ಕಬ್ಬಿಗರ ಅಹೋರಾತ್ರಿ ಧರಣಿ
ಪ್ರತಿ ಟನ್ ಕಬ್ಬಿಗೆ ಮುಂಗಡ ಹಣದ ರೂಪದಲ್ಲಿ ರು. 2 ಸಾವಿರ ನೀಡಬೇಕು...
ಬಿಜಾಪುರ: ಪ್ರತಿ ಟನ್ ಕಬ್ಬಿಗೆ ಮುಂಗಡ ಹಣದ ರೂಪದಲ್ಲಿ ರು. 2 ಸಾವಿರ ನೀಡಬೇಕು ಎಂದು ಆಗ್ರಹಿಸಿ ಬಿಜಾಪುರ ಜಿಲ್ಲೆಯ ಕಬ್ಬು ಬೆಳೆಗಾರರು ಖಾಸಗಿ ಸಕ್ಕರೆ ಕಾರ್ಖಾನೆಗಳ ವಿರುದ್ಧ ತಿರುಗಿಬಿದ್ದಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಖಾಸಗಿ ಸಕ್ಕರೆ ಕಾರ್ಖಾನೆಗಳ ಮಾಲೀಕರ ಹಾಗೂ ಕಬ್ಬು ಬೆಳೆಗಾರರ ಮುಖಂಡರ ಸಭೆ ವಿಫಲಗೊಂಡ ನಂತರ ರೈತರು ಆಕ್ರೋಶಗೊಂಡು ಡಿಸಿ ಕಚೇರಿ ಆವರಣದಲ್ಲಿಯೇ ಠಿಕಾಣಿ ಹೂಡಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
ಜಿಲ್ಲೆಯ ನಾನಾ ತಾಲೂಕುಗಳಿಂದ ಸಹಸ್ರಾರು ರೈತರು ಜಿಲ್ಲಾಧಿಕಾರಿ ಕಚೇರಿಯತ್ತ ಬುತ್ತಿ ಕಟ್ಟಿಕೊಂಡು ಪ್ರವಾಹೋಪಾದಿಯಲ್ಲಿ ಆಗಮಿಸುತ್ತಿರುವುದು ಜಿಲ್ಲಾಡಳಿತಕ್ಕೆ ನುಂಗಲಾರದ ಬಿಸಿ ತುಪ್ಪವಾಗಿದೆ.
ಸಕ್ಕರೆ ಕಾರ್ಖಾನೆಗಳು ರು. 2 ಸಾವಿರ ಮುಂಗಡ ಹಣ ನೀಡುವವರೆಗೆ ಇಲ್ಲಿಂದ ಕದಲುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ. ಬುಧವಾರ ಹೋರಾಟಕ್ಕೆ ಉಗ್ರ ಸ್ವರೂಪ ನೀಡುವ ಯೋಚನೆಯಲ್ಲಿ ರೈತರಿದ್ದಾರೆ. ಅದಕ್ಕೆ ಪ್ರತಿಯಾಗಿ ಭಾರೀ ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿದೆ. ಡಿಸಿ ಕಚೇರಿ ಆವರಣ ಈಗ ರೈತರು ಹಾಗೂ ಪೊಲೀಸರಿಂದ ಗಿಜಿಗುಡುತ್ತಿದೆ.