ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮೂರ್ತಿ ಮೂತ್ರಿ ಪ್ರಸಂಗ, ಕಲಬುರ್ಗಿ ಅಧಿಕ ಪ್ರಸಂಗ

ಗಣಪತಿಯನ್ನು ಮಾಡ್ರೋ ಅಂದ್ರೆ ಅವರಪ್ಪನ್ನ ಮಾಡಿ ಕೂರಿಸಿದ್ರಂತೆ ಎಂಬ ಮಾತಿದೆ. ನಮ್ಮ ಬುದ್ಧಿ(ಕಮ್ಮಿ)ಜೀವಿಗಳು...

Rashmi Kasaragodu
Updated On : 11 Jun 2014, 1:05 am

ಗಣಪತಿಯನ್ನು ಮಾಡ್ರೋ ಅಂದ್ರೆ ಅವರಪ್ಪನ್ನ ಮಾಡಿ ಕೂರಿಸಿದ್ರಂತೆ ಎಂಬ ಮಾತಿದೆ. ನಮ್ಮ ಬುದ್ಧಿ(ಕಮ್ಮಿ)ಜೀವಿಗಳು ಅದನ್ನೇ ಮಾಡ್ತಿರೋದು. ಸರ್ಕಾರ ಮೂಢನಂಬಿಕೆ ನಿಷೇಧಕ್ಕೆ ಮುಂದಾದರೆ ಅವರು ನಂಬಿಕೆಗಳನ್ನೇ ನಾಶಮಾಡುವ ಹಂತ ತಲುಪಿದ್ದಾರೆ. ಸರ್ಕಾರಕ್ಕೆ ಬುದ್ಧಿಬೇಕಿತ್ತು. ಅದಕ್ಕಿಲ್ಲ ಅಂದರೆ ಇವರಿಗಾದರೂ ಬೇಡವೇ?
ಹಿಂದುಗಳ ಬಗ್ಗೆ ಏನು ಮಾತನಾಡಿದರೂ ನಡೆಯುತ್ತದೆ ಎಂಬುದು ಇವರಿಗೆ ಗೊತ್ತಾಗಿಬಿಟ್ಟಿದೆ. ಯಾಕೆಂದರೆ ಹಿಂದುಗಳು ಏನೂ ಪ್ರತಿಕ್ರಿಯಿಸುವುದಿಲ್ಲ. ಪ್ರತಿಕ್ರಿಯಿಸಿದರೂ ಅದನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಹತ್ತಿಕ್ಕುವಿಕೆ ಎಂದೋ, ಮೂಲಭೂತವಾದಿಗಳು ಎಂದೋ, ಅಸಹಿಷ್ಣುಗಳು ಎಂದೋ ಜರೆಯಬುಹುದು ಎಂಬ ಹುನ್ನಾರ. ಈ ದೇಶದಲ್ಲಿ ಹಿಂದೂ ಉಗ್ರವಾದ ಇದೆ ಎಂಬುದನ್ನೂ ಸಾಧಿಸಿತೋರಿಸಬಹುದು ಎಂಬ ದುರಾಲೋಚನೆ. ಅಷ್ಟಕ್ಕೂ ಸಮಾಧಾನವಾಗದಿದ್ದರೆ ಮೋದಿ ಪ್ರಧಾನಿ ಪಟ್ಟಕ್ಕೇರಿದ್ದರಿಂದಲೇ ಬುದ್ಧಿಜೀವಿಗಳನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ ಎಂದೂ ಆರೋಪಿಸಿ, ನಾವು ಅಂದು ಹೇಳಿದ್ದು ನಿಜವಾಗುತ್ತಿದೆ ಎಂದು ಬಿಂಬಿಸಬಹುದು. ಇದನ್ನು ಬುದ್ಧಿ ಅನ್ನಬೇಕೋ ದುರ್ಬುದ್ಧಿ ಅನ್ನಬೇಕೋ ನೀವೇ ನಿರ್ಧರಿಸಿ.
ಮೂಢ ನಂಬಿಕೆಗಳನ್ನು ವಿರೋಧಿಸುವ ಕಲಬುರ್ಗಿಯವರಿಗೆ ಎಂಥ ಮೂಢನಂಬಿಕೆ ಇದೆ ನೋಡಿ. 'ವಿಧಾನಸೌಧದಲ್ಲಿ ದೇವರ ಫೋಟೊಗಳನ್ನು ತೆಗೆದು ಸಿದ್ದರಾಮಯ್ಯನವರು ವಿಧಾನಸೌಧ ಸ್ವಚ್ಛಗೊಳಿಸಬೇಕು. ದೇವರ ಫೋಟೊ ಇರುವುದರಿಂದ ಪೂಜೆ ಮಾಡುತ್ತಾರೆ. ಅದರಿಂದ ಕೆಲಸ ತಡವಾಗುತ್ತದೆ' ಎಂದಿದ್ದಾರೆ. ಆದರೆ ಇಂದಿಗೂ ಲಂಚ ತೆಗೆದುಕೊಳ್ಳಲು ಜನ ಹೆದರುತ್ತಾರಾದರೆ ದೇವರಿಗೆ ಹೊರತು ತೂಗು ಹಾಕಿರುವ ಗಾಂಧೀಜಿ ಫೋಟೋಕ್ಕಲ್ಲ.
ಸರ್ಕಾರಿ ಕಚೇರಿಗೆ ಅದೆಷ್ಟೋ ಜನ ತಡವಾಗಿಯೇ ಬರುತ್ತಾರೆ. ಅವರನ್ನು ಸರ್ಕಾರವೂ ಏನೂ ಮಾಡಿಲ್ಲ, ದೇವರೂ ಏನೂ ಮಾಡಿಲ್ಲ. ವಿಧಾನಸೌಧದಲ್ಲಿ ಕೆಲಸ ವಿಳಂಬವಾಗುತ್ತಿರುವುದು ದೇವರ ಫೋಟೊ ಪೂಜೆಗಳಿಂದಲ್ಲ, ಶಿಸ್ತಿನ 'ಣಕೊರತೆಯಿಂದ. ಲಂಚದ ಆಸೆಯಿಂದ. ಹದಗೆಟ್ಟ ಆಡಳಿತ ವ್ಯವಸ್ಥೆಯಿಂದ. ವಿಧಾನಸೌಧವನ್ನು ಸ್ವಚ್ಛಗೊಳಿಸುವ ಆಸೆ ಕಲಬುರ್ಗಿಯವರಿಗಿದ್ದರೆ ಲಂಚ, ಭ್ರಷ್ಟಾಚಾರ, ಜಾತಿ ಪಕ್ಷಪಾತವನ್ನು ಮೊದಲು ಅಲ್ಲಿಂದ ಓಡಿಸಲಿ. ಅಂದರೆ ಮಾತ್ರ ವಿಧಾನಸೌಧ ಸ್ವಚ್ಛವಾದಂತಾಗುತ್ತದೆ. ಕೇವಲ ದೇವರ ಫೋಟೊವನ್ನು ವಿಧಾನಸೌಧದಿಂದ ತೆಗೆದುಹಾಕುವುದರಿಂದ ವಿಧಾನಸೌಧ ಸ್ವಚ್ಛವಾಗುತ್ತದೆ ಎಂಬ ಭಾವನೆಯೇನಾದರೂ ಕಲಬುರ್ಗಿಯವರಿಗಿದ್ದರೆ ಅದಕ್ಕಿಂತ ದೊಡ್ಡ ಮೂಢನಂಬಿಕೆ ಬೇರೊಂದಿಲ್ಲ.
ಗಂಗೆಯ ಬಗ್ಗೆ ಕೊಂಚವಾದರೂ ಗೊತ್ತಿದ್ದರೆ ಕಲಬುರ್ಗಿಯವರು 'ಗಂಗೆಗಿಂತ ನನ್ನೂರಿನ ಹಳ್ಳವೇ ಶ್ರೇಷ್ಠ' ಎಂದು ಹೇಳುತ್ತಿರಲಿಲ್ಲ. ಯಾಕೆಂದರೆ ಬೇಸಿಗೆಯಲ್ಲಿ ಕಲಬುರ್ಗಿಯವರ ಊರಿನ ಹಳ್ಳದಲ್ಲಿ ಕುಂಡೆ ತೊಳೆಯಲೂ ನೀರು ಸಿಗಲಿಕ್ಕಿಲ್ಲ. ಆದರೆ ನೀರಿಗೆ ತತ್ವಾರವಾಗುವ ಬೇಸಿಗೆಯಲ್ಲೇ ಗಂಗಾನದಿ ತುಂಬಿ ಹರಿಯುತ್ತದೆ. ಗಂಗಾನದಿಯ ಇಕ್ಕೆಲಗಳಲ್ಲಿ ಫಲವತ್ತಾದ ಭೂಮಿಯನ್ನು ಮತ್ತು ಅಲ್ಲಿ ನಳನಳಿಸುವ ಬೆಳೆಯನ್ನು ನೋಡಿದರೆ ಗೊತ್ತಾಗುತ್ತದೆ ಜನ ಯಾಕೆ ಗಂಗೆಯನ್ನು ದೇವರೆಂದು ಪೂಜಿಸುತ್ತಾರೆಂದು.              

ಉತ್ತರ ಭಾರತದ ಜನ 'ಗಂಗಾನದಿ' ಎಂದು ಕರೆಯುವುದಿಲ್ಲ. ಅವರು 'ಗಂಗಾಮಾಯಿ' (ತಾಯಿ) ಎಂದೇ ಕರೆಯುತ್ತಾರೆ. ಅದಕ್ಕೆ ಕಾರಣ ಫಲವತ್ತಾದ ಗಂಗಾನದಿಯ ದಡಗಳು. ಗಂಗಾನದಿ ಹೊತ್ತು ತರುವ ಫಲವತ್ತಿನ ಗುಣಗಳು. ಕಡುಬೇಸಿಗೆಯಲ್ಲೂ ತುಂಬಿ ಹರಿಯುವ ಅದರ ತಾಕತ್ತಿಗೆ. ಇದಕ್ಕಾಗಿ ಜನ ಅದರ ಬಗ್ಗೆ ಭಕ್ತಿಭಾವ, ಪೂಜ್ಯ ಭಾವನೆ ಬೆಳೆಸಿಕೊಂಡಿದ್ದಾರೆಯೇ ಹೊರತು ಯಾವನೋ ಭಟ್ಟ, ಪುರೋಹಿತ, ಸ್ವಾಮೀಜಿ ಬಂದು ಹೇಳಿದರು ಅಂತಲ್ಲ. ಇದೆಲ್ಲ ಪೂರ್ವಾಗ್ರಹ ಪೀಡಿತ ದುರ್ಬುದ್ಧಿಜೀವಿಗಳಿಗೆ ಎಲ್ಲಿ ಅರ್ಥವಾಗಬೇಕು.
'ಕಣ್ಣು ತೆಗೆದು ಮಾಡುವ ಕ್ರಿಯೆ ಧರ್ಮ ಹಾಗೂ  ವಿವೇಕವೂ ಹೌದು. ಕಣ್ಣು ಮುಚ್ಚಿ ಮಾಡುವ ಕೆಲಸ ಕರ್ಮ ಮತ್ತು ಅದು ಅವಿವೇಕದ ಸಂಕೇತ' ಎಂದೂ ಅವರು ಹೇಳಿದ್ದಾರೆ. ಹಾಗೆ ನೋಡಿದರೆ ಕಲಬುರ್ಗಿಯವರ ಪ್ರಕಾರ ಮುತ್ತು ಕೊಡುವುದೂ ತಪ್ಪು. ಯಾಕೆಂದರೆ ಮುತ್ತು ಕೊಡುವಾಗ ಎಲ್ಲರೂ ಕಣ್ಣುಮುಚ್ಚಿಕೊಳ್ಳುತ್ತಾರೆ. ಕಣ್ಣುಮುಚ್ಚಿಕೊಂಡು ಮಾಡುವುದೆಲ್ಲ ಕರ್ಮ ಮತ್ತು ಅದು ಅವಿವೇಕ! ಕಲಬುರ್ಗಿ ಅವರು ಕೇವಲ ಸಾಹಿತಿಯಲ್ಲ. ಸಂಶೋಧಕರು. ಇತಿಹಾಸ ತಜ್ಞರು. ಅವರಂತಹ ವ್ಯಕ್ತಿಗೆ ನಮ್ಮ ದೇಶದ ಇತಿಹಾಸ, ಅದರಲ್ಲಿ ಹಾಸುಹೊಕ್ಕಾಗಿರುವ ನಂಬಿಕೆ, ನಮ್ಮ ಜೀವನ, ಸಂಸ್ಕೃತಿಯಲ್ಲಿ ದೇವರ ಪಾತ್ರಗಳ ಅರಿವಿಲ್ಲದಿರಲು ಸಾಧ್ಯವೇ ಇಲ್ಲ. ನಮ್ಮ ಸಂಸ್ಕೃತಿಯ ಮೂಲವೇ ದೇವರು ಎಂಬುದೂ ಅವರಿಗೆ ಗೊತ್ತಿಲ್ಲದಿಲ್ಲ. ಗೊತ್ತಿದ್ದೂ ಹೇಳುತ್ತಾರೆ.
ಕಲಬುರ್ಗಿಯವರೇ ಎಷ್ಟೋ ಜನ ಕೆಟ್ಟಕೃತ್ಯಗಳಿಗೆ ಕೈ ಹಾಕದಿರುವುದು ದೇವರ ಮೇಲಿನ ನಂಬಿಕೆ ಮತ್ತು ಭಯದಿಂದಲ್ಲವೇ? ನಾವು ಒಳ್ಳೆಯವರಾಗಿರಬೇಕು ಎಂದು ಎಷ್ಟೋ ಜನ ಬಯಸುವುದು ಎಲ್ಲವನ್ನೂ ನೋಡುವ ದೇವರೊಬ್ಬನಿದ್ದಾನೆ ಎಂಬ ಕಾರಣಕ್ಕಲ್ಲವೇ? ನಾನು ಒಳ್ಳೆಯನಾಗಿರಬೇಕು ಯಾಕೆಂದರೆ ನಮ್ಮ ಕಾನೂನಿದೆ ಅಂತ ಯ.ಾರಾದರೂ ಯೋಚಿಸುತ್ತಾರಾ? ಯಾರಿಗೂ ಗೊತ್ತಾಗದಂತೆ ಏನು ಬೇಕಾದರೂ ಮಾಡಬಹುದು, ಆದರೆ ಪರಮಾತ್ಮನ ಕಣ್ತಪ್ಪಿಸಿ ಏನು ಮಾಡಲು ಸಾಧ್ಯವಿಲ್ಲ ಎಂಬ ನಂಬಿಕೆಯೇ ಅಷ್ಟೋ ಜನರನ್ನು ಕೆಟ್ಟ ಕೆಲಸದಿಂದ ದೂರ ಇಟ್ಟಿದೆ ಎಂಬುದು ಸತ್ಯವಲ್ಲವೇ?ಅದೆಲ್ಲ ಹೋಗಲಿ ಜನ ನಿಮ್ಮಂಥವರನ್ನು ಸಹಿಸಿಕೊಂಡಿರುವುದು ಕೂಡ ಅವರ ಮಾಡಿದ್ದನ್ನು ಅವರೇ ಅನುಭವಿಸುತ್ತಾರೆ ಎಂಬ ನಂಬಿಕೆಯಿಂದಲೇ ಎಂದು ನಿಮಗನಿಸುತ್ತಿಲ್ಲವೇ?
ನಮ್ಮ ದೇಶದಲ್ಲಿ ಶಿಕ್ಷೆಯ ದರ ಶೇ.30ನ್ನೂ ದಾಟುವುದಿಲ್ಲ. ನ್ಯಾಯಾಲಯಗಳಲ್ಲಿ ಸರಿಯಾಗಿ ಕೇಸು ನಡೆಸಿದರೆ ಶಿಕ್ಷೆಗೊಳಗಾಗುವುದರೊಳಗೇ ಹಣ್ಣು ಹಣ್ಣು ಮುದುಕನಾಗಿಬಿಡಬಹುದು. ಹೀಗಿರುವಾಗ ಕಾನೂನಿನ ಭಯ ಎಷ್ಟು ಜನಕ್ಕಿದೆ ಕಲಬುರ್ಗಿಯವರೇ? ಜನರಿಗೆ ಯಾವುದಾದರೂ ಒಂದು ಭಯ ಇರಲಿ. ಆ ಮೂಲಕ ಸಮಾಜ ಒಳ್ಳೆಯದಾಗಿರಲಿ ಎಂದೇ ಹಿಂದೆ ದೇವರನ್ನು ಸೃಷ್ಟಿಸಿರಬಹುದು. ಅದೇ ಆಧಾರದಲ್ಲಿ ಸ್ವರ್ಗ, ನರಕಗಳ ಕಲ್ಪನೆಯಿದೆ. ನೀವು ದೇವರನ್ನು ನಂಬದಿದ್ದರೆ ಯಾರೂ ಬೇಸರ ಮಾಡಿಕೊಳ್ಳುವುದಿಲ್ಲ.  ಅದು ನಿಮ್ಮ ಖಾಸಗಿ ವಿಷಯ. ಕಲಬುರ್ಗಿಯವರು ಬಂದು ಕಾಣಿಕೆ ಹಾಕುತ್ತಾರೆ ಎಂದು ಯಾರೂ ದೇವಸ್ಥಾನ ಕಟ್ಟಿಸಿಲ್ಲ, ಆ ಕಾಣಿಕೆಯಿಂದ ಜೀವನ ಸಾಗುತ್ತದೆ ಎಂದು ಯಾವ ಅರ್ಚಕರೂ ಕಾದು ಕುಳಿತಿಲ್ಲ.
ದೇವರನ್ನು ನಂಬುವುದು ಬಿಡುವುದು ಜನರಿಗೆ ಬಿಟ್ಟಿದ್ದು. ದೇವರಿದ್ದಾನೆ ಆದರೆ ಅಮೂರ್ತ ಸ್ವರೂಪ ಎನ್ನುತ್ತೀರಿ. ಕಾಣದ ದೇವರು ಇದ್ದಾನೆ ಎಂದು ಹೇಳುವುದೂ ಮೂಢನಂಬಿಕೆಯೇ ಅಲ್ಲವೇ ಕಲಬುರ್ಗಿಯವರೇ? ಯಾಕೆಂದರೆ ತರ್ಕಬದ್ಧವಾಗಿ ಮಾತನಾಡಿದರೆ ಯಾವುದು ಇದೆ ಎಂದು ಸಾಧಿಸಿ ತೋರಿಸುವುದು ಸಾಧ್ಯವಿಲ್ಲವೋ ಅದು ಇಲ್ಲ.
ಅಮೂರ್ತವಾದದ್ದು ಯಾವುದೇ ಆಗಲಿ ಅದು ಮನಸ್ಸಿಗೆ ನಾಟುವುದಿಲ್ಲ. ಎಟಕುವುದಿಲ್ಲ. ಅದನ್ನು ಮನುಷ್ಯ ನಂಬಲು, ಆರಾಧಿಸಲು ಸಾಧ್ಯವಿಲ್ಲ. ಅದಕ್ಕಾಗಿಯೇ ಮೂರ್ತ ಸ್ವರೂಪ ಕೊಟ್ಟಿದ್ದೇ ಹೊರತು ಬೇರೆ ಯಾವುದೇ ದುರುದ್ದೇಶದಿಂದಲ್ಲ. ನಿಮಗೆ ಅರ್ಚಕರ ಮೇಲೆ ಪುರೋಹಿತರ ಮೇಲೆ ದ್ವೇಷವಿದ್ದರೆ ದೇವಸ್ಥಾನಕ್ಕೆ ಹೋಗಬೇಡಿ. ದೇವರು ಎಲ್ಲೆಡೆ ಇದ್ದಾನೆ ಎಂಬುದಾದರೆ ಮನೆಯಿಂದಲೇ ಕೈ ಮುಗಿದರೂ ಅವನಿಗೆ ತಲುಪುತ್ತದೆ ಎನ್ನಿ. ಒಪ್ಪೋಣ. ಅದುಬಿಟ್ಟು ದೇವರ ಮೂರ್ತಿ ಮೇಲೆ ಮೂತ್ರ ಮಾಡಿದರೂ ತಪ್ಪಿಲ್ಲ ಎಂಬಂತಹ ಅವಿವೇಕದ, ಜನರ ಭಾವನೆಗಳಿಗೆ ಧಕ್ಕೆಯುಂಟುಮಾಡುವ, ಕಾನೂನು ಸುವ್ಯವಸ್ಥೆಗೆ ಭಂಗ ತರುವಂತಹ, ಸಮಾಜದ ಸಾಮರಸ್ಯ ಕೆಡಿಸುವಂತಹ ಹೇಳಿಕೆಗಳು ಶೋಭೆ ತರುವುದಿಲ್ಲ.
ಕಲಬುರ್ಗಿ ದೇವರ ಮೂರ್ತಿಯ ಮೇಲೆ ಮೂತ್ರ ಮಾಡಿದರೆ ಏನೂ ಆಗುವುದಿಲ್ಲ ಎಂಬುದನ್ನು ಬಿಂಬಿಸಲು 'ಮೂರ್ತಿಯವರ ಮೂತ್ರಿ ಪ್ರಸಂಗ'ವನ್ನು ಉದಾಹರಿಸಿದ್ದಾರೆ. ಅದು ಜನರಲ್ಲಿ ಎಂತಹ ಮೂಢನಂಬಿಕೆಯನ್ನು ಸೃಷ್ಟಿಸಬುಹುದು ಎಂಬುದು ಅವರಿಗೂ ಗೊತ್ತಿದ್ದಂತಿಲ್ಲ. ಯಾಕೆಂದರೆ ಅನಂತಮೂರ್ತಿಯವರು ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದರ ಕಷ್ಟ ಅವರಿಗೇ ಗೊತ್ತು. ಅವರಿಗೆ ಮೂತ್ರಪಿಂಡ ಸಮಸ್ಯೆ ಬರಲು 'ಮೂರ್ತಿಯವರ ಮೂತ್ರಿ ಪ್ರಸಂಗ'ವೇ ಕಾರಣ ಎಂದು ದೇವರ ಮೇಲೆ ಭಕ್ತಿ ಇರುವವರು ಭಾವಿಸಲು ಅವಕಾಶವಿದೆ. ಇದು ಜನರಿಗೆ ದೇವರ ಮೇಲಿನ ನಂಬಿಕೆ ಹೆಚ್ಚಿಸದೇ? ವಾದಕ್ಕಾಗಿ ಕೂಡ ಇದನ್ನು ಬಳಸಬಹುದು. ತರ್ಕಬದ್ಧವಾಗಿಯೇ ವಾದಿಸಬಹುದು. ಯಾಕೆಂದರೆ ಮೂರ್ತಿಯವರು ಮೂತ್ರಿಸಿದ ಮೂರ್ತಿ 'ಹಾನಿ ಮಾಡಿದರೆ ಕಾಡುವ' ದೇವತೆಯಾಗಿತ್ತು. ಆದರೆ ಇಷ್ಟೇ ದಿನದಲ್ಲಿ, ವರ್ಷದಲ್ಲಿ ಅದರ ಪರಿಣಾಮ ಗೊತ್ತಾಗುತ್ತದೆ ಎಂದು ಯಾರೂ ಹೇಳಿರಲಿಲ್ಲ! ಏನಂತೀರಿ ಕಲಬುರ್ಗಿಯವರೇ? ಮೈಕು ಸಿಕ್ಕಿತೆಂದು ಮಾತಾಡಿ, ಈಗ ನಾನು ಹೇಳಿಯೇ ಇಲ್ಲ ಎನ್ನುತ್ತೀರಲ್ಲ. ಅದರ ವಿಡಿಯೋ ಇದೆ. ಅದರ ಜತೆಗೆ ನಮ್ಮ ಈ ಎಲ್ಲ ಪ್ರಶ್ನೆಗೆ ಉತ್ತರಿಸುವ ತಾಕತ್ತು ನಿಮ್ಮ ಸಂಶೋಧಕ ಮನಸ್ಸಿಗಿದೆಯೇ?



ಬೆತ್ತಲೆ ಪೂಜೆ ಯಾಕೆ ಕೂಡದು ಪುಸ್ತಕದಲ್ಲಿನ ಸಾಲುಗಳನ್ನು ಸಭೆಯ ಗಮನಕ್ಕೆ ತಂದಿದ್ದೇನೆಯೇ ಹೊರತು, ದೇವರನ್ನು ನಂಬುವ ಆಸ್ತಿಕನಾಗಿರುವ ನಾನು ಮೂತ್ರ ವಿಸರ್ಜನೆಯಂಥ ಪ್ರಯೋಗಗಳನ್ನು ಒಪ್ಪುವುದಿಲ್ಲ. ನನ್ನ ಮಾತು ತಪ್ಪಾಗಿ ಅರ್ಥವಾಗಿದ್ದರೆ ಸಾರ್ವಜನಿಕವಾಗಿ ವಿಷಾದಿಸುತ್ತೇನೆ.


ಡಾ.ಎಂ.ಎಂ.ಕಲಬುರ್ಗಿ, ನಿವೃತ್ತ ಕುಲಪತಿ


ದೆವ್ವದ ಕಲ್ಲು ದೇವರ ಮೇಲೆ ಮೂತ್ರ ಎಂದು ಬರೆದಿದ್ದೇನೆ. ಇದು ಯಾವುದೋ ಕಾಲದಲ್ಲಿ ಹೇಳಿದ್ದ ಮಾತು. ಈ ಬಗ್ಗೆ ಯಾರ ಜೊತೆಯೂ ವಾಗ್ವಾದ ಮಾಡಲು ಇಚ್ಛಿಸುವುದಿಲ್ಲ. ದೇವರು ಇದ್ದಾನೆಂದು ಹೇಳುವ ಧೈರ್ಯ ನನಗಿಲ್ಲ. ಹಾಗೆಯೇ ದೇವರು ಇಲ್ಲ ಎಂದು ಹೇಳುವ ಧೈರ್ಯವೂ ಇಲ್ಲ.
-ಡಾ. ಯು.ಆರ್. ಅನಂತಮೂರ್ತಿ, ಹಿರಿಯ ಸಾಹಿತಿ

 -ವಿನಾಯಕ ಭಟ್ಟ ಮೂರೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement