ಇನ್ಫೋಸಿಸ್ಗೆ ಹೊಸ ನಾಯಕ ಸಿಕ್ಕಾ
ಒಂದಲ್ಲ, ಎರಡಲ್ಲ , ಅನೇಕ ಅನುಭವಿ, ಹಿರಿತಲೆಗಳ ರಾಜಿನಾಮೆಯಿಂದ...
ನವದೆಹಲಿ: ಒಂದಲ್ಲ, ಎರಡಲ್ಲ , ಅನೇಕ ಅನುಭವಿ, ಹಿರಿತಲೆಗಳ ರಾಜಿನಾಮೆಯಿಂದ ಕಂಗೆಟ್ಟು ಹೋಗಿದ್ದ ಸಾಫ್ಟ್ವೇರ್ ದಿಗ್ಗಜ ಇನ್ಫೋಸಿಸ್ಗೆ ಹೊಸ ನಾಯಕನ ಎಂಟ್ರಿಯಾಗಿದೆ. ಜರ್ಮನಿಯ ಸಾಫ್ಟ್ವೇರ್ ಕಂಪನಿ ಸ್ಯಾಪ್ನ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿದ್ದ ವಿಶಾಲ್ ಸಿಕ್ಕಾ ಅವರು ಇನ್ಫೋಸಿಸ್ನ ಹೊಸ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕವಾಗಲಿದ್ದಾರೆ. ಇನ್ಫೋಸಿಸ್ ನಿರ್ದೇಶಕರ ಮಂಡಳಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಕಂಪನಿಗೆ ಹೊರಗಿನವರು ಸಿಇಒ ಆಗಿ ನೇಮಕಗೊಳ್ಳುತ್ತಿರುವುದು ಇದೇ ಮೊದಲು.
ಕಂಪನಿಯಿಂದ ನಿವೃತ್ತಿಯಾಗಿದ್ದ ಇನ್ಫಿ ಸ್ಥಾಪಕ ನಾರಾಯಣಮೂರ್ತಿ ಅವರು ಕಳೆದ ವರ್ಷವಷ್ಟೇ ಮತ್ತೆ ಕಂಪನಿಯ ಸಿಇಒ ಹುದ್ದೆ ಪಡೆದುಕೊಂಡಿದ್ದರು. ನಷ್ಟದಲ್ಲಿರುವ ಕಂಪನಿಯನ್ನು ಮೇಲೆತ್ತುವ ಸಲುವಾಗಿ ಮತ್ತೆ ತಮ್ಮ ಸಂಸ್ಥೆಗೆ ಕಾಲಿರಿಸಿದ್ದರು. ಈಗ ವಿಶಾಲ್ ಸಿಕ್ಕಾ ಅವರು ಸಿಇಒ ಆಗಿ ನೇಮಕಗೊಳ್ಳುತ್ತಿದ್ದಂತೆ ಮೂರ್ತಿ ತಮ್ಮ ಸ್ಥಾನಕ್ಕೆ ಶನಿವಾರ ರಾಜಿನಾಮೆ ನೀಡಲಿದ್ದಾರೆ. ನಂತರ ಅವರು ಅಕ್ಟೋಬರ್ 11ರಿಂದ ಅನ್ವಯವಾಗುವಂತೆ ವಿಶ್ರಾಂತ ಮುಖ್ಯಸ್ಥರಾಗಿ ಇರಲಿದ್ದಾರೆ. ಇದೇ ವೇಳೆ, ಶನಿವಾರ ಕಂಪನಿಯ ಕಾರ್ಯಕಾರಿ ಉಪಾಧ್ಯಕ್ಷ ಎನ್. ಗೋಪಾಲಕೃಷ್ಣ ಹಾಗೂ ಕಾರ್ಯಕಾರಿ ಸಹಾಯಕರಾಗಿದ್ದ ಮೂರ್ತಿ ಅವರ ಪುತ್ರ ರೋಹನ್ ಮೂರ್ತಿ ಅವರೂ ಕಂಪನಿಗೆ ಗುಡ್ಬೈ ಹೇಳಲಿದ್ದಾರೆ. ಪ್ರಸ್ತುತ ಸಿಇಒ ಶಿಬುಲಾಲ್ ಅವರಿಂದ ತೆರವಾಗುವ ಸ್ಥಾನವನ್ನು ಆಗಸ್ಟ್ 1ರಿಂದ ಸಿಕ್ಕಾ ವಹಿಸಿಕೊಳ್ಳಲಿದ್ದಾರೆ.
ವಿಶಾಲ್ ಸಿಕ್ಕಾ ಅಂದರೆ ತುಂಬಾ ತುಂಬಾ ಹಣ
ಸಿಕ್ಕಾರನ್ನು ಹೊಸ ಸಿಇಒ ಆಗಿ ನೇಮಕ ಮಾಡಿರುವುದರ ಬಗ್ಗೆ ಇನ್ಫೋಸಿಸ್ ಗುರುವಾರ ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿತು. ಈ ವೇಳೆ ಮಾತನಾಡಿದ ಇನ್ಫಿ ಮೂರ್ತಿ, ದಕ್ಷಿಣ ಭಾರತದವನಾದ ನನಗೆ ಸಿಕ್ಕಾ ಅಂದರೇನು ಎಂದು ಗೊತ್ತಿಲ್ಲ. ಅದಕ್ಕೆ ಅವರ ಬಳಿಯೇ ಹಾಗೆಂದರೇನು ಎಂದು ಕೇಳಿದೆ. ಅದಕ್ಕೆ ಅವರು, ಸಿಕ್ಕಾ ಎಂದರೆ ಹಣ ಎಂದರು. ಹಾಗಾಗಿ ವಿಶಾಲ್ ಸಿಕ್ಕಾ ಎಂದರೆ ತುಂಬಾ ತುಂಬಾ ಹಣ, ಭಾರಿ ಪ್ರಮಾಣದ ಹಣ. ಈಗ ನಮಗೆ ಅಂದರೆ ಇನ್ಫೋಸಿಸ್ಗೆ ಇದರದ್ದೇ ಅವಶ್ಯಕತೆಯಿತ್ತು ಎಂದರು.
ಯಾರಿವರು ವಿಶಾಲ್ ಸಿಕ್ಕಾ?
ಜರ್ಮನಿಯ ಬ್ಯುಸಿನೆಸ್ ಸಾಫ್ಟ್ವೇರ್ ಕಂಪನಿ ಸ್ಯಾಪ್ನ ಕಾರ್ಯಕಾರಿ ಮಂಡಳಿ ಸದಸ್ಯರಾಗಿದ್ದ ಸಿಕ್ಕಾ ಅವರು, ಅದರ ಎಲ್ಲ ಉತ್ಪನ್ನಗಳನ್ನು ಜಾಗತಿಕವಾಗಿ ಜನಪ್ರಿಯಗೊಳಿಸಲು ಕಾರಣರಾದವರು. ಸಾಂಪ್ರದಾಯಿಕ, ಕ್ಲೌಡ್ ಆಧಾರಿತ ಅಪ್ಲಿಕೇಷನ್ನಿಂದ ತಂತ್ರಜ್ಞಾನ ಹಾಗೂ ಪ್ಲಾಟ್ಫಾರಂ ಉತ್ಪನ್ನಗಳಾದ ಹನಾ, ಅನಾಲಿಟಿಕ್ಸ್, ಮೊಬೈಲ್, ಮಿಡಲ್ವೇರ್ಗಳನ್ನೂ ಖ್ಯಾತಿಗೆ ತಂದವರು. ಸ್ಯಾಪ್ ಕಂಪನಿಯಲ್ಲಿ ಹೊಸ ತಂತ್ರಜ್ಞಾನಗಳು, ಸಂಶೋಧನೆಗೆ ಅವಕಾಶ ಮಾಡಿಕೊಟ್ಟವರು. ಅವರು ಅಮೆರಿಕದ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ನಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ.
ಸವಾಲುಗಳೇನು?
ಮಾರುಕಟ್ಟೆಯಲ್ಲಿ ಸರಣಿ ಕುಸಿತ ದಾಖಲಿಸಿದ ಇನ್ಫೋಸಿಸ್ ಕಂಪನಿಯನ್ನು ಮೇಲಕ್ಕೆತ್ತಲೆಂದೇ ಮತ್ತೆ ಇನ್ಫಿ ಮೂರ್ತಿ ಅವರು ಕಳೆದ ವರ್ಷ ಅದರ ನೇತೃತ್ವ ವಹಿಸಿಕೊಂಡಿದ್ದರು. ಆದರೆ, ಅವರು ಕಂಪನಿ ಪ್ರವೇಶಿಸಿದ ಬಳಿಕವೂ ಅಂದರೆ ಕಳೆದ ಜೂನ್ನಿಂದ ಈವರೆಗೆ ಕನಿಷ್ಠ 11 ಮಂದಿ ಹಿರಿಯ ಎಕ್ಸಿಕ್ಯೂಟಿವ್ಗಳು ಕಂಪನಿ ತೊರೆದಿದ್ದಾರೆ. ಇದು ಗೊಂದಲಕ್ಕೆ ಕಾರಣವಾಗಿದ್ದು ಮಾತ್ರವಲ್ಲದೇ, ಇದರಿಂದ ಕಂಪನಿಯ ಘನತೆಯೂ ಕುಸಿಯತೊಡಗಿತ್ತು. ಇಂತಹ ಸಂಕಷ್ಟದಲ್ಲಿರುವ ಕಂಪನಿಯ ನೇತೃತ್ವ ವಹಿಸುವ ಮೂಲಕ ಈಗ ವಿಶಾಲ್ ಸಿಕ್ಕಾ ಅವರು ಭಾರಿ ಸವಾಲನ್ನೇ ಎದುರು ಹಾಕಿಕೊಂಡಿದ್ದಾರೆ. ಹಿರಿಯ ಎಕ್ಸಿಕ್ಯೂಟಿವ್ಗಳ ರಾಜಿನಾಮೆಯಿಂದ ತೆರವಾಗಿರುವ ಸ್ಥಾನಗಳನ್ನು ಭರ್ತಿ ಮಾಡುವುದು, ಕಂಪನಿಯನ್ನು ಪ್ರಗತಿಯ ಪಥದತ್ತ ಮುನ್ನಡೆಸುವುದು ಅವರ ಮುಂದಿರುವ ದೊಡ್ಡ ಸವಾಲಾಗಿದೆ.
ನಮ್ಮ ಸುತ್ತಲಿನ ವಿಶ್ವವು ಸಾಫ್ಟ್ವೇರ್ ಮೂಲಕ ಬದಲಾಗಿದೆ, ಪುನಾರಚನೆಯಾಗಿದೆ. ಐಟಿ ಕ್ಷೇತ್ರಕ್ಕೆ ಅತಿ ಹೆಚ್ಚು ಸಾಫ್ಟ್ವೇರ್ಗಳನ್ನು ಇನ್ಫೋಸಿಸ್ ಒದಗಿಸುತ್ತಿದೆ. ನಮ್ಮ ಮುಂದೆ ಬಹಳಷ್ಟು ಅವಕಾಶಗಳಿವೆ. ನಾನು ಇಲ್ಲಿ ಕೆಲಸ ಮಾಡಲು ಉತ್ಸುಕನಾಗಿದ್ದೇನೆ.
ವಿಶಾಲ್ ಸಿಕ್ಕಾ, ಇನ್ಫೋಸಿಸ್ ಹೊಸ ಸಿಇಒ