ಇನ್ನೆರಡು ತಿಂಗಳಲ್ಲಿ ಆಸ್ತಿ ವಿವರ ಸಲ್ಲಿಸಲು ಸಚಿವರಿಗೆ ಮೋದಿ ಸೂಚನೆ
ಮನೆ ಗೆದ್ದು ಮಾರು ಗೆಲ್ಲಬೇಕು ಎನ್ನುವುದನ್ನು ಜಾರಿಗೆ...
ನವದೆಹಲಿ: ಮನೆ ಗೆದ್ದು ಮಾರು ಗೆಲ್ಲಬೇಕು ಎನ್ನುವುದನ್ನು ಜಾರಿಗೆ ತರುತ್ತಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ಪಾರದರ್ಶಕತೆಯನ್ನು ತಮ್ಮ ಸಂಪುಟದಿಂದಲೇ ಆರಂಭಿಸುವ ಕ್ರಮವಾಗಿ ಜುಲೈ ಅಂತ್ಯದ ಒಳಗಾಗಿ ಆಸ್ತಿ ವಿವರ ಸಲ್ಲಿಸುವಂತೆ ಸಚಿವರಿಗೆ ಸೂಚಿಸಿದ್ದಾರೆ.
ಗೃಹ ಸಚಿವಾಲಯ ಸಚಿವರ ಮಾದರಿ ಸಂಹಿತೆಯನ್ನು ಪರಿಷ್ಕರಿಸಿ ಆದೇಶ ಹೊರಡಿಸಿದೆ. ಅದರಂತೆ ಕೇಂದ್ರ ಸಚಿವರು ತಮ್ಮ ಆಸ್ತಿ, ಸಾಲ, ಪಾಲುದಾರಿಕೆ ಅಥವಾ ವ್ಯಾಪಾರ ವ್ಯವಹಾರಗಳ ವಿವರವನ್ನು ಪ್ರಧಾನಿಯವರಿಗೆ ಸಲ್ಲಿಸಬೇಕು. ಎಲ್ಲ ಸ್ಥಿರ, ಚರ ಆಸ್ತಿ; ಷೇರು ಮತ್ತು ಸಾಲಪತ್ರ; ತಾವು ಹಾಗೂ ಕುಟುಂಬ ಸದಸ್ಯರು ಹೊಂದಿರುವ ಆಭರಣ; ಸಾಲದ ವಿವರಗಳನ್ನು ಸಲ್ಲಿಸಬೇಕು.
ಅಧಿಕಾರದಲ್ಲಿರುವ ಅವಧಿಯಲ್ಲಿ ಪ್ರತಿವರ್ಷ ಆಗಸ್ಟ್ 31ರ ಒಳಗೆ ಹಿಂದಿನ ಹಣಕಾಸು ವರ್ಷದ ಆಸ್ತಿ ವಿವರ ಸಲ್ಲಿಸುವುದೂ ಕಡ್ಡಾಯ. ಮಾದರಿ ಸಂಹಿತೆ ಎಷ್ಟರಮಟ್ಟಿಗೆ ಪಾಲನೆಯಾಗುತ್ತಿದೆ ಎನ್ನುವ ಕುರಿತು ಖುದ್ದು ಪ್ರಧಾನಿಯವರೇ ನಿಗಾ ವಹಿಸಲಿದ್ದಾರೆ. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕಿಂತ ಮುನ್ನ ಹೊಂದಿರುವ ಎಲ್ಲ ವ್ಯಾವಹಾರಿಕ ಸಂಪರ್ಕಗಳು, ಸಂಸ್ಥೆಯ ಆಡಳಿತ ಅಥವಾ ಮಾಲೀಕತ್ವದಿಂದ ಹಿಂದೆ ಸರಿಯುವಂತೆ; ಹೊಸ ವಹಿವಾಟು, ಸಂಸ್ಥೆ ಆರಂಭಿಸದಂತೆ ಸಚಿವರುಗಳಿಗೆ ಸೂಚಿಸಲಾಗಿದೆ. ಸಚಿವರ ಪತ್ನಿ ಅಥವಾ ಕುಟುಂಬ ಸದಸ್ಯರು ಸರ್ಕಾರಕ್ಕೆ ಯಾವುದೇ ಸೇವೆ, ಸರಕು ಸಲ್ಲಿಸುವ ಸೇವೆಯಲ್ಲಿ ತೊಡಗಿಕೊಳ್ಳದಂತೆ ಹಾಗೂ ಸಚಿವರು ಸರ್ಕಾರದಿಂದ ಸ್ಥಿರಾಸ್ತಿ ಕೊಳ್ಳದಂತೆ, ಮಾರದಂತೆ ನಿರ್ದೇಶನ ನೀಡಲಾಗಿದೆ.
ಅಧಿಕಾರ ಸ್ವೀಕರಿಸುವುದಕ್ಕಿಂತ ಮುಂಚೆಯೇ ಮಾಲೀಕತ್ವ, ಆಡಳಿತದ ಅಧಿಕಾರಿಗಳನ್ನು ಪತಿ/ಪತ್ನಿ, ಕುಟುಂಬದ ಪ್ರಾಪ್ತವಯಸ್ಕ ಸದಸ್ಯ, ಬಂಧು ಅಥವಾ ಸಹವರ್ತಿಗೆ ಹಸ್ತಾಂತರಿಸಿದ್ದರೆ ವ್ಯವಹಾರ ಮುಂದುವರಿಸಿಕೊಂಡು ಹೋಗಲು ಅಡ್ಡಿ ಇಲ್ಲ.
ಮಾದರಿ ಸಂಹಿತೆಯಲ್ಲಿ ಇನ್ನೇನಿದೆ?
- ನೋಂದಾಯಿತ ಚಾರಿಟಿ ಸಂಸ್ಥೆ/ಸಮಾಜ, ಸಾರ್ವಜನಿಕ ಪ್ರಾಧಿಕಾರ ಗುರುತಿಸಿರುವ ಸಂಸ್ಥೆ, ರಾಜಕೀಯ ಪಕ್ಷಗಳನ್ನು ಹೊರತುಪಡಿಸಿ ಬೇರಾವುದೇ ರೀತಿಯಲ್ಲೂ ನಿಧಿ ಸಂಗ್ರಹದಲ್ಲಿ ತೊಡಗಬಾರದು. ಸಂಸ್ಥೆ, ಪಕ್ಷಗಳಿಗಾಗಿ ಸಂಗ್ರಹಿಸಿದ ನಿಧಿ ಅವುಗಳಿಗೆ ಸೇರಬೇಕೇ ವಿನಾ ಸಚಿವರ ವೈಯಕ್ತಿಕಕ್ಕೆ ಅಲ್ಲ.
- ಸಚಿವರು ಮತ್ತು ಕುಟುಂಬ ಸದಸ್ಯರು ಹತ್ತಿರದ ಸಂಬಂಧಿಗಳನ್ನು ಹೊರತುಪಡಿಸಿ ಇತರರಿಂದ ದುಬಾರಿ ಉಡುಗೊರೆಗಳನ್ನು ಸ್ವೀಕರಿಸುವಂತಿಲ್ಲ.
- ಅಧಿಕೃತ ಪ್ರವಾಸದಲ್ಲಿರುವಾಗ ಸರ್ಕಾರಿ ಅತಿಥಿಗೃಹ, ಸರ್ಕಾರಿ ಸಂಸ್ಥೆಗಳು ನಿರ್ವಹಿಸುವ ಹೊಟೇಲ್, ಮಾನ್ಯತೆ ಪಡೆದ ಹೊಟೇಲ್ಗಳಲ್ಲಿಯೇ ವಾಸ್ತವ್ಯ ಹೂಡಬೇಕು. ತಮ್ಮ ಗೌರವಾರ್ಥ ಏರ್ಪಡಿಸುವ ಔತಣಕೂಟಗಳನ್ನು ತಪ್ಪಿಸಿಕೊಳ್ಳುವುದು ಒಳ್ಳೆಯದು.
- ವಿದೇಶ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ರು. 5,000ಕ್ಕಿಂತ ಹೆಚ್ಚಿನ ಮೌಲ್ಯದ ಉಡುಗೊರೆಗಳನ್ನು ಕೋಶಖಾನೆಗೆ ಒಪ್ಪಿಸಬೇಕು ಅಥವಾ ತೋಶಖಾನೆ ನಿಗದಿಪಡಿಸುವ ಮೌಲ್ಯ ನೀಡಿ ಖರೀದಿಸಬಹುದು. ರು. 5,000ಕ್ಕಿಂತ ಕಡಿಮೆ ಮೌಲ್ಯದ ಉಡುಗೊರೆಗಳನ್ನು ಇಟ್ಟುಕೊಳ್ಳಬಹುದು.