ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ನಾಮಪಟ್ಟಿಗೆ ಗವರ್ನರ್ ಗರಂ

ವಿಧಾನ ಪರಿಷತ್ ನಾಮನಿರ್ದೇಶನ ಸಂಪೂರ್ಣ ರಾಜಕೀಯಮಯವಾಗಿರುವುದಕ್ಕೆ...

Mainashree
Updated On : 17 Jun 2014, 10:41 am

ಬೆಂಗಳೂರು: ವಿಧಾನ ಪರಿಷತ್ ನಾಮನಿರ್ದೇಶನ ಸಂಪೂರ್ಣ ರಾಜಕೀಯಮಯವಾಗಿರುವುದಕ್ಕೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿ.ಎಸ್.ಉಗ್ರಪ್ಪ, ಶಾಂತಕುಮಾರ್, ಇಕ್ಬಾಲ್ ಅಹ್ಮದ್ ಸರಡಗಿ, ಜಯಮಾಲಾ ಹಾಗೂ ಅಹ್ಮದ್ ಜಬ್ಬಾರ್ ಅವರನ್ನು ನಾಮನಿರ್ದೇಶನ ಮಾಡಲು ಸರ್ಕಾರ ನಿರ್ಧರಿಸಿದೆ. ಆದರೆ ಅಖೈರುಗೊಂಡ ಪಟ್ಟಿ ಬಗ್ಗೆ ಕಾಂಗ್ರೆಸ್ ವಲಯದಿಂದಲೇ ಮಾಹಿತಿ ಪಡೆದಿರುವ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ನಾಮನಿರ್ದೇಶನ ಸಂದರ್ಭದಲ್ಲಿ ಕಲೆ, ಸಾಹಿತ್ಯ, ಶಿಕ್ಷಣ, ಸಮಾಜಸೇವೆ ಕ್ಷೇತ್ರದಲ್ಲಿ ದುಡಿದವರಿಗೆ ಅವಕಾಶ ನೀಡುವುದು ವಾಡಿಕೆ. ಆದಾಗ್ಯೂ ಐದರಲ್ಲಿ ಒಂದೆರಡು ಸ್ಥಾನಕ್ಕೆ ರಾಜಕೀಯ ವ್ಯಕ್ತಿಗಳನ್ನು ನೇಮಕ ಮಾಡಲಾಗುತ್ತದೆ. ಆದರೆ ಈ ಬಾರಿ ಐದಕ್ಕೆ ಐದೂ ರಾಜಕೀಯ ವ್ಯಕ್ತಿಗಳಾಗಿರುವುದು ರಾಜ್ಯಪಾಲರ ಆಕ್ರೋಶಕ್ಕೆ ಕಾರಣವಾಗಿದೆ. ಈ ನಡುವೆ ಅಂತಿಮಗೊಂಡ ಪಟ್ಟಿಯನ್ನು ರಾಜ್ಯ ಸರ್ಕಾರ ಇನ್ನೂ ರಾಜಭವನಕ್ಕೆ ಕಳುಹಿಸಿಕೊಟ್ಟಿಲ್ಲ. ಅಭ್ಯರ್ಥಿಗಳ ಸ್ವ-ವಿವರ ಹಾಗೂ ದಾಖಲೆಯನ್ನು ಸಂಗ್ರಹಿಸಲಾಗಿದೆ. ಸೋಮವಾರ ಪಟ್ಟಿಯನ್ನು ರಾಜಭವನಕ್ಕೆ ಕಳುಹಿಸಲು ನಿರ್ಧರಿಸಲಾಗಿತ್ತಾದರೂ ರಾಜ್ಯಪಾಲರು ದೆಹಲಿಗೆ ತೆರಳಿದ್ದರಿಂದ ಕಳುಹಿಸಿರಲಿಲ್ಲ. ಮೂಲಗಳ ಪ್ರಕಾರ ರಾಜ್ಯಪಾಲರು ಈ ಪಟ್ಟಿಯ ಬಗ್ಗೆ ಈಗಾಗಲೇ ಅಸಮ್ಮತಿ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಜಯಮಾಲ ಹಾಗೂ ಶಾಂತಕುಮಾರ್ ಹೊರತುಪಡಿಸಿ ಉಳಿದ ಮೂವರ ಹೆಸರನ್ನು ತಿರಸ್ಕರಿಸುವ ಸಾಧ್ಯತೆಯೂ ಇದೆ. ಹೀಗಾಗಿ ಅವರು ರಾಜಭವನಕ್ಕೆ ವಾಪಾಸ್ ಆದ ನಂತರ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ರಾಜಭವನಕ್ಕೆ ತೆರಳಿ ರಾಜ್ಯಪಾಲರ ಮನವೊಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement