ಗುಜರಿ ಅಂಗಡಿಗೆ ಪಠ್ಯಪುಸ್ತಕ ಮಾರಾಟ: ಮೂವರ ಬಂಧನ
ಬೆಂಗಳೂರು: ಸರ್ಕಾರಿ ಶಾಲೆಗಳ 2014-15ನೇ ಸಾಲಿನ 6,7 ಹಾಗೂ 8ನೇ ತರಗತಿಯ ಸಾವಿರಾರು ಪಠ್ಯಪುಸ್ತಕಗಳನ್ನು ಗುಜರಿ ಅಂಗಡಿಗೆ ಮಾರಾಟ ಮಾಡುತ್ತಿದ್ದ ಶಂಕರಪುರಂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ನೋಡಲ್ ಅಧಿಕಾರಿ ಧನಂಜಯ ಸೇರಿ ಮೂವರನ್ನು ಶಂಕರಪುರಂ ಪೊಲೀಸರು ಬಂಧಿಸಿದ್ದಾರೆ. ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಶಾಲೆಗಳಿಗೆ ಪಠ್ಯಪುಸ್ತಕ ವಿತರಿಸುವ ಸಿಬ್ಬಂದಿ ಕೃಷ್ಣಮೂರ್ತಿ ಹಾಗೂ ಗುಜರಿ ಅಂಗಡಿ ಮಾಲೀಕ ಮಂಜುನಾಥ ಬಂಧಿತರು. ಶಂಕರಪುರಂನ ಚಿಕ್ಕಣ್ಣ ಗಾರ್ಡನ್ನಲ್ಲಿರುವ ಗುಜರಿ ಅಂಗಡಿಗೆ ಸಂಜೆ 7 ಗಂಟೆ ಸುಮಾರಿಗೆ ಟಾಟಾ ಏಸ್ ವಾಹನದಲ್ಲಿ ಸಾವಿರಾರು ಶಾಲಾ ಪುಸ್ತಕಗಳನ್ನು ತಂದು ತೂಕ ಮಾಡಿ ಹಾಕಲಾಗುತ್ತಿತ್ತು. ಸರ್ಕಾರಿ ಪುಸ್ತಕಗಳನ್ನು ಭಾರಿ ಪ್ರಮಾಣದಲ್ಲಿ ಗುಜರಿಗೆ ಹಾಕುವುದನ್ನು ಗಮನಿಸಿದ ಗೋಪಿ ಎಂಬುವರು ಅನುಮಾನಗೊಂಡು ಮೂವರನ್ನು ಪ್ರಶ್ನಿಸಿದ್ದಾರೆ. ಆದರೆ, ಆರೋಪಿಗಳು ಸೂಕ್ತ ಉತ್ತರ ನೀಡಲಿಲ್ಲ. ಇದರಿಂದ ಅನುಮಾನಗೊಂಡ ಅವರು ಶಂಕರಪುರಂ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪುಸ್ತಕಗಳನ್ನು ಗುಜರಿಗೆ ಹಾಕುತ್ತಿರುವ ಬಗ್ಗೆ ವಿಚಾರಣೆ ನಡೆಸಿದಾಗ ಧನಂಜಯ್ ಸೂಕ್ತ ಉತ್ತರ ನೀಡಲಿಲ್ಲ. ಹೀಗಾಗಿ ದುರುದ್ದೇಶಪೂರ್ವಕವಾಗಿ ಪುಸ್ತಕಗಳ ಗುಜರಿಗೆ ಹಾಕುತ್ತಿರುವ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 407, 408 ಅನ್ವಯ ಪ್ರಕರಣ ದಾಖಲಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ. ಆರೋಪಿಗಳು ಈ ಹಿಂದೆಯೂ ಎರಡು ಬಾರಿ ಪುಸ್ತಕಗಳನ್ನು ಮಾರಾಟ ಮಾಡಿದ್ದರು ಎನ್ನಲಾಗಿದೆ.ಪುಸ್ತಕಗಳನ್ನು ಗುಜರಿಗೆ ಹಾಕಲು ಕಾರಣ ಏನು ಎನ್ನುವುದರ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.