ಕಲ್ಬುರ್ಗಿ, ಅನಂತಮೂರ್ತಿ ಬಂಧಿಸಿ, ಗಡಿಪಾರು ಮಾಡಿ
ಹಿಂದೂ ದೇವತೆಗಳು, ವಿಗಹಾರಾಧನೆ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಸಂಶೋಧಕ ಪ್ರೊ.ಎಂ.ಎಂ. ಕಲ್ಬುರ್ಗಿ ...
ಉಡುಪಿ: ಹಿಂದೂ ದೇವತೆಗಳು, ವಿಗಹಾರಾಧನೆ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಸಂಶೋಧಕ ಪ್ರೊ.ಎಂ.ಎಂ. ಕಲ್ಬುರ್ಗಿ ಮತ್ತು ಸಾಹಿತಿ ಯು.ಆರ್. ಅನಂತಮೂರ್ತಿ ವಿರುದ್ಧ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ 'ಬುದ್ಧಿಜೀವಿ'ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಮಂಗಳವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿವೆ. ಗಡಿಪಾರು ಮಾಡುವಂತೆ ಆಗ್ರಹಿಸಿವೆ.
ಕಲ್ಬುರ್ಗಿ ಹಾಗೂ ಅನಂತಮೂರ್ತಿ ಅವರಿಂದಾಗಿ ಬಹುಸಂಖ್ಯಾತ ಹಿಂದೂಗಳ ಧಾರ್ಮಿಕ ಸ್ವಾತಂತ್ರ್ಯ ಧಕ್ಕೆಯಾಗಿದೆ, ನಂಬಿಕೆಗಳಿಗೆ ನೋವುಂಟಾಗಿದೆ. ಈ ಇಬ್ಬರೂ ಸಾಹಿತಿಗಳನ್ನು ಬಂಧಿಸಿ ಜೈಲಿಗಟ್ಟಬೇಕು. ಇವರಿಗೆ ನೀಡಲಾಗಿರುವ ಎಲ್ಲ ಗೌರವ, ಮಾನ್ಯತೆಯನ್ನು ಸರ್ಕಾರ ಹಿಂಪಡೆಯಬೇಕು ಎಂದು ಆಗ್ರಹಿಸಿವೆ. ಇದೇ ವೇಳೆ, ಇಬ್ಬರೂ ಸಾಹಿತಿಗಳ ವಿರುದ್ಧವೂ ಕ್ರಿಮಿನಲ್ ದೂರು ದಾಖಲಿಸುವುದಾಗಿ ಹಿಂದೂ ಯುವಸೇನೆ ಮಾಹಿತಿ ನೀಡಿದೆ. ಧಾರವಾಡ, ಹಾಸನ, ರಾಯಚೂರು, ಬೀದರ್, ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಬೆಳಗಾವಿ ಮತ್ತು ಶಿವಮೊಗ್ಗದಲ್ಲಿ ಬಿಜೆಪಿ ನೇತೃತ್ವದಲ್ಲಿ, ಮಂಗಳೂರಿನಲ್ಲಿ ಹಿಂದೂ ಯುವಸೇನೆ ಹಾಗೂ ಮೈಸೂರಿನಲ್ಲಿ ಮೈಸೂರು ರಕ್ಷಣಾ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು