ಮುಂದರಿದ ಕೊಳವೆ ಬಾವಿ ಕಾರ್ಯಾಚರಣೆ: ಬಾಲಕಿ ಅಕ್ಷತಾಳ ಬದುಕಿಸುವ ಆಸೆ ಕ್ಷೀಣ?
ದ್ಯಾಬೇರಿ ಗ್ರಾಮದ ತೆರೆದ ಕೊಳವೆ ಬಾವಿಗೆ ಬಿದ್ದ ನಾಲ್ಕು ವರ್ಷದ ಮಗು...
ಬಿಜಾಪುರ: ದ್ಯಾಬೇರಿ ಗ್ರಾಮದ ತೆರೆದ ಕೊಳವೆ ಬಾವಿಗೆ ಬಿದ್ದ ನಾಲ್ಕು ವರ್ಷದ ಮಗು ಅಕ್ಷತಾಳನ್ನು ಮೇಲೆತ್ತುವ ಕಾರ್ಯಾಚರಣೆಗೆ ಬುಧವಾರವೂ ಯಶಸ್ಸು ಸಿಕ್ಕಿಲ್ಲ.
ಮಂಗಳವಾರ ರಾತ್ರಿಯಿಂದ ಕಾರ್ಯಾಚರಣೆ ನಡೆಯುತ್ತಿದ್ದರೂ ಗಟ್ಟಿ ಶಿಲೆಯಿಂದಾಗಿ ಪಕ್ಕದಲ್ಲಿ ಪರ್ಯಾಯ ಗುಂಡಿ ತೋಡುವುದು ವಿಳಂಬವಾಗುತ್ತಿದೆ. ಇದರಿಂದಾಗಿ 24 ಗಂಟೆಯ ನಂತರವೂ ಅಕ್ಷತಾಳನ್ನು ರಕ್ಷಿಸಲು ಅಸಾಧ್ಯವಾಗಿದೆ. ಸಾಂಗ್ಲಿಯ ವಿಪತ್ತು ನಿರ್ವಹಣಾ ಪಡೆಯ ನಾಲ್ವರು, ಪುಣೆಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 33 ಹಾಗೂ ಹಟ್ಟಿ ಚಿನ್ನದ ಗಣಿಯ 12 ಪರಿಣತರು ಹಾಗೂ ಸ್ಥಳೀಯ ತಜ್ಞರು ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ. ನುರಿತ ವೈದ್ಯರು, ಆ್ಯಂಬುಲೆನ್ಸ್, ಅಧಿಕಾರಿಗಳ ತಂಡ ಬೀಡು ಬಿಟ್ಟು ಮಗುವನ್ನು ಸುರಕ್ಷಿತವಾಗಿ ಮೇಲೆತ್ತಲು ಎಲ್ಲ ಪ್ರಯತ್ನ ಕೈಗೊಂಡಿತ್ತು.
ಆಮ್ಲಜನಕ ಪೂರೈಕೆ
ಕೊಳವೆ ಬಾವಿಯೊಳಗೆ ನಿರಂತರ ಆಮ್ಲಜನಕ ಪೂರೈಸಲಾಗುತ್ತಿದೆ. ಬಾವಿಯೊಳಗೆ ಕ್ಯಾಮೆರಾ ಬಿಟ್ಟು ಹೆಚ್ಚಿನ ಮಾಹಿತಿ ಸಂಗ್ರಹಿಸುವ ಉದ್ದೇಶವೂ ವಿಫಲವಾಗಿದೆ.
ತಜ್ಞರ ತಂಡ
ಈ ನಡುವೆ ಇಂಥ ಕಾರ್ಯಾಚರಣೆಯಲ್ಲಿ ತಜ್ಞ ಸಾಂಗ್ಲಿಯ ವಿಪತ್ತು ನಿರ್ವಹಣಾ ಪಡೆಯ ಒಂದು ತಂಡ ಬೆಳಗಿನ ಜಾವ 2-30ರ ಸುಮಾರಿಗೆ ಘಟನಾ ಸ್ಥಳಕ್ಕೆ ಆಗಮಿಸಿದೆ. ಪುಣೆಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತಂಡ 11-30ಕ್ಕೆ ಆಗಮಿಸಿದೆ. ಹಟ್ಟಿ ಚಿನ್ನದ ಗಣಿ ಪರಿಣತರ ತಂಡ ಬೆಳಗ್ಗೆ 6 ಗಂಟೆಗೆ ಘಟನಾ ಸ್ಥಳಕ್ಕೆ ದೌಡಾಯಿಸಿದೆ.
ಐದು ಹಿಟಾಚಿ ಬಳಕೆ
ಕೊಳವೆ ಬಾವಿಯಿಂದ ಐದು ಅಡಿ ಪಕ್ಕದಲ್ಲಿ ಪರ್ಯಾಯ ಗುಂಡಿ ಕೊರೆಯಲಾಗುತ್ತಿದೆ. ಇದಕ್ಕಾಗಿ ಐದು ಹಿಟಾಚಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಬುಧವಾರ ಸಂಜೆವರೆಗೆ ಸುಮಾರು 32 ಅಡಿ ಆಳ ಕೊರೆಯಲಾಗಿದೆ. ಇನ್ನು 5 ಅಡಿ ಆಳಕ್ಕೆ ಅಗೆದು ಕೊಳವೆ ಬಾವಿ ಕಡೆಗೆ ಅಡ್ಡಲಾಗಿ ಐದು ಅಡಿ ಸುರಂಗ ಸಂಪರ್ಕಿಸುವ ನಿಟ್ಟಿನಲ್ಲಿ ಪ್ರಯತ್ಲಿಸಲಾಗುತ್ತಿದೆ. ಆಳಕ್ಕೆ ಹೋದಂತೆ ಬೃಹತ್ ಬಂಡೆಗಳು ಅಡ್ಡ ಸಿಗುತ್ತಿರುವುದರಿಂದ ವಿಳಂಬವಾಗುತ್ತಿದೆ.
ಕೊಳವೆ ಬಾವಿಗೆ ಕೇಸಿಂಗ್ ಪೈಪ್ ಇರಲಿಲ್ಲ. ಬೆಳಗ್ಗೆ ವಿಪತ್ತು ರಕ್ಷಣಾ ಪಡೆ ಸಿಬ್ಬಂದಿ ಮಣ್ಣು ಬೀಳದಂತೆ ಕೇಸಿಂಗ್ ಪೈಪ್ ಅಳವಡಿಸಿದೆ.
ಸ್ಫೋಟಕ ಬಳಸಲು ಆತಂಕ
ಬಂಡೆಯನ್ನು ಸ್ಫೋಟಿಸಿ ಮುಂದಕ್ಕೆ ಸಾಗಲು ಯತ್ನ ನಡೆದಿತ್ತಾದರೂ ಅದರಿಂದ ಮಣ್ಣಿನ ಪದರ ಸಡಿಲಗೊಂಡು ಮಗು ಮತ್ತಷ್ಟು ಆಳಕ್ಕೆ ಇಳಿಯುವ ಸಾಧ್ಯತೆ ಇದೆ. ಸ್ಫೋಟದ ಶಬ್ದ ಮತ್ತು ಪರಿಣಾಮದಿಂದ ಮಗು ಆಘಾತಗೊಳ್ಳಬಹುದು ಎಂಬ ಕಾರಣಕ್ಕೆ ಅದನ್ನು ಕೈಬಿಡಲಾಗಿದೆ. ಹಾಗಾಗಿ ಹಿಟಾಚಿ ಡ್ರಿಲ್ಲರ್ ಮೂಲಕವೇ ಬಂಡೆ ಒಡೆಯುವ ಕಾರ್ಯ ನಡೆದಿದೆ.
ಸಾಧ್ಯತೆ ಕಡಿಮೆ!
ರಕ್ಷಣಾ ಕಾರ್ಯ ವಿಳಂಬವಾಗುತ್ತಿದ್ದಂತೆ ಮಗು ಬದುಕುಳಿದಿರುವ ಸಾಧ್ಯತೆ ಕ್ಷೀಣಿಸಿದೆ. ಕಾರ್ಯಾಚರಣೆ ವೇಳೆ ಕೊಳವೆ ಬಾವಿಗೆ ಮಣ್ಣು ಬಿದ್ದಿರುವುದು ಹಾಗೂ ಮಗು ತಲೆಕೆಳಗಾಗಿ ಬಿದ್ದಿರುವ ಹಿನ್ನೆಲೆಯಲ್ಲಿ ಆತಂಕ ಇಮ್ಮಡಿಗೊಂಡಿದೆ. ಮಗು ತಲೆ ಕೆಳಗಾಗಿ ಬಿದ್ದಿರುವ ಹಿನ್ನೆಲೆಯಲ್ಲಿ ಆಮ್ಲಜನಕ ಪ್ರಯೋಜನಕ್ಕೆ ಬಾರದು ಎನ್ನುತ್ತಾರೆ ವೈದ್ಯರು.
ಉಳಿಸುತ್ತಾನ ಮಣಿಕಂಠ?
ಕೊಳವೆ ಬಾವಿಯಲ್ಲಿ ಬೀಳುವ ಮಕ್ಕಳ ರಕ್ಷಣೆಗಾಗಿಯೇ ಆವಿಷ್ಕಾರಗೊಂಡಿರುವ ರೋಬೋಟ್‌ನ ಸಮೇತ ತಮಿಳುನಾಡಿನ ಮದುರೈನ ಎನ್. ಮಣಿಕಂಠ ದ್ಯಾಬೇರಿಗೆ ಆಗಮಿಸಿದ್ದು, ಕಾರ್ಯಾಚರಣೆಗೆ ಪ್ಲಾನ್ ಮಾಡುತ್ತಿದ್ದಾರೆ. ಸಂಜೆ 7 ಗಂಟೆಯಾದರೂ ಮಣಿಕಂಠ ಕಾರ್ಯಾಚರಣೆ ಆರಂಭಿಸಿರಲಿಲ್ಲ.