ನೀವೂ ಏಕ ನಿಷ್ಠರಾಗಿ: ಚೀನಾಕ್ಕೆ ಸುಷ್ಮಾ ತಾಕೀತು
'ನಾವು ಚೀನಾ ನೀತಿ ಪಾಲಿಸಬೇಕಿದ್ದರೆ ನೀವು ಏಕ ಭಾರತ ನೀತಿಗೆ ನಿಷ್ಠರಾಗಿ'
ನವದೆಹಲಿ: 'ನಾವು ಚೀನಾ ನೀತಿ ಪಾಲಿಸಬೇಕಿದ್ದರೆ ನೀವು ಏಕ ಭಾರತ ನೀತಿಗೆ ನಿಷ್ಠರಾಗಿ'
- ಹೀಗೆಂದು ಖಡಕ್ಕಾಗಿ ಹೇಳಿದ್ದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್. ಜೂ.8ರಂದು ನವದೆಹಲಿಯಲ್ಲಿ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಜತೆಗಿನ ಮಾತುಕತೆ ವೇಳೆ ಸ್ವರಾಜ್ ಸ್ಪಷ್ಟವಾಗಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹತ್ತು ವರ್ಷಗಳ ಅವಧಿಯಲ್ಲಿ ಚೀನಾ ಸರ್ಕಾರ ಅರುಣಾಚಲ ಪ್ರದೇಶ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸೇನೆ ನುಗ್ಗಿಸಿದ್ದಾಗ ಹಿಂದಿನ ಯುಪಿಎ ಸರ್ಕಾರ ತಣ್ಣನೆ ಕುಳಿತುಕೊಂಡಿತ್ತು. ಆದರೆ ಸ್ವರಾಜ್ ಹೇಳಿಕೆ ಮೂಲಕ ಮೋದಿ ನೇತೃತ್ವದ ಸರ್ಕಾರ ತಂಟೆ ಸಹಿಸಿಕೊಳ್ಳುವುದಿಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದೆ.
ಏನು ಪ್ರಸ್ತಾಪವಾಗಿತ್ತು?: ಮಾತುಕತೆ ವೇಳೆ ವಾಜಪೇಯಿ ಅನುಸರಿಸುತ್ತಿದ್ದ ಏಕ ಚೀನಾ ನೀತಿಯನ್ನೇ ಮೋದಿ ಅನುಸರಿಸಬೇಕು ಎಂದು ಚೀನಾ ಸಚಿವರು ಸಲಹೆ ಮಾಡಿದರು. ಅದಕ್ಕೆ ಕೂಡಲೇ ಪ್ರತ್ಯುತ್ತರ ನೀಡಿದ್ದ ಸ್ವರಾಜ್ 'ನೀವೂ ಕೂಡ ಏಕ ಭಾರತ ನೀತಿಗೆ ನಿಷ್ಠರಾಗಲೇಬೇಕು. ಅರುಣಾಚಲ, ಪಿಒಕೆ ಮತ್ತು ಲಡಾಖ್ನ ದೌಲತ್ ಬೇಗ್ ಒಲ್ಡಿಯಲ್ಲಿ ಚೀನಾ ಸೇನೆ ಪ್ರವೇಶಿಸುತ್ತಿದೆ. ಹೀಗಿರುವಾಗ ಏಕ ಚೀನಾ ನೀತಿ ಪಾಲಿಸಬೇಕೆಂದು ಹೇಳಿದರೆ ಕಷ್ಟವಾಗುತ್ತದೆ. ಚೀನಾ ಕೂಡ ಏಕ ಭಾರತ ಎಂಬ ನೀತಿಗೆ ಬದ್ಧವಾಗಿದ್ದರೆ ಎರಡು ರಾಷ್ಟ್ರಗಳಿಗೂ ಅನುಕೂಲ ಎಂದು ಸುಷ್ಮಾ ಖಡಕ್ ಆಗಿ ತಿಳಿಸಿದ್ದಾರೆ. ಇಬ್ಬರು ನಾಯಕರ ಸಭೆಯ ಕೊನೆಯಲ್ಲಿ ಈ ವಿಚಾರ ಪ್ರಸ್ತಾಪವಾಯಿತು.
ಮಾತನಾಡದ ಚೀನಾ ಸಚಿವ: ಸುಷ್ಮಾ ಸ್ವರಾಜ್ ಸ್ಪಷ್ಟ ನುಡಿಗೆ ಚೀನಾ ಸಚಿವ ವಾಂಗ್ ಅವರದ್ದು ಮೌನವೇ ಉತ್ತರವಾಗಿತ್ತು. ಇದರ ಜತೆಗೆ ಭಾರತದ ಪ್ರಜೆಗಳಿಗೆ ಲಗತ್ತು ವೀಸಾ ನೀಡುವುದರ ಬಗ್ಗೆಯೂ ಸುಷ್ಮಾ ಸ್ವರಾಜ್ ಆಕ್ಷೇಪ ವ್ಯಕ್ತಪಡಿಸಿದ್ದರು. ಮಾತುಕತೆ ಅಂತ್ಯದಲ್ಲಿ ಇಬ್ಬರು ನಾಯಕರು ಚೀನಾ ಭಾಷೆಯಲ್ಲಿ 'ಕ್ಸಿ' 'ಕ್ಸಿ' (ಧನ್ಯವಾದ) ಅರ್ಪಿಸಿದರು.