ಎಚ್ಚರ... ಜೈಲು ತಂದೀತು ಲೈಕ್ ರಿಟ್ವೀಟ್
ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್ ತಡೆಯಲು ಮಹಾ ನಿರ್ಧಾರ...
ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್ ತಡೆಯಲು ಮಹಾ ನಿರ್ಧಾರ
ಮುಂಬೈ: ಇಲ್ಲಿ ಕೇಳಿ, ನಿಮಗೆ ಸಾಮಾಜಿಕ ತಾಣಗಳಲ್ಲಿ ಆಕ್ಷೇಪಾರ್ಹ ಹೇಳಿಕೆ ಪೋಸ್ಟ್ ಮಾಡುವುದಷ್ಟೇ ಅಲ್ಲ, ಅವುಗಳನ್ನು 'ಲೈಕ್' ಮಾಡುವ ಅಥವಾ 'ರಿಟ್ವೀಟ್' ಮಾಡುವ ಅಭ್ಯಾಸವಿದ್ದರೂ ಜೋಕೆ!
ಅಂತಹ ಕೆಲಸ ಮಾಡದಂತೆ ನಿಮ್ಮ ಬೆರಳುಗಳಿಗೆ ಮೊದಲೇ ಎಚ್ಚರಿಸಿ. ಇಲ್ಲದಿದ್ದರೆ ನೀವು ಜೈಲು ಸೇರುವುದು ಗ್ಯಾರಂಟಿ. ಯಾವುದೇ ಪಕ್ಷ, ಅದರ ನಾಯಕರು, ಧರ್ಮ, ಧಾರ್ಮಿಕ ನಂಬಿಕೆಗಳನ್ನು ಟೀಕಿಸುವ ಪೋಸ್ಟ್‌ಗಳು, ಚಿತ್ರಗಳನ್ನು ಯಾರೇ ಹಾಕಿರಲಿ, ನೀವು ಮಾತ್ರ ಅದನ್ನು ಮುಟ್ಟುವ ಧೈರ್ಯವನ್ನೂ ತೋರಬೇಡಿ. ನೀವು ಗೊತ್ತಿದ್ದೋ, ಗೊತ್ತಿಲ್ಲದೆಯೋ ಒತ್ತಿದ ಒಂದು 'ಲೈಕ್' ನಿಮ್ಮನ್ನು ಕಂಬಿ ಎಣಿಸುವಂತೆ ಮಾಡಬಹುದು.
ಸಾಮಾಜಿಕ ತಾಣಗಳಲ್ಲಿ ಆಕ್ಷೇಪಾರ್ಹ ಅಂಶಗಳನ್ನು ಪೋಸ್ಟ್ ಮಾಡುವವರು ಮಾತ್ರವಲ್ಲದೇ, ಅದನ್ನು ಲೈಕ್ ಮಾಡುವ ಅಥವಾ ರಿಟ್ವೀಟ್ ಮಾಡುವವರನ್ನೂ ಆರೋಪಿಗಳೆಂದು ಪರಿಗಣಿಸಿ, ಆರೋಪ ಸಾಬೀತಾದರೆ ಕನಿಷ್ಠ 3 ವರ್ಷ ಜೈಲು ಶಿಕ್ಷೆ ವಿಧಿಸುವ ನಿರ್ಧಾರಕ್ಕೆ ಮಹಾರಾಷ್ಟ್ರ ಸರ್ಕಾರ ಬಂದಿದೆ. ಕೆಲವೇ ದಿನಗಳಲ್ಲಿ ದೇಶಾದ್ಯಂತ ಜಾರಿಯಾದರೂ ಅಚ್ಚರಿಯೇನಿಲ್ಲ.
ತೀರ್ಮಾನ ನಿಮ್ಮದೆ: ಸಾಮಾಜಿಕ ತಾಣಗಳಲ್ಲಿ ಅವಹೇಳನಕಾರಿ ಹೇಳಿಕೆಗಳನ್ನು ಪೋಸ್ಟ್ ಮಾಡಿ, ಲೈಕ್ ಮಾಡಿ ಜೈಲು ಸೇರುತ್ತೀರಾ ಅಥವಾ ನಾನಾಯ್ತು, ನನ್ನ ಕೆಲಸವಾಯ್ತು ಎಂದು ಅವುಗಳ ತಂಟೆಗೆ ಹೋಗದೇ ಸುಮ್ಮನಿರ್ತೀರಾ? ತೀರ್ಮಾನ ನಿಮಗೆ ಬಿಟ್ಟಿದ್ದು. ಜಾಲತಾಣಗಳಲ್ಲಿ ಯಾರೋ ಕಿಡಿಗೇಡಿಗಳು ಮಾಡುವ ಅವಹೇಳನಕಾರಿ ಹೇಳಿಕೆಗಳು ಅಮಾಯಕರ ಪ್ರಾಣ ತೆಗೆಯುವುದು, ಸಮಾಜದ ಸ್ವಾಸ್ಥ್ಯ ಹಾಳು ಮಾಡುವುದು, ಆಸ್ತ್ತಿಗೆ ಹಾನಿ ಮಾಡುವುದು ನಿಮಗಿಷ್ಟವೇ?
ಟೆಕಿ ಕೊಲೆ ಹಿನ್ನೆಲೆಯಲ್ಲಿ...: ಮಹಾರಾಷ್ಟ್ರದಲ್ಲಿ ಶಿವಾಜಿ, ಬಾಳಾಠಾಕ್ರೆ ಅವರನ್ನು ಅವಹೇಳನ ಮಾಡಿದ ಹೇಳಿಕೆಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡತೊಡಗಿತ್ತು. ಇದು ಆಕ್ರೋಶಕ್ಕೆ ಕಾರಣವಾಗಿತ್ತು. ನಂತರ ಈ ಹೇಳಿಕೆ ಪೋಸ್ಟ್ ಮಾಡಿದ್ದಾನೆ ಎನ್ನಲಾದ ಟೆಕಿ ಯೊಬ್ಬನ ಕೊಲೆ ನಡೆದಿತ್ತು. ಹಿಂದೂ ರಾಷ್ಟ್ರ ಸೇನಾ ಕಾರ್ಯಕರ್ತರ ಮೇಲೆ ಕೊಲೆ ಆರೋಪ ಕೇಳಿಬಂದಿತ್ತು. ಬಳಿಕ ಗಲಭೆ ಭುಗಿಲೆದ್ದಿತ್ತು. ಬೆಳಗಾವಿಯಲ್ಲೂ ಕೋಮುದ್ವೇಷದ ಕಿಡಿ ಹೊತ್ತಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಈಗ ಸಾಮಾಜಿಕ ತಾಣಗಳ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಹಾರಾಷ್ಟ್ರ ಪೊಲೀಸರು ಮಹತ್ವದ ಹೆಜ್ಜೆಯಿಟ್ಟಿದ್ದಾರೆ.
ನೀವು ಹೀಗೆ ಮಾಡಿ
- ಈಗ ವಾಟ್ಸ್ಆ್ಯಪ್ನಲ್ಲಿ ಬ್ಯುಸಿಯಾಗಿರುವವರೇ ಹೆಚ್ಚು. ಅವರಲ್ಲಿ ನೀವೂ ಒಬ್ಬರಾಗಿರಬಹುದು. ಗೆಳೆಯರ್ಯಾರೋ ಆಕ್ಷೇಪಾರ್ಹ ಫೋಟೋ, ಸಂದೇಶ ಕಳುಹಿಸಿದರೆಂದರೆ ಅದನ್ನು ಫಾರ್ವರ್ಡ್ ಮಾಡಲು ಹೋಗಬೇಡಿ. ಅದು ಆಕ್ಷೇಪಾರ್ಹ ಎಂದು ಗೊತ್ತಾದೊಡನೆ ಡಿಲೀಟ್ ಮಾಡಿಬಿಡಿ.
- ಫೇಸ್ಬುಕ್ನಲ್ಲಿ ಅವಹೇಳನಕಾರಿ ಫೋಟೋ ಬಂದೊಡನೆ ನೋಡಿ ಸುಮ್ಮನಿದ್ದುಬಿಡಿ. ಲೈಕ್ ಮಾಡದಿರಿ.
- ಅವಹೇಳನಕಾರಿ ಅಂಶಗಳನ್ನು ಪೋಸ್ಟ್ ಮಾಡುವ ಗೆಳೆಯರಿಂದ ಆದಷ್ಟು ದೂರವಿರಿ.
- ನಿಮ್ಮ ಸಾಮಾಜಿಕ ತಾಣಗಳ ಖಾತೆ ಹ್ಯಾಕ್ ಆಗದಂತೆ ಎಚ್ಚರಿಕೆ ವಹಿಸಿ.
- ಪಾಸ್ವರ್ಡ್ಗಳನ್ನು ಯಾರೊಡನೆಯೂ ಹಂಚಿಕೊಳ್ಳದಿರಿ.
- ಸಿಕ್ಕ ಸಿಕ್ಕವರಿಗೆಲ್ಲ ನಿಮ್ಮ ಮೊಬೈಲ್ ಸಂಖ್ಯೆಗಳನ್ನು ನೀಡಬೇಡಿ. ದುರುಪಯೋಗವಾಗುವ ಸಾಧ್ಯತೆಯೂ ಇಲ್ಲದಿಲ್ಲ.