ರೇಲ್ವೆ ಸಚಿವರೇ ದಯವಿಟ್ಟು ಗಮನಿಸಿ
ಬೆಂಗಳೂರಿನಿಂದ ಇತರೆ ನಗರಗಳಿಗೆ ವಾರಾಂತ್ಯ ರೈಲು, ಹಬ್ಬದ ಸಮಯದಲ್ಲಿ ...
ನಾನಾ ಊರುಗಳಿಂದ ಬಂದಿರುವ ಕನ್ನಡಿಗರ ಬೇಡಿಕೆಗಳು
ಕನ್ನಡಪ್ರಭ ಪ್ಲಾಟ್ಫಾರ್ಮ್ನಲ್ಲಿ ನಿಂತಿವೆ
1. ಬೆಂಗಳೂರಿನಿಂದ ಇತರೆ ನಗರಗಳಿಗೆ ವಾರಾಂತ್ಯ ರೈಲು, ಹಬ್ಬದ ಸಮಯದಲ್ಲಿ ವಿಶೇಷ ರೈಲುಗಳ ಸಂಯೋಜನೆ.
2. ಶಿವಮೊಗ್ಗದಿಂದ ಹರಿಹರ, ತಾಳಗುಪ್ಪದಿಂದ ಹೊನ್ನಾವರ ಮಾರ್ಗ ರೈಲ್ವೆ ಹಳಿ ಕೆಲಸಕ್ಕೆ ವೇಗ.
3. ರೈಲ್ವೆ ನಿಲ್ದಾಣಗಳಲ್ಲಿ ಹೆಚ್ಚಿನ ಸ್ವಚ್ಛತೆಗೆ ಮನ್ನಣೆ ಕೊಡಬೇಕು.
4. ರೈಲಿಗೆ ಬದಲಿ ಇಂಧನ ಸಂಶೋಧನೆಗೆ ಒತ್ತು.
5. ನಗರ ಹಾಗೂ ಮಹಾನಗರಗಳಲ್ಲಿ ಟಿಕೆಟ್ ವಿತರಣಾ ಕೇಂದ್ರಗಳ ಸಂಖ್ಯೆ ಹೆಚ್ಚಿಸಬೇಕು.
= ವಸಿಷ್ಠ ಶಾಸ್ತ್ರಿ
ವಾರಾಣಸಿಯಿಂದ ಬೆಂಗಳೂರಿಗೆ ನೇರ ಸಂಪರ್ಕ ಇಲ್ಲ. ಅದರೆ ದಕ್ಷಿಣದ ಎಲ್ಲ ರಾಜ್ಯಗಳ ರಾಜಧಾನಿಗಳಿಂದ ಅಲ್ಲಿಗೆ ನೇರ ಸಂಪರ್ಕ ಇದೆ. ಈ ವಿಚಾರವನ್ನು ಕೆಲವು ತಿಂಗಳ ಹಿಂದೆ ನೀವು ವಾರಾಣಸಿಗೆ ಭೇಟಿ ನೀಡಿದ್ದ ವೇಳೆ ಕನ್ನಡಿಗರು ಪ್ರಸ್ತಾಪಿಸಿದರು ಮತ್ತು ತಾವು ಅದಕ್ಕೆ ಸಹಮತ ಸಹ ಸೂಚಿಸಿದಿರಿ. ಈಗ ತಾವೇ ರೈಲ್ವೆ ಸಚಿವರಾಗಿರುವುದರಿಂದ ನಮ್ಮ ಬೇಡಿಕೆ ಇಡೇರಿಸಿ ಕನ್ನಡಿಗರಿಗೆ ಕಾಶಿಯಾತ್ರೆ ಸರಳಗೊಳಿಸಬೇಕೆಂದು 'ಕನ್ನಡ ಸಂಘ ಕಾಶಿ' ಪರವಾಗಿ ಕೇಳಿಕೊಳ್ಳುತ್ತೇವೆ.
= ಮಹೇಶ್ ರಾಮಸ್ವಾಮಿ
ಕರ್ನಾಟಕದ ಹಲವಾರು ರೈಲ್ವೇ ಯೋಜನೆಗಳು ಬಾಕಿ ಇವೆ. ಮಂಗಳೂರು-ಹಾಸನ-ಬೆಂಗಳೂರು ರೈಲ್ವೇ ಯೋಜನೆಯ ಕಾಮಗಾರಿ ಶೀಘ್ರಗತಿಯಲ್ಲಿ ಮುಗಿಯಬೇಕು. ಮೈಸೂರು- ಮಡಿಕೇರಿ ಯೋಜನೆ ಆಗಬೇಕು, ಬೆಂಗಳೂರಿನಿಂದ ಮಂಗಳೂರಿಗೆ ರೈಲುಗಳ ಓಡಾಟ ಹೆಚ್ಚಿಸಬೇಕು. ದೇಶದ ಮೂಲೆ ಮೂಲೆಗೂ ಕರ್ನಾಟಕದಿಂದ ರೈಲು ಸಂಪರ್ಕ ಕಲ್ಪಿಸಬೇಕು. ಕರ್ನಾಟಕದ ಪ್ರವಾಸಿ ತಾಣಗಳನ್ನು ಸುಲಭವಾಗಿ ನೋಡಲು ರಾಜ್ಯದ ಜನರಿಗೆ ವಿಶೇಷ ರೈಲುಗಳನ್ನು ಒದಗಿಸಬೇಕಾಗಿದೆ.
= ಎನ್.ಎಸ್.ದೊಡ್ಡೇಗೌಡ ನರಿಗೇಹಳ್ಳಿ
ಕಾಡು ನಾಶ ತಡೆಯುವುದಕ್ಕಾಗಿ ತಾಳಗುಪ್ಪ-ದೊಡ್ಮನೆ-ಮೂರುರು-ಕುಮಟ ಮಾರ್ಗ ರಚನೆಯಾಗಬೇಕಿದೆ.
ಬೆಂಗಳೂರು-ಮಂಗಳೂರು, ಬೆಂಗಳೂರು-ಹುಬ್ಬಳಿ, ಮಂಗಳೂರು-ಗೋವಾ ಹಳಿ ಇದೆ. ಇವುಗಳಿಗೆ ಕೊಂಡಿಯಾಗಿ ರೈಲು ಜಾಲ ಹೆಣೆಯಲು ತಾಳಗುಪ್ಪ-ಕುಮಟ ಮಾರ್ಗ ರಚಿಸಬೇಕಿದೆ. ನಂತರ ತಾಳಗುಪ್ಪ-ಹುಬ್ಬಳ್ಳಿಗೆ ಶಿರಸಿ ಮೂಲಕ ಲಿಂಕ್ ಕೊಡಬೇಕು.
ಅಲ್ಲದೆ 1)ಹುಬ್ಬಳ್ಳಿ-ಶಿರಸಿ-ತಾಳಗುಪ್ಪ-ಶಿವಮೊಗ್ಗ-ಕಡೂರು-ದಾವಣಗೆರೆ-ಹಾವೇರಿ-ಹುಬ್ಬಳ್ಳಿ 2)ಹುಬ್ಬಳ್ಳಿ-ತಾಳಗುಪ್ಪ-ಕುಮಟ-ಗೋವಾ-ಬೆಳಗಾವಿ-ಹುಬ್ಬಳ್ಳಿ 3)ಮಂಗಳೂರು-ಬೆಂಗಳೂರು-ಹುಬ್ಬಳ್ಳಿ-ಕುಮಟ-ಮಂಗಳೂರು ವರ್ತುಲ ರೈಲು ಜಾಲ ಸಾಧ್ಯವಿದೆ.
ಇಲ್ಲಿ ಮಂಗಳೂರು ಅಥವಾ ಹುಬ್ಬಳ್ಳಿ ಮಾರ್ಗದಲ್ಲಿ ಎಲ್ಲೇ ಸಮಸ್ಯೆ ತಲೆದೋರಿದರೂ ಶಿವಮೊಗ್ಗ- ತಾಳಗುಪ್ಪ ಮಾರ್ಗ ಪರ್ಯಾಯವಾಗುತ್ತದೆ ಮತ್ತು ಕಾಫಿ, ಅಡಕೆ, ಮೀನುಗಾರಿಕೆ ಚಟುವಟಿಕೆಗೆ ಪೂರಕವಾಗಿರುತ್ತದೆ. ರಾಜಧಾನಿ ಬೆಂಗಳೂರಿಗೂ ಕರಾವಳಿ ಬಂದರುಗಳಿಗೂ ನೇರ ಸಂಪರ್ಕ, ನೆರೆ ಗೋವಾ ಅಥವಾ ಕೇರಳಕ್ಕೆ ಪ್ರಯಾಣಿಸಲು ನೇರ ಮತ್ತು ಪರ್ಯಾಯ ಮಾರ್ಗವಿರುತ್ತದೆ.
ತಾಳಗುಪ್ಪ-ಹೊನ್ನಾವರ ಹಾಗೂ ಹುಬ್ಬಳ್ಳಿ-ಅಂಕೋಲ ಮಾರ್ಗ ನಿರ್ಮಾಣ ಅರಣ್ಯ ನಾಶ ಹಾಗೂ ವೆಚ್ಚದ ಹಿನ್ನೆಯಲ್ಲಿ ದುಬಾರಿಯಾಗಲಿದೆ. ಈ ಯೋಜನೆಗಳ ಅರ್ಧದಷ್ಟು ಹಣದಲ್ಲಿ ತಾಳಗುಪ್ಪ-ಸಿದ್ದಾಪುರ-ದೊಡ್ಮನೆ-ಕುಮಟ ಹಾಗೂ ಸಿದ್ದಾಪುರ-ಶಿರಸಿ- ಹುಬ್ಬಳ್ಳಿ ಯೋಜನೆ ಪೂರ್ಣಗೊಳಿಸಬಹುದು. ಹಾಗಾದರೆ ತಾಳಗುಪ್ಪ-ಕುಮಟ ಕೇವಲ 80ಕಿಮೀ ಅಂತರವಾಗಲಿದೆ. ಇಲ್ಲಿ ಕೇವಲ ಅಘನಾಶಿನಿ ಘಾಟ್ನ ಸುತ್ತ 10ಕಿಮೀ(ರಸ್ತೆ ಮೂಲಕ) ಅರಣ್ಯ ಸಿಗುತ್ತದೆ. ಒಂದು ವೇಳೆ ಆಧುನಿಕ ತಂತ್ರಜ್ಞಾನದಡಿ ಸುರಂಗ ಕೊರೆದರೆ ಒಟ್ಟಾರೆ ಅರಣ್ಯ ನಾಶ 5ಕಿಮೀ ಮಿರುವುದಿಲ್ಲ. ಹುಬ್ಬಳ್ಳಿ-ಅಂಕೋಲದ ಅಂತರ 127ಕಿಮೀ(70ಕಿಮೀ. ಅರಣ್ಯ ಬರುತ್ತದೆ). ಯಾವ ಪಟ್ಟಣವೂ ಸಿಗುವುದಿಲ್ಲ. ಉತ್ತರಕನ್ನಡ ಜಿಲ್ಲೆ ಜನರಿಗೆ ಅತ್ತ ಬೆಂಗಳೂರಿಗೆ ಇತ್ತ ಹುಬ್ಬಳ್ಳಿ ಸಂಚಾರಕ್ಕೂ ಅವಕಾಶ ಇರುವುದಿಲ್ಲ. ಕೇವಲ ಅಂಕೋಲ-ಕಾರವಾರ ಮಂದಿಗೆ ಮಾತ್ರ ಪ್ರಯೋಜನದ ಯೋಜನೆ ಇದು. ಗಣಿ ವಿಚಾರಕ್ಕೆ ಬಂದಾಗ ಬಳ್ಳಾರಿ-ಹರಿಹರ-ಶಿವಮೊಗ್ಗ ಕಾಮಗಾರಿ ಪ್ರಗತಿಯಲ್ಲಿದೆ. ಈ ಮೂಲಕ ಕಾರವಾರ ಬಂದರಿಗೆ ಅದಿರು ಸಾಗಿಸಬಹುದಾಗಿದೆ. ಯೋಜನೆ ಮಾಡುವ ಮುನ್ನ ಯೋಚನೆ ಅತಿ ಮುಖ್ಯ.
= ಗಣೇಶ ಹೆಗಡೆ ಸಿದ್ದಾಪುರ
ಹೈದರಾಬಾದ್ ಕರ್ನಾಟಕದಿಂದ (ಬೀದರ್, ಗುಲ್ಬರ್ಗ, ರಾಯಚೂರು) ಬಯಲು ಸೀಮೆ ಪ್ರದೇಶಗಳಾದ ದಾವಣಗೆರೆ, ಚಿತ್ರದುರ್ಗಕ್ಕಾಗಲಿ ಅಥವಾ ಮಲೆನಾಡು ಪ್ರದೇಶವಾದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಿಗಾಗಲೀ ಒಂದೇ ಒಂದು ರೈಲು ಸೇವೆ ಇಲ್ಲದೇ ಇರುವುದು ದೌರ್ಭಾಗ್ಯ.
ಚಿಕ್ಕಜಾಜೂರಿನಿಂದ ಚಿತ್ರದುರ್ಗ, ರಾಯದುರ್ಗ, ಬಳ್ಳಾರಿ- ಗುಂತಕಲ್ನಿಂದ ಹೈದರಾಬಾದ್ ಕರ್ನಾಟಕ ಪ್ರದೇಶಗಳಿಗೆ, ಬಯಲುಸೀಮೆ, ಮಲೆನಾಡಿಗೆ ನೇರ ಮಾರ್ಗದ ವ್ಯವಸ್ಥೆ ಇದ್ದರೂ ರೈಲುಗಳೇ ಇಲ್ಲ.
ಆದ್ದರಿಂದ ನೂತನ ರೈಲ್ವೆ ಸಚಿವರು ಮೇಲ್ಕಂಡ ಅಂಶವನ್ನು ಗಮನಿಸಿ ಮಂಗಳೂರು -ಹಾಸನ - ಚಿಕ್ಕಮಗಳೂರು ( ಬೀರೂರು-ಚಿಕ್ಕಜಾಜೂರು-ಚಿತ್ರದುರ್ಗ-ರಾಯದುರ್ಗ-ಬಳ್ಳಾರಿ-ಗುಂತಕಲ್) ಮಾರ್ಗವಾಗಿ ರಾಯಚೂರು ಅಥವ ಗುಲ್ಬರ್ಗಕ್ಕೆ ಸಂಜೆ ಅಥವಾ ರಾತ್ರಿವೇಳೆ ರೈಲು ಸೇವೆ ಪ್ರಾರಂಭಿಸಿದರೆ ಕರ್ನಾಟಕದ ಏಳೆಂಟು ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ.
ಮಲೆನಾಡು, ಬಯಲುಸೀಮೆಗಳ ಸಾಕಷ್ಟು ಭಕ್ತಾದಿಗಳು ಮಂತ್ರಾಲಯಕ್ಕೆ ತೆರಳುವುದರಿಂದ ಮೇಲ್ಕಂಡ ಸ್ಥಳಗಳಿಗೆ ನೇರ ರೈಲು ಸಂಪರ್ಕ ಏರ್ಪಡಿಸಿದರೆ ತುಂಬಾ ಪ್ರಯೋಜನವಾಗಲಿದೆ. ರಾಯಚೂರು, ಬಳ್ಳಾರಿಗಳಿಂದ ಸಾಕಷ್ಟು ಭಕ್ತರು ಧರ್ಮಸ್ಥಳ, ಹೊರನಾಡು, ಶೃಂಗೇರಿಗಳಿಗೆ ಬರುವವರಿದ್ದು ಅವರುಗಳಿಗೂ ಕೂಡ ರೈಲು ಸೇವೆಯಿಂದ ಅನುಕೂಲವಾಗಲಿದೆ.
= ಎಸ್.ಮಂಜುನಾಥ, ಕಲ್ಲಹಳ್ಳಿ , ಭದ್ರಾವತಿ
ನಮ್ಮೂರು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ. ಇದು ತಾಲೂಕು ಕೇಂದ್ರವಾಗಿದ್ದರೂ ಸಾಮಾನ್ಯವಾಗಿ ತಾಲೂಕು ಕೇಂದ್ರದಲ್ಲಿ ಅಗತ್ಯವಾಗಿ ಇರಲೇಬೇಕಾದ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವ ಊರು. ಇದಕ್ಕೆ ಕಾರಣ ಹಲವಾರಿದ್ದರೂ ಸೂಕ್ತ ಸಂಪರ್ಕ ವ್ಯವಸ್ಥೆ ಇಲ್ಲದಿರುವುದು ಮುಖ್ಯವಾದುದು. ನಮ್ಮೂರು ಮೈಸೂರು ಮತ್ತು ಬೀದರ್ ರಸ್ತೆಯಲ್ಲಿದ್ದು ರೈಲ್ವೆ ಹಳಿ ವ್ಯವಸ್ಥೆ ಇರುವುದಿಲ್ಲ. ಈ ಭಾಗದಲ್ಲಿ ರೈಲ್ವೇ ವ್ಯವಸ್ಥೆ ಕಲ್ಪಿಸಿದಲ್ಲಿ ಮೈಸೂರು ಮತ್ತು ಬೀದರ್ ನೇರ ಸಂಪರ್ಕ ಏರ್ಪಟ್ಟು ಸುಮಾರು 11 ಜಿಲ್ಲೆಗಳಿಗೆ ಸೌಕರ್ಯ ಕಲ್ಪಿಸಿದಂತಾಗುತ್ತದೆ. ಅನೇಕ ಗ್ರಾಮಗಳ ಪಟ್ಟಣಗಳ ಜನರ ವ್ಯವಹಾರ ವಿದ್ಯಾಭ್ಯಾಸ ಸಂಬಂಧ ಸುಗಮವಾಗುವುದಲ್ಲದೆ ಉತ್ತರ-ದಕ್ಷಿಣ ಸಂಪರ್ಕ ಸೇತುವೆಯಾಗುತ್ತದೆ.
= ಸಿ.ಟಿ.ಮುದ್ದುಕುಮಾರ್, ಚಿಕ್ಕನಾಯಕನಹಳ್ಳಿ
ಕರ್ನಾಟಕದವರಿಗೆ ಮಹತ್ವದ ರೇಲ್ವೆ ಇಲಾಖೆ ಮಂತ್ರಿಸ್ಥಾನ ದೊರೆತಿರುವುದು ಸಂತಸದ ವಿಷಯ. ಮಾನ್ಯ ಸಚಿವರು ಈ ಸದಾವಕಾಶವನ್ನು ಉಪಯೋಗಿಸಿಕೊಂಡು ದೇಶದ ಪ್ರಮುಖ ನಗರಗಳಿಗೆ ಕರ್ನಾಟಕದಿಂದ ಸಂಪರ್ಕ ಕಲ್ಪಿಸುವ ಹೊಸ ರೈಲುಗಳನ್ನು ಓಡಿಸಬೇಕು.
ಹುಬ್ಬಳ್ಳಿ - ಬೆಂಗಳೂರು ಜೋಡು ರೈಲು ಮಾರ್ಗ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಬೇಕು.
ಉತ್ತರ ಕರ್ನಾಟಕದಿಂದ ಕರಾವಳಿಗೆ ಸಂಪರ್ಕಿಸುವ ಹುಬ್ಬಳ್ಳಿ - ಅಂಕೋಲಾ ಹೊಸ ರೈಲು ಮಾರ್ಗಕ್ಕೆ ಇರುವ ಅಡೆತಡೆಗಳನ್ನು ನಿವಾರಿಸಿ ಕಾಮಗಾರಿ ಆರಂಭಿಸಬೇಕು.
ಮಲೆನಾಡಿನಿಂದ ಕರಾವಳಿ ಸಂಪರ್ಕಿಸುವ ತಾಳಗುಪ್ಪಾ - ಹೊನ್ನಾವರ ಹೊಸ ಮಾರ್ಗ ನಿರ್ಮಿಸಬೇಕು.
ಹುಬ್ಬಳ್ಳಿ - ಧಾರವಾಡ - ಕಿತ್ತೂರು ಮಾರ್ಗವಾಗಿ ಬೆಳಗಾವಿಗೆ ಹೊಸ ರೈಲು ಮಾರ್ಗ ನಿರ್ಮಾಣ ಮಾಡಬೇಕು.
= ಜಯಂತ ಕೆ.ಎಸ್., ಧಾರವಾಡ
ತುರ್ತಾಗಿ ಆಗಲೇಬೇಕಾದ ರೇಲ್ವೆ ಮಾರ್ಗ ವಿಜಾಪೂರ- ಸಿಂದಗಿ- ಜೇವರ್ಗಿ-ಶಹಾಬಾದ. 1932 ರಲ್ಲಿ ಬ್ರಿಟಿಷರು ಸರ್ವೇ ಮಾಡಿದ ಮಾರ್ಗ ಸ್ವಾತಂತ್ರ್ಯ ದೊರೆತು 70 ವರ್ಷವಾದರೂ ನೆನೆಗುದಿಗೆ ಬಿದ್ದಿದೆ.
ರಾಜ್ಯ ಹೆದ್ದಾರಿ 218 ರಲ್ಲಿ ಟ್ರಾಫಿಕ್ ತುಂಬಾ ಹೆಚ್ಚಾಗಿದೆ. ಪ್ರತಿ ದಿನವೂ ಈ ರಸ್ತೆಯಲ್ಲಿ ಅಪಘಾತಗಳು ಜರಗುತ್ತವೆ. ವಿಜಾಪುರದಿಂದ ಕಲಬುರ್ಗಿ ನಗರಕ್ಕೆ 5 ನಿಮಿಷಕ್ಕೆಂದು ಬಸ್ಸು ಇದ್ದರೂ ಟ್ರಾಫಿಕ್ ಸಮಸ್ಯೆ ಕಡಿಮೆಯಾಗಿಲ್ಲ. ವಿಜಾಪುರದಿಂದ ಹೈದ್ರಾಬಾದಿಗೆ ವ್ಯಾಪಾರಕ್ಕಾಗಿ ದಿನವೂ ಸಾವಿರಾರು ಮಂದಿ ಪಯಣಿಸುತ್ತಾರೆ. ಅಲ್ಲದೆ ಕಲಬುರ್ಗಿಯಿಂದ ಸಿಮೆಂಟು ಪರಸಿಕಲ್ಲು ರೇಲ್ವೆಯಲ್ಲಿ ಸಾಗಿಸಲು ವೆಚ್ಚ ಕಡಿಮೆ.
ಇನ್ನು ವಿಜಾಪುರದಿಂದ ಸಿಂದಗಿಗೆ ಬಸ್ ಚಾರ್ಜ್ 66 ರುಪಾಯಿಯಾಗುತ್ತದೆ. ಈ ದಿನಗಳಲ್ಲಿ ಡೀಜಲ್ ದರ ದಿನದಿಂದ ದಿನಕ್ಕೆ ದುಬಾರಿಯಾಗುತ್ತಿದೆ. ಹೀಗಾಗಿ ಜೋಡಿ ರೇಲ್ವೆ ಮಾರ್ಗ ಮಾಡಿದರೆ ತುಂಬಾ ಅನೂಕೂಲವಾಗುತ್ತದೆ.
ಮನಮೋಹನಸಿಂಗ್ ಸರ್ಕಾರದಲ್ಲಿ ರೇಲ್ವೆ ಮಂತ್ರಿಗಳಾಗಿದ್ದ ಮಲ್ಲಿಕಾರ್ಜುನ ಖರ್ಗೆಯವರಿಗೆ ಮನವಿ ಮಾಡಿದರೂ ಅವರು ಈ ಕೆಲಸವನ್ನು ಮಾಡಲಿಲ್ಲ. ಹಾಗಾಗಿ ತಾವಾದರೂ ಈ ವಿಜಾಪುರ- ಸಿಂದಗಿ- ಜೇವರ್ಗಿ- ಶಹಾಬಾದ ರೇಲ್ವೆ ಮಾರ್ಗ ತಂದರೆ ಕಡಿಮೆ ಹಣದಲ್ಲಿ ಆಂಧ್ರ ಕರಾವಳಿಯವರೆಗೆ ಹಾಗೂ ಪಶ್ಚಿಮದಲ್ಲಿ ಗೋವಾ ಕರಾವಳಿಯವರೆಗೆ ಚಲಿಸಬಹುದು.
= ಜಗದೀಶ ಎಂ ಕಲಬುರ್ಗಿ, ಯರಗಲ್, ಸಿಂದಗಿ, ವಿಜಾಪೂರ.ಜಿ
ಈಗಿರುವ ಯಶವಂತಪುರ-ಕಾರವಾರ ಎಕ್ಸ್ಪ್ರೆಸ್ ಸಂಜೆ 19.30 ಕ್ಕೆ ಯಶವಂತಪುರ ಬಿಟ್ಟರೆ ಮಂಗಳೂರು ತಲುಪುವ ವೇಳೆಗೆ ಮರುದಿನ ಬೆಳಿಗ್ಗೆ 9.00 ಗಂಟೆ ಆಗುತ್ತದೆ. ಅಂದರೆ 14 ತಾಸುಗಳ ಪ್ರಯಾಣ. ಬೆಂಗಳೂರು-ಮಂಗಳೂರು ನಡುವೆ ದಿನಂಪ್ರತಿ ಓಡಾಡುವ ಪ್ರೈವೇಟ್ ಬಸ್ಸುಗಳ ಲಾಬಿಯಿಂದ ಬೆಂಗಳೂರು-ಹಾಸನ-ಮಂಗಳೂರು ರೈಲು ಪ್ರಯಾಣಕ್ಕೆ ಇನ್ನೂ ಚಾಲನೆ ದೊರೆತಿಲ್ಲ. ಆದಷ್ಟು ಬೇಗ ಪ್ರೈವೇಟ್ ಬಸ್ಸುಗಳ ಸದ್ದಡಗಿಸಿ ಬೆಂಗಳೂರಿನಿಂದ ಮಂಗಳೂರಿಗೆ ಹಾಸನ ಮುಖಾಂತರ ಕೇವಲ 6 ಗಂಟೆಗಳ ರೈಲ್ವೇ ಪ್ರಯಾಣವನ್ನು ಕಾರ್ಯಗತಗೊಳಿಸಬೇಕೆಂಬುದು ದಕ್ಷಿಣಕನ್ನಡ - ಉಡುಪಿ ಪ್ರಯಾಣಿಕರ ಬೇಡಿಕೆ.
= ಶ್ರೀವತ್ಸ ಪಾಡಿತ್ತಾಯ, ಬೆಂಗಳೂರು.
ನಮ್ಮ ಜಿಲ್ಲೆಯಲ್ಲಿ ತುಂಗಭದ್ರ ಜಲಾಶಯವಿದ್ದರೂ ಅದರಿಂದ ನಮಗೆಲ್ಲ ಅನುಕೂಲವಾಗುತ್ತಿಲ್ಲ. ಜಿಂದಾಲ -ದೋಣಿ ಮಲೈಯಂಥ ಬೃಹತ್ ಕಾರ್ಖಾನೆಗಳಿದ್ದರೂ ನಮ್ಮವರಿಗೆ ಹೆಚ್ಚೇನೂ ಅನುಕೂಲವಾಗುತ್ತಿಲ್ಲ. ನಮ್ಮಲ್ಲಿನ ಗಣಿಗಳಿಂದ ರೈಲ್ವೆ ಇಲಾಖೆಗೆ ಅತಿ ಹೆಚ್ಚು ಲಾಭ ಬಂದರೂ ಸಹ ರೈಲ್ವೆ ಇಲಾಖೆ ನಮ್ಮ ಭಾಗದತ್ತ ಗಮನ ಹರಿಸಿಲ್ಲ. ಈಗ ನಿಮಗೆ ಸದಾವಕಾಶ ದೊರೆತಿದೆ. ನಮ್ಮ ಜನರ ಬಹು ದಿನಗಳ ಕನಸನ್ನು ನನಸು ಮಾಡುತ್ತೀರಿ ಎನ್ನುವ ನಂಬಿಕೆಯಿಂದ ಕೇಳುತ್ತಿದ್ದೇವೆ, ಹೊಸಪೇಟೆಯಿಂದ -ಸ್ವಾಮಿಹಳ್ಳಿ ಮಾರ್ಗವಾಗಿ ಓಬಾಳಾಪುರಂಗೆ ಪ್ಯಾಸೆಂಜರ್ ರೈಲು ಬರುವಂತಾಗಲಿ.
= ಜೆ.ರಾಜಶೇಖರ ಪಾಟೀಲ, ಜಿಗೇನಹಳ್ಳಿ ಬಳ್ಳಾರಿ
ಮಾರ್ಗ 1: ತುಮಕೂರು-ಚಿತ್ರದುರ್ಗ-ದಾವಣಗೆರೆ ಹೊಸ ಮಾರ್ಗ
ಮಾರ್ಗ 2: ಧಾರವಾಡ-ಬೆಳಗಾವಿ ಹೊಸ ಮಾರ್ಗ
ಮಾರ್ಗ 3: ಯಲಿವಿಗಿ-ಗದಗ (ಹಾವೇರಿ-ಗದಗ) ಹೊಸ ಮಾರ್ಗ
ಮಾರ್ಗ 1 ಬೆಂಗಳೂರಿನಿಂದ, ಕೇಂದ್ರ ಮತ್ತು ಉತ್ತರ ಕರ್ನಾಟಕ ಭಾಗದ ನಡುವಿನ ಅಂತರವನ್ನು ಸುಮಾರು 65 ಕಿ. ಮಿ. ಕಡಿಮೆಗೊಳಿಸುತ್ತದೆ
ಮಾರ್ಗ 1: ಮಾರ್ಗ 2, ಬೆಂಗಳೂರು ಮತ್ತು ಬೆಳಗಾವಿ ನಡುವೆ ಅಂತರವನ್ನು ಸುಮಾರು 110 ಕಿ.ಮಿ. ಕಡಿಮೆಯಾಗುತ್ತದೆ.
ಮಾರ್ಗ 1 ಮತ್ತು ಮಾರ್ಗ 3, ಬೆಂಗಳೂರು ಮತ್ತು ಬಿಜಾಪುರ ನಡುವಿನ ಅಂತರವನ್ನು ಸುಮಾರು 120 ಕಿ. ಮಿ. ಕಡಿಮೆಗೊಳಿಸುತ್ತದೆ.
ಈ ಮಾರ್ಗಗಳು ಅಸ್ತಿತ್ವಕ್ಕೆ ಬಂದರೆ ಪ್ರಯಾಣದ ದೂರ ಕಡಿಮೆಯಾಗುವುದರಿಂದ, ಇಂಧನ ಮತ್ತು ಸಾಕಷ್ಟು ಪ್ರಯಾಣ ಸಮಯ ಉಳಿಸಬಹುದು. ಅಲ್ಲದೆ ಬೆಂಗಳೂರಿನಿಂದ, ಬೆಳಗಾವಿ ಮತ್ತು ಬಿಜಾಪುರ ನಡುವಿನ ಅಸ್ತಿತ್ವದಲ್ಲಿರುವ ಮಾರ್ಗಗಳಲ್ಲಿ ಸಂಚಾರ ಕನಿಷ್ಠ 50 ಪ್ರತಿಶತದಷ್ಟಾದರೂ ಕಡಿಮೆಯಾಗುತ್ತದೆ.
= ಸಂತೋಷ್. ಎಫ್. ಎಸ್
ಹೊಸಪೇಟೆ-ಹಗರಿಬೊಮ್ಮನಹಳ್ಳಿ-ಕೊಟ್ಟೂರು ರೈಲು ಮಾರ್ಗ ಯೋಜನೆ ಇನ್ನೂ ಕಾರ್ಯಗತವಾಗಿಲ್ಲ. ಈ ಪ್ರಾಂತ್ಯದ ರೈತರು, ಸಣ್ಣ ಪುಟ್ಟ ವ್ಯಾಪಾರಿಗಳು ವಾಣಿಜ್ಯ ಕೇಂದ್ರಗಳಾದ ಹಗರಿಬೊಮ್ಮನಹಳ್ಳಿ ಮತ್ತು ಹೊಸಪೇಟೆಯನ್ನು ನೆಚ್ಚಿಕೊಂಡಿದ್ದಾರೆ. ಈ ರೈಲು ಮಾರ್ಗ ಎರಡು ದಶಕದಿಂದ ಸ್ಥಗಿತಗೊಂಡಿರುವುದರಿಂದ ಎಲ್ಲರಿಗೂ ತೊಂದರೆಯಾಗುತ್ತಿದೆ.. ಈ ಮಾರ್ಗದ ಕೆಲಸ ಶೇಕಡಾ 95 ಮುಗಿದಿದೆ, ಉಳಿದ ಕೆಲಸವನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಿ.
= ವಿದ್ಯಾಶಂಕರ ಹರಪನಹಳ್ಳಿ, ಬೆಂಗಳೂರು
ಈಗಾಗಲೇ ಸಾಕಷ್ಟು ಹೊಸ ರೈಲು ಮಾರ್ಗಗಳು ಘೋಷಣೆಯಾಗಿದ್ದು ಕೆಲವು ಹಳಿಗಳ ಜೋಡಣೆಗೆ ಭೂಮಿ ಖರೀದಿ ಪ್ರಕ್ರಿಯೆಯೇ ಮುಗಿದಿಲ್ಲ. ಅವುಗಳಲ್ಲಿ ಕುಡಚಿ - ಬಾಗಲಕೋಟೆ ರೈಲು ಮಾರ್ಗ ಕೂಡಾ ಒಂದು.
ಈ ಮಾರ್ಗದುದ್ದಕ್ಕೂ ಸಿಮೆಂಟ್ ಹಾಗೂ ಸಕ್ಕರೆ ಕಾರ್ಖಾನೆಗಳಿದ್ದು ಸಾಕಷ್ಟು ಸಂಪನ್ಮೂಲಗಳಿಂದ ಕೂಡಿದ ಪ್ರದೇಶ. ಈ ಮಾರ್ಗ ನಿರ್ಮಾಣವು ರೈಲ್ವೆ ಇಲಾಖೆಯ ಬೊಕ್ಕಸವನ್ನು ತುಂಬಬಲ್ಲದು. ಸದಾನಂದ ಗೌಡರು ಕೂಡಲೇ ಈ ನಿಟ್ಟಿನಲ್ಲಿ ಹೆಜ್ಜೆಯಿಡಬೇಕು.
= ಮಹೇಶ ಮ. ಮಡಿವಾಳರ, ಜಮಖಂಡಿ.
ನಮ್ಮ ಬಹಳ ದಿನಗಳ ಬೇಡಿಕೆಯ ಬಗ್ಗೆ ತಮ್ಮ ಗಮನ ಸೆಳೆಯಲು ಬಯಸುತ್ತೇನೆ.
ಅರಸೀಕೆರೆಯಿಂದ ಶಿವಮೊಗ್ಗ ಮಾರ್ಗವಾಗಿ ಬರುವ ರೇಲ್ವೆ ಮಾರ್ಗವು ತಾಳಗುಪ್ಪದಲ್ಲಿ ಕೊನೆಗೊಳ್ಳುತ್ತದೆ. ನಮ್ಮ ಬೇಡಿಕೆಯೇನೆಂದರೆ "ರೈಲ್ವೆ ಮಾರ್ಗವನ್ನು ತಾಳಗುಪ್ಪದಿಂದ ಉತ್ತರಕನ್ನಡದ ಸಿದ್ದಾಪುರ, ಶಿರಸಿ, ಯಲ್ಲಾಪುರ, ಹುಬ್ಬಳ್ಳಿ, ಅಂಕೋಲ ಮಾರ್ಗಕ್ಕೆ ಜೋಡಿಸುವುದು. ಅಲ್ಲಿಂದ ಮುಂದೆ ಈ ಮಾರ್ಗವನ್ನು ಅಳ್ನಾವರ್ ಜಂಕ್ಷನ್ಗೆ ಜೋಡಿಸುವುದು.
ಈ ಹೊಸ ಮಾರ್ಗದಿಂದ ಆಗುವ ಪ್ರಯೋಜನವನ್ನು ಈ ಕೆಳಗಿನಂತೆ ಪಟ್ಟಿ ಮಾಡಬಹುದು.
1. ಬೆಂಗಳೂರು ಬೆಳಗಾವಿ ಮಧ್ಯೆ ಈಗ ಒಂಟಿ ರೇಲ್ವೆ ಮಾರ್ಗ ಇದ್ದು ಈ ಹೊಸ ಮಾರ್ಗವು ಅದಕ್ಕೆ ಪರ್ಯಾಯ ಆಗಲಿದೆ.
2. ಅರಸಿಕೆರೆಯಿಂದ ಯಲ್ಲಾಪುರವರೆಗಿನ ಈ ಮಾರ್ಗ ಸಂಪೂರ್ಣವಾಗಿ ಅಡಿಕೆ ಬೆಳೆಯುವ ಪ್ರದೇಶವಾಗಿದೆ. ಅಡಿಕೆಗೆ ಹೆಚ್ಚಿನ ಬೇಡಿಕೆ ಇರುವುದು ದೇಶದ ಉತ್ತರ ಭಾಗದಲ್ಲಿ. ಹಾಗಾಗಿ ಈ ಭಾಗಗಳಿಂದ ಅಡಿಕೆ, ಯಾಲಕ್ಕಿ, ಕರಿಮೆಣಸು ಶುಂಠಿ ಮುಂತಾದ ಸಾಂಬಾರ ಪದಾರ್ಥಗಳನ್ನು ಬಹಳ ಬೇಗನೆ ಕಡಿಮೆ ಖರ್ಚಿನಲ್ಲಿ ಕರ್ನಾಟಕದಿಂದ ದೇಶಾದ್ಯಂತ ಸಾಗಿಸಬಹುದು.
3. ಕಾರವಾರದಲ್ಲಿ ಕದಂಬ ನೌಕಾ ನೆಲೆ ಇದೆ. ಇದು ಏಷ್ಯಾದ ಅತ್ಯಂತ ದೊಡ್ದ ನೌಕಾ ನೆಲೆ. ಈ ಹೊಸ ಮಾರ್ಗ ರಚನೆ ಆದರೆ ಕದಂಬ ನೌಕಾ ನೆಲೆಯಿಂದ ದೇಶದ ಆಗ್ನೇಯ ಭಾಗಗಳಾದ ವಿಶೇಷವಾಗಿ ಚೆನ್ನೈ, ಬೆಂಗಳೂರು, ತುತುಕುಡಿ ಮುಂತಾದ ಪ್ರದೇಶಗಳನ್ನು ತುರ್ತು ಸಮಯದಲ್ಲಿ ಅತ್ಯಂತ ಶೀಘ್ರವಾಗಿ ತಲುಪಲು ಸಹಾಯವಾಗುತ್ತದೆ.
4. ಈ ಮೊದಲಿನ ಯೋಜನೆಯಂತೆ ತಾಳಗುಪ್ಪ ರೇಲ್ವೆ ಮಾರ್ಗವನ್ನು ಹೊನ್ನಾವರದಲ್ಲಿ ಕೊಂಕಣ ರೈಲ್ವೆಗೆ ಸೇರಿಸಿದರೆ ಮಧ್ಯದಲ್ಲಿ ಯಾವುದೇ ನಗರ ಪಟ್ಟಣ ಸಿಗದೆ ಇರುವುದರಿಂದ ಜನತೆಗೆ ಹೆಚ್ಚಿನ ಪ್ರಯೋಜನ ದೊರಕಲು ಸಾಧ್ಯವಿಲ್ಲ. ಹಾಗೂ ಈ ಮಾರ್ಗವನ್ನು ನಿರ್ಮಿಸಲು ದಟ್ಟವಾದ ಮಳೆಕಾಡನ್ನು ನಾಶಪಡಿಸಬೇಕಾಗುತ್ತದೆ. ಆದರೆ ತಾಳಗುಪ್ಪ ಸಿದ್ದಾಪುರ- ಶಿರಸಿ- ಯಲ್ಲಾಪುರ ಮಾರ್ಗದಲ್ಲಿ ಅರಣ್ಯನಾಶದ ಪ್ರಮಾಣ ಕಡಿಮೆ.
ತಮ್ಮ ಅವಧಿಯಲ್ಲಿ ಈ ಯೋಜನೆಯನ್ನು ಪ್ರಾರಂಭಗೊಳಿಸಿ ಜನತೆಯ ಬಹು ದಿನಗಳ ಕನಸನ್ನು ನನಸಾಗಿಸುತ್ತೀರಿ ಎಂಬ ವಿಶ್ವಾಸವಿದೆ.
= ಪದ್ಮಜಾ ಹೆಗಡೆ, ಮಂಗಳೂರು