ರಾಜ್ಯದಲ್ಲಿ ಅನುಷ್ಠಾನಗೊಳ್ಳಲಿದೆ ಕೇಂದ್ರದ ಭೂ ಕಾಯಿದೆ, ವಾರದಲ್ಲಿ ಅಧಿಸೂಚನೆ
ಕೇಂದ್ರ ಭೂ ಸ್ವಾಧೀನ ಕಾಯಿದೆ ಜಾರಿ ಮಾಡಲು ರಾಜ್ಯ ಸರ್ಕಾರ..
ಕ.ಪ್ರ. ವಾರ್ತೆ ಟಿ ಬೆಂಗಳೂರು ಟಿ ಜೂ. 12
ಕೇಂದ್ರ ಭೂ ಸ್ವಾಧೀನ ಕಾಯಿದೆ ಜಾರಿ ಮಾಡಲು ರಾಜ್ಯ ಸರ್ಕಾರ ನಿಯಮಗಳನ್ನು ರೂಪಿಸಿದ್ದು ಒಂದು ವಾರದಲ್ಲಿ ಅಧಿಸೂಚನೆ ಹೊರಬೀಳಲಿದೆ. ಇದಾದರೆ, ದೇಶದಲ್ಲೇ ಈ ಕಾಯಿದೆ ಅನುಷ್ಠಾನಗೊಳಿಸುವ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೂ ಪಾತ್ರವಾಗಲಿದೆ.
2014ರ ಜನವರಿ 1ರಿಂದ ಭೂ ಸ್ವಾಧೀನ ಮತ್ತು ಪರಿಹಾರ ಕಾಯಿದೆ ಅನ್ವಯವಾಗಲಿದ್ದು, ಇದರ ಅನುಷ್ಠಾನಕ್ಕೆ ರಾಜ್ಯಗಳು ನಿಯಮಗಳನ್ನು ರಚಿಸಬೇಕಾಗಿದೆ. ಈ ನಿಯಮಗಳನ್ನು ರಾಜ್ಯ ರಚನೆ ಮಾಡಿದ್ದು, ಸಚಿವ ಸಂಪುಟ ಉಪ ಸಮಿತಿ ಹಾಗೂ ಸಚಿವ ಸಂಪುಟದಲ್ಲಿ ಶುಕ್ರವಾರ ಅನುಮೋದನೆಯಾಗಲಿದ್ದು, ಆ ಕೂಡಲೇ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ಕಂದಾಯ ಖಾತೆ ಸಚಿವ ಶ್ರೀನಿವಾಸಪ್ರಸಾದ್ ಸುದ್ದಿಗಾರರಿಗೆ ಗುರುವಾರ ತಿಳಿಸಿದರು. ನಿಯಮಗಳನ್ನು ರೂಪಿಸಲಾಗಿದ್ದು ಇದರ ಅಧಿಸೂಚನೆಯಾದರೆ ರಾಷ್ಟ್ರದಲ್ಲೇ ಈ ಕಾಯಿದೆಯನ್ನು ಅನುಷ್ಠಾನಗೊಳಿಸುವ ಪ್ರಥಮ ರಾಜ್ಯ ನಮ್ಮದಾಗುತ್ತದೆ. ಮಹಾರಾಷ್ಟ್ರದಲ್ಲಿ ಅನುಷ್ಠಾನವಾಗಿದ್ದರೂ ಅದು ಪೂರ್ಣಪ್ರಮಾಣದಲ್ಲಿ ಆಗಿಲ್ಲ. ನಿಯಮಗಳ ಅಧಿಸೂಚನೆ ಹೊರಡಿಸಿ, ಆಕ್ಷೇಪಗಳಿಗೆ ಅವಕಾಶ ಮಾಡಿಕೊಡಲಾಗುತ್ತದೆ. ನಂತರ ಎಲ್ಲವೂ ಅನುಷ್ಠಾನವಾಗಲಿದ್ದು, ಇದರಿಂದ ಭೂಮಿ ಮಾರಾಟ ಮಾಡುವ ಗ್ರಾಮೀಣ ಭಾಗದ ರೈತರಿಗೆ ಮಾರ್ಗಸೂಚಿ ದರದ ನಾಲ್ಕು ಪಟ್ಟು ಹಣ ಸಿಗಲಿದೆ. ನಗರ ಪ್ರದೇಶಗಳಲ್ಲಿ ಮಾರ್ಗಸೂಚಿಯ ಎರಡರಷ್ಟು ಹಣ ಸಿಗಲಿದೆ ಎಂದು ಹೇಳಿದರು.
ಭೂ ಸ್ವಾಧೀನ ಕಾಯಿದೆ ಪಾರದರ್ಶಕತೆ ಹಾಗೂ ಪರಿಹಾರದ ಹಕ್ಕು ನೀಡಲಿದ್ದು, ರೈತರ ಸಮ್ಮತಿಯಿಂದಲೇ ಭೂಸ್ವಾಧೀನ ಮಾಡಿಕೊಳ್ಳಲಾಗುತ್ತದೆ. ಅಲ್ಲದೆ ಬಹುತೇಕ ಮಾರುಕಟ್ಟೆ ದರವೇ ಅವರಿಗೆ ಲಭ್ಯವಾಗಲಿದೆ. ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿ ಅವರು ವಾಸವಾಗಿದ್ದರೆ ಅವರಿಗೆ ಪುನರ್ವಸತಿಯನ್ನೂ ಕಲ್ಪಿಸಲಾಗುತ್ತದೆ. ಬಾಕಿ ಇರುವ ಒಂದು ಸಾವಿರಕ್ಕೂ ಹೆಚ್ಚು ಭೂಸ್ವಾಧೀನ ಪ್ರಕರಣಗಳಿಗೂ ಹೊಸ ಕಾಯಿದೆಯೇ ಅನ್ವಯವಾಗಲಿದೆ ಎಂದರು. ಸಾರ್ವಜನಿಕ ಉದ್ದೇಶಕ್ಕಾಗಿ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಾದರೆ ರೈತರ ಒಪ್ಪಿಗೆ ಬೇಡ. ಸಾರ್ವಜನಿಕ-ಖಾಸಗಿ ಉದ್ದೇಶಕ್ಕಾದರೆ ಶೇ.70ರಷ್ಟು ರೈತರ ಹಾಗೂ ಖಾಸಗಿಯವರ ಖರೀದಿಗೆ ಶೇ.80ರಷ್ಟು ರೈತರ ಸಮ್ಮತಿ ಅಗತ್ಯವಾಗಿದೆ ಎಂದರು.
ಶೀಘ್ರ ಕಾವೇರಿ-2 ತಂತ್ರಾಂಶ
ಆಸ್ತಿ ನೋಂದಣಿ ಪ್ರಕ್ರಿಯೆ ಸುಲಭಗೊಳಿಸುವ ನಿಟ್ಟಿನಲ್ಲಿ ಕಾವೇರಿ-2 ತಂತ್ರಾಂಶವನ್ನು ಶೀಘ್ರವೇ ಅನುಷ್ಠಾನಗೊಳಿಸಲಾಗುತ್ತದೆ. ಇದರಿಂದ ಆನ್ಲೈನ್ನಲ್ಲೇ ಎಲ್ಲ ಪ್ರಕ್ರಿಯೆ ನಡೆಯಲಿದ್ದು ಆಸ್ತಿಯ ವಿವರವನ್ನು ಉಪ ನೋಂದಣಾಧಿಕಾರಿ ಕಚೇರಿಗೆ ನೀಡಿದರೆ, ನೋಂದಣಿ ಶುಲ್ಕ ಸೇರಿದಂತೆ ನೋಂದಣಿಯ ದಿನ, ಸಮಯ ಎಲ್ಲ ವಿವರವನ್ನೂ ನೀಡಲಾಗುತ್ತದೆ ಎಂದು ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್ ತಿಳಿಸಿದರು. ಹೊಸ ಭೂಮಾಪಕರ ತರಬೇತಿ ಅವಧಿ ಮುಗಿದಿದ್ದು, ಶೀಘ್ರವೇ ಅವರು ಕಾರ್ಯಪ್ರವೃತ್ತರಾಗಲಿದ್ದಾರೆ. ಪರವಾನಗಿ ಭೂಮಾಪಕರಿಗೂ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲಾಗಿದೆ. ಅಲ್ಲದೆ ಇನ್ನೂ 700-800 ಭೂಮಾಪಕರನ್ನು ನೇಮಿಸಿಕೊಳ್ಳಲು ಹಣಕಾಸು ಇಲಾಖೆ ಸಮ್ಮತಿಸಿದ್ದು, ಅದರಲ್ಲಿ ಪರವಾನಗಿ ಭೂಮಾಪಕರಿಗೂ ಅವಕಾಶ ಕಲ್ಪಿಸಲಾಗುತ್ತದೆ ಎಂದರು.
ಮನಸ್ವಿನಿ, ಮೈತ್ರಿಗೆ ಬಿಪಿಎಲ್ ಕಾರ್ಡ್
ಮನಸ್ವಿನಿ ಹಾಗೂ ಮೈತ್ರಿ ಯೋಜನೆಯ ಫಲಾನುಭವಿಗಳಿಗೆ ಬಿಪಿಎಲ್ ಕಾರ್ಡ್ ಹಾಗೂ ಆಶ್ರಯ ಮನೆಗಳನ್ನೂ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಮದುವೆಯಾಗದ 40 ವರ್ಷದ ಮೇಲ್ಪಟ್ಟ ಮಹಿಳೆಯರಿಗೆ ಮನಸ್ವಿನಿ ಯೋಜನೆ ಹಾಗೂ 18 ವರ್ಷ ತುಂಬಿದ ಲೈಂಗಿಕ ಅಲ್ಪಸಂಖ್ಯಾತರಿಗೆ ಮೈತ್ರಿ ಯೋಜನೆಯನ್ನು ಸರ್ಕಾರ ಅನುಷ್ಠಾನಗೊಳಿಸಿದೆ. ಇವರಿಗೆ ಇನ್ನೂ ಹೆಚ್ಚಿನ ಸೌಲಭ್ಯ ನೀಡುವ ಉದ್ದೇಶ ಹೊಂದಿದೆ ಎಂದು ಕಂದಾಯ ಸಚಿವ ಶ್ರೀನಿವಾಸಪ್ರಸಾದ್ ತಿಳಿಸಿದರು. ಮದುವೆಯಾಗದ ಮಹಿಳೆ ಯಾವುದೇ ಕುಟುಂಬಕ್ಕೆ ಸೇರದಿದ್ದರೆ ಆಕೆಗೆ ಅಕ್ಕಿ ಸಿಕ್ಕರೆ ಒಳ್ಳೆಯದು. ಪಡಿತರ ನೀಡುವ ಉದ್ದೇಶದಿಂದ ಬಿಪಿಎಲ್ ಕಾರ್ಡ್ ನೀಡಲಾಗುತ್ತದೆ. ಯಶಸ್ವಿನಿ ಯೋಜನೆ ಅವರಿಗೂ ಅನ್ವಯವಾದರೆ ಆರೋಗ್ಯ ರಕ್ಷಣೆಯಾದಂತಾಗುತ್ತದೆ. ಆಶ್ರಯ ಯೋಜನೆಯೂ ಅವರಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ. ಇದನ್ನು ಮೈತ್ರಿ ಫಲಾನುಭವಿಗಳಿಗೂ ವಿಸ್ತರಿಸಲಾಗುತ್ತದೆ ಎಂದರು.