ಕಲ್ಬುರ್ಗಿ ವಿರುದ್ಧ ಕ್ರಮ
ಹಿಂದೂ ದೇವತೆಗಳ ವಿಗ್ರಹಾರಾಧನೆ ಕುರಿತು ಕೀಳಾಗಿ ಮಾತನಾಡಿರುವ ಸಂಶೋಧಕ...
ತುಮಕೂರು: ಹಿಂದೂ ದೇವತೆಗಳ ವಿಗ್ರಹಾರಾಧನೆ ಕುರಿತು ಕೀಳಾಗಿ ಮಾತನಾಡಿರುವ ಸಂಶೋಧಕ ಪ್ರೊ.ಎಂ.ಎಂ. ಕಲ್ಬುರ್ಗಿ ವಿರುದ್ಧ ಕಾನೂನು ಹೋರಾಟ ನಡೆಸುವ ಸುಳಿವನ್ನು ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ನೀಡಿದ್ದಾರೆ.
ಹಿಂದುಗಳ ಧಾರ್ಮಿಕ ಭಾವನೆಗಳ ಕುರಿತು ಕಲ್ಬುರ್ಗಿ ಕೀಳಾಗಿ ಮಾತನಾಡಿದ್ದಾರೆ. ಈ ಕೃತ್ಯಕ್ಕಾಗಿ ಕಲ್ಬುರ್ಗಿ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಅವರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವ ಕುರಿತು ಹಿತೈಷಿಗಳಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಸುರೇಶ್ ಕುಮಾರ್ ಆಗ್ರಹಿಸಿದ್ದಾರೆ.
ಕೈ ಮಸಕು ಇಡುವ ಬುದ್ಧಿಗೇಡಿಗಳು: 'ಕೈಮಸಕು'(ಮಾಟ ಮಂತ್ರ) ಇಡುವ ಧೂರ್ತರಿಗೆ ಕನಿಷ್ಠ 15 ದಿನಗಳಿಗೊಮ್ಮೆಯಾದರೂ ಈ ಕೃತ್ಯ ಮಾಡದೇ ಇದ್ದರೇ ನೆಮ್ಮದಿಯಿರಲ್ಲ. ಅದೇ ರೀತಿ ಅನಂತಮೂರ್ತಿ, ಕಲ್ಬುರ್ಗಿಯಂಥ ಬುದ್ಧಿಜೀವಿಗಳು ಹಿಂದು ಧರ್ಮೀಯರ ಭಾವನೆಗಳಿಗೆ ಪದೇ, ಪದೆ ಧಕ್ಕೆ ತರುವ ಹೇಳಿಕೆ ನೀಡದಿದ್ದರೆ ನೆಮ್ಮದಿ ಕಳೆದುಕೊಂಡು ಬುದ್ಧಿಗೇಡಿಗಳಂತಾಡುತ್ತಾರೆ. ಮೌಢ್ಯಾಚರಣೆಯೇ ಬೇರೆ. ಧರ್ಮವೇ ಬೇರೆ. ಇದರ ಅರಿವಿಲ್ಲದ ಕಲ್ಬುರ್ಗಿಯವರಂಥ ಬುದ್ಧಿಜೀವಿಗಳು ಜನರ ಭಾವನೆ ಅರ್ಥ ಮಾಡಿಕೊಳ್ಳಬೇಕು ಎಂದರು.