ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಇವರು ಮಳ್ಳಂತೆ!

Rashmi Kasaragodu
Updated On : 11 Jun 2014, 1:43 am


'ದೇವರ ಮೂರ್ತಿಗಳು ಕಲ್ಲುಗಳಷ್ಟೇ, ಅವುಗಳ ಮೇಲೆ ಉಚ್ಚೆ ಹೊಯ್ದರೂ ಏನೂ ತೊಂದರೆಯಾಗದೆಂಬುದಕ್ಕೆ ಅನಂತಮೂರ್ತಿ ಅವರ ಅನುಭವವೇ ಸಾಕ್ಷಿ' ಎಂಬ ಜಾಡಿನಲ್ಲಿ ಮಾತನಾಡಿದ್ದ ಎಂ. ಎಂ. ಕಲಬುರ್ಗಿಯವರಿಗೆ ರಾಜ್ಯಾದ್ಯಂತ ಆಕ್ರೋಶ ಮತ್ತು ವ್ಯಂಗ್ಯದ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. 'ಕನ್ನಡಪ್ರಭ' ಈ ಬಗ್ಗೆ ಅಭಿಪ್ರಾಯ ಕೇಳಿದ್ದಕ್ಕೆ ಸ್ಪಂದಿಸಿ ರಾಜ್ಯದ ಮೂಲೆ ಮೂಲೆಗಳಿಂದ ಮಿಂಚಂಚೆ- ದೂರವಾಣಿ ಪ್ರತಿಕ್ರಿಯೆಗಳ ಸುರಿಮಳೆಯಾಗಿದೆ. ಕೆಲವು ಧ್ವನಿಗಳಿಗಷ್ಟೇ ಇಲ್ಲಿ ಅವಕಾಶ ಕಲ್ಪಿಸುವುದಕ್ಕೆ ಸಾಧ್ಯವಾಗಿದೆ. ಒಟ್ಟಾರೆಯಾಗಿ ದೇವರು ಕಲ್ಲಂತೆ ಎಂದವರ ಬಗ್ಗೆ ಜನಾಭಿಪ್ರಾಯದ ಸಾರಸಂಗ್ರಹ....


ವಿವೇಕದ ದೃಷ್ಟಾಂತ
ಒಂದು ದೃಷ್ಟಾಂತ ನೆನಪಾಗುತ್ತಿದೆ. ಸ್ವಾಮಿ ವಿವೇಕಾನಂದರ ಮುಂದೆ ಮೂರ್ತಿ ಪೂಜೆಯ ಬಗ್ಗೆ ರಾಜನೊಬ್ಬ ಕೇವಲವಾಗಿ ಮಾತಾಡಿದ. ಆಗ ಅವರು ರಾಜನನ್ನು ಅವನ ಪೂರ್ವಿಕರ ಭಾವಚಿತ್ರಗಳ ಮುಂದೆ ನಿಲ್ಲಿಸಿ ಅವಕ್ಕೆ ಉಗಿಯಲು ಹೇಳುತ್ತಾರೆ. ಆಗ ತಳಮಳಿಸಿ ಹೋಗುವ ರಾಜ ಆ ಭಾವಚಿತ್ರಗಳನ್ನು ಅಪ್ಪ, ತಾತ, ಮುತ್ತಾತ ಎನ್ನುತ್ತಾನೆ! ಅಯ್ಯೋ... ಅದು ಕ್ಯಾನ್ವಾಸ್ ಮತ್ತು ಬಣ್ಣಗಳಷ್ಟೇ ಎಂದು ವಿವೇಕಾನಂದರು ಹೇಳಿದಾಗ ಅವನಿಗೆ  ಅರಿವು ಮೂಡುತ್ತದೆ. ಇದರ ಸಾರಾಂಶ ಇಷ್ಟೇ: ಒಂದು ಕಲ್ಲನ್ನ, ಮೂರ್ತಿಯನ್ನ ದೇವರು ಮಾಡುವುದು ಜನರ ಶ್ರದ್ಧೆ ಮತ್ತು ಭಕ್ತಿ. ಅಂತಹ ಶ್ರದ್ಧೆ, ಭಕ್ತಿಯನ್ನು ಪರಿವರ್ತಿಸಬೇಕಾಗಿ ಬಂದರೆ ತಣ್ಣನೆಯ, ಸೌಮ್ಯ ಮಾರ್ಗಗಳಿವೆ.  ಹೀಗೆ ಬಹುಸಂಖ್ಯಾತರ ಕೆರಳಿಸುವ, ಉನ್ಮಾದಕಾರಿ ಹೇಳಿಕೆ ಕೊಡುವ ಅಗತ್ಯ ಎಂ.ಎಂ.ಕಲುಬುರ್ಗಿಯವರಿಗೆ ಏನಿತ್ತು? ವಿಕಾರ, ವಿಕೃತ ಹೇಳಿಕೆಗಳನ್ನು ನೆಚ್ಚಿಕೊಳ್ಳುವ ಬದಲು ಸಭ್ಯತೆಯಿಂದ, ಸೌಜನ್ಯದಿಂದ ಮಾತಾನಾಡುವುದು ಈ ಬುದ್ಧಿಜೀವಿಗಳು(?) ಕಲಿತರೆ ಒಳ್ಳೆಯದು. ಮೂಢನಂಬಿಕೆಗಳು ಒಂದೇ ಧರ್ಮಕ್ಕೆ, ದೇಶಕ್ಕೆ, ಪ್ರಾಂತ್ಯಕ್ಕೆ ಸೀಮಿತವಾಗಿಲ್ಲ. ಮೂಢನಂಬಿಕೆ ಹೋಗಲಾಡಿಸುವುದು ಅಷ್ಟು ಸರಳ, ಸುಲಭವಲ್ಲ. ಡಾ. ಅಬ್ರಹಾಂ ಕೊವೂರ್ ತರಹದ ಜನ ಮೂಢನಂಬಿಕೆ ವಿರುದ್ಧ ತಣ್ಣಗೆ, ಸಮಚಿತ್ತದಿಂದ ಕೆಲಸ ಮಾಡಿದ್ದಾರೆ, ಅವರು ನಮಗೆ ಆದರ್ಶವಾಗಲಿ. ಕುವೆಂಪುರವರ ವಿಚಾರಕ್ರಾಂತಿಗೆ ಆಹ್ವಾನ ನಮಗೆ ದಾರಿದೀಪವಾಗಲಿ.
-ವಿದ್ಯಾಶಂಕರ ಹರಪನಹಳ್ಳಿ, ಬೆಂಗಳೂರು
=
ತಲೆ ತಿನ್ನೋದು ಬಿಡಿ
ಇರಲಾರದೆ ಇರುವೆ ಬಿಟ್ಕಂಡ್ರು ಅಂತಾರಲ್ಲ ಹಂಗೆ ಇಂಥ ಮಾತುಗಳನ್ನು ಜನರ ಮುಂದೆ-ತಂದು, ಮಾಧ್ಯಮದ ಮುಂದೆ ಸುರಿದು ಕಳಪೆ ಪ್ರಚಾರಕ್ಕೆ ಮುಂದಾದ್ರೆ ಸಾಮಾನ್ಯರು ಉಗೀತಾರೆ ಅನ್ನೋ ಕಲ್ಪನೆ ಬೇಡ್ವೇ? ನಂಬಿಕೆ ಅವರವರ ಸ್ವತ್ತು ಅದಕ್ಕೆ ಬಲವಂತ ಮಾಡಿ ಹೇರೋದೇನಿದೆ? ನಿಂಗೆ ಬೇಕಾದ್ರೆ ನಂಬು ಇಲ್ಲಾಂದ್ರೆ ತೆಪ್ಪಗಿರು ಅದು ಬಿಟ್ಟು ನಂಬಬೇಡ, ಅದು ಕಲ್ಲು, ದೇವರಲ್ಲ, ಶಕ್ತಿ ಇಲ್ಲ ಅನ್ನೋ ಪ್ರಖಾಂಡವಾದ ಮಾಡಿದಾಕ್ಷಣ ಬುದ್ಧಿಜೀವಿ  ಪಟ್ಟ ಶಾಶ್ವತ ಆಗಲ್ಲ!
ಮಾಡಕ್ಕೆ ನೂರಾರು ಕೆಲಸಗಳಿವೆ ಆಚಾರ-ವಿಚಾರ, ದೇವರು ದಿಂಡ್ರು ಅಂದ್ಕೊಂಡು ಜನರಿಗೆ ತಲೆ ತಿನ್ನೋದು ಬಿಡಲಿ. ಸಾಮಾಜಿಕ ಬದ್ಧತೆ ಇದ್ದರೆ ಕನಿಷ್ಟ ತೆಪ್ಪಗಾದರೂ ಇರಲಿ!
-ಸಂತೆಬೆನ್ನೂರು ಫೈಜ್ನಟ್ರಾಜ್, ಸಂತೆಬೆನ್ನೂರು
=
ಹಿಂದೂ ಧರ್ಮಕ್ಕೆ ಮಾತ್ರ ಟೀಕೆ
ಇಂತಹ ನಾಸ್ತಿಕ ವಾದಿಗಳಿಗೆ ಹಿಂದೂ ಧರ್ಮದ ನಂಬಿಕೆಗಳ ಬಗ್ಗೆ ಮಾತನಾಡಲು ಮಾತ್ರ ಗಂಡಸುತನ. ಉಳಿದ ಧರ್ಮದ ಬಗ್ಗೆ ಮಾತನಾಡಿದರೆ ಹೆಂಡತಿ ಮಕ್ಕಳ ಜೊತೆಗೆ ಊರು ಬಿಡಬೇಕಾಗುತ್ತದೆ ಎಂದು ಇಂತಹ ಅವಕಾಶವಾದಿಗಳಿಗೆ ಗೊತ್ತು. ವಯಸ್ಸಾದಂತೆ ದುಡಿಯೋ ಶಕ್ತಿ ಹೋಗುತ್ತೆ, ಒಂದು ಪಕ್ಷದ ಪರವಾಗಿ, ಪಕ್ಷದಲ್ಲಿರೋ ವ್ಯಕ್ತಿಗಳ ಪರವಾಗಿ ಬಹುಪರಾಕ್ ಹಾಕಿಕೊಂಡು ಬಿಟ್ಟಿ ತಿನ್ನೋದು ಹೇಗೆ ಎಂದು ಇಂತಹ ಬುದ್ಧಿ ಜೀವಿಗಳಿಗೆ ಗೊತ್ತು.
-ವೆಂಕಟೇಶ್ ಶೆಟ್ಟಿಗರ್
=
ಹುಚ್ಚೂರಾಯ!
ಕಲಬುರ್ಗಿಯವರ ಹೇಳಿಕೆಯನ್ನು ನೋಡಿದಾಗ, ಅವರನ್ನು ಪ್ರೋಫೆಸರ್ ಎಂದು ಕರೆಯುವುದು ಹುಚ್ಚುತನವಾಗಿದ್ದು, ಇಂತಹ ಹೇಳಿಕೆಯನ್ನು ನೀಡಿ ತಾವೊಬ್ಬ 'ಪ್ರೊಫೆಸರ್ ಹುಚ್ಚುರಾಯ' ಎಂಬುವುದನ್ನು ಕನ್ನಡ ನಾಡಿಗೆ ಬಹಿರಂಗಪಡಿಸಿದ್ದಾರೆ.
-ಶ್ರೀಧರ.ಸೋ, ಸಾಲಿಮಠ
=
ಕೋಟ್ ಅಗತ್ಯವೇನಿತ್ತು?
ಸಾಹಿತಿಗಳು  ಜನರ ಭಾವನೆಯೊಂದಿಗೆ ಚೆಲ್ಲಾಟವಾಡುವುದನ್ನು ನಿಲ್ಲಿಸಬೇಕು. ನಾವು ಏನು ಹೇಳಿದರೂ ಯಾರೂ ಏನೂ ಮಾಡಲಾರರು ಎಂದು ಅವರು ತಿಳಿದಿದ್ದರೆ ಅದು ತಪ್ಪು. ಅವರವರ ನಂಬಿಕೆಗಳು ಭಾವನೆಗಳು ಅವರವರದು. ಅದನ್ನು ಹಂಗಿಸಿ, ಕೆರಳಿಸುವುದು ಸರಿಯಲ್ಲ. ಅನಾಥಮೂರ್ತಿಯ  ಮೇಲೆ ಅನಂತಮೂರ್ತಿ  ಮೂತ್ರ ವಿಸರ್ಜನೆ ಮಾಡಿದ್ದನ್ನು ಕಲಬುರ್ಗಿ ಕೋಟ್ ಮಾಡುವ ಅಗತ್ಯವಿರಲಿಲ್ಲ.
-ಕೊ.ಸು.ನರಸಿಂಹ ಮೂರ್ತಿ, ಮೈಸೂರು  
=
ಮಾನಸಿಕ ವೈಕಲ್ಯ
ಕಲಬುರ್ಗಿ ಮತ್ತು ಅನಂತಮೂರ್ತಿಯವರು ಹೇಳಿದಂತೆ ಮೂರ್ತಿಗಳ ಮೇಲೆ ಮೂತ್ರ ಮಾಡುವುದು ತಪ್ಪಲ್ಲ ಎಂದಾದರೆ, ಇವರು ತಮ್ಮ ತಾಯಿ ತಂದೆ ಇತರರ ಭಾವಚಿತ್ರಗಳ ಮೇಲೆ ಮೂತ್ರ ಮಾಡುವುದೂ ತಪ್ಪಲ್ಲ ಎನ್ನುತ್ತಾರೋ ಅಥವಾ ತಮ್ಮ ಅಡುಗೆ ಮನೆಯಲ್ಲಿ ಅಥವಾ ಮಲಗುವ ಕೋಣೆಗಳಲ್ಲಿ ಇವರುಗಳು ಮೂತ್ರ ವಿಸರ್ಜನೆ ಮಾಡುತ್ತಾರೆಯೇ? ಲೈಂಗಿಕ ಕ್ರಿಯೆ ಕೂಡ ಪ್ರಕೃತಿ ಸಹಜವಾದ ಕ್ರಿಯೆ ಅಂತ ಅದನ್ನೂ ರಸ್ತೆಯ ಮಧ್ಯೆ ಮಾಡಬೇಕೇ? ನಾಗರಿಕತೆಯ ಬೆಳವಣಿಗೆಗೆ ಪೂರಕವಾಗಿ, ನಾಗರಿಕತೆಯ ಹಲವು ಹಂತಗಳಲ್ಲಿ ಮಾನವನ ಸ್ವೇಚ್ಛಾಚಾರ ಹಾಗೂ ದುರಾಚಾರಗಳಿಗೆ ಕಡಿವಾಣ ಹಾಕಲು ಅಂದಂದಿನ ಸಮಾಜದ ಮತ್ತು ಅವರುಗಳ ಮಿತಿಯಲ್ಲಿ ಕೆಲವು ಆಚರಣೆ, ನಂಬಿಕೆ ಮತ್ತು ಕೆಲವು ಕಟ್ಟುಪಾಡುಗಳನ್ನು ಮಾಡಿದ್ದರೆ ಅದನ್ನು ಇವರು ಅರ್ಥ ಮಾಡಿಕೊಳ್ಳುತ್ತಿಲ್ಲ. ಇವರುಗಳ ಮಾನಸಿಕ ವಿಕಲತೆಯನ್ನು ಅರಿತು ಇವರನ್ನು ಹಾಗೂ ಇವರುಗಳ ಹೇಳಿಕೆಗಳನ್ನು ಬಹಿಷ್ಕರಿಸಬೇಕು
-ರವಿಶಂಕರ್ ಕೆ.ಎಸ್, ಚಾಮರಾಜನಗರ
=
ದೈವದ ಭಯ ಸರಿಯಲ್ಲ
ಮೂರ್ತಿಗಳ ಮೇಲೆ ಮೂತ್ರ ಮಾಡಿದರೂ ತಪ್ಪಲ್ಲ ಎಂಬುದು ತಪ್ಪು. ಮೂರ್ತಿಗಳ ಮೇಲೆ ಮೂತ್ರ ಮಾಡಿದರೂ ಏನೂ ಆಗುವುದಿಲ್ಲ ಎಂಬುದು ಅಭಿಪ್ರಾಯ ಹಾಗೂ ಕೆಲವರಿಗೆ ಅನುಭವವೇದ್ಯ ಸತ್ಯ! ಈ ಸತ್ಯ ಯಾವಾಗಲೂ ಎರಡೂ ಕಡೆ ಕೆಸರು ಇರುವ ಗದ್ದೆಯ ಬದುವಿನ ಮೇಲೆಯೇ ನಿಂತಿರುತ್ತದೆ. ಯಾವ ಕಡೆ ಜಾರಿದರೂ ಕೆಸರು! ಒಂದು ಕಡೆ ಜಾರಿದರೆ ಅಸತ್ಯ ಇನ್ನೊಂದು ಕಡೆ ಜಾರಿದರೆ ನಮ್ಮ ಅನುಭವಕ್ಕೆ ಸಿಗದೇ ಹೋಗುವ ಅಪಾಯ!
ಅನಂತಮೂರ್ತಿಯವರ ಬರಹವನ್ನು ಉಲ್ಲೇಖಿಸಿ ಕಲಬುರ್ಗಿಯವರು ಈ ವಿಚಾರವನ್ನು ಮಂಡಿಸಿದ ತಕ್ಷಣ ವಾರ್ತಾವಾಹಿನಿಗಳಲ್ಲಿ ಬ್ರೇಕಿಂಗ್ ನ್ಯೂಸ್ ಆಗಿಬಿಟ್ಟಿತು. ಕೆಲವರು ಅನಂತಮೂರ್ತಿಯವರನ್ನು ಗುರಿಯಾಗಿಸಿಕೊಂಡರೆ, ಕೆಲವರು ಕಲಬುರ್ಗಿಯವರನ್ನು ಗುರಿಯಾಗಿಸಿಕೊಂಡರು. ಒಂದು ವಾಹಿನಿಯಲ್ಲಿ ಒಬ್ಬ ಯುವಸ್ವಾಮೀಜಿಯಂತೂ, ಕಲ್ಲಿನ ಮೇಲೆ ಮೂತ್ರ ಮಾಡಿದ್ದರಿಂದಲೇ ಈಗ ಅನಂತಮೂರ್ತಿಯವರು ಮೂತ್ರಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದಾರೆ ಎಂದುಬಿಟ್ಟರು! ಇನ್ನೂ ಮುಂದುವರಿದು, ಕಲಬುರ್ಗಿಯವರು ಅಂತಹುದೇ ರೋಗಕ್ಕೆ ತುತ್ತಾಗಲಿದ್ದಾರೆ ಅದು ಶತಸಿದ್ಧ ಎಂದು ಭವಿಷ್ಯವನ್ನೂ ಹೇಳಿದರು. ಆಗ ಮತ್ತೆ ನನ್ನನ್ನು ವಾಹಿನಿಗೆ ಕರೆಯಿರಿ ಎಂದು ಅಡ್ವಾನ್ಸ್ ಟಿಕೀಟು ಬುಕ್ಕೂ ಮಾಡಿಬಿಟ್ಟರು. ಅಷ್ಟಕ್ಕೆ ನಿಲ್ಲದೆ "ಗಂಡಸಾಗಿದ್ದರೆ ಕೋಟಿ ಸಂಗ್ರಹಿಸುವ ಹುಂಡಿಯಿರುವ ದೇವರ ಮೇಲೆ ಮೂತ್ರ ಮಾಡಲಿ" ಎಂದು ಸವಾಲು ಹಾಕಿದರು! ಅನಂತಮೂರ್ತಿ ಮತ್ತು ಕಲಬುರ್ಗಿಯವರ ಅಭಿಪ್ರಾಯಗಳು ತಪ್ಪು ಎನ್ನಿಸಿದರೆ ಅದನ್ನು ವಿರೋಧಿಸಲು ಬೇಕಾದಷ್ಟು ಮಾರ್ಗಗಳಿವೆ. ಹಾಗೆ ಮಾಡಿದ್ದರಿಂದಲೇ ಹೀಗೆ ಆಯಿತು, ಆಗುತ್ತದೆ ಎಂದು ದೈವದ ಹೆಸರು ಹೇಳಿ ಭಯ ಹುಟ್ಟಿಸುವುದು ಎಷ್ಟು ಸರಿ? ಆ ಸ್ವಾಮೀಜಿಯವರಿಗೆ ಒಂದು ಮಾತು ಕೇಳುತ್ತೇನೆ. ಮಾನ್ಯ ವಾಜಪೇಯಿವರು (ಮತ್ತು ಇನ್ನೂ ಕೆಲವು ಹಿರಿಯರೂ ಸಚ್ಚಾರಿತ್ರ್ಯ ಉಳ್ಳವರೂ) ಇಂದು ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದಾರೆ. ಹಾಗಾದರೆ ವಾಜಪೇಯಿಯವರು ಏನು ತಪ್ಪು ಮಾಡಿದ್ದರು?  ವಿರೋಧಿಸಬೇಕಾದ್ದನ್ನು ಅರ್ಥಪೂರ್ಣವಾಗಿ ವಿರೋಧಿಸದೆ, ಹೀಗೆ ವಾಹಿನಿಗಳಲ್ಲಿ ಕುಳಿತು ಶಾಪ ಹಾಕುವುದು, ಭವಿಷ್ಯ ಹೇಳುವುದು ಆ ಮೂಲಕ ಚರ್ಚೆಯ ದಾರಿ ತಪ್ಪಿಸುವುದು ಎಷ್ಟು ಸರಿ?
-ಡಾ.ಬಿ.ಆರ್. ಸತ್ಯನಾರಾಯಣ, ಬೆಂಗಳೂರು

ಇವರು ಪ್ರಜ್ಞಾವಂತರೇ?
'ದೊಡ್ಡವರೆಲ್ಲಾ ಜಾಣರಲ್ಲಾ ಚಿಕ್ಕವರೆಲ್ಲಾ ಕೋಣರಲ್ಲಾ...' ಎಂಬ ಹಾಡಿನಂತೆ ಹಿರಿಯ ಸಾಹಿತಿ, ವಿಶ್ರಾಂತ ಕುಲಪತಿಗಳು ಆದ ಡಾ. ಎಮ್. ಎಮ್. ಕಲಬುರ್ಗಿಯವರು, ಯು. ಆರ್. ಅನಂತಮೂರ್ತಿಯವರ ದಾರಿ ತುಳಿಯುತ್ತಿರುವುದು ವಿಷಾದನೀಯ. ಭಾರತಕ್ಕೆ ತನ್ನದೇ ಆದ ಆಧ್ಯಾತ್ಮಿಕ ಹಿನ್ನೆಲೆಯಿದೆ. ಭಾರತ ಋಷಿಮುನಿಗಳ ದೇಶ, ಪಂಚಮಹಾಭೂತಗಳು (ಆಕಾಶ, ವಾಯು, ಬೆಂಕಿ, ನೀರು, ಭೂಮಿ) ಇವುಗಳ ಉಗಮಕ್ಕೆ ವಿಜ್ಞಾನದಲ್ಲಿ ಖಚಿತ ಉತ್ತರ ಸಿಗಲಾರದು. ಜಗತ್ ಪ್ರಸಿದ್ಧ ವಿಜ್ಞಾನಿಯಾದ ಐನ್‌ಸ್ಟೀನ್ ಅವರೂ ಭೂಮಿ ಮೊದಲು ಬಿಂದು ಆಕಾರದಲ್ಲಿತ್ತು ಎಂಬುದನ್ನು ಒಪ್ಪುವುದರೊಂದಿಗೆ ಆಧ್ಯಾತ್ಮದ ಹೇಳಿಕೆಯನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ದೇವರ ಹೆಸರಿನಲ್ಲಿ ಮೂಢನಂಬಿಕೆಯ ಆಚರಣೆಗಳಾದ ನರಬಲಿ, ಪ್ರಾಣಿ ಬಲಿ ಕೊಡುವುದರ ಬಗೆಗೆ ಜನರಲ್ಲಿ ಸಾಹಿತಿಗಳು, ಕವಿಗಳು ಜ್ಞಾನಪೀಠ ಪ್ರಶಸ್ತಿ ವಿಜೇತರು, ಬುದ್ಧಿಜೀವಿಗಳು ಪ್ರಜ್ಞೆಯನ್ನು ಮೂಡಿಸಬೇಕೆ ಹೊರತು ಇಂತ ಅಸಂಬದ್ಧ ಹೇಳಿಕೆಗಳನ್ನು ಕೊಟ್ಟು ಜನರ ನಂಬಿಕೆಗಳ ಮೇಲೆ ಪೆಟ್ಟು ಕೊಡಬಾರದು. ಜನರ ಕೆಲವು ತಿಳಿವಳಿಕೆಗಳು ತಪ್ಪಾಗಿರಬಹುದು. ಅವನ್ನು ಬದಲಿಸಲು, ಅದನ್ನು ತಿಳಿಹೇಳಲು ಹಲವಾರು ಮಾರ್ಗಗಳಿವೆ. ಭಾವೋದ್ರೇಕದ ಸೃಷ್ಟಿ ಇವ್ಯಾವದಕ್ಕೂ ಉತ್ತರವಾಗುವುದಿಲ್ಲ.
-ಡಾ. ಜಿ. ಕೆ. ಭೂಮನಗೌಡರ
=
ಪ್ರಸಿದ್ಧಿಯ ಹುಚ್ಚು ಏನನ್ನಾದರೂ ಹೇಳಿಸುತ್ತದೆ
ಗಡಿಗೆಯನ್ನಾದರೂ ಒಡೆಯಬೇಕು. ಬಟ್ಟೆಯನ್ನಾದರೂ ಹರಿಯಬೇಕು ಅಥವಾ ಕತ್ತೆಯಂತಾದರೂ ಕಿರುಚಬೇಕು. ಅಂತೂ ಯಾವುದಾದರೊಂದು ರೀತಿಯಿಂದ ಪ್ರಸಿದ್ಧಿಗೆ ಬರಬೇಕು ಎನ್ನುವ ಒಂದು ಉಕ್ತಿ ಇದೆ. ಈ ಮಾತು ಪ್ರೊ. ಎಂ. ಎಂ. ಕಲಬುರ್ಗಿ ಅವರಂಥವರ ವಿಷಯದಲ್ಲಿ ಯಾವಾಗಲೂ ಸತ್ಯ. ದೇವತೆಗಳಿಗೆ ಶಕ್ತಿ ಇಲ್ಲ ಎನ್ನುವ ವಾದ ಇಂದು ನಿನ್ನೆಯದಲ್ಲ. ಶತ-ಶತಮಾನಗಳ ಹಿಂದೆ ಇಂತಹದ್ದೇ ಮಾತನ್ನು ಹೇಳಿದ ಚಾರ್ವಾಕರು (ಚಪ್ಪರಕರು) ಎನ್ನುವ ವಿತಂಡವಾದಿಗಳು ಈ ದೇಶದಲ್ಲಿ ಹೇಳ ಹೆಸರಿಲ್ಲದಂತೆ ಆಗಿದ್ದಾರೆ. ಕೋಟಿ ಕೋಟಿ ಜನರು ದೇವರ ಅಸ್ತಿತ್ವದಲ್ಲಿ ನಂಬಿಕೆಯನ್ನು ಇಟ್ಟು ಬಡತನದಲ್ಲಿಯೂ ನೆಮ್ಮದಿಯನ್ನು ಕಾಣುತ್ತಿದ್ದಾರೆ.
ಮೂಢನಂಬಿಕೆಗೆ ಹಾಗೂ ದೇವರಿಗೆ ಯಾವ ಸಂಬಂಧವೂ ಇಲ್ಲ. ಕಲಬುರ್ಗಿಯವರಂತಹ ಬುದ್ಧಿಜೀವಿಗಳು ಎಳೆದು ತಂದು ಕಟ್ಟಿದ್ದು ಇದು. ಬುದ್ಧಿಜೀವಿಗಳೆಂದು ಬೀಗುತ್ತಿರುವವರು ಜನರ ನೆಮ್ಮದಿಗೆ ಭಂಗ ತರುವಂಹತ ಹೇಳಿಕೆಗಳನ್ನು ಕೊಡಬಾರದು. ಮೂರ್ತಿಗಳ ಮೇಲೆ ಮೂತ್ರ ಮಾಡಿದವರಿಗೆ ಏನಾಗಿದೆ ಎಂದು ಪ್ರಶ್ನಿಸಬಹುದು. ಏನಾಗಬೇಕು ಆಗಿದೆ. ಆದರೆ ಅದನ್ನು ಅನುಭವಿಸಿದವರು ಬಾಯ್ಬಿಟ್ಟು ಹೇಳುವಂತೆ ಇಲ್ಲ. ಈ ಗುಟ್ಟು ಕಲಬುರ್ಗಿಯವರಿಗೆ ತಿಳಿದಿಲ್ಲ ಎಂದು ಕಾಣುತ್ತದೆ.
-ಪ್ರೊ. ವಿಷ್ಣು ಜೋಶಿ, ಕುಮಟಾ

ಈ ಕೊಳೆ ಸಹಿಸೆವು
ಮಾನ್ಯ ಮುಖ್ಯಮಂತ್ರಿಯವರೇ.. ಕಲಬುರ್ಗಿ, ಅನಂತಮೂರ್ತಿಯಂತಹ ತ್ಯಾಜ್ಯಗಳನ್ನು ಕರ್ನಾಟಕದಿಂದ ದಯವಿಟ್ಟು ವಿಲೇವಾರಿ ಮಾಡಿ ಕರ್ನಾಟಕವನ್ನು ಕೊಳಕು ಮುಕ್ತ ರಾಜ್ಯವನ್ನಾಗಿ ಮಾಡಿ.
-ಗಣೇಶ ಮೈಪಾಡಿ,  ಶಿವಮೊಗ್ಗ
=
ಕಂಡಕಂಡಲ್ಲಿ ಕಾಲೆತ್ತದಿರಿ
ಕನ್ನಡ ಪ್ರಭದ ಮುಖಪುಟದ ಈ ಲೇಖನ ಓದಿದ ಕೂಡಲೆ ಒಮ್ಮೆ ಪಿತ್ತ ನೆತ್ತಿಗೆ ಏರಿದರೂ ಸ್ವೀಕಾರ ಭಾವದಲ್ಲಿ ಎರಡನೇ ಬಾರಿ ಓದಿದೆ. ನನ್ನ ತಂದೆಗೆ ಪಾಠ ಮಾಡಿದ ಎಂ.ಎಂ.ಕಲಬುರ್ಗಿಯಂಥವರ ವಾದದಲ್ಲಿ ಏನೋ ಹುರುಳಿರುತ್ತದೆ ಎಂಬ ದೃಢ ನಂಬಿಕೆ. ಆದರೆ ಆ ನಂಬಿಕೆ ಕ್ಷಣಮಾತ್ರದಲ್ಲಿ ಮಾಯವಾಯಿತು. ಮನಸ್ಸಿನಲ್ಲೇ ಇವರೆಂಥ ಹುಚ್ಚರಪ್ಪಾ ಎಂದು ಬಯ್ಯಬೇಕೆನ್ನಿಸಿತು. ಆದರೂ ಮನಸ್ಸು ಒಪ್ಪಲಿಲ್ಲ. ಅದಕ್ಕೆ ಒಂದೇ ಕಾರಣ ಅವರು ನನ್ನ ತಂದೆಗೆ ಪೂಜನೀಯರು - ಗುರುಗಳು. ಹಾಗಂತ ಗುರುವಿನ ಮೇಲೆ ಮೂತ್ರ ಮಾಡಿದರೂ ಅದೇನೂ ಆಗದು ಎಂದು ಸ್ವತಃ ಕಲಬುರ್ಗಿಯವರೇ ಹೇಳಲಿ ಅಥವಾ ಅನಂತ ಮೂರ್ತಿಯವರೇ ಅವರ ಗುರುವಿನ ಮೇಲೆ ಉಚ್ಚೆ ಹೊಯ್ದು ತೋರಿಸಿದರೂ ನಮ್ಮದು ಅದನ್ನು ಒಪ್ಪದ ಸನಾತನ ಸಂಸ್ಕೃತಿ ಬಿಡಿ. ಆ ವಿಷಯ ಬದಿಗಿಟ್ಟು ಕೆಲವೇ  ಪ್ರಶ್ನೆಗಳನ್ನು ಎಂ. ಎಂ. ಕಲಬುರ್ಗಿಯವರಿಗೆ ಮತ್ತು ಅವರಲ್ಲಿಯೇ ಅಮೂರ್ತವಾಗಿ ಗೋಚರಿಸುವ ಅನಂತ ಮೂರ್ತಿಯವರಿಗೆ ಕೇಳಬೇಕೆನಿಸಿದೆ.
1) ಅರ್ಚಕ-ಸ್ವಾಮಿ-ಜೋಯಿಸರು ನಾಶವಾದಂತೂ ಮೂಢನಂಬಿಕೆಗಳು ನಾಶವಾಗದು ಎಂದು ಹೇಳಿದ್ದೀರಿ, ಇಲ್ಲಿ ಮುಲ್ಲಾ - ಫಾದರ್‌ರನ್ನು ಯಾಕೆ ಸೇರಿಸಿಕೊಳ್ಳಲಿಲ್ಲ? ಇದಕ್ಕೆ ಹೆದರಿಕೆ ಕಾರಣವೇ ಅಥವಾ ನಿಮ್ಮ ಲೆಕ್ಕದಲ್ಲಿ ಹಿಂದುಗಳು ಮಾತ್ರ ಮೂಢರೇ ಅಥವಾ ನಿಮ್ಮ ಸಲಹೆಗಳು ಕೇವಲ ಹಿಂದುಗಳಿಗೆ ಮಾತ್ರ ಸೀಮಿತವೇ?  
2) ಪುರೋಹಿತರು ಶೋಷಿಸುವವರು ಎಂದು ಹೇಳಿದ್ದೀರಿ. ಕಣ್ಣು ಬಿಟ್ಟು ಸುತ್ತಲೂ ನೋಡಿ ಸ್ವಾಮಿ. ಅದ್ಯಾವ ಪುರೋಹಿತರು ಇಂದಿನ ಸಮಾಜದಲ್ಲಿ ಇನ್ನೊಬ್ಬರನ್ನು ಶೋಷಿಸುವಷ್ಟು ಶಕ್ತರು? ಸ್ವಲ್ಪ ತೋರಿಸಿ. ಇಂದು ನಮಗೆ ಶೋಷಿಸುವ ಪುರೋಹಿತರು ಕಾಣಸಿಗುವುದು ಅನಂತ ಮೂರ್ತಿಯವಂಥವರ ಕಾದಂಬರಿಗಳಲ್ಲೇ ಹೊರತು ಹೊರಗಿನ ಸಮಾಜದಲ್ಲಲ್ಲ. ದಯವಿಟ್ಟು ಪುರೋಹಿತರು ಶೋಷಿಸುವವರು ಎಂಬ ಈ ನಿಮ್ಮ ಮೂಢನಂಬಿಕೆಯಿಂದ ಹೊರಬನ್ನಿ.
3) ನಿಮಗೆ ಭಾಷಣ ಬರೆದುಕೊಟ್ಟದ್ದು ಯಾರು? ವಿಜ್ಞಾನವನ್ನು ನೀವು ಕಲಿತಿದ್ದೇರೋ ಇಲವೋ ಗೊತ್ತಿಲ್ಲ ಆದರೆ ವಿಜ್ಞಾನ ಎಂದ ಕೂಡಲೇ ನಾಸ್ತಿಕವಾದ ಎಂಬ ಓಬೀರಾಯನ ಕಾಲದ ವಾದದಿಂದ ನೀವು ಯಾವಾಗ ಹೊರಗೆ ಬರುತ್ತೀರಿ?
4) ಅನಂತ ಮೂರ್ತಿಯವರೆ ಯಾವಾಗ ನೀವು ಶಿಲುಬೆಯ ಮೇಲೆ ಅಥವಾ ದರ್ಗಾಕ್ಕೆ ಹೋಗಿ ಮೂತ್ರ ಮಾಡಿ ನಿಮ್ಮ ಎಕ್ಸ್‌ಪರಿಮೆಂಟ್ ಅನ್ನು ಪೂರ್ಣ ಮಾಡುತ್ತೀರಿ? ಅಂದಹಾಗೆ ನೀವು ರಾತ್ರಿ ಹೋಗಿ ಕಳ್ಳರ ಹಾಗೆ ಉಚ್ಚೆ ಹೊಯ್ದು ಬಂದದ್ದು ಯಾಕೆ? ಊರಿನವರನ್ನೆಲ್ಲ ಕರೆದು ಎಲ್ಲರ ಸಮ್ಮುಖದಲಿಯೇ ಈ ನಿಮ್ಮ ಕಣ್ಣು ತೆರೆಸುವ ಪ್ರಯೋಗವನ್ನು ಮಾಡಿ ಎಲ್ಲರನ್ನೂ ಮೂಢನಂಬಿಕೆಯಿಂದ ಹೊರಗೆಳೆದು ತಂದು ಪ್ರವರ್ತಕರೆನಿಸಿಕೊಳ್ಳಬಹುದಿತ್ತಲ್ಲವೇ? ಆಗ ನಿಮ್ಮ ಈ 'ಮೂತ್ರೋಪನಿಶತ್ತನ್ನು' ಜಗತ್ತಿಗೇ ಸಾರಿದಂತಾಗುತ್ತಿತ್ತು. ನಿಮಗೆ ಇನ್ನೊಂದು ವಿಚಾರ ಹೇಳಬೇಕೆಂದಿದ್ದೇನೆ. ಮೊನ್ನೆ ನಮ್ಮ ಊರಿನಲ್ಲಿ ನಾಯಿಯೊಂದು ದೈವ ಶಿಲೆಯ ಮೇಲೆ ಉಚ್ಚೆ ಹೊಯ್ದು ಹೋಗಿತ್ತು. ಆ ನಾಯಿ ಇವತ್ತಿಗೂ ಆರಾಮವಾಗಿ ಜೀವಂತವಾಗಿದೆಯಂತೆ. ಹಾಗಾಗಿ ನಿಮ್ಮ ವಾದವನ್ನು ಇನ್ನೊಂದು ಜೀವ ದೃಢೀಕರಿಸಿದಂತಾಗಿದೆ. ನಿಮಗೆ ಶುಭಾಶಯಗಳು.
ಅನಂತ ಮೂರ್ತಿ ಮತ್ತು ಎಂ.ಎಂ.ಕಲಬುರ್ಗಿಯವರಲ್ಲಿ ಕೊನೆಯಲ್ಲಿ ಮಾಡುವ ವಿನಂತಿಯೆಂದರೆ, ದಯವಿಟ್ಟು ಮೂತ್ರಮಾಡಲು ಶೌಚಾಲಯಗಳನ್ನು ಬಳಸಿ. ಕಂಡ ಕಂಡಲ್ಲಿ ಮೂತ್ರ ಮಾಡುವುದು ಆರೋಗ್ಯಕರ ನಡೆಯಲ್ಲ. ಅದರಲ್ಲಿಯೂ ಆರೋಗ್ಯಕರ ಮನುಷ್ಯರ ನಡೆಯಲ್ಲ.  
- ಶಿಶಿರ ಹೆಗಡೆ , ಮೂರೂರು



ಹಿರಿಯರ ವಿಷಯದಲ್ಲೂ ಹೀಗೇನಾ?
ಈ ಕಲಬುರ್ಗಿಯವರು ಮೊದಲು ತಮ್ಮ ಮನೆಯಲ್ಲಿರುವ ಪೂರ್ವಿಕರ ಫೋಟೊಗಳ ಮೇಲೆ ಹೀಗೇ ಮಾಡುತ್ತಾರೆಯೇ? ಅವು ಕೇವಲ ಭಾವಚಿತ್ರ ಅಲ್ಲವೇ?
ಹಿಂದೂ ಧರ್ಮ, ದೇವತೆಗಳ ವಿರುದ್ಧ ಯಾರುಬೇಕಾದರೂ ಹೇಗೆ ಬೇಕಾದರೂ ಮಾತನಾಡಬಹುದು. ಎಲ್ಲಿ ಇದೇ ಕಲಬುರ್ಗಿ ತಮ್ಮ ಮಾತಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡು ಪ್ರಪಂಚದಲ್ಲಿರುವ ಯಾವುದೇ ಜಾತಿ, ಕುಲ, ಧರ್ಮದ ದೇವತೆಗಳ ವಿಗ್ರಹಗಳ ಮೇಲೆ ಮೂತ್ರ ಮಾಡಿದರೂ ಏನೂ ಆಗಲ್ಲ ಎನ್ನಲಿ ನೊಡೋಣ? ಹಾಗೇನಾದರೂ ಹೇಳಿದ್ದರೆ ಕಲಬುರ್ಗಿಯವರು ಇವತ್ತಿನ ಸೂರ್ಯೋದಯವನ್ನು ನೊಡುತ್ತಿದ್ದರೊ ಇಲ್ಲವೋ?  
-ಮೋಹನ್ ಗೌಡ, 12ನೇ ತರಗತಿ, ಜವಾಹರ್ ನವೋದಯ ವಿದ್ಯಾಲಯ, ಚಿಕ್ಕಬಳ್ಳಾಪುರ


ಎಂಥ ವಿದ್ಯಾರ್ಥಿಗಳು ತಯಾರಾಗಿರಬಹುದು?
ವಿದ್ಯಾವಂತರಾದ ಕಲ್ಬುರ್ಗಿಯವರ ಹೇಳಿಕೆ ಓದಿ ಆಶ್ಚರ್ಯವಾಯಿತು. ಕಲ್ಬುರ್ಗಿಯವರೇ, ನೀವು ಇದೇ ರೀತಿ ಶಿಲುಬೆಯ ಮೇಲೆ ಅಥವಾ ಮಸೀದಿಯ ಗೋಡೆಯ ಮೇಲೆ ಮೂತ್ರಮಾಡಬಹುದು ಎಂಬ ಹೇಳಿಕೆಯನ್ನು ದಯಪಾಲಿಸಿ ಮತ್ತು ಅದರಂತೆ ನಡೆಯಿರಿ. ಈ ದೇಶದಲ್ಲಿ ಮೂರ್ತಿಯಲ್ಲಿ ದೇವರನ್ನು ಕಂಡ ಸಾವಿರಾರು ಸಂತರು ಆಗಿ ಹೋಗಿದ್ದಾರೆ. ಹಾಗೆಯೇ ಸಾವಿರಾರು ರಾಕ್ಷಸರು ಆಗಿ ಹೋಗಿದ್ದಾರೆ. ನಿಮ್ಮನ್ನು ಬುದ್ಧಿಯಲ್ಲಿ ರಾಕ್ಷಸ ಎಂದು ಪರಿಗಣಿಸುತ್ತೇನೆ. ಧರ್ಮ- ನಂಬಿಕೆ ನಿಂದನೆಗಾಗಿ ನೀವು ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಬೇಕಾಗಬಹುದು. ಮಾತುಗಳು ಸ್ವಚ್ಛ ಇಲ್ಲದಿರುವ ನೀವು ಎಂತಹ ವಿದ್ಯಾರ್ಥಿ ಜನಾಂಗವನ್ನು ತಯಾರು ಮಾಡುತ್ತೀರಿ?
-ಬಿ.ವಿ.ರಾವ್, ಬೆಂಗಳೂರು




ಕಲ್ಬುರ್ಗಿ ಕ್ಷಮೆ ಯಾಚಿಸಬೇಕು
ದೇವರ ಬಗ್ಗೆ ಅವಹೇಳನಕಾರಿಯಾಗಿ ಯು.ಆರ್. ಅನಂತಮೂರ್ತಿ ಬರೆದದ್ದನ್ನು ಉಲ್ಲೇಖಿಸುವ ಮೂಲಕ ಎಂ.ಎಂ. ಕಲ್ಬುರ್ಗಿ ಅವರೂ ಅಪರಾಧ ಮಾಡಿದ್ದಾರೆ. ಹೇಳಿಕೆ ಉಲ್ಲೇಖಿಸುವ ಮೂಲಕ ಕಲ್ಬುರ್ಗಿ ಅವರು ಸಮಾಜದಲ್ಲಿ ಗೊಂದಲ ಸೃಷ್ಟಿಸಿದ್ದಾರೆ. ಆ ಮೂಲಕ ಕೋಟ್ಯಂತರ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ. ಆದ್ದರಿಂದ ಅವರು ಹಿಂದೂಗಳ ಬಹಿರಂಗ ಕ್ಷಮೆ ಯಾಚಿಸಬೇಕು. ಯು.ಆರ್. ಅನಂತಮೂರ್ತಿ ಸಾಹಿತ್ಯದ ಭಯೋತ್ಪಾದಕರಾಗಿದ್ದು, ಅವರನ್ನು ಗಡಿಪಾರು ಮಾಡಬೇಕು. ಇಲ್ಲದಿದ್ದರೆ ಇಬ್ಬರ ವಿರುದ್ಧವೂ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.
- ಪ್ರಣವಾನಂದ ಸ್ವಾಮೀಜಿ, ಹಾವೇರಿ

ಶೋಷಣೆ ನಿಲ್ಲಿಸೋಣ
ದೇವರು ಇದ್ದಾನೋ ಇಲ್ಲವೋ ಎನ್ನುವುದು ಅವರವರ ನಂಬಿಕೆ ಬಿಟ್ಟಿರುವ ವಿಚಾರ. ಇದು ಆದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಆದರೆ, ಇದಕ್ಕಿಂತ ಮಿಗಿಲಾಗಿ ಜನರ ಸಮಸ್ಯೆಗಳು ಸಾವಿರ ಇವೆ. ಇವುಗಳ ಪರಿಹಾರಕ್ಕೆ ಪ್ರಯತ್ನ ಹಾಗೂ ಚಿಂತನೆ ನಡೆಯಬೇಕೇ ಹೊರತು ದೇವರ ಬಗ್ಗೆ ಚಿಂತನೆ ಮಾಡುವ ಅಗತ್ಯ ಇಲ್ಲ. ವಿದ್ವಾಂಸರು ಈ ದಿಸೆಯಲ್ಲಿ ತಮ್ಮ ಗಮನ ಹರಿಸಬೇಕು. ಇಂದಿಗೂ ಮನುಕುಲವೇ ನಾಚುವಂತ ಶೋಷಣೆ, ಸಮಸ್ಯೆ ಜಟಿಲವಾಗಿದ್ದರಿಂದ ಅವುಗಳ ಪರಿಹಾರಕ್ಕೆ ಶ್ರಮಿಸೋಣ.
-ಅಲ್ಲಮಪ್ರಭು ಬೆಟ್ಟದೂರು, ಬಂಡಾಯ ಸಾಹಿತಿ

ವಿಷಾದ ಬೇಡ, ಕ್ಷಮೆ ಇರಲಿ..
ಹಿಂದೂ ಸಂಸ್ಕೃತಿಯ ಅಂಗವಾಗಿ ಪ್ರತಿಮೆ ಪೂಜೆ ಮಾಡಲಾಗುತ್ತಿದೆ. ಸಂವಿಧಾನದಲ್ಲಿ ಎಲ್ಲ ಧರ್ಮಗಳಿಗೂ ಮಾನ್ಯತೆ ಇದ್ದು, ಒಂದು ಧರ್ಮದ ಆಚರಣೆಗೆ ವಿರುದ್ಧವಾಗಿ ಅವರ ಭಾವನೆಗೆ ಧಕ್ಕೆ ಬರುವಂತೆ ಮಾತನಾಡಿರುವುದು ಸಂವಿಧಾನಕ್ಕೆ ವಿರುದ್ಧವಾದದ್ದು. ಈ ಕುರಿತು ಡಾ೤ ಎಂ.ಎಂ. ಕಲಬುರ್ಗಿ ಬರೀ ವಿಷಾದ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಬದಲಾಗಿ ಅವರು ನಾಡಿನ ಜನರಲ್ಲಿ ಕ್ಷಮೆ ಕೇಳಬೇಕು. ತಮ್ಮ ಭಾಷೆಯ ಮೇಲೆ ಹಿಡಿತವಿಟ್ಟುಕೊಳ್ಳಬೇಕಾದ ಕಲಬುರ್ಗಿ ಅವರು ಪ್ರತಿಮೆ ಪೂಜೆ ಬಗ್ಗೆ ಮಾತನಾಡಿರುವುದು ಅಸಹನೀಯ.
- ಬಸವಾನಂದ ಶ್ರೀಗಳು, ಮನಗುಂಡಿ, ಧಾರವಾಡ

ವಿಚಾರ ಹೇರಬೇಡಿ
ಧಾರ್ಮಿಕತೆ ಹಾಗೂ ಮೂರ್ತಿ ಪೂಜೆ ಅದು ಕೇವಲ ವೈಯಕ್ತಿಕ ವಿಚಾರ. ನಂಬಿಕೆ ಇದ್ದವರು ಪೂಜೆ ಮಾಡುತ್ತಾರೆ. ಇಲ್ಲದವರು ಪೂಜೆ ಮಾಡುವುದಿಲ್ಲ. ಆದರೆ ಡಾ೤ ಎಂ.ಎಂ. ಕಲರ್ಬುರ್ಗಿ ಅಂಥವರು ತಮ್ಮ ವಿಚಾರವನ್ನು ಜನತೆಯ ಮೇಲೆ ಹೇರುವುದು ಸರಿಯಲ್ಲ. ಮೂರ್ತಿ ಪೂಜೆಯ ಬಗ್ಗೆ ತಾತ್ಸಾರದ ಭಾವನೆ ಇದ್ದರೆ ಅದನ್ನು ಅವರೇ ಇಟ್ಟುಕೊಳ್ಳಲಿ. ಬೇರೊಬ್ಬರಿಗೆ ಪಾಠ ಮಾಡಲು ಯಾರಿಗೂ ಹಕ್ಕಿಲ್ಲ. ಕೇವಲ ಬುದ್ಧಿ ಹೆಚ್ಚಾದವರು ಹಾಗೂ ಸಮಾಜದಲ್ಲಿ ವಿವಾದವನ್ನು ಹುಟ್ಟುಹಾಕಲು ಇಂತಹ ಹೇಳಿಕೆಗಳನ್ನು ಹೊರಹಾಕುತ್ತಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಮೂರ್ತಿ ಪೂಜೆ ಹಾಗೂ ಧಾರ್ಮಿಕ ಆಚರಣೆ ವ್ಯಕ್ತಿಯ ವಿವೇಚನೆಗೆ ಬಿಟ್ಟಿದ್ದು ಅದರ ಬಗ್ಗೆ ಯಾರೂ ವಿಮರ್ಶೆ ಮಾಡುವಂತಿಲ್ಲ.
- ಎನ್. ಆರ್. ನಾಯಕ,
ರಾಜ್ಯ ಪ್ರಶಸ್ತಿ ಪುರಸ್ಕೃತ ಜಾನಪದ ಸಾಹಿತಿ, ಹೊನ್ನಾವರ.

ಕೂಡಲೇ ಬಂಧಿಸಬೇಕು
ಮೌಢ್ಯಮುಕ್ತ ಸಮಾಜ ನಿರ್ಮಿಸುವ ಗೋಷ್ಠಿಯೊಂದರಲ್ಲಿ ಈ ನೆಲದ ಬಹುಸಂಖ್ಯಾತ ಆಸ್ತಿಕ ಜನರ ಭಾವನೆಯನ್ನು ಘಾಸಿಗೊಳಿಸುವಂತಹ ಹೇಯ ಹೇಳಿಕೆಯನ್ನು ನೀಡಿರುವ ಪ್ರೊ. ಎಂ.ಎಂ. ಕಲಬುರ್ಗಿಯವರನ್ನು ತಕ್ಷಣಕ್ಕೆ ಬಂಧಿಸಿ ಕಾನೂನು ಕ್ರಮಕ್ಕೆ ಮುಂದಾಗಬೇಕೆಂದು ಕರ್ನಾಟಕ ಹಿಂದು ಜಾಗರಣ ವೇದಿಕೆಯು ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತದೆ.
ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಏನನ್ನೂ ಮಾಡಬಹುದೆಂದು ಭಾವಿಸಿರುವ ಸ್ವಘೋಷಿತ ಬುದ್ಧಿಜೀವಿಗಳ ಗುಂಪೊಂದು ಎಲ್ಲೆಮೀರಿ ಜನರ ಧಾರ್ಮಿಕ ಭಾವನೆಗಳ ಮೇಲೆ ಆಕ್ರಮಣ ಎಸಗುತ್ತಿರುವುದು ಸಂಪೂರ್ಣ ಕಾನೂನು ಬಾಹಿರ ಹಾಗೂ ಸಂವಿಧಾನ ವಿರೋಧಿಯಾಗಿದ್ದು, ಜಾತ್ಯತೀತ ಭಾರತದಲ್ಲಿ ಅವರವರ ಧಾರ್ಮಿಕ ನಂಬಿಕೆ ಆಚರಣೆಗಳಿಗೆ ಮುಕ್ತ ಸ್ವಾತಂತ್ರ್ಯವಿದ್ದು, ಅದನ್ನು ವಾಚಾಮಗೋಚರ ನಿಂದಿಸುವ-ಖಂಡಿಸುವ ಅಧಿಕಾರ ಯಾರಿಗೂ ಇರುವುದಿಲ್ಲ. ಹಿಂದು ದೇವ ದೇವತೆಗಳ ಕುರಿತು ಅಸಭ್ಯ ಹಾಗೂ ಅಸಹ್ಯ ಹೇಳಿಕೆ ನೀಡುವ ಮೂಲಕ ಪ್ರೊ. ಕಲಬುರ್ಗಿಯವರು ಹಿಂದು ನಂಬಿಕೆಗಳನ್ನು ಅವಹೇಳನಗೈದು, ಭಾವನೆಗಳನ್ನು ಕೆಣಕಿರುತ್ತಾರೆ. ಇದನ್ನು ಯಾವುದೇ ಕಾರಣಕ್ಕೂ ಸಮಾಜವು ಸಹಿಸಲು ಸಾಧ್ಯವಿಲ್ಲ. ಆಸ್ತಿಕ ಜನತೆ ಕಾನೂನನ್ನು ಕೈಗೆತ್ತಿಕೊಂಡು ಕಲಬುರ್ಗಿಯವರನ್ನು ಶಿಕ್ಷಿಸುವ ಮೊದಲು ಸರ್ಕಾರ ಅವರನ್ನು ಬಂಧಿಸಬೇಕೆಂದು ವೇದಿಕೆ ಒತ್ತಾಯಿಸುತ್ತದೆ.
ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ ಪ್ರಚಾರಗಿಟ್ಟಿಸಿ ಪ್ರಸಿದ್ಧಿ ಪಡೆಯುವ ಕ್ಷುದ್ರ ಮನೋಭಾವದ ಕೀಳು ಸಾಹಿತಿಗಳ ಗುಂಪಿಗೆ ಕಲಬುರ್ಗಿ ಹೊಸ ಸೇರ್ಪಡೆ ಅಷ್ಟೇ. ಜನರ ವ್ಯಕ್ತಿಗತ ನಂಬಿಕೆ ಆಚರಣೆಗಳನ್ನು ಮೂಢನಂಬಿಕೆಯೆಂದು ಕರೆಯುವ ಅಥವಾ ನಿರ್ಧರಿಸುವ ಅಧಿಕಾರವನ್ನು ಈ ಕಲಬುರ್ಗಿಗೆ ನೀಡಿದವರು ಯಾರು?
-ಜಗದೀಶ್ ಕಾರಂತ, ರಾಜ್ಯ ಸಂಚಾಲಕರು, ಹಿಂದು ಜಾಗರಣ ವೇದಿಕೆ

ಬಾಯಿಗೆ ಬಂದಂತೆ ಮಾತನಾಡುವುದನ್ನು ನಿಲ್ಲಿಸಲಿ
ದೇವರುಗಳ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡಿರುವ ಖ್ಯಾತ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಅವರ ನಡವಳಿಕೆ ಸಹಿಸಲು ಸಾಧ್ಯವಿಲ್ಲ. ದೇವರುಗಳ ಬಗ್ಗೆ ಜನರಲ್ಲಿ ಅವರದ್ದೇ ಆದ ನಂಬಿಕೆ ಇರುತ್ತದೆ. ಹಿಂದೂ ಸಂಸ್ಕೃತಿಯಲ್ಲಿ ದೇವರಿಗೆ ಪ್ರಾಧಾನ್ಯತೆ ನೀಡಲಾಗಿದೆ. ಬುದ್ಧಿ ಜೀವಿಗಳು ಎನ್ನಿಸಿಕೊಂಡವರು ಈ ರೀತಿ ಬಾಯಿಗೆ ಬಂದಂತೆ ಮಾತನಾಡುವುದನ್ನು ನಿಲ್ಲಿಸಬೇಕು. ಇಂತಹ ಹೇಳಿಕೆ ಖಂಡನಾರ್ಹ.
-ವೀರಣ್ಣ ಚರಂತಿ ಮಠ, ಮಾಜಿ ಶಾಸಕರು, ಬಾಗಲಕೋಟೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement