ಮಂಗಳೂರು ಜೈಲ್ನಲ್ಲಿ ಸಿಬ್ಬಂದಿಗೇ ರ್ಯಾಗಿಂಗ್!
ದಕ್ಷಿಣ ಕನ್ನಡ ಜಿಲ್ಲೆಯ ಜೈಲ್ನೊಳಗೆ ಸಿಬ್ಬಂದಿಗೇ ರ್ಯಾಗಿಂಗ್! ಇಲ್ಲಿನ ಜೈಲು ಪೊಲೀಸರ ...
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಜೈಲ್ನೊಳಗೆ ಸಿಬ್ಬಂದಿಗೇ ರ್ಯಾಗಿಂಗ್!
ಇಲ್ಲಿನ ಜೈಲು ಪೊಲೀಸರ ನಿಯಂತ್ರಣದಲ್ಲಿಲ್ಲ, ಇಲ್ಲೇನಿದ್ದರೂ ಡಾನ್ಗಳದ್ದೇ ಆಟ! ಹೀಗಾಗಿ ಬ್ಯಾರಕ್ನಿಂದ ಕೈದಿಗಳನ್ನು ಹೊರ ತರಲೇ ಜೈಲು ಸಿಬ್ಬಂದಿ ಬೆದರುತ್ತಾರೆ. 200 ಮಂದಿ ಕೈದಿಗಳು ಇರಬೇಕಿರುವ ಜೈಲ್ನಲ್ಲಿ 330 ಮಂದಿ ಕೈದಿಗಳಿದ್ದಾರೆ. ಆದರೆ, ಜೈಲಿನೊಳಗೆ ಸೆಲ್ಗಳನ್ನೇ ನಿರ್ಮಿಸಿಲ್ಲ, ಸಿಬ್ಬಂದಿ ಕೊರತೆಯೂ ಇದೆ. ಇದು ಜೈಲಿನೊಳಗೆ ಕೈದಿಗಳ ಆಟಾಟೋಪ ಮಿತಿ ಮೀರಲು ಕಾರಣವಾಗಿದೆ. ಬ್ಯಾರಕ್ಗಳಲ್ಲಿ 30, 40 ಕೈದಿಗಳು ಇರಿಸಲಾಗಿದೆ. ಕೈದಿಗಳನ್ನು ಬ್ಯಾರಕ್ ಬೀಗ ತೆಗೆದು ಹೊರಗೆ ತರುವ ವೇಳೆ ಪ್ರತಿ ಬಾರಿಯೂ ಪಾತಕಿ ಕೈದಿಗಳು ಅವಾಚ್ಯವಾಗಿ ನಿಂದಿಸುವುದು, ತಟ್ಟೆ ಎಸೆಯುವುದು ಮಾಡುತ್ತಾರೆ. 'ಜೈಲ್ನಲ್ಲಿ ಶೇ.30 ಕಾಮಗಾರಿ ಮಾಡಿ ಜೈಲ್ ಉದ್ಘಾಟಿಸಲಾಗಿದೆ.
ಒಳಗೆ ಸೆಲ್ಗಳನ್ನೇ ನಿರ್ಮಿಸಿಲ್ಲ. ಖತರ್ನಾಕ್ ಕೈದಿಗಳು 30, 40 ಮಂದಿ ಒಟ್ಟಿಗೆ ಇರುವಾಗ ಸಂಘಟಿತರಾಗಿ ಇಂಥ ಕೃತ್ಯಕ್ಕೆ ಇಳಿಯುತ್ತಾರೆ. ಸಿಬ್ಬಂದಿ ಕೊರತೆ ಇದೆ. ಕೆಲವೊಮ್ಮೆ ಬೀಗ ಹಾಕಲು, ತೆಗೆಯಲು ಒಬ್ಬೊಬ್ಬ ಸಿಬ್ಬಂದಿ ಹೋಗಬೇಕಾಗುತ್ತದೆ. ಆಗ ಜೀವ ಕೈಯಲ್ಲಿ ಇಟ್ಟುಕೊಂಡು ಹೋಗಬೇಕು. ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು' ಎಂದು ಜೈಲು ಅಧೀಕ್ಷಕ ರಮೇಶ್ ಹೇಳುತ್ತಾರೆ.
ಹಿಂದೂ-ಮುಸ್ಲಿಂ ವಿಭಜನೆ: ಈ ಜೈಲಿನ ಇನ್ನೊಂದು ವಿಶೇಷ ಹಿಂದೂ- ಮುಸ್ಲಿಂ ಎನ್ನುವ ವಿಭಜನೆ. 'ಎ' ವಿಭಾಗದಲ್ಲಿ ಮುಸ್ಲಿಂ ಮತ್ತು ಬಿ ವಿಭಾಗದಲ್ಲಿ ಹಿಂದೂ ಕೈದಿಗಳು.
'ಎ' ವಾರ್ಡ್ನಲ್ಲಿ 130 ಕೈದಿಗಳಿದ್ದು, ನಮಾಜ್ ಜೋರಾಗಿ ನಡೆಯುತ್ತದೆ. ಗದ್ದಲ ಗಲಾಟೆ ಆಗುವುದು ಇಲ್ಲಿಯೇ. ಭಾನುವಾರ ಪೊಲೀಸರಿಗೆ ಹಲ್ಲೆ ನಡೆದದ್ದು ಇದೇ ವಿಭಾಗದಲ್ಲಿ. 'ಬಿ' ವಿಭಾಗದಲ್ಲಿ ಪಾತಕಿ ವಿಕ್ಕಿ ಶೆಟ್ಟಿ ಸಹಚರರು, ರವಿ ಪೂಜಾರಿ ಸಹಚರರು, ಕೊರಗ ವಿಶ್ವನಾಥ ಶೆಟ್ಟಿ ಸಹಚರರು ಇತ್ಯಾದಿ ಪ್ರಮುಖ ಮೂರು ಬಣಗಳಿವೆ. ಸಂಜೆಯಾಗುತ್ತಿದ್ದಂತೆ ಎಲ್ಲರೂ ಒಟ್ಟು ಸೇರಿ ಭಜನೆ ಮಾಡುತ್ತಾರೆ, ಇದು ಹೊರ ಭಾಗಕ್ಕೂ ಸ್ಪಷ್ಟವಾಗಿ ಕೇಳುತ್ತದೆ.
ಹಾಗೆ ನೋಡಿದರೆ ಜೈಲ್ನಲ್ಲಿ ವಿಭಜನೆಗೆ ಬಲ ಬಂದಿದ್ದು, ಪಾತಕಿ ರಶೀದ್ ಮಲಬಾರಿ ಆಗಮನದ ಬಳಿಕ. ಆತ ಹೋದರೂ ಆತನ ಶಿಷ್ಯ ಫೈಸಲ್ ಈ ಚಾಳಿ ಮುಂದುವರಿಸಿದ್ದಾನೆ. ಇವರು ರಾತ್ರಿ 2-3 ಗಂಟೆ ವರೆಗೂ ಬೊಬ್ಬೆ ಹೊಡೆಯುತ್ತಿದ್ದರೆ, ಹಗಲಿಡೀ ಗಾಂಜಾ ನಶೆಯಲ್ಲಿರುತ್ತಾರೆ. ಮಕ್ಕಳನ್ನು ಮುದ್ದಿಸುವ ನೆಪದಲ್ಲಿ, ಕೋರ್ಟ್ಗೆ ಹೋದಾಗ ಮಾದಕವಸ್ತುಗಳನ್ನು ಪಡೆದುಕೊಳ್ಳುತ್ತಾರೆ.
ಬಿಜಾಪುರದಲ್ಲೂ ಕೆಲಸ ಮಾಡಿದ್ದೆ. ಅಲ್ಲಿ ಹಿಂದೂ, ಮುಸ್ಲಿಂ ಕೈದಿಗಳು ಒಟ್ಟಿಗೆ ಇರುತ್ತಾರೆ. ನಾನೆಲ್ಲೂ ಇಂಥ ವಿಭಜನೆ ನೋಡಿಲ್ಲ. ಇಲ್ಲಿ ಕಟ್ಟರ್ ವಾದಿಗಳು ಇರುವುದರಿಂದ ಜೀವ ರಕ್ಷಣೆಗೆ ಈ ರೀತಿ ಮಾಡುವ ಅನಿವಾರ್ಯ ಪರಿಸ್ಥಿತಿ ಬಂದಿದೆ ಎನ್ನುತ್ತಾರೆ ಜೈಲು ಅಧೀಕ್ಷಕರು.
ಆರೋಪ, ವರ್ಗಾವಣೆ ಪತ್ರ: ಜೈಲ್ ಸಿಬ್ಬಂದಿ ಲಂಚ ಪಡೆಯುತ್ತಾರೆ, ಕೈದಿಗಳನ್ನು ಬ್ಯಾರಕ್ ಒಳಗೆ ಹಾಕುವಾಗ ಪೊಲೀಸರನ್ನು ಕರೆತಂದು ಹಿಂಸಿಸುತ್ತಾರೆ ಎಂದು ಕೈದಿ ಫೈಸಲ್ ಪತ್ರಿಕೆಗಳಿಗೆ ಪತ್ರ ಕೂಡಾ ಬರೆದಿದ್ದ. ವಿಚಾರಣೆ ಭೀತಿಯಲ್ಲಿ ಸಿಬ್ಬಂದಿ ಕೈದಿಗಳ ಜತೆ ತಕರಾರು ಮಾಡಲು ಹೋಗುವುದಿಲ್ಲ. ಕಿರುಕುಳದಿಂದ ಬೇಸತ್ತು ಇಲ್ಲಿನ ಸಿಬ್ಬಂದಿಯಲ್ಲಿ ಬಹುತೇಕ ಮಂದಿ ವರ್ಗಾವಣೆ ಕೋರಿ ಮೇಲಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
-ಜಿತೇಂದ್ರ ಕುಂದೇಶ್ವರ