ಮಕ್ಕಳು ಏಳದಿದ್ರೆ ಮೇಷ್ಟ್ರು ಫೋನ್ ಮಾಡ್ತಾರೆ!
'ಹಲೋ.. ಮಕ್ಕಳು ಎದ್ದಿದ್ದಾರಾ? ಓದುತ್ತಿದ್ದಾರಾ? ಮಲಗಿದ್ದರೆ ಎಬ್ಬಿಸಿ...
ಮಂಗಳೂರು: 'ಹಲೋ.. ಮಕ್ಕಳು ಎದ್ದಿದ್ದಾರಾ? ಓದುತ್ತಿದ್ದಾರಾ? ಮಲಗಿದ್ದರೆ ಎಬ್ಬಿಸಿ ಓದಲು ಹೇಳಿ...'
ಪ್ರತಿ ವಿದ್ಯಾರ್ಥಿಯ ಹೆತ್ತವರಿಗೆ ಇನ್ನು ಶಿಕ್ಷಕರು ಈ ರೀತಿ ದೂರವಾಣಿ ಕರೆ ಮಾಡಲಿದ್ದಾರೆ, ಅದೂ ಮುಂಜಾನೆ 5 ಗಂಟೆಗೆ. ತಡವಾಗಿ ಏಳುವ ಮಕ್ಕಳಿಗೆ, ಹೆತ್ತವರಿಗೆ ಶಿಕ್ಷಕರ ಫೋನ್ ಕರೆಯೇ ಎಚ್ಚರಿಕೆಯಾಗಲಿದೆ. 10ನೇ ತರಗತಿ ಮಕ್ಕಳನ್ನು ಬೆಳಗ್ಗೆ ಎಬ್ಬಿಸಿ ಓದಿಸುವ ಕೆಲಸವನ್ನು ಇನ್ನು ಶಿಕ್ಷಕರೇ ಮಾಡುವ ಹೊಸ ಪ್ರಯೋಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜುಲೈನಿಂದ ಜಾರಿಗೆ ಬರಲಿದೆ.
ಯಾಕೆ ಎಬ್ಬಿಸ್ತಾರೆ?
ಕಳೆದ ಸಾಲಿನ ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆ ಸಾಧನೆ ತೀರ ಕಳಪೆ. ಈ ಬಾರಿ ಹೇಗಾದರೂ ಮಾಡಿ ಎಲ್ಲ ಶಾಲೆಗಳೂ ಶೇ.100 ಫಲಿತಾಂಶ ದಾಖಲಿಸಬೇಕೆಂಬ ಜಿದ್ದು ಶಿಕ್ಷಣ ಇಲಾಖೆಯದ್ದು. ಕೆಲಕಡೆ ಹೆತ್ತವರೇ ಬೇಗ ಏಳುತ್ತಿಲ್ಲ. ಈ ಸಂದಿಗ್ಧ ಬಾರದಿರಲೆಂದು ಶಿಕ್ಷಕರಿಗೇ ಮಕ್ಕಳ ಎಬ್ಬಿಸುವ, ಓದಿಸುವ ಹೊಣೆಯನ್ನು ಇಲಾಖೆ ನೀಡಿದೆ. ಜಿಲ್ಲೆಗೆ ಭೇಟಿ ನೀಡಿದ ಸಚಿವ ಕಿಮ್ಮನೆ ರತ್ನಾಕರ್ ಈ ವಿನೂತನ ಪದ್ಧತಿ ಜಾರಿಗೊಳಿಸಲು ಜಿಲ್ಲಾಧಿಕಾರಿಗೆ ಸೂಚಿಸಿದ್ದರಂತೆ!
ಹೇಗೆ ಓದಿಸ್ತಾರೆ?
ಆಯಾ ಶಾಲೆಯ ಒಬ್ಬೊಬ್ಬ ಶಿಕ್ಷಕರಿಗೆ ಇಂತಿಷ್ಟು ಮಕ್ಕಳನ್ನು ನಿಗದಿಪಡಿಸಲಾಗುತ್ತದೆ. ಅವರ ಜವಾಬ್ದಾರಿ ಶಿಕ್ಷಕರದ್ದು. ಹೀಗೆ ದತ್ತು ತೆಗೆದುಕೊಂಡ ಮಕ್ಕಳ ಮನೆ ನಂಬರ್‌ಗೆ ಕರೆ ಮಾಡಿ ಹೆತ್ತವರಲ್ಲಿ ವಿಚಾರಿಸುತ್ತಾರೆ. ಮಕ್ಕಳನ್ನು ಓದಿಗೆ ಪ್ರೇರೇಪಿಸಲು ಮನವರಿಕೆ ಮಾಡುತ್ತಾರೆ. ಶಿಕ್ಷಕರೂ 5 ಗಂಟೆಗೆ ಏಳಬೇಕು!
ಟ್ಯೂಷನ್ ಕೊಡ್ತಾರೆ!
ಶಾಲೆ ಬಿಟ್ಟ ನಂತರ ಶಿಕ್ಷಕರು ನೇರ ಮನೆಗೆ ಹೋಗುವಂತಿಲ್ಲ. ಶಿಕ್ಷಣದಲ್ಲಿ ಹಿಂದುಳಿದ ಮಕ್ಕಳ ಪಟ್ಟಿ ಮಾಡಿ ಅಂಥವರಿಗೆ ಪ್ರತಿ ದಿನ 2 ಗಂಟೆ ಹೆಚ್ಚುವರಿ ಪಾಠ ಮಾಡಲಿದ್ದಾರೆ. ಬೆಳಗ್ಗೆ ತರಗತಿಗೆ ಮೊದಲ ಒಂದು ಗಂಟೆ ಹಾಗೂ ಸಂಜೆ ತರಗತಿಯ ನಂತರ ಒಂದು ಗಂಟೆ ಶಿಕ್ಷಕರು ಮಕ್ಕಳಿಗೆ ಪಾಠ ಕಲಿಸಲಿದ್ದಾರೆ.
'ಜಿಲ್ಲೆಯ ಬ್ಲಾಕ್‌ಮಟ್ಟದಲ್ಲಿ ಕೂಡಲೇ ಸಭೆ ಕರೆಯಲಾಗುವುದು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಶಿಕ್ಷಕರ ಕರ್ತವ್ಯ. ಇದರಲ್ಲಿ ಯಾವುದೇ ಹೊಂದಾಣಿಕೆ ಇಲ್ಲ. ಮಗು ಶಿಕ್ಷಣದಲ್ಲಿ ಹಿಂದುಳಿದಿದರೆ ಶಿಕ್ಷಕರೇ ಕಾರಣ. ಮಕ್ಕಳು ಮನೆಗಿಂತ ಹೆಚ್ಚಾಗಿ ಶಿಕ್ಷಕರೊಂದಿಗೆ ಕಾಲ ಕಳೆಯುತ್ತಾರೆ. ಆದ್ದರಿಂದ ಅವರೇ ಹೊಣೆ ವಹಿಸಿಕೊಳ್ಳಬೇಕಾದ್ದು ಅನಿವಾರ್ಯ.'
- ಗೀತಾ, ಶಿಕ್ಷಣ ಇಲಾಖೆ ಜಿಲ್ಲಾ ಸಹಾಯಕ ಯೋಜನಾ ಸಮನ್ವಯಾಧಿಕಾರಿ
ವಜ್ರಾಕ್ಷಿ ಬಂಟ್ವಾಳ