ಪ್ರವಾಸೋದ್ಯಮ ಪಾಠ
ಮೈಸೂರು: ಜಗತ್ತಿನಲ್ಲಿ ಇಂದು ಪ್ರವಾಸೋದ್ಯಮ ಮಹತ್ವದ ಸ್ಥಾನ ಪಡೆದಿದ್ದು, ಅಮೆರಿಕ, ಯುರೋಪ್ ದೇಶಗಳು ಈ ಕ್ಷೇತ್ರದಲ್ಲಿ ಅಗಾಧ ಅಭಿವೃದ್ಧಿ ಸಾಧಿಸಿ ವಿಶ್ವದ ಗಮನ ಸೆಳೆದಿವೆ.
ಭಾರತವು ಪ್ರಕೃತಿ ಸಂಪತ್ತು ಹಾಗೂ ಮಾನವ ಸಂಪನ್ಮೂಲ ಹೊಂದಿದ್ದರೂ, ಪ್ರವಾಸೋದ್ಯದಲ್ಲಿ ನಿರೀಕ್ಷಿತ ಪ್ರಗತಿ ಕಂಡಿಲ್ಲ ಎಂಬುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ಇಲ್ಲಿಯ ಜನರ ಹಾಗೂ ಆಡಳಿತಗಾರರ ನಿರಾಸಕ್ತಿ ಕಾರಣ ಎಂಬುದರ ಜತೆಗೆ, ಪ್ರವಾಸೋದ್ಯಮ ನಿರ್ವಹಣೆಯಲ್ಲಿ ವಿಫಲವಾಗಿರುವುದು. ಇದೀಗ ನೂತನ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅವರು ಈ ಕಾರಣಕ್ಕಾಗಿಯೇ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡುವುದಾಗಿ ಘೋಷಿಸಿದ್ದಾರೆ.
ಇಡೀ ದೇಶದಲ್ಲಿಯೇ ದೂರ ಶಿಕ್ಷಣದ ಮೂಲಕ ನೂತನ ಕೋರ್ಸ್ ಆರಂಭಿಸುವಲ್ಲಿ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿವಿಯು ಪ್ರಪ್ರಥಮ ಹೆಜ್ಜೆ ಇರಿಸಿದ್ದು, ಮಾಸ್ಟರ್ ಆಫ್ ಟೂರಿಸಂ ಮ್ಯಾನೇಜ್ಮೆಂಟ್ ಎಂಬ ಕೋರ್ಸ್ ಆರಂಭಿಸಿದೆ. 4 ಸೆಮಿಸ್ಟರ್ ಅನ್ನು ಒಳಗೊಂಡಿರುವ 2 ವರ್ಷ ಅವಧಿಯ ಪದವಿ ಇದಾಗಿದೆ. ಈಗಾಗಲೇ ಕೋರ್ಸ್ ಆರಂಭವಾಗಿದೆ. ಮೈಸೂರು ವಿವಿಯು ತನ್ನ ವ್ಯಾಪ್ತಿಯ ಕೆಲವು ಕಾಲೇಜುಗಳಲ್ಲಿ ಮಾಸ್ಟರ್ ಆಫ್ ಟೂರಿಸಂ ಆಡ್ಮಿನಿಸ್ಟ್ರೇಷನ್ ಎಂಬ ಕೋರ್ಸ್ ಪ್ರಾರಂಭಿಸಿದೆ. ಆದರೆ ಇದು ಯಾವುದೇ ಪದವಿಗೂ ಕಡ್ಡಾಯ ವಿಷಯವಾಗಿಲ್ಲ. ಕೇವಲ ಆಯ್ಕೆ ವಿಷಯವಾಗಿದೆ. ಇದೇ ರೀತಿ ಬೆಂಗಳೂರು ವಿವಿಯು ಸಹ ಮಾಸ್ಟರ್ ಆಫ್ ಟೂರಿಸಂ ಅಡ್ಮಿನಿಸ್ಟ್ರೇಷನ್ ಕೋರ್ಸ್ ಆರಂಭಿಸಿದೆ. ಅಂತೆಯೇ ಕೆಲವು ಖಾಸಗಿ ಸಂಸ್ಥೆಗಳು ಸಹ ಈ ಕೋರ್ಸ್ ತೆರೆದಿವೆ. ಆದರೆ ಸಮಗ್ರ ಪ್ರವಾಸೋದ್ಯಮಕ್ಕೆ ಪೂರಕವಾದ ಮಾಸ್ಟರ್ ಆಫ್ ಟೂರಿಸಂ ಮ್ಯಾನೇಜ್ಮೆಂಟ್ ಎಂಬ ಕೋರ್ಸ್ ಅನ್ನು ರಾಜ್ಯದ ಹಾಗೂ ದೇಶದ ಯಾವುದೇ ವಿವಿಯು ಆರಂಭಿಸಿಲ್ಲ. ಈ ಕೀರ್ತಿ ರಾಜ್ಯದ ಮುಕ್ತ ವಿವಿಗೆ ಸಲ್ಲಲಿದೆ.
ಪ್ರವಾಸೋದ್ಯಮದ ಪರಿಚಯ: ಕರ್ನಾಟಕ ಮಾತ್ರವಲ್ಲ, ಭಾರತ ಹಾಗೂ ಪ್ರಪಂಚದ ಪ್ರವಾಸೋದ್ಯಮ ನಿರ್ವಹಿಸುವಲ್ಲಿ ಬೇಕಾಗುವ ಜ್ಞಾನ ಕಲಿಸುವಲ್ಲಿ ಈ ಕೋರ್ಸ್ ಸಹಾಯಕವಾಗಿದೆ. ಪ್ರವಾಸೋದ್ಯಮ ಪರಿಚಯ, ಪ್ರವಾಸೋದ್ಯಮ ನಿರ್ವಹಣಾಶಾಸ್ತ್ರದ ಮೂಲತತ್ವಗಳು ಮತ್ತು ಮತ್ತು ಅಭ್ಯಾಸ, ಹೊಟೇಲ್ ಉಪಚಾರದ ನಿರ್ವಹಣೆ, ಪ್ರವಾಸೋದ್ಯಮ ಭೌಗೋಳಿಕ ಶಾಸ್ತ್ರ, ಪ್ರವಾಸೋದ್ಯಮ ಹಣಕಾಸು, ಪ್ರವಾಸೋದ್ಯಮ ಸಂಸ್ಥೆಗಳ ನಿರ್ವಹಣೆ, ಪ್ರವಾಸೋದ್ಯಮದ ವಿವಿಧತೆಗಳು, ಪ್ರವಾಸೋದ್ಯಮದಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ, ಕರ್ನಾಟಕದ ಇತಿಹಾಸ ಹಾಗೂ ಕಲೆ ಮತ್ತು ವಾಸ್ತುಶಿಲ್ಪ, ದಕ್ಷಿಣ ಭಾರತ ಇತಿಹಾಸ ಹಾಗೂ ಕಲೆ ಮತ್ತು ವಾಸ್ತುಶಿಲ್ಪ, ಉತ್ತರ ಭಾರತ ಇತಿಹಾಸ ಹಾಗೂ ಕಲೆ ಮತ್ತು ವಾಸ್ತುಶಿಲ್ಪ, ಕರ್ನಾಟಕ ಪ್ರವಾಸೋದ್ಯಮ, ಪ್ರಪಂಚದ ಪ್ರವಾಸೋದ್ಯಮ ಈ ಮುಂತಾದ 23 ವಿಷಯಗಳನ್ನು ಅಳವಡಿಸಲಾಗಿದೆ.
ಈ ಪದವಿ ಪಡೆದ ವಿದ್ಯಾರ್ಥಿಗಳಿಗೆ ಭಾರತ ಸೇರಿದಂತೆ ವಿದೇಶಗಳಲ್ಲಿಯೂ ಹೆಚ್ಚಿನ ಅವಕಾಶವಿದೆ. ಹೊಟೇಲ್ ಹಾಗೂ ರೆಸಾರ್ಟ್ ಉದ್ಯಮ, ಪ್ರವಾಸಿಗರ ಏಜೆನ್ಸಿ, ಇವೆಂಟ್ ಮ್ಯಾನೇಜ್ಮೆಂಟ್, ಪ್ರವಾಸೋದ್ಯಮ ಇಲಾಖೆ ಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲೂ ಉದ್ಯೋಗ ಹೊಂದಬಹುದು. ಯಾವುದೇ ಪದವಿ ಪಡೆದವರು ಈ ಕೋರ್ಸ್ಗೆ ಸೇರಬಹುದು. ಎರಡು ವರ್ಷದ ಕೋರ್ಸ್ಗೆ 24 ಸಾವಿರ ಶುಲ್ಕ. ಪರಿಶಿಷ್ಟ ಜಾತಿ,ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಸರ್ಕಾರ ಶುಲ್ಕ ಭರಿಸಲಿದೆ. ಮಾಹಿತಿಗೆ ಡಾ.ಶೆಲ್ವಪಿಳ್ಳೆ ಅಯ್ಯಂಗಾರ್, ಮುಖ್ಯಸ್ಥರು, ಪ್ರವಾಸೋದ್ಯಮ ನಿರ್ವಹಣಾಶಾಸ್ತ್ರ ಅಧ್ಯಯನ ವಿಭಾಗ, ಕರ್ನಾಟಕ ರಾಜ್ಯ ಮುಕ್ತ ವಿವಿ, ಮುಕ್ತ ಗಂಗೋತ್ರಿ, ಮೈಸೂರು- 570006. ಮೊ. 9686215043 ಸಂಪರ್ಕಿಸಿ.
ಇಂದಿನ ಜಾಗತಿಕ ಪ್ರವಾಸೋದ್ಯಮದ ಬೆಳವಣಿಗೆಗೆ ಭಾರತ ಸನ್ನದ್ಧವಾಗಬೇಕಾದರೆ, ನಮ್ಮ ಪ್ರವಾಸೋದ್ಯಮದ ಮಹತ್ವವೇನು ಹಾಗೂ ಅದರ ನಿರ್ವಹಣೆಯ ಕೌಶಲವನ್ನು ಯುವಜತೆಗೆ ತಿಳಿಸುವ ಅಗತ್ಯವಿದೆ. ಸಮಗ್ರ ಪ್ರವಾಸೋದ್ಯಮದ ಬೆಳವಣಿಗೆಗೆ ಈ ಕೋರ್ಸ್ ಸಹಾಯಕವಾಗಲಿದೆ. ಅಂತೆಯೇ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇರುವ ಮಾನ್ಯತೆ ಪಡೆದ ಪ್ರವಾಸಿ ಮಾರ್ಗದರ್ಶಕರಿಗೆ ತರಬೇತಿ ಅವಶ್ಯಕ. ಈ ದಿಸೆಯಲ್ಲಿ ಸರ್ಕಾರದ ಸಹಯೋಗ ಪಡೆದು ಅಲ್ಪಾವಧಿ ಕೋರ್ಸ್ ಆರಂಭಿಸುವ ಉದ್ದೇಶವಿದೆ.
- ಡಾ. ಶೆಲ್ವಪಿಳ್ಳೆ ಅಯ್ಯಂಗಾರ್, ಮುಖ್ಯಸ್ಥರು, ಪ್ರವಾಸೋದ್ಯಮ ನಿರ್ವಹಣಾಶಾಸ್ತ್ರ ಅಧ್ಯಯನ ವಿಭಾಗ, ಕರ್ನಾಟಕ ರಾಜ್ಯ ಮುಕ್ತ ವಿವಿ.
ಮಾ. ವೆಂಕಟೇಶ್