ಮೂರ್ತಿ ದೇವರ ಪ್ರತೀಕ
ರಾಷ್ಟ್ರಧ್ವಜಕ್ಕೆ ಗೌರವ ಕೊಡುತ್ತೇವೆ. ಅದರರ್ಥ ರಾಷ್ಟ್ರಧ್ವಜವನ್ನು ಮಾಡಿರುವ ಬಟ್ಟೆಗೆ ನೀಡುವ ಗೌರವ ಅದು ಅಂತಲ್ಲ...
ರಾಷ್ಟ್ರಧ್ವಜಕ್ಕೆ ಗೌರವ ಕೊಡುತ್ತೇವೆ. ಅದರರ್ಥ ರಾಷ್ಟ್ರಧ್ವಜವನ್ನು ಮಾಡಿರುವ ಬಟ್ಟೆಗೆ ನೀಡುವ ಗೌರವ ಅದು ಅಂತಲ್ಲ. ಅದು ರಾಷ್ಟ್ರದ ಪ್ರತೀಕವಾದ ಧ್ವಜಕ್ಕೆ ನೀಡುವ, ಆ ಮೂಲಕ ರಾಷ್ಟ್ರಕ್ಕೆ ನೀಡುವ ಗೌರವ. ಅದೇ ರೀತಿ ಮೂರ್ತಿಗೆ ಭಕ್ತಿ ತೋರಿಸಿದರೆ ಅದರರ್ಥ ಮೂರ್ತಿಯನ್ನು ಮಾಡಿರುವ ಕಲ್ಲಿಗೋ, ಲೋಹಕ್ಕೋ ತೋರಿಸುವ ಭಕ್ತಿ ಅದಲ್ಲ. ಆ ಮೂರ್ತಿಯಲ್ಲಿರುವ ದೇವರ ಪ್ರತೀಕಕ್ಕೆ ಮಾಡುವ ಭಕ್ತಿ. ಅದು ಹೇಗೆ ಮೂಢನಂಬಿಕೆ, ಅಂಧ ಶ್ರದ್ಧೆಯಾಗುತ್ತದೆ?
ಪ್ರೊ.ಎಂ.ಎಂ. ಕಲಬುರ್ಗಿ ಅವರು ತಿಳಿದವರು, ಪ್ರಜ್ಞಾವಂತರು. ಅವರ ಮೇಲೆ ನಮಗೆ ವಿಶೇಷ ಪ್ರೀತಿ, ಆದರಗಳಿವೆ. ಆದರೆ, ಅನಗತ್ಯವಾಗಿ ಬೇರೆಯವರ ಭಾವನೆಗೆ ನೋವುಂಟುಮಾಡುವ ಕೆಲಸ ಯಾಕೆ ಮಾಡಿದ್ದಾರೋ ಗೊತ್ತಾಗುತ್ತಿಲ್ಲ.
ಬಸವಣ್ಣನವರೂ ಮೂರ್ತಿ ಪೂಜೆ ಸರಿಯಲ್ಲ ಎಂದಿದ್ದರು. ಆದರೂ, ಅವರನ್ನು ಗೌರವಿಸುವ ಲಿಂಗಾಯತರಾಗಲಿ, ವೀರಶೈವರಾಗಲಿ ಇಂದಿಗೂ ಲಿಂಗವನ್ನು ಪೂಜಿಸುತ್ತಾರೆ. ಇದು ಸರಿಯಲ್ಲ ಎಂದರೆ ಬಸವಣ್ಣ ಅವರನ್ನೇ ಅನುಮಾನಿಸಿದ ಹಾಗೇ, ಅವಮಾನಿಸಿದ ಹಾಗೇ ಆಗುತ್ತದೆ.
ಆಚಾರ್ಯ ಮಧ್ವರು ಕೂಡ ಮೂರ್ತಿಯೇ ದೇವರಲ್ಲ ಎಂದಿದ್ದರು. ಅದರರ್ಥ ಮೂರ್ತಿಯನ್ನು ಪೂಜಿಸಬಾರದು ಎಂದಲ್ಲ. ಮೂರ್ತಿಯಲ್ಲಿರುವ ದೇವರ ಪ್ರತೀಕವನ್ನು ಪೂಜಿಸುವುದು. ದೇವರ ಸ್ಮರಣೆ ಮಾಡುವುದಕ್ಕೆ, ದೇವರಲ್ಲಿ ಮನಸ್ಸನ್ನು ಕೇಂದ್ರೀಕರಿಸುವುದಕ್ಕೆ ಒಂದು ಪ್ರತಿಬಿಂಬ ಬೇಕಾಗುತ್ತದೆ. ಅದಕ್ಕಾಗಿ ಮೂರ್ತಿಯಲ್ಲಿ ದೇವರನ್ನು ಕಾಣಲಾಗುತ್ತದೆ.
- ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ,
ಪೇಜಾವರ ಮಠ