ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕಾವೇರಿ ಹೋರಾಟಕ್ಕೆ ಸಿದ್ಧ: ಸಿಎಂ

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕಾನೂನಾತ್ಮಕ ಹಾಗೂ ರಾಜಕೀಯ...

Lingaraj Badiger
Updated On : 18 Jun 2014, 1:58 am

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕಾನೂನಾತ್ಮಕ ಹಾಗೂ ರಾಜಕೀಯ ಹೋರಾಟಕ್ಕೆ ರಾಜ್ಯ ಸಜ್ಜಾಗಿದೆ. ಈ ವಿಚಾರದಲ್ಲಿ ಸೋಲುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಂಗಳವಾರ ನಡೆದ ಶತಮಾನೋತ್ಸವ ಭವನ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಪ್ರತಿಬಾರಿ ಅಧಿಕಾರಕ್ಕೆ ಬಂದಾಗಲೂ ಕ್ಯಾತೆ ತೆಗೆಯುತ್ತಾರೆ. ಕಾವೇರಿ ನದಿಗೆ ಅಣೆಕಟ್ಟೆ ಕಟ್ಟಿ ನೀರು ಸಂಗ್ರಹಿಸುತ್ತಿರುವುದು ನಾವು. ಆದರೆ, ತಮಿಳುನಾಡಿನವರು ಹೆಚ್ಚು ನೀರು ಬಳಸಿಕೊಳ್ಳುತ್ತಾರೆ. ಮುಂದಿನ ದಿನಗಳಲ್ಲಿ ಇದಕ್ಕೆ ಅವಕಾಶ ಕಲ್ಪಿಸುವುದಿಲ್ಲ ಎಂದು  ಜಯಲಲಿತಾ ಅವರ ವಿರುದ್ಧ ಕಿಡಿಕಾರಿದರು.

ಕರುಣಾನಿಧಿ ಸಹ ತಮ್ಮ ಕ್ಯಾತೆ ಮುಂದುವರೆಸುತ್ತಾರೆ. ಕಾವೇರಿ ವಿಚಾರದಲ್ಲಿ ಅವರಲ್ಲೇ ಪೈಪೋಟಿ ಇದೆ. ಅದನ್ನು ಈಗಲೂ ಮುಂದುವರೆಸಿದ್ದಾರೆ. ಕಾವೇರಿ ನಿರ್ವಹಣಾ ಮಂಡಳಿ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದ್ದರೂ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿರುವ ಜಯಲಲಿತಾ ಕಾವೇರಿ ಜಲವಿವಾದ ಸಂಬಂಧ ನಿರ್ವಹಣಾ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿ 30 ಪುಟಗಳ ಮನವಿ ನೀಡಿದ್ದಾರೆ ಎಂದರು.

ಇದನ್ನು ತಿಳಿದ ರಾಜ್ಯ ಸರ್ಕಾರ ಎಲ್ಲಾ ಪಕ್ಷಗಳ ಪ್ರಮುಖರ ನಿಯೋಗವನ್ನು ಪ್ರಧಾನಿ ಬಳಿ ಕರೆದೊಯ್ದು ಚರ್ಚಿಸಿ ಬಂದಿದ್ದೇವೆ. ಅದಕ್ಕೆ ಬೇಕಿರುವ ಹೋರಾಟಕ್ಕೆ ನಾವು ಸಿದ್ಧರಿದ್ದೇವೆ. ಆ ಪ್ರಕರಣ ಸಿವಿಲ್ ತ್ಯಾಜ್ಯಗಳ ವಿಭಾಗಕ್ಕೆ ವರ್ಗಾವಣೆಯಾಗಿದ್ದು, ಅಲ್ಲಿ ನಮಗೆ ನ್ಯಾಯ ಸಿಗುತ್ತದೆ ಎಂಬ ಭರವಸೆ ಇದೆ ಎಂದರು.

ಕಾವೇರಿ ನಮ್ಮದಾದರೂ ನಮಗಿಂತ ತಮಿಳುನಾಡಿನವರು ನೀರನ್ನು ಹೆಚ್ಚು ಬಳಸಿಕೊಳ್ಳುತ್ತಾರೆ. ಕಳೆದ ವರ್ಷ ಕಾನೂನು ರೀತ್ಯ 192 ಟಿಎಂಸಿ ನೀರು ಬಿಡಬೇಕಿತ್ತು. ಆದರೆ ಮಳೆ ಹೆಚ್ಚಿದ್ದರಿಂದ 260 ಟಿಎಂಸಿ ನೀರು ಬಿಟ್ಟೆವು. ಮಳೆ ಬಂದರೆ ಅವರು ಕೇಳುವುದಕ್ಕಿಂತ ಹೆಚ್ಚು ನೀರು ಬಿಡುತ್ತೇವೆ. ನೀರು ಇಲ್ಲದಿದ್ದರೆ ಎಲ್ಲಿಂದ ಬಿಡಲಿ ಎಂದು ಪ್ರಶ್ನಿಸಿದ ಅವರು, ನ್ಯಾಯ ನಮ್ಮ ಕಡೆ ಇದೆ. ಈ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದಿತ್ತು. ಆದರೆ, ತಮಿಳುನಾಡು ಸರ್ಕಾರ ಇದಕ್ಕೆ ಸಿದ್ಧವಿಲ್ಲ. ಹಾಗಾಗಿ ರಾಜ್ಯ ಕಾನೂನು ಮತ್ತು ರಾಜಕೀಯ ಹೋರಾಟಕ್ಕೂ ಸಜ್ಜಾಗಿದೆ. ಕಾವೇರಿ ವಿಚಾರದಲ್ಲಿ ಸೋಲುವ ಪ್ರಶ್ನೆಯೇ ಇಲ್ಲ ಎಂದರು.

ಸಂವಿಧಾನ ತಿದ್ದುಪಡಿ ಅಗತ್ಯ
ಬೆಂಗಳೂರು: ಮಾತೃಭಾಷೆಯಲ್ಲೇ ಕನ್ನಡ ಕಲಿಯಬೇಕೆಂಬ ನಿಯಮವಿಲ್ಲ. ಅದು ಪೋಷಕರಿಗೆ ಬಿಟ್ಟದ್ದು ಎಂಬ ಸುಪ್ರೀಂ ಕೋರ್ಟ್‌ನ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಪರಿಶೀಲನಾ ಅರ್ಜಿಯಿಂದ ನಮಗೆ ನ್ಯಾಯ ಸಿಗುತ್ತದೆ ಎಂಬ ಭರವಸೆ ಇದೆ. ಒಂದು ವೇಳೆ ಅಲ್ಲಿಯೂ ನಮಗೆ ನ್ಯಾಯ ಸಿಗಲಿಲ್ಲ ಎಂದಾದಲ್ಲಿ ಕನ್ನಡ ಉಳಿಸಲು ಸಂವಿಧಾನ ತಿದ್ದುಪಡಿಯೊಂದೇ ಇರುವ ಮಾರ್ಗ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಸುಪ್ರೀಂ ಕೋರ್ಟ್‌ನ ಈ ತೀರ್ಪು ಕನ್ನಡಕ್ಕೆ ಮಾತ್ರವಲ್ಲ, ಎಲ್ಲಾ ಪ್ರಾದೇಶಿಕ ಭಾಷೆಗಳಿಗೂ ದುರಂತ. ಈ ಬಗ್ಗೆ ತಜ್ಞರು ಹಾಗೂ ಸಾಹಿತಿಗಳ ಜತೆ ಚರ್ಚಿಸಿದಾಗ ಸಂವಿಧಾನ ತಿದ್ದುಪಡಿ ಅಗತ್ಯ ಎಂಬ ಅಭಿಪ್ರಾಯ ಕೇಳಿಬಂದಿವೆ.

ಸಂವಿಧಾನ ತಿದ್ದುಪಡಿ ಸಂಬಂಧ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳು ಸೇರಿ ಪ್ರಧಾನಿ ಅವರಿಗೆ ಮನವಿ ಸಲ್ಲಿಸಿದ್ದೇವೆ. ಒಂದು ವೇಳೆ ನ್ಯಾಯಾಲಯದಲ್ಲಿ ನ್ಯಾಯ ಸಿಗದಿದ್ದರೆ ಭಾಷೆ ಉಳಿವಿಗೆ ಸಂವಿಧಾನ ತಿದ್ದುಪಡಿ ಒಂದೇ ದಾರಿ. ಕನ್ನಡ ಉಳಿಸುವಲ್ಲಿ ಸರ್ಕಾರ ನಿರಂತರ ಪ್ರಯತ್ನ ನಡೆಸುತ್ತಿದೆ. ಅದಕ್ಕೆ ಅಗತ್ಯ ಕೆಲಸ ಮಾಡಲೂ ಸಿದ್ಧ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement