ಸಿದ್ದರಾಮಯ್ಯ ಕೈ ಮೇಲಾಗಿಸಿದ ಅಹಿಂದ ಮಂತ್ರ
ರಾಜ್ಯಸಭೆ, ವಿಧಾನ ಪರಿಷತ್ ಚುನಾವಣೆ ಮತ್ತು ನಾಮನಿರ್ದೇಶನದಲ್ಲಿ ಮೂಲ ಕಾಂಗ್ರೆಸಿಗರನ್ನು ...
ಕನ್ನಡಪ್ರಭ ವಾರ್ತೆ: ರಾಜ್ಯಸಭೆ, ವಿಧಾನ ಪರಿಷತ್ ಚುನಾವಣೆ ಮತ್ತು ನಾಮನಿರ್ದೇಶನದಲ್ಲಿ ಮೂಲ ಕಾಂಗ್ರೆಸಿಗರನ್ನು ಕಬ್ಬಿನ ಜಲ್ಲೆಯಂತೆ ಅರೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ 'ಅಹಿಂದ' ಮಂತ್ರವನ್ನು ಯಥೇಚ್ಛ ಪಠಿಸಿದ್ದಾರೆ.
ಈ ತಂತ್ರ ಸದ್ಯಕ್ಕೆ ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯನವರ ಕೈ ಮೇಲಾಗಿಸಿದೆ. ಆದರೆ ಕುಪಿತಗೊಂಡ ಮೂಲನಿವಾಸಿಗಳು ಭವಿಷ್ಯದಲ್ಲಿ ಸರಣಿ ಅಪಘಾತಗಳನ್ನು ಸೃಷ್ಟಿಸುವ ಅವಕಾಶವನ್ನು ಅಷ್ಟೇ ಮುಕ್ತವಾಗಿರಿಸಿದ್ದಾರೆ.
ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ಗೆ ಮತ್ತು ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಪೈಕಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಒಬ್ಬರನ್ನು ಹೊರತುಪಡಿಸಿದರೆ ಉಳಿದವರೆಲ್ಲರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಯ್ಕೆ. ಪ್ರೊ.ರಾಜೀವ ಗೌಡರನ್ನು ಬಿಟ್ಟರೆ ಉಳಿದವರೆಲ್ಲರೂ ಅಹಿಂದ ವೃಂದ. ಇದು ಕಾಂಗ್ರೆಸ್ನಲ್ಲಿ ಮೇಲುವರ್ಗದ ರಾಜಕೀಯ ಯಜಮಾನಿಕೆಯ ಅಂತ್ಯವೂ ಹೌದು!
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ನಿರೀಕ್ಷಿತ ಸ್ಥಾನಗಳಲ್ಲಿ ಗೆಲವು ಸಾಧಿಸಿರಲಿಲ್ಲ. ಆದರೆ ಆ ಸೋಲನ್ನೂ ತಮಗೆ ಅನುಕೂಲವಾಗುವ ರೀತಿಯಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಮುಂದೆ ವ್ಯಾಖ್ಯಾನಿಸಿದ ಸಿದ್ದರಾಮಯ್ಯ ಅವರ ಬಣ ಈಗ ಮತ್ತೆ ಮೇಲುಗೈ ಸಾಧಿಸಿದೆ.
ಈ ಪ್ರಕ್ರಿಯೆಯಲ್ಲಿ ಒಕ್ಕಲಿಗ, ಲಿಂಗಾಯಿತ ವರ್ಗದ ಮುಖಂಡರನ್ನು ಜಾಣ್ಮೆಯಿಂದ ಸದೆಬಡಿದಿದ್ದಾರೆ. ಸದ್ಯಕ್ಕೆ ಸರ್ಕಾರದ ಮುಂದೆ ಯಾವುದೇ ಚುನಾವಣೆಗಳ ಒತ್ತಡವಿಲ್ಲ ಎಂಬ ಕಾರಣಕ್ಕೆ ಈ ಹೆಜ್ಜೆ ಇಡಲಾಗಿದೆಯಾದರೂ, ಭವಿಷ್ಯದಲ್ಲಿ ಲಿಂಗಾಯಿತ ಮತವನ್ನು ಶಾಶ್ವತವಾಗಿ ಬಿಜೆಪಿಯತ್ತ ತಳ್ಳುವ ಅಪಾಯವನ್ನೂ ಕಡೆಗಣಿಸುವಂತಿಲ್ಲ.
ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಯಲ್ಲಿ ಸಿದ್ದರಾಮಯ್ಯನವರು ನಿರೀಕ್ಷೆಯಂತೆ ಅಹಿಂದ ವರ್ಗಕ್ಕೆ ಅದರಲ್ಲೂ ವಿಶೇಷವಾಗಿ ಹಿಂದುಳಿದವರಿಗೆ ಎಲ್ಲ ಆದ್ಯತೆಗಳನ್ನು ನೀಡಿದ್ದಾರೆ. ರಾಜ್ಯಸಭೆಗೆ ಸ್ಪರ್ಧಿಸಿರುವ ಬಿ.ಕೆ.ಹರಿಪ್ರಸಾದ್ ಈಡಿಗ ಸಮುದಾಯಕ್ಕೆ ಸೇರಿದ್ದರೆ, ವಿಧಾನ ಪರಿಷತ್ ಹುರಿಯಾಳುಗಳಾದ ಎಚ್.ಎಂ.ರೇವಣ್ಣ ಕುರುಬ ಸಮುದಾಯಕ್ಕೆ ಸೇರಿದವರು. ಜಯಮ್ಮ ಮತ್ತು ಬೋಸ್ರಾಜ್ ಅವರೂ ಹಿಂದಿಳಿದ ಸಮುದಾಯದವರು. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಬೇರೆ ಲೆಕ್ಕಾಚಾರದಲ್ಲಿ ಸ್ಥಾನ ಪಡೆದರೂ ಅವರು ಸಿದ್ದರಾಮಯ್ಯನವರು ಪ್ರತಿಪಾದಿಸುವ ಅಹಿಂದ ರಾಜಕಾರಣದ ಭಾಗವಾದ ದಲಿತ ಸಮುದಾಯದ ಪ್ರತಿನಿಧಿ. ರಾಜೀವ್ ಗೌಡರನ್ನು ಹೊರತುಪಡಿಸಿದರೆ ಈ ಚುನಾವಣೆಯಲ್ಲಿ ಮೇಲುವರ್ಗದ ಪ್ರತಿನಿಧಿಗಳೇ ಇಲ್ಲ.
ನಾಮನಿರ್ದೇಶನ ಪ್ರಕ್ರಿಯೆಯಲ್ಲೂ ಅಹಿಂದ: ಇದು ನಾಮನಿರ್ದೇಶನ ಪ್ರಕ್ರಿಯೆಯಲ್ಲೂ ಮುಂದುವರಿಯಲಿದ್ದು, ಅಂತಿಮಗೊಂಡ ಪಟ್ಟಿಯಲ್ಲೂ ಅತ್ಯಂತ ಜಾಣ್ಮೆಯಿಂದ ಅಹಿಂದ ಅಭ್ಯರ್ಥಿಗಳನ್ನು ತೂರಿಸಲಾಗಿದೆ. ವಿ.ಎಸ್.ಉಗ್ರಪ್ಪ, ಐವಾನ್ ಡಿಸೋಜಾ, ಮಹ್ಮದ್ ಜಬ್ಬಾರ್, ಚಿತ್ರನಟಿ ಜಯಮಾಲಾ ಅವರು ಈ ಕೋಟಾದಲ್ಲೇ ಇದ್ದಾರೆ.
ಕಾಂಗ್ರೆಸ್ ಮೂಲಗಳ ಪ್ರಕಾರ, ಮೇಲ್ಮನೆ ಚುನಾವಣೆ ಕಾಂಗ್ರೆಸ್ನ ಬಣ ರಾಜಕಾರಣವನ್ನು ಈಗ ಬೆತ್ತಲುಗೊಳಿಸಿದೆ. ಮೂಲ ಕಾಂಗ್ರೆಸಿಗರ ಅದರಲ್ಲೂ ವಿಶೇಷವಾಗಿ ಒಕ್ಕಲಿಗ ಮುಖಂಡರನ್ನು ಹತ್ತಿಕ್ಕಲಾಗಿದೆ. ಈ ದಾಳ ಉರುಳಿಸುವಾಗ ಸಿದ್ದರಾಮಯ್ಯನವರು ಕಾಂಗ್ರೆಸ್ ಒಕ್ಕಲಿಗ ಮುಖಂಡರಲ್ಲೇ ಒಡಕು ತಂದಿಟ್ಟಿದ್ದಾರೆ.
ಭವಿಷ್ಯದಲ್ಲಿ ಪರಮೇಶ್ವರ ತಮಗೆ ಮಗ್ಗುಲ ಮುಳ್ಳು ಎಂಬುದು ಸಿದ್ದರಾಮಯ್ಯನವರಿಗೆ ಖಚಿತವಾಗಿದೆ. ಈ ಕಾರಣಕ್ಕಾಗಿ ಅವರು ರಾಜಕೀಯದಲ್ಲಿ ಪರಮೇಶ್ವರ ಅವರ ತಾಯಿಬೇರು ಎಂದೇ ಪರಿಗಣಿಸುವ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ಟಿಕೆಟ್ ತಪ್ಪಿಸಿದ್ದಾರೆ. ಇದಕ್ಕೆ ಹೈಕಮಾಂಡ್ ಮಟ್ಟದಲ್ಲಿ ಪ್ರಬಲವಾಗಿರುವ ಕೃಷ್ಣ ವಿರೋಧಿಗಳ ಬಲವೂ ದೊರಕಿದೆ. ಅಷ್ಟು ಮಾತ್ರವಲ್ಲ ಕೃಷ್ಣಗೆ ಪರ್ಯಾಯ ಹೆಸರುಗಳನ್ನು ಒಕ್ಕಲಿಗ ಮುಖಂಡರ ಮೂಲಕವೇ ತೇಲಿ ಬಿಡುವಂತೆ ವ್ಯವಸ್ಥೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ಸಿದ್ದರಾಮಯ್ಯ ಸೇರಿದಂತೆ ಜನತಾ ಪರಿವಾರದ ಅನೇಕರನ್ನು ಪಕ್ಷಕ್ಕೆ ತರುವಲ್ಲಿ ಕೃಷ್ಣ ಪಾತ್ರ ಮಹತ್ವದ್ದಾಗಿತ್ತು. ಆದರೆ ಅವರು ನೇಪಥ್ಯಕ್ಕೆ ಸರಿಯುವ ವ್ಯವಸ್ಥೆ ನಿರ್ಮಾಣವಾಗಿದ್ದರ ಹಿಂದೆಯೂ ಇದೇ ಮಾಜಿ ಜನತಾ ಪರಿವಾರ ಹೆಚ್ಚಿನ ಕೆಲಸ ಮಾಡಿದೆ. ಒಕ್ಕಲಿಗ ಕೋಟಾ ಭರ್ತಿಯಾಗಬೇಕು, ರಾಜಕೀಯ ಉದ್ದೇಶವೂ ಇತ್ಯರ್ಥವಾಗಬೇಕೆಂಬ ಸಿದ್ದರಾಮಯ್ಯನವರ ತಂತ್ರ ಫಲ ನೀಡಿದೆ.
ಪಕ್ಷದ ಮೇಲೆ ಹಿಡಿತ: ಈ ಪ್ರಕ್ರಿಯೆಯಲ್ಲಿ ಯಶ ಸಾಧಿಸಿರುವ ಸಿಎಂ ಸಿದ್ದರಾಮಯ್ಯ ಬಣದ ಕಣ್ಣು ಈಗ ಪ್ರದೇಶ ಕಾಂಗ್ರೆಸ್ ಮೇಲೆ ಬಿದ್ದಿದೆ ಎನ್ನಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೆಪಿಸಿಸಿ ಪಟ್ಟದಿಂದ ಪರಮೇಶ್ವರ ಅವರನ್ನು ಪಲ್ಲಟಗೊಳಿಸಿ ಅಲ್ಲಿ ತಮ್ಮ ದಾಳವನ್ನು ಪ್ರತಿಷ್ಠಾಪಿಸುವ ಗುರಿ ಸಿದ್ದರಾಮಯ್ಯನವರದು.
ಪಕ್ಷ ಸಂಘಟನೆ ದೃಷ್ಟಿಯಿಂದ ಲಿಂಗಾಯಿತ ಅಥವಾ ಒಕ್ಕಲಿಗ ಸಮುದಾಯದವರು ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾದರೆ ಚೆನ್ನ ಎಂಬ ವಾದವನ್ನು ಸಿದ್ದರಾಮಯ್ಯ ಅವರ ಬಣ ಈಗಾಗಲೇ ರಾಹುಲ್ ಗಾಂಧಿ ಅವರ ಮುಂದಿಟ್ಟಿದೆ.
ಯಂಗ್ ಟರ್ಕ್ಗಳಿಗೆ ಅವಕಾಶ ನೀಡಬೇಕೆಂಬ ರಾಹುಲ್ ಆಶಯವನ್ನೇ ನೆಪಮಾಡಿಕೊಂಡು ಕೃಷಿ ಸಚಿವ ಕೃಷ್ಣಭೈರೇಗೌಡರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಪಟ್ಟಕಟ್ಟುವ ಪ್ರಯತ್ನ ನಡೆಯುತ್ತಿದೆ. ಈ ಪ್ರಯತ್ನದಲ್ಲಿ ಗೆದ್ದರೆ ಇನ್ನು ನಾಲ್ಕು ವರ್ಷದ ಮಟ್ಟಿಗೆ ಸಿದ್ದರಾಮಯ್ಯನವರೇ ರಾಜ್ಯದಲ್ಲಿ ಕಾಂಗ್ರೆಸ್ ಅಧಿನಾಯಕ!
ರಾಘವೇಂದ್ರ ಭಟ್