ರಾಜ್ಯಪಾಲರ ಬದಲಾವಣೆ ಸಂವಿಧಾನಕ್ಕೆ ಅಪಚಾರ
ರಾಜ್ಯಪಾಲರ ಬದಲಾವಣೆ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ಸಂವಿಧಾನಕ್ಕೆ ಅಪಚಾರ...
ಕನ್ನಡಪ್ರಭ ವಾರ್ತೆ, ಬೆಂಗಳೂರು, ಜೂ.18
ರಾಜ್ಯಪಾಲರ ಬದಲಾವಣೆ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ಸಂವಿಧಾನಕ್ಕೆ ಅಪಚಾರ ಎಸಗುತ್ತಿದೆ ಎಂದು ಕೇಂದ್ರದ ಮಾಜಿ ಸಚಿವ ಡಾ.ಎಂ.ವೀರಪ್ಪ ಮೊಯ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಹಿಂದಿನ ಸರ್ಕಾರದ ಅವಧಿಯಲ್ಲಿ ನೇಮಕಗೊಂಡಿದ್ದಾರೆ ಎಂಬ ಕಾರಣ ನೀಡಿ ರಾಜ್ಯಪಾಲರ ರಾಜಿನಾಮೆ ಪಡೆಯುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಆಯಾ ಕಾಲಘಟ್ಟದ ಸನ್ನಿವೇಶ ಆಧರಿಸಿ ಅಧಿಕಾರದಲ್ಲಿರುವ ಸರ್ಕಾರ ರಾಜ್ಯಪಾಲರ ನೇಮಕ ಮಾಡಿರುತ್ತದೆ. ಆದರೆ ಸರ್ಕಾರ ಬದಲಾದ ತಕ್ಷಣ ಕಾರಣ ನೀಡದೇ ಅವರ ರಾಜಿನಾಮೆ ಪಡೆಯುವುದು ಸಂವಿಧಾನಕ್ಕೆ ತೋರುವ ಅವಮರ್ಯಾದೆ. ಜತೆಗೆ ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆ. ಈ ಮೂಲಕ ಬಿಜೆಪಿ ಸರ್ಕಾರ ಕೆಟ್ಟ ಪರಂಪರೆಗೆ ನಾಂದಿ ಹಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಓಲೈಕೆಯಲ್ಲ: ಪರಿಶಿಷ್ಟ ಜಾತಿಯವರ ಹಾಲಿಗೆ ರು. 2 ಹೆಚ್ಚುವರಿ ಪ್ರೋತ್ಸಾಹ ಧನ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ. ರಾಜ್ಯ ಸರ್ಕಾರ ಯಾವುದೇ ಒಂದು ವರ್ಗದ ಓಲೈಕೆ ಮಾಡುತ್ತಿಲ್ಲ. ರಾಜ್ಯದ ಕೆಲ ಭಾಗಗಳಲ್ಲಿ ದಲಿತರು ಹಾಲು ಉತ್ಪಾದಿಸಿದರೆ ಖರೀದಿಸುವುದಕ್ಕೂ ಅವಕಾಶವಿಲ್ಲ. ಹೀಗಾಗಿ ಸರ್ಕಾರ ಪ್ರೋತ್ಸಾಹ ಧನ ನೀಡುತ್ತಿದೆ ಎಂದು ಹೇಳಿದರು.