್ದ ಸೂಗೂರ್ ಸೇರಿದಂತೆ ಹಿರಿಯ ಅಧಿಕಾರಿಗಳು ಅನೇಕ ಶಾಲೆಗಳಿಗೆ .ಭೇಟಿ ನೀಡಿ ಯೋಜನೆ ಮಹತ್ವ ವಿವರಿಸಿದರು. ರಾಜ್ಯದ ಅನೇಕ ಕಡೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದರು. ಆ ವರ್ಷ ಪೂರ್ತಿ ಇಲಾಖೆ 3ಲಕ್ಷಕ್ಕೂ ಅಧಿಕ ಸಸಿಗಳನ್ನು ನರ್ಸರಿಗಳಲ್ಲಿ ಬೆಳೆಸಿ, ನಂತರ ಶಾಲೆಗಳಿಗೆ ನೀಡಿತು. 376 ಶಾಲೆಗಳ 44,888 ಮಕ್ಕಳು ಹೊಂಗೆ, ಬೇವು, ಅರಳಿ, ಅತ್ತಿ, ನೆರಳೆ ಮತ್ತು ನೆಲ್ಲಿಕಾಯಿ ಸೇರಿದಂತೆ ಅನೇಕ ಮರಗಳನ್ನು ಪಡೆದರು.
ಅದಕ್ಕೂ ಮುನ್ನ ಮಕ್ಕಳು ಸ್ಥಳೀಯ ಅರಣ್ಯಾಧಿಕಾರಿ ಮುಂದೆ ಪರಿಸರ ಪ್ರತಿಜ್ಞೆ ವಿಧಿ ಸ್ವೀಕಾರ ಮಾಡಿ ಸಸಿಗಳನ್ನು ಪಡೆದರು. ಅವುಗಳನ್ನು ಶಾಲೆಗಳು ಮತ್ತು ತಮ್ಮ ಮನೆಗಳ ಸುತ್ತಮುತ್ತ ನಾಟಿಯನ್ನೂ ಮಾಡಿದ್ದರು. ಇದಾದ ನಂತರದ ವರ್ಷದಲ್ಲಿ ಯೋಜನೆ ಜನಪ್ರಿಯವಾಗಿ ಸಸಿಗಳಿಗೆ ಬೇಡಿಕೆ ಬಂದಿತ್ತು. ಆದರೆ, ಸರ್ಕಾರ 2012ರಲ್ಲಿ ಈ ಯೋಜನೆಯನ್ನೇ ಕೈಬಿಟ್ಟಿತು. ಇದರಿಂದ ಶಾಲೆಗಳಿಗೆ ಹೊಸ ಸಸಿಗಳೂ ಬರಲಿಲ್ಲ. ಇದ್ದ ಸಸಿಗಳ ಪೋಷಣೆಯೂ ಇಲ್ಲದಂತಾಗಿತ್ತು.
ಯೋಜನೆ ಸ್ಥಗಿತವಾಗಿದ್ದ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿದ್ದರಿಂದ ಸರ್ಕಾರ 2013ಕ್ಕೆ ಕೇವಲ 50ಲಕ್ಷ ನೀಡಿತ್ತು. ಈ ಅಲ್ಪ ಅನುದಾನದಲ್ಲೂ ಇಲಾಖೆ 7.98 ಲಕ್ಷ ಸಸಿಗಳನ್ನು ಬೆಳೆಸಿದೆ. ಆದರೆ, ಅವುಗಳನ್ನು ಶಾಲೆಗಳಿಗೆ ಹಂಚಿಕೆ ಮಾಡಲು ಮತ್ತು ಯೋಜನೆ ಬಗ್ಗೆ ಪ್ರಚಾರ ಮಾಡಲು ಅನುದಾನ ಇಲ್ಲ. ಪರಿಸರ ಮಾಲಿನ್ಯಕ್ಕೆ ಹೆಚ್ಚಾಗಿ ತುತ್ತಾಗುತ್ತಿರುವ ನಗರ ಪ್ರದೇಶಗಳ ಶಾಲೆಗಳಿಗೆ ಈಯೋಜನೆ ಬಗ್ಗೆ ಮಾಹಿತಿಯೂ ಇಲ್ಲ.

ಮಕ್ಕಳ ಮೂಲಕ ಮುಂದಿನ ಪೀಳಿಗೆಗೆ ಪರಿಸರ ರಕ್ಷಿಸುವ ಈ ಯೋಜನೆ ಯಾವ ಕಾರಣಕ್ಕೂ ನಿಲ್ಲುವುದಿಲ್ಲ. ಇನ್ನುಮುಂದೆ ಇದಕ್ಕೆ ಅಗತ್ಯ ಅನುದಾನ ಮತ್ತು ಪ್ರಚಾರ ಒದಗಿಸಿ ಉತ್ತೇಜಿಸಲಾಗುವುದು.
-ಜಿ.ವಿ.ಸೂಗೂರ್,
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ

ಶಿವಕುಮಾರ್ ಬೆಳ್ಳಿತಟ್ಟೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement