ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮಟ್ಟುಗುಳ್ಳ, ಶಂಕರಪುರ ಮಲ್ಲಿಗೆ ನಕಲಿ ಮಾಡಿದರೆ ಹುಷಾರ್!

ಇನ್ನು ಮುಂದೆ ಮಟ್ಟು ಗುಳ್ಳ ಎಂದು ಹೇಳಿ ಯಾವುದೋ ಊರಿನ ಗುಳ್ಳ (ಬದನೆ), ಶಂಕರಪುರ ಮಲ್ಲಿಗೆ ಎಂದು ಯಾವುದೋ..

Rashmi Kasaragodu
Updated On : 11 Jun 2014, 1:19 am

ನಕಲಿ ಹೆಸರಲ್ಲಿ ಮಾರಾಟ ಮಾಡಿದರೆ ಜೈಲು ದಂಡ ಅಥವಾ ಜೈಲು ವಾಸ ಗ್ಯಾರಂಟಿ
ಮಟ್ಟುಗುಳ್ಳ, ಶಂಕರಪುರ ಮಲ್ಲಿಗೆಗೆ ಬಂತು ಟ್ರೇಡ್‌ಮಾರ್ಕ್



ಉಡುಪಿ: ಇನ್ನು ಮುಂದೆ ಮಟ್ಟು ಗುಳ್ಳ ಎಂದು ಹೇಳಿ ಯಾವುದೋ ಊರಿನ ಗುಳ್ಳ (ಬದನೆ), ಶಂಕರಪುರ ಮಲ್ಲಿಗೆ ಎಂದು ಯಾವುದೋ ಊರಿನ ಮಲ್ಲಿಗೆಯನ್ನು ತಂದು ಮಾರುವವರು, ಗ್ರಾಹಕರಿಗೆ ಮೋಸ ಮಾಡುವವರೇ ಹುಷಾರ್...! ಇಂಥ ಕೃತ್ಯಕ್ಕೆ ಇನ್ನು ಮುಂದೆ ದಂಡ ಭರಿಸಬೇಕಾದೀತು ಅಥವಾ ಒಂದಷ್ಟು ಸಮಯ ಜೈಲಿನಲ್ಲಿಯೂ ಕಳೆಯಬೇಕಾದೀತು...
ಯಾಕೆಂದರೆ ಮಟ್ಟು ಗುಳ್ಳ ಮತ್ತು ಶಂಕರಪುರ ಮಲ್ಲಿಗೆ ಈಗ ಕೇಂದ್ರ ಸರ್ಕಾರದಿಂದ ಟ್ರೇಡ್ ಮಾರ್ಕ್ (ಬ್ರ್ಯಾಂಡ್ ನೇಮ್ ಮತ್ತು ಬ್ರ್ಯಾಂಡ್ ಲೋಗೋ) ಪಡೆದುಕೊಂಡಿವೆ. ಅಂದರೆ ಇವೆರಡೂ ಟ್ರೇಡ್ ಮಾರ್ಕ್ ಕಾಯ್ದೆ 1999 ಮತ್ತು ಟ್ರೇಡ್ ಮಾರ್ಕ್ ನಿಯಮ 2002ರಡಿ ನೋಂದಣಿಯಾಗಿವೆ. ಆದ್ದರಿಂದ ಇವುಗಳ ನಕಲಿಗಳ ತಯಾರಿ, ಮಾರಾಟ ಶಿಕ್ಷಾರ್ಹ ಅಪರಾಧವಾಗಿದೆ.
 ಉಡುಪಿ ಜಿಲ್ಲೆಗೆ ಕೀರ್ತಿ ತಂದು ಕೊಟ್ಟಿರುವ ಮಟ್ಟು ಗ್ರಾಮ ಮತ್ತು ಸುತ್ತಲಿನ ನಾಲ್ಕೈದು ಗ್ರಾಮಗಳಲ್ಲಿ ಬೆಳೆಯುವ ಬದನೆ 'ಮಟ್ಟು ಗುಳ್ಳ' ಮತ್ತು ಶಂಕರಪುರ ಗ್ರಾಮ ಮತ್ತು ಸುತ್ತಲಿನ ಹತ್ತಾರು ಗ್ರಾಮಗಳಲ್ಲಿ ಬೆಳೆಯುವ 'ಮಲ್ಲಿಗೆ ಹೂವು' ಇತ್ತೀಚೆಗೆ ನಕಲಿ ಮಟ್ಟು ಗುಳ್ಳ ಮತ್ತು ನಕಲಿ ಶಂಕರಪುರ ಮಲ್ಲಿಗೆಯ ಹಾವಳಿಯಿಂದಾಗಿ ನಿಜವಾದ ಮಟ್ಟು ಗುಳ್ಳ- ಶಂಕರಪುರ ಮಲ್ಲಿಗೆ ಬೆಳೆಗಾರರು ಕಳೆದ ಮೂರ್ನಾಲ್ಕು ವರ್ಷಗಳಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದನ್ನು ತಡೆಯಲು ಮಟ್ಟು ಗುಳ್ಳ ಬೆಳೆಗಾರರ ಸಂಘ ಮತ್ತು ಶಂಕರಪುರ ಮಲ್ಲಿಗೆ ಬೆಳೆಗಾರರ ಸಂಘಗಳನ್ನು ಆರಂಭಿಸಲಾಯಿತಾದರೂ, ಕಾನೂನು ಸಹಕಾರ ಇಲ್ಲದೆ ನಕಲಿ ಹಾವಳಿ ನಿಲ್ಲಿಸುವುದು ಸಾಧ್ಯವಾಗಲಿಲ್ಲ.
ಭೌಗೋಳಿಕ ಮಾನ್ಯತೆ: ಈ ಸಂದರ್ಭದಲ್ಲಿ ತೋಟಗಾರಿಕಾ ಇಲಾಖೆಯ ಅಧಿಕಾರಿಗಳ ಸಹಕಾರದೊಂದಿಗೆ ಈ ಎರಡೂ ಬೆಳೆಗಳನ್ನು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಚೆನ್ನೈಯಲ್ಲಿರುವ ಇಂಟಲೆಕ್ಚುವಲ್ ಪ್ರಾಪರ್ಟಿ ಇಂಡಿಯಾ (ಐಪಿಇಂಡಿಯಾ) ಸಂಸ್ಥೆಯಲ್ಲಿ ನೋಂದಾಯಿಸಿಕೊಂಡು ಜಿಯಾಗ್ರಫಿಕಲ್ ಇಂಡಿಕೇಶನ್(ಭೌಗೋಳಿಕ ಮಾನ್ಯತೆ)ಯನ್ನು ಪಡೆದುಕೊಳ್ಳಲಾಯಿತು. ಇದೀಗ ಐಪಿಇಂಡಿಯಾ ಮಟ್ಟು ಗುಳ್ಳ ಮತ್ತು ಶಂಕರಪುರ ಮಲ್ಲಿಗೆ ಎಂಬ ಹೆಸರುಗಳನ್ನು ಕೂಡ ನೋಂದಾಯಿಸಿಕೊಂಡು ಎರಡೂ ಬೆಳೆಗಳಿಗೆ ಲೋಗೋ (ಲಾಂಛನ)ಗಳನ್ನು ನೀಡಿದೆ.
ಇನ್ನು ಮುಂದೆ ಭಾರತದಾದ್ಯಂತ ಈ ಹೆಸರು ಮತ್ತು ಲಾಂಛನಗಳನ್ನು ಬೇರೆ ಯಾರೂ ಯಾವುದೇ ಬೆಳೆಗೆ ಬಳಸುವಂತಿಲ್ಲ. ಬಳಸಿದರೆ ಟ್ರೇಡ್ ಮಾರ್ಕ್ ಕಾಯ್ದೆ 1999ಯಡಿ ಶಿಕ್ಷಾರ್ಹ ಅಪರಾಧ. ಈ ಎರಡೂ ಹೆಸರು ಮತ್ತು ಲಾಂಛನಗಳನ್ನು ಆಯಾ ಬೆಳೆಯ ಬೆಳೆಗಾರರ ಸಂಘಕ್ಕೆ ನೀಡಲಾಗುವುದು. ಈ ಸಂಘಗಳ ಸದಸ್ಯರು ತಾವು ಬೆಳೆಸುವ ಮಟ್ಟು ಗುಳ್ಳ ಅಥವಾ ಶಂಕರಪುರ ಮಲ್ಲಿಗೆಗೆ ಈ ಹೆಸರು ಮತ್ತು ಲಾಂಛನಗಳನ್ನು ಬಳಸಿಕೊಂಡು ವ್ಯವಹಾರ ನಡೆಸಬೇಕಾಗುತ್ತದೆ. ಸಂಘದ ಮೂಲಕವೇ ಬೆಳೆಯ ಬೆಲೆಯನ್ನೂ ನಿರ್ಧರಿಸಲಾಗುತ್ತದೆ. ಇದರಿಂದ ಗ್ರಾಹಕರಿಗೂ ಅಸಲಿ ಮಟ್ಟು ಗುಳ್ಳ ಅಥವಾ ಶಂಕರಪುರ ಮಲ್ಲಿಗೆ ಸರಿಯಾದ ಬೆಲೆಗೆ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತದೆ. ಬೆಳೆಗಾರರಿಗೂ, ಮಾರಾಟಗಾರರಿಗೂ, ಗ್ರಾಹಕರಿಗೂ ಲಾಭವಾಗುತ್ತದೆ ಎನ್ನುತ್ತಾರೆ ಉಡುಪಿ ಜಿಲ್ಲಾ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಡಾ. ಸತೀಶ್.

 ಸುಭಾಶ್ಚಂದ್ರ ಎಸ್. ವಾಗ್ಳೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement