ಮ್ಯಾಲೆ ಬಾರವ್ವ...
ಬಿಜಾಪುರ: ಏ... ನನ್ನ ಬಂಗಾರಿ ಅಕ್ಷತಾ, ಎದ್ದು ಮ್ಯಾಲೆ ಬಾರವ್ವ... ನಿನ್ಗ ಹೊಸಾ ಅಂಗಿ ತರ್ತೀನಿ, ನಿನ್ನ ಮಾರಿ ತೋರಿಸ ಯವ್ವಾ... - ಅಕ್ಷತಾಳ ತಾಯಿ ಸಾವಿತ್ರಿ ಬಿಕ್ಕಿ ಬಿಕ್ಕಿ ಇಂಥದ್ದೊಂದು ಉದ್ಗಾರ ತೆಗೆಯುತ್ತಿದ್ದರೆ ಸುತ್ತ ನೆರೆದಿದ್ದ ಎಲ್ಲರ ಕಣ್ಣು ಒದ್ದೆಯಾಗುತ್ತಿವೆ.
ಮಂಗಳವಾರ ರಾತ್ರಿಯಿಂದ ಶುರುವಾದ ಸಾವಿತ್ರಿ ಅಳು ಇನ್ನೂ ನಿಂತಿಲ್ಲ. ಊಟ, ನಿದ್ರೆಯಿಲ್ಲದೆ ಬಿಕ್ಕಿ ಬಿಕ್ಕಿ ಅತ್ತು ಕಣ್ಣೀರು ಬತ್ತಿದೆ, ಧ್ವನಿ ಬಿದ್ದಿದೆ. ಆದರೂ, ಸಾವಿತ್ರಿ ಅಳು ಮಾತ್ರ ನಿಂತಿಲ್ಲ. ನೋವಿನಿಂದ ತಂದೆ ಹನುಮಂತನಂತೂ ಮಾತನಾಡಲಾರದಷ್ಟು ನಿತ್ರಾಣಗೊಂಡಿದ್ದಾರೆ. 'ಮಗಳು ಹೊಸ ಅಂಗಿ ಕೊಡಿಸುವಂತೆ ಕೇಳಿದ್ದಳು. ಪಂಚಮಿ ಹಬ್ಬಕ್ಕೆ ಕೊಡಿಸ್ತಿನಿ ಅಂದಿದ್ದೆ. ಈಗ ಅವ ಹಳೆಯ ಚಡ್ಡಿ, ಅಂಗಿಯಲ್ಲೇ ನನ್ನ ಬಿಟ್ಟು ಹ್ವಾದಳು... ಜಿಲ್ಲಾಧಿಕಾರಿಗಳು ನನ್ನ ಮಗಳು ಉಳೀತದ ಎಂದು ಧೈರ್ಯ ಹೇಳ್ತಿದ್ದಾರ, ಆ ದೇವರು ನನ್ನ ಮಗಳ್ನ ಉಳಿಸಿಕೊಟ್ಟರೆ ಸಾಕ್ರೀ...' ಎಂದು ಗೋಗರೆದು ತಾಯಿ ಸಾವಿತ್ರಿ ಅತ್ತಳು.
ನನ್ನ ಮೊಮ್ಮಗಳು ಬದುಕ್ಯಾಳಂತ ಸುದ್ದಿ ತಿಳಿದು ರಾತ್ರೋ ಓಡಿ ಬಂದನಿ. ಆದ್ರ ಇಲ್ಲಿ ನನ್ನ ಮೊಮ್ಮಗಳ ಮುಖಾ ಕೂಡಾ ನೋಡಾಕ ಸಿಗವಲ್ದು... ನನ್ನ ಮೊಮ್ಮಗಳ ಉಳಿಸಂತ ಆ ದ್ಯಾವ್ರಗೆ ಬೇಡಿಕೊಳ್ತೀನ್ರಿ.... ಎಂದು ಅಜ್ಜಿ ಮಲಕವ್ವ ರೋದಿಸಿದಳು.
-ರುದ್ರಪ್ಪ ಆಸಂಗಿ